ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವದ ದೊಡ್ಡ ಲಸಿಕಾ ಅಭಿಯಾನಕ್ಕೆ ಕ್ಷಣಗಣನೆ; ಪ್ರಧಾನಿ ನರೇಂದ್ರ ಮೋದಿ ಬಣ್ಣನೆ

ವಿಜ್ಞಾನಿಗಳು ಹಾಗೂ ತಂತ್ರಜ್ಞರಿಗೆ ಅಭಿನಂದನೆ ಸಲ್ಲಿಕೆ
Last Updated 4 ಜನವರಿ 2021, 21:13 IST
ಅಕ್ಷರ ಗಾತ್ರ

ನವದೆಹಲಿ: ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನ ಶುರುವಾಗಲು ಕ್ಷಣಗಣನೆ ಶುರುವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಹೇಳಿದ್ದಾರೆ.

ಭಾರತದಲ್ಲಿ ಕೋವಿಡ್ ತಡೆ ಲಸಿಕೆಗಳನ್ನು ಅಭಿವೃದ್ಧಿಪಡಿಸಿ ತಯಾರಿಸಿದ(ಮೇಕ್ ಇನ್ ಇಂಡಿಯಾ) ವಿಜ್ಞಾನಿಗಳು ಹಾಗೂ ತಂತ್ರಜ್ಞರನ್ನು ಶ್ಲಾಘಿಸಿದ ಪ್ರಧಾನಿ, ದೇಶವು ಅವರ ಬಗ್ಗೆ ಹೆಮ್ಮೆಪಡುತ್ತದೆ ಎಂದಿದ್ದಾರೆ.

ಭಾರತದಲ್ಲಿ ತುರ್ತು ಬಳಕೆಯ ಎರಡು ಲಸಿಕೆಗಳಿಗೆ ಔಷಧ ನಿಯಂತ್ರಕರು ಅನುಮೋದನೆ ನೀಡಿದ್ದಾರೆ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಹಾಗೂ ಭಾರತ್ ಬಯೋಟೆಕ್‌ದೇಶೀಯವಾಗಿ ತಯಾರಿಸಿರುವ ಕೋವ್ಯಾಕ್ಸಿನ್ ಲಸಿಕೆಗಳಿಗೆ ಅನುಮತಿ ಸಿಕ್ಕಿರುವುದು, ಬೃಹತ್ ಲಸಿಕಾ ಅಭಿಯಾನ ಆರಂಭಿಸಲು ಅನುವು ಮಾಡಿಕೊಟ್ಟಿದೆ.

ಸಮ್ಮೇಳನವೊಂದರಲ್ಲಿ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಭಾರತದಲ್ಲಿ ತಯಾರಾದ ಉತ್ಪನ್ನಗಳಿಗೆ ಜಾಗತಿಕ ಬೇಡಿಕೆ ಮಾತ್ರವಲ್ಲದೆ ಜಾಗತಿಕ ಅಂಗೀಕಾರವೂ ಸಿಕ್ಕಿದೆ ಎಂದರು.

‘ಪ್ರಮಾಣಕ್ಕಿಂತ ಗುಣಮಟ್ಟ ಮುಖ್ಯ. ನಮ್ಮ ಗುಣಮಟ್ಟ ಏರಿಕೆಯಾಗಬೇಕು. ಭಾರತೀಯ ಉತ್ಪನ್ನಗಳಿಂದ ಜಗತ್ತನ್ನು ತುಂಬಿಸುವುದು ಮುಖ್ಯವಲ್ಲ. ಆದರೆ ನಾವು ವಿಶ್ವದ ಮೂಲೆ ಮೂಲೆಯಲ್ಲಿರುವ ಪ್ರತಿಯೊಬ್ಬ ಗ್ರಾಹಕರ ಹೃದಯವನ್ನು ಗೆಲ್ಲಬೇಕು’ ಎಂದು ಅವರು ಹೇಳಿದರು.

ಸಂಶೋಧನೆಯು ಜ್ಞಾನ ಮತ್ತು ತಿಳುವಳಿಕೆಯನ್ನು ವಿಸ್ತರಿಸುತ್ತದೆ ಎಂದು ಪ್ರಧಾನಿ ಹೇಳಿದರು. ‘ಸಂಶೋಧನೆಯ ಸಂಭಾವ್ಯ ಬಳಕೆಯನ್ನು ಮುಂಚಿತವಾಗಿ ಅಂದಾಜು ಮಾಡಲು ಸಾಧ್ಯವಿಲ್ಲ. ಆದರೆ ಸಂಶೋಧನೆಯು ಎಂದಿಗೂ ವ್ಯರ್ಥವಾಗುವುದಿಲ್ಲ. ಆತ್ಮವು ಅಮರ ಎಂದು ನಮ್ಮ ಧರ್ಮಗ್ರಂಥಗಳಲ್ಲಿ ಹೇಳಿರುವಂತೆಯೇ, ಸಂಶೋಧನೆಯೂ ಹಾಗೆಯೇ’ ಎಂದು ಅವರು ಹೇಳಿದರು.

38 ಜನರಲ್ಲಿ ರೂಪಾಂತರಗೊಂಡ ವೈರಾಣು (ನವದೆಹಲಿ, ಪಿಟಿಐ ವರದಿ): ಬ್ರಿಟನ್‌ನಲ್ಲಿ ಮೊದಲು ಪತ್ತೆಯಾದ ರೂಪಾಂತರಗೊಂಡ ಕೊರೊನಾ ವೈರಾಣು, ಭಾರತದಲ್ಲಿ ಇಲ್ಲಿಯವರೆಗೂ 38 ಜನರಲ್ಲಿ ಇರುವುದು ದೃಢಪಟ್ಟಿದೆ ಎಂದು ಆರೋಗ್ಯ ಸಚಿವಾಲಯವು ಸೋಮವಾರ ತಿಳಿಸಿದೆ.

ಆಯಾ ರಾಜ್ಯ ಸರ್ಕಾರಗಳು ಈ ವೈರಾಣು ಇರುವ ಸೋಂಕಿತರನ್ನು ನಿಗದಿತ ಆರೋಗ್ಯಸೇವಾ ಘಟಕಗಳ ಪ್ರತ್ಯೇಕ ಕೊಠಡಿಯಲ್ಲಿ ಇರಿಸಿದ್ದು, ಸೋಂಕಿತರ ಜೊತೆ ಪ್ರಯಾಣಿಸಿದವರು ಹಾಗೂ ಅವರ ಜೊತೆಗೆ ಸಂಪರ್ಕದಲ್ಲಿದ್ದವರ ಪತ್ತೆಕಾರ್ಯಕ್ಕೆ ಚುರುಕು ನೀಡಲಾಗಿದೆ ಎಂದು ತಿಳಿಸಲಾಗಿದೆ.

70 ಕೋಟಿ ಡೋಸ್‌ನ ನಾಲ್ಕು ಘಟಕ (ಹೈದರಾಬಾದ್): ಕೋವಿಡ್ ತಡೆ ಲಸಿಕೆ ಕೋವ್ಯಾಕ್ಸಿನ್‌ನ ತುರ್ತು ಬಳಕೆಗೆ ಅನುಮೋದನೆ ಪಡೆದಿರುವ ಭಾರತ್ ಬಯೊಟೆಕ್, ವಾರ್ಷಿಕವಾಗಿ ಲಸಿಕೆಯ 70 ಕೋಟಿ ಡೋಸ್ ಉತ್ಪಾದನಾ ಸಾಮರ್ಥ್ಯದ ನಾಲ್ಕು ಘಟಕಗಳನ್ನು ದೇಶದಲ್ಲಿ ಸ್ಥಾಪಿಸುವುದಾಗಿ ಸೋಮವಾರ ಪ್ರಕಟಿಸಿದೆ.

ಕೋವ್ಯಾಕ್ಸಿನ್ ಲಸಿಕೆ ಪರೀಕ್ಷೆಯ ದತ್ತಾಂಶ ಕೊರತೆ ಇದೆ ಎಂಬ ಆರೋಪವನ್ನು ಅಲ್ಲಗಳೆದ ಭಾರತ್ ಬಯೊಟೆಕ್ ಅಧ್ಯಕ್ಷ ಕೃಷ್ಣ ಎಲ್ಲ, ಸಾಕಷ್ಟು ಮಾಹಿತಿ ಈಗಾಗಲೇ ಬಹಿರಂಗಗೊಂಡಿದ್ದು, ಅಂತರ್ಜಾಲದಲ್ಲಿ ಲಭ್ಯವಿದೆ ಎಂದು ಹೇಳಿದರು.

‘ಹೈದಾರಾಬಾದ್‌ನಲ್ಲಿ 20 ಕೋಟಿ ಡೋಸ್, ಇತರೆ ನಗರಗಳಲ್ಲಿ 50 ಕೋಟಿ ಡೋಸ್ ಲಸಿಕೆ ತಯಾರಿಸುವ ಘಟಕ ನಿರ್ಮಿಸಲಿದ್ದೇವೆ. 2021 ಮುಗಿಯುವ ಹೊತ್ತಿಗೆ ಸುಮಾರು 76 ಕೋಟಿ ಡೋಸ್ ತಯಾರಿಕಾ ಸಾಮರ್ಥ್ಯ ನಮ್ಮದಾಗಿರುತ್ತದೆ’ ಎಂದಿದ್ದಾರೆ.

* ಭಾರತೀಯ ಕಂಪನಿಗಳನ್ನು ಕೀಳರಿಮೆಗೆ ಗುರಿಯಾಗಿಸಲಾಗುತ್ತಿದೆ. ಕೋವ್ಯಾಕ್ಸಿನ್ ಲಸಿಕೆಯು ಫೈಝರ್‌ಗಿಂತ ಯಾವುದರಲ್ಲೂ ಕಡಿಮೆಯಿಲ್ಲ.

-ಕೃಷ್ಣ ಎಲ್ಲ, ಭಾರತ್ ಬಯೊಟೆಕ್ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT