ಬುಧವಾರ, ಏಪ್ರಿಲ್ 21, 2021
32 °C

ದೆಹಲಿ: ಇಂಧನ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ; ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆ ಖಂಡಿಸಿ ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ಕಾರ್ಯಕರ್ತರು ಶನಿವಾರ ಶಾಸ್ತ್ರಿ ಭವನದ ಬಳಿ ಪ್ರತಿಭಟಿಸಿದರು. ಅಲ್ಲದೆ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಪ್ರತಿಭಟನ ನಿರತ ಕಾರ್ಯಕರ್ತರು ‘ಅಬ್‌ ಕೀ ಬಾರ್‌ ಪೆಟ್ರೊಲ್‌ 100ಕೆ ಪಾರ್‌’ ಮತ್ತು ‘ಮೋದಿ ಹೇ ತೋ ಮೆಹೆಂಗಾಯಿ ಹೇ’ ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಆರ್‌.ಪಿ ರಸ್ತೆಯ ಶಾಸ್ತ್ರಿ ಭವನದಲ್ಲಿರುವ ಪೆಟ್ರೋಲಿಯಂ ಸಚಿವಾಲಯದತ್ತ ಹೋಗುತ್ತಿದ್ದ ವೇಳೆ  ಪೊಲೀಸರು ಪ್ರತಿಭಟನಕಾರರನ್ನು ತಡೆದರು.

ಕಾಂಗ್ರೆಸ್‌ ಯುವ ಘಟಕದ ಅಧ್ಯಕ್ಷ ಶ್ರೀನಿವಾಸ್‌ ಬಿ.ವಿ ಸೇರಿದಂತೆ ಹಲವು ಸದಸ್ಯರು ಹಾಗೂ ನಾಯಕರನ್ನು ಪೊಲೀಸರು ಬಂಧಿಸಿದ್ದು, ವಿವಿಧ ಪೊಲೀಸ್‌ ಠಾಣೆಗೆ ಕರೆದೊಯ್ಯಿದ್ದಾರೆ ಎಂದು ಐವೈಸಿಯ ಮುಖಂಡ ರಾಹುಲ್‌ ರಾವ್‌ ಅವರು ತಿಳಿಸಿದರು. 

‘ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸುತ್ತಿದ್ದ ಬಿಜೆಪಿ ನಾಯಕರು ಈಗ ಮೌನವಾಗಿದ್ದಾರೆ. ದೇಶದ ಹಲವೆಡೆ ಪೆಟ್ರೋಲ್‌ ಬೆಲೆ ಲೀಟರ್‌ಗೆ ₹100 ಆಗಿದೆ. ಆದರೂ ಮೋದಿ ಸರ್ಕಾರ, ಜನರ ಸಮಸ್ಯೆಗಳನ್ನು ಪರಿಹರಿಸಲು ಏನೂ ಕ್ರಮಕೈಗೊಳ್ಳುತ್ತಿಲ್ಲ. ಹಾಗಾಗಿ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್  ಈ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಅವರು ಆಗ್ರಹಿಸಿದರು.

‘ಒಳ್ಳೆಯ ದಿನಗಳ ಭರವಸೆ ನೀಡಿ, ಮೋದಿ ಅವರು ಅಧಿಕಾರಕ್ಕೆ ಬಂದರು. ಆದರೆ ಈಗ ಅವರು ನೀಡಿದ್ದ ಭರವಸೆಗಳನ್ನು ಮುರಿಯುತ್ತಿದ್ದಾರೆ’ ಎಂದು ಅವರು ದೂರಿದರು.

12ನೇ ದಿನವೂ ಹೆಚ್ಚಳ
ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ದೇಶದಾದ್ಯಂತ ಸತತ 12ನೇ ದಿನವೂ ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಿಸಿವೆ. 12 ದಿನಗಳಲ್ಲಿ ಪೆಟ್ರೋಲ್‌ ದರ ಲೀಟರಿಗೆ ₹ 3.63ರಷ್ಟು ಹಾಗೂ ಡೀಸೆಲ್‌ ದರ ಲೀಟರಿಗೆ ₹ 3.84ರಷ್ಟು ಏರಿಕೆ ಆಗಿದೆ.

ಮುಂಬೈನಲ್ಲಿ ಪೆಟ್ರೋಲ್‌ ದರ ₹ 97ಕ್ಕೆ ಮತ್ತು ದೆಹಲಿಯಲ್ಲಿ ₹ 90.58ಕ್ಕೆ ಏರಿಕೆಯಾಗಿದೆ. ಡೀಸೆಲ್‌ ದರ ಮುಂಬೈನಲ್ಲಿ ₹ 88.06ಕ್ಕೆ ಮತ್ತು ಪೆಟ್ರೋಲ್‌ ದರ ₹ 80.97ಕ್ಕೆ ಏರಿಕೆ ಕಂಡಿದೆ.

ಬೆಂಗಳೂರಿನಲ್ಲಿ ಶನಿವಾರ ಇಂಧನ ದರ ಪ್ರತಿ ಲೀಟರಿಗೆ 40 ಪೈಸೆಗಳಷ್ಟು ಹೆಚ್ಚಾಗಿದ್ದು, ಪೆಟ್ರೋಲ್‌ ದರ ಲೀಟರಿಗೆ ₹ 93.61 ಮತ್ತು ಡೀಸೆಲ್‌ ದರ ₹ 85.84ರಂತೆ ಮಾರಾಟವಾಗಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು