ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕಾಯ್ದೆ: ಇಂಡಿಯಾ ಗೇಟ್‌ ಮುಂಭಾಗದಲ್ಲೇ ಟ್ರ್ಯಾಕ್ಟರ್‌ ಸುಟ್ಟ ಪ್ರತಿಭಟನಕಾರರು

ಕಾಂಗ್ರೆಸ್‌ ನಡೆಗೆ ಬಿಜೆಪಿ ಟೀಕೆ: ರೈತರನ್ನು ಕಾಂಗ್ರೆಸ್‌ ದಿಕ್ಕು ತಪ್ಪಿಸುತ್ತಿದೆ: ಪ್ರಕಾಶ್‌ ಜಾವಡೇಕರ್‌
Last Updated 28 ಸೆಪ್ಟೆಂಬರ್ 2020, 18:10 IST
ಅಕ್ಷರ ಗಾತ್ರ

ನವದೆಹಲಿ: ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ನೂತನ ಕಾನೂನುಗಳನ್ನು ವಿರೋಧಿಸಿ ಪಂಜಾಬ್‌, ದೆಹಲಿ ಸೇರಿದಂತೆ ಕೆಲವೆಡೆ ಪ್ರತಿಭಟನೆಗಳು ನಡೆದಿದ್ದು, ದೆಹಲಿಯ ಇಂಡಿಯಾ ಗೇಟ್‌ ಮುಂಭಾಗದಲ್ಲೇ ಯುವ ಕಾಂಗ್ರೆಸ್‌ ಕಾರ್ಯಕರ್ತರು ಸೋಮವಾರ ಬೆಳಗ್ಗೆ ಟ್ರ್ಯಾಕ್ಟರ್‌ ಒಂದನ್ನು ಸುಟ್ಟು ಆಕ್ರೋಶ ಹೊರಹಾಕಿದ್ದಾರೆ.

ಕಾಂಗ್ರೆಸ್‌ನ ಈ ನಡೆಯನ್ನು ಟೀಕಿಸಿರುವ ಬಿಜೆಪಿ, ರೈತರನ್ನು ದಿಕ್ಕುತಪ್ಪಿಸುತ್ತಿರುವ ಕಾಂಗ್ರೆಸ್‌ ಕೇವಲ ಪ್ರಚಾರಕ್ಕಾಗಿ ಈ ರೀತಿ ನಾಟಕವಾಡುತ್ತಿದೆ. ಈ ಮೂಲಕ ಇಡೀ ದೇಶವನ್ನೇ ಅವಮಾನಿಸುತ್ತಿದೆ ಎಂದು ಆರೋಪಿಸಿದೆ.

ಘಟನೆಗೆ ಸಂಬಂಧಿಸಿದಂತೆ ಯುವ ಕಾಂಗ್ರೆಸ್‌ನ ಐವರು ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಇನ್ನೊವಾ ಕಾರೊಂದನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.‘15–20 ಜನರು ಟ್ರಕ್‌ನಲ್ಲಿ ಟ್ರ್ಯಾಕ್ಟರ್‌ ಒಂದನ್ನು ರಾಜ್‌ಪಥ್‌ಗೆ ತಂದಿದ್ದರು. ಅದನ್ನು ಅಲ್ಲಿ ಇಳಿಸಿ, ಬೆಂಕಿ ಹಚ್ಚಿದ್ದಾರೆ’ ಎಂದು ಪೊಲೀಸರು ತಿಳಿಸಿದರು. ಬೆಳಗ್ಗೆ 7.42ಕ್ಕೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ, ಟ್ರ್ಯಾಕ್ಟರ್‌ ತೆರವುಗೊಳಿಸಿದ್ದಾರೆ. ‘ನಮ್ಮ ರೈತರ ರಕ್ತ ಹಾಗೂ ಬೆವರಿನಿಂದ ಭಾರತ ಏಳಿಗೆ ಹೊಂದುತ್ತಿದೆ. ಬ್ರಿಟಿಷರ ವಿರುದ್ಧದ ಹೋರಾಟದಿಂದ ಹಿಡಿದು ಇಡೀ ದೇಶವನ್ನೇ ಪೋಷಿಸುತ್ತಿದ್ದಾರೆ. ರೈತರು ನಮ್ಮ ದೇಶದ ಬೆನ್ನೆಲುಬು. ಭಗತ್‌ ಸಿಂಗ್‌ ಜನ್ಮದಿನಾಚರಣೆ ಸಂದರ್ಭದಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರು ರೈತ ವಿರೋಧಿ ಕಾನೂನುಗಳನ್ನು ವಿರೋಧಿಸಿ ಟ್ರ್ಯಾಕ್ಟರ್‌ಗೆ ಬೆಂಕಿ ಹಚ್ಚಿದ್ದಾರೆ’ ಎಂದು ಯುವ ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

‘ರಾಷ್ಟ್ರಕ್ಕೆ ಅವಮಾನ ಮಾಡಿದೆ’: ಘಟನೆಯನ್ನು ಟೀಕಿಸಿರುವ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌, ‘ಕಾಂಗ್ರೆಸ್‌ ಇಂದು ದೇಶಕ್ಕೇ ಅವಮಾನವೆಸಗಿದೆ. ಟ್ರ್ಯಾಕ್ಟರ್‌ ಅನ್ನು ಟ್ರಕ್‌ನಲ್ಲಿ ತಂದು ಅದನ್ನು ಸುಟ್ಟು ಪ್ರಚಾರಕ್ಕಾಗಿ ನಾಟಕವಾಡಿದೆ. ಇದನ್ನು ನಾವು ಖಂಡಿಸುತ್ತೇವೆ. ರೈತರ ಹೆಸರಿನಲ್ಲಿ ರಾಜಕಾರಣ ಮಾಡುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ. ಇದು ಈಗ ಬಹಿರಂಗವಾಗಿದೆ’ ಎಂದಿದ್ದಾರೆ.

‘ಪ್ರಸ್ತುತ ಮೋದಿ ಸರ್ಕಾರವು ಮಾಡಿರುವ ನಿರ್ಧಾರವನ್ನು ತನ್ನ ಪ್ರಣಾಳಿಕೆಯಲ್ಲೇ ಕಾಂಗ್ರೆಸ್‌ ಉಲ್ಲೇಖಿಸಿತ್ತು. ಈ ವಿಷಯದ ಬಗ್ಗೆ ಅಂದು ಪ್ರಧಾನಿಯಾಗಿದ್ದ ಮನಮೋಹನ್‌ ಸಿಂಗ್‌ ಅವರೂ ಪರವಾಗಿ ಮಾತನಾಡಿದ್ದರು. ಇದೀಗ ಕಾಂಗ್ರೆಸ್‌ ತನ್ನ ವರಸೆ ಬದಲಾಯಿಸಿದೆ’ ಎಂದು ಆರೋಪಿಸಿದ್ದಾರೆ.

‘ನಮ್ಮ ರೈತರು ತಾವು ಕೃಷಿ ಚಟುವಟಿಕೆಗಳಿಗೆ ಬಳಸುವ ಉಪಕರಣಗಳನ್ನು ಪೂಜಿಸುತ್ತಾರೆ. ನಿಜವಾಗಿಯೂ ರೈತನಾಗಿದ್ದರೆ, ಆತ ಟ್ರ್ಯಾಕ್ಟರ್‌ ಸುಟ್ಟು ಹಾಕುವುದಿಲ್ಲ. ರೈತರಿಗೆ ಬೆಂಬಲವಾಗಿದ್ದೇವೆ ಎಂದು ತೋರಿಸುವುದಿದ್ದರೆ, ಟ್ರ್ಯಾಕ್ಟರ್‌ ಅನ್ನು ಸುಟ್ಟು ಹಾಕುವ ಬದಲಾಗಿ ಬಡ ರೈತರೊಬ್ಬರಿಗೆ ನೀಡಬೇಕಿತ್ತು. ಈ ರೀತಿ ಯುವ ಕಾಂಗ್ರೆಸ್‌ ಮಾಡಲು ಸಾಧ್ಯವೇ ಇಲ್ಲ. ಏಕೆಂದರೆ ಅವರಿಗೆ ನಾಶ ಮಾಡುವುದೊಂದೇ ತಿಳಿದಿದೆ’ ಎಂದು ಪ್ರಕಟಣೆಯಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಟೀಕಿಸಿದ್ದಾರೆ.

‘ಸುಪ್ರೀಂ ಕೋರ್ಟ್‌ ಮೆಟ್ಟಿಲೇರುತ್ತೇವೆ’

ಖಟ್ಕರ್‌ ಕಲಾಂ (ಪಂಜಾಬ್): ‌ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ನೂತನ ಕಾನೂನುಗಳ ವಿರುದ್ಧ ಪಂಜಾಬ್‌ ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಲಿದೆ ಎಂದು ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಸೋಮವಾರ ತಿಳಿಸಿದರು.

ಖಟ್ಕರ್‌ ಕಲಾಂ ಹಳ್ಳಿಯಲ್ಲಿ ಭಗತ್‌ ಸಿಂಗ್‌ 113ನೇ ಜನ್ಮದಿನಾಚರಣೆ ಅಂಗವಾಗಿ ಸಿಂಗ್‌, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹರೀಶ್‌ ರಾವತ್‌, ಪಂಜಾಬ್‌ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಸುನಿಲ್‌ ಜಖಾರ್‌ ಭಗತ್‌ ಸಿಂಗ್‌ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿದರು. ಇದಾದ ನಂತರದಲ್ಲಿ ಕೃಷಿ ಕಾನೂನುಗಳನ್ನು ವಿರೋಧಿಸಿ ಧರಣಿ ನಡೆಸಿದರು.

‘ಕೇಂದ್ರ ಸರ್ಕಾರ ರಾಜ್ಯದ ಹಕ್ಕುಗಳನ್ನು ಕಸಿಯುತ್ತಿದೆ. ಕೃಷಿ ಕ್ಷೇತ್ರದ ನೂತನ ಕಾನೂನುಗಳು, ರೈತ ಸಮುದಾಯವನ್ನೇ ನಾಶ ಮಾಡಲಿದೆ. ರಾಷ್ಟ್ರಪತಿ ಅವರು ಈ ಮಸೂದೆಗಳನ್ನು ಅಂಗೀಕರಿಸಿದ್ದಾರೆ. ಹೀಗಾಗಿ ನಾವು ಸುಪ್ರೀಂ ಕೋರ್ಟ್‌ಗೆ ಈ ವಿಷಯವನ್ನು ಕೊಂಡೊಯ್ಯಲಿದ್ದೇವೆ. ದೆಹಲಿಯಿಂದ ನಾಳೆ ಇಬ್ಬರು ವಕೀಲರು ಆಗಮಿಸಲಿದ್ದು, ಅವರೊಂದಿಗೆ ಈ ಕುರಿತು ಚರ್ಚಿಸಲಿದ್ದೇವೆ’ ಎಂದು ಸಿಂಗ್‌ ತಿಳಿಸಿದರು.

ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದಿರುವ ಶಿರೋಮಣಿ ಅಕಾಲಿ ದಳದ ನಡೆಯನ್ನು ಟೀಕಿಸಿರುವ ಸಿಂಗ್‌, ‘ಅಕಾಲಿ ದಳ ಪ್ರಸ್ತುತ ಸಂಪೂರ್ಣ ಸೋಲುವ ಸ್ಥಿತಿಯಲ್ಲಿ ಇದೆ. ಈ ಸಂದರ್ಭದಲ್ಲಿ ಕೆಲ ತಂತ್ರಗಳನ್ನು ಅವರು ಮಾಡುತ್ತಿದ್ದಾರೆ. ಇದು ಫಲಿಸುವುದಿಲ್ಲ. ಏಕೆಂದರೆ ಜನರು ನಿಮ್ಮನ್ನು ಮತ್ತೆ ನಂಬುವುದಿಲ್ಲ’ ಎಂದಿದ್ದಾರೆ.

ಕೃಷಿ ಮಸೂದೆ ರೈತರಿಗೆ ಮರಣ ಶಾಸನ

‘ಕೃಷಿ ಸಂಬಂಧಿ ಮಸೂದೆಗಳು ರೈತರಿಗೆ ಮರಣ ಶಾಸನವಾಗಿವೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಟ್ವೀಟ್ ಮಾಡಿದ್ದಾರೆ.

‘ಸದನದ ಒಳಗೆ ಮತ್ತು ಹೊರಗೆ ಕೃಷಿ ಮಸೂದೆಗಳನ್ನು ವಿರೋಧಿಸುವವರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದ್ದು, ಇದು ಭಾರತದಲ್ಲಿ ಪ್ರಜಾಪ್ರಭುತ್ವ ಸತ್ತು ಹೋಗಿದೆ ಎಂಬುದಕ್ಕೆ ಸಾಕ್ಷಿ’ ಎಂದು ಅವರು ಆರೋಪಿಸಿದ್ದಾರೆ.

‘ರಾಜ್ಯಸಭೆಯಲ್ಲಿ ಕೃಷಿ ಮಸೂದೆಗಳಿಗೆ ಅನುಮೋದನೆ ನೀಡುವಾಗ ವಿರೋಧ ಪಕ್ಷಗಳು ಮಸೂದೆಗಳನ್ನು ಮತಕ್ಕೆ ಹಾಕಿ ಎಂದು ಒತ್ತಾಯಿಸಿದವು. ಆ ವೇಳೆ ಅವರೆಲ್ಲ ತಮ್ಮ ಸ್ಥಾನಗಳಲ್ಲೇ ಕುಳಿತಿದ್ದರು. ಆದರೆ, ಸರ್ಕಾರ ವಿರೋಧ ಪಕ್ಷದವರು ತಮ್ಮ ಸ್ಥಾನಗಳಲ್ಲಿರಲಿಲ್ಲ ಎಂದು ಹೇಳಿದೆ’ ಎಂದು ದೂರಿರುವ ರಾಹುಲ್‌ ಗಾಂಧಿ, ಸರ್ಕಾರದ ಹೇಳಿಕೆಯಿರುವ ಸುದ್ದಿಯ ತುಣುಕನ್ನು ಟ್ವಿಟರ್‌‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT