ಸೋಮವಾರ, ಮಾರ್ಚ್ 1, 2021
30 °C

ಅನಿವಾರ್ಯದ ತವರುಮನೆ ಪಿ.ಜಿ.

ರೇಷ್ಮಾ ಶೆಟ್ಟಿ Updated:

ಅಕ್ಷರ ಗಾತ್ರ : | |

Deccan Herald

ಎಲ್ಲೋ ದೂರದೂರಿನಿಂದ ಓದಿನ ಸಲುವಾಗಿಯೋ ಉದ್ಯೋಗದ ನಿಮಿತ್ತವೋ ಇಂಟರ್ನ್‌ಶಿಪ್‌ನ ದೆಸೆಯಿಂದಲೂ ಅಥವಾ ಇನ್ನಾವುದೋ ಕಾರಣಗಳಿಂದ ಊರು ಬಿಟ್ಟು ಊರಿಗೆ, ರಾಜ್ಯ ಬಿಟ್ಟು ರಾಜ್ಯಕ್ಕೆ ಬರುವ ಮಂದಿಗೆ ತವರುಮನೆಯಂತೆ ಆಶ್ರಯ ನೀಡುವ ತಾಣವೆಂದರೆ ಪೇಯಿಂಗ್ ಗೆಸ್ಟ್‌ (ಪಿ.ಜಿ.). 

ಸರಿಯಾದ ಸಮಯಕ್ಕೆ ಊಟ, ತಿಂಡಿ, ಉಪಚಾರದ ಜೊತೆಗೆ ವಸತಿವ್ಯವಸ್ಥೆಯನ್ನು ಕಲ್ಪಿಸುವ ಪಿ.ಜಿ. ಅನೇಕ ಮಂದಿಗೆ ತಾಯಿಮನೆಯಂತಾಗಿರುತ್ತದೆ. ಜೊತೆಗೆ ಅನೇಕರ ಸ್ನೇಹಸಂಕೋಲೆ ಬಿಗಿದುಕೊಳ್ಳುವುದು ಈ ಪುಟ್ಟ ಕಟ್ಟಡದೊಳಗೆ.

ಗಂಡುಮಕ್ಕಳಿಗಿಂತ ಹೆಣ್ಣುಮಕ್ಕಳೇ ಹೆಚ್ಚು ಪಿ.ಜಿ.ಗೆ ಅವಲಂಬಿತರಾಗುತ್ತಾರೆ. ಕಾರಣ, ಎಲ್ಲೋ ತಿಳಿಯದ ಊರಿನಲ್ಲಿ ಮನೆ ಮಾಡಿಕೊಂಡು, ಕೈ-ಮೈ ಸುಟ್ಟುಕೊಂಡು ಅಡುಗೆ ಮಾಡಿಕೊಂಡು, ಗಡಿಬಿಡಿ ಜೀವನ ನಡೆಸುತ್ತಾ ಬದುಕುವುದಕ್ಕಿಂತ ಮಾಡಿ ಕೊಟ್ಟಿದ್ದನ್ನು ತಿಂದುಂಡು ಆರಾಮಾಗಿ ಇರಬಹುದು ಎನ್ನುವುದು ಹೆಣ್ಣುಮಕ್ಕಳ ಮನೋಭಾವ.

ಮುದ್ದಾಗಿ, ಕಷ್ಟವೇ ಗೊತ್ತಿಲ್ಲದಂತೆ ಸಾಕಿದ ಮಗಳು ಎಲ್ಲೋ ಸ್ನೇಹಿತೆಯರೊಂದಿಗೆ ಅಡುಗೆ ಮಾಡಿಕೊಂಡು, ಪಾತ್ರೆ ತೊಳೆದುಕೊಂಡು ಇರುವುದು ಬೇಡ ಎನ್ನುವುದು ಪೋಷಕರ ಅಭಿಪ್ರಾಯ. ಮನೆಯಂತೆ ಎಲ್ಲರೊಂದಿಗೆ ಬೆರೆತು ಇರಲಿ ಎಂಬ ಕಾರಣಕ್ಕೆ ಅವರೂ ಪಿ.ಜಿ.ಯ ಮೇಲೆ ಹೆಚ್ಚು ಒಲವು ತೋರುತ್ತಾರೆ. ಜೊತೆಗೆ ಸುರಕ್ಷತೆಯ ಭಾವವೂ ಇದಕ್ಕೆ ಜೊತೆಯಾಗುತ್ತದೆ. ಹೀಗೆ ಮನೆ, ಮಂದಿಯನ್ನು ಬಿಟ್ಟು ಬರುವ ಹೆಣ್ಣುಮಕ್ಕಳಿಗೆ ಪಿ.ಜಿ.ಯಲ್ಲಿನ ರೂಮ್‌ಮೇಟ್ಸ್‌ಗಳು, ಓನರ್‌ಗಳು, ಅಡುಗೆ ಆಂಟಿಗಳೇ ಮನೆಯವರಾಗಿರುತ್ತಾರೆ.

ಆದರೆ ಅದೆಷ್ಟೋ ಮಂದಿ ಒಮ್ಮೆ ಪಿ.ಜಿ.ಯಲ್ಲಿ ಇದ್ದವರು ಮತ್ತೆ ಪಿ.ಜಿ.ಗೆ ಸೇರಲು ಬಯಸುವುದಿಲ್ಲ. ಅದಕ್ಕೆ ಕಾರಣ ಹಲವಿರಬಹುದು. ಮನೆಯಲ್ಲೇ ಇದ್ದು, ಅಮ್ಮ ಮಾಡಿಕೊಡುತ್ತಿದ್ದ ಬಿಸಿಯಾದ ರುಚಿಯಾದ ಊಟ ತಿಂದು ತಮ್ಮದೇ ಕೋಣೆಯಲ್ಲಿ ಸ್ವತಂತ್ರವಾಗಿ ಬೆಳೆದು ಬಂದವರಿಗೆ ಪಿಜಿಯಲ್ಲಿ ಹಂಚಿಕೊಳ್ಳುವ ರೂಮ್‌, ಕಬೋರ್ಡ್‌, ಬಾತ್‌ರೂಮ್‌, ಸ್ನಾನಕ್ಕೂ ಬಿಸಿನೀರಿಗೂ ಕಾಯುವುದು, ಸದಾ ಕಾಲ ಗಿಜಿಗಿಡುವ ಮಂದಿ, ಶಬ್ದಮಾಲಿನ್ಯದ ಪರಿಸ್ಥಿತಿ ಉಸಿರುಗಟ್ಟಿಸುತ್ತಿರುತ್ತದೆ. ಇನ್ನು ಹಲವರು ಪಿ.ಜಿ.ಯಲ್ಲಿ ತಯಾರಿಸುವ ಆಹಾರದ ಪ್ರಹಾರಕ್ಕೆ ಹೆದರಿ ಮತ್ತೆ ಅತ್ತ ಮುಖ ಮಾಡುವುದಿಲ್ಲ. ಟಾಯ್ಲೆಟ್‌ನ ಗಲೀಜು, ರೂಮ್‌ನಲ್ಲಿನ ರೂಮ್‌ಮೇಟ್‌ಗಳ ಅಶಿಸ್ತು ಹಲವರಿಗೆ ಹಿಂಸೆ ಮಾಡುತ್ತದೆ.

ಹಿಂದೆ ಪಿ.ಜಿ.ಗೆ ನುಗ್ಗಿದ ಅಪರಿಚಿತನೊಬ್ಬ ಅಲ್ಲಿನ ಹುಡುಗಿಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಕ್ಕೆ ಬೆಂಗಳೂರು ಸಾಕ್ಷಿಯಾಗಿತ್ತು. ಇದು ಪಿ.ಜಿ.ಯಲ್ಲಿರುವ ಹೆಣ್ಣುಮಕ್ಕಳ ಅಭದ್ರತೆಯನ್ನು ಎತ್ತಿ ತೋರಿಸಿತ್ತು. ಅಂತಹ ಘಟನೆಗಳನ್ನು ನೆನಪಿಸಿಕೊಂಡರೆ ಮೈ ನಡುಕ ಹುಟ್ಟುತ್ತದೆ. ಕೇವಲ ಹಣ ಮಾಡುವ ದೃಷ್ಟಿಯಿಂದ ಪಿ.ಜಿ.ಗಳ ಮಾಲಕರು ಸುರಕ್ಷತೆಯ ಕಡೆಗೆ ಅಷ್ಟೊಂದು ಗಮನ ಹರಿಸುತ್ತಿರಲಿಲ್ಲ. ಆದರೆ ಈಗ ಪಿ.ಜಿ.ಗಳ ಸ್ವರೂಪ ಬದಲಾಗಿದೆ. ಸರ್ಕಾರ ಕೆಲವು ಕಟ್ಟುನಿಟ್ಟಿನ ಕಾನೂನುಗಳನ್ನು ಮಾಡಿದ್ದು, ಪಿ.ಜಿ. ಮಾಲೀಕರು ಅದನ್ನು ಪಾಲಿಸುತ್ತಿದ್ದಾರೆ. ಹಿಂದೆಲ್ಲಾ ಆಹಾರಕ್ಕೆ ಹೆದರುತ್ತಿದ್ದ ಕಾಲವೂ ಬದಲಾಗಿದೆ ಎನ್ನುತ್ತಾರೆ ಪಿ.ಜಿ.ಯಲ್ಲಿನ ಹೆಣ್ಣುಮಕ್ಕಳು.

-ತಮ್ಮ ಪಿ.ಜಿ. ಜೀವನದ ಕುರಿತು ಕೆಲವು ಹೆಣ್ಣುಮಕ್ಕಳು ತಮ್ಮ ಅಭಿಪ್ರಾಯವನ್ನು ಇಲ್ಲಿ ಹಂಚಿಕೊಂಡಿದ್ದಾರೆ. 

ನಾನು ತುಮಕೂರಿನವಳು. ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಸಿಕ್ಕಿತ್ತು. ಇಂಟರ್ವ್ಯೂವ್‌ಗೆ ಬಂದಾಗ ಸೀನಿಯರ್ ಒಬ್ಬರ ಪರಿಚಯ ಆಯ್ತು. ಅವರು ತಾನು ಉಳಿದುಕೊಂಡ ಪಿಜಿಯಲ್ಲಿ ನನಗೂ ಉಳಿಯಲು ಅವಕಾಶ ಮಾಡಿಕೊಟ್ಟರು. ಹೀಗೆ ಕೆಲಸದ ನಿಮಿತ್ತ ನನ್ನ ಪಿಜಿ ಜೀವನ ಆರಂಭವಾಯಿತು. ಸಧ್ಯಕ್ಕೆ ನಮ್ಮ ಪಿಜಿಯಲ್ಲಿ ಕಡಿಮೆ ಜನ ಇದ್ದಾರೆ. ಹಾಗಾಗಿ ಓನರ್ ಮನೆಯಲ್ಲಿ ಮಾಡುವ ಆಹಾರವನ್ನೇ ನಮಗೂ ಬಡಿಸುತ್ತಾರೆ. ನನಗೆ ಬೆಂಗಳೂರಿನಲ್ಲಿ ಹತ್ತಿರದ ಸಂಬಂಧಿಕರು ಇರಲಿಲ್ಲ. ಆ ಕಾರಣಕ್ಕೆ ಪಿಜಿಗೆ ಸೇರುವುದು ಅನಿವಾರ್ಯವಾಗಿತ್ತು. ಆದರೂ ಮನೆ ಮನೇಯೇ, ಪಿಜಿ ಪಿಜಿನೇ. ನನಗೆ ಒಂದು ವಾರದ ಮೇಲೆ ಪಿಜಿಯಲ್ಲಿ ಉಳಿದುಕೊಳ್ಳಲು ಸಾಧ್ಯವಾಗುವುದಿಲ್ಲ. ಪ್ರತಿ ವಾರಾಂತ್ಯಕ್ಕೂ ಮನೆಗೆ ಹೋಗುತ್ತೇನೆ. ಪಿಜಿಗಳಲ್ಲಿ ಈಗ ಮೊದಲಿನಂತೆ ಭಯವಿಲ್ಲ. ಎಲ್ಲಾ ರೀತಿಯ ನೀತಿನಿಯಮಗಳನ್ನು ಪಾಲಿಸುತ್ತಾರೆ. ಸುರಕ್ಷತಾಕ್ರಮ ಕೂಡ ಪಾಲಿಸುತ್ತಾರೆ. ನನಗೆ ಯಾವತ್ತೂ ಪಿಜಿಗೆ ಬಂದು ತಪ್ಪು ಮಾಡಿದೆ ಅನ್ನಿಸಿಲ್ಲ. ಪಿಜಿಯಲ್ಲಿ ಜೊತೆ ಇರುವವರು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಹೊಸ ಸ್ನೇಹಿತರ ಬಳಗವೂ ಸಿಕ್ಕಿದೆ. ಒಟ್ಟಾರೆ ಊಟ, ವಸತಿಯೊಂದಿಗೆ ಪಿಜಿ ಜೀವನ ಚೆನ್ನಾಗಿದೆ.

–ದೀಪಾ, ಯಲಹಂಕ

ನಾನು ಪಿಜಿಯಲ್ಲಿ ವಾಸಿಸಬೇಕಾಗುತ್ತದೆ ಎಂದು ಯಾವತ್ತೂ ಅಂದುಕೊಂಡವಳಲ್ಲ. ಆದರೆ ಜೀವನ ಸಾಗಿದ ಹಾಗೆ ನಾವು ಸಾಗಬೇಕು ಎಂಬಂತೆ ಕೆಲಸಕ್ಕೆ ಪಟ್ಟಣಕ್ಕೆ ಬಂದಾಗ ಪಿಜಿಗೆ ಸೇರುವುದು ಅನಿವಾರ್ಯವಾಯಿತು. ನಾನು ಪಿಜಿಗೆ ಸೇರಲು ಮುಖ್ಯ ಕಾರಣ ಫುಡ್‌. ರೂಮ್‌ ಮಾಡಿಕೊಂಡು ಇರಬಹುದು. ಆದರೆ ಆಫೀಸ್ ಮುಗಿಸಿ ಬಂದು, ಅಡುಗೆ ಮಾಡಿ, ಮನೆ ಕ್ಲೀನ್ ಮಾಡುವುದು ನನ್ನಿಂದ ಆಗದ ಕೆಲಸ. ನನ್ನ ಕೆಲಸದ ಸಮಯವೂ ಅದಕ್ಕೆ ಹೊಂದಿಕೊಳ್ಳುವುದಿಲ್ಲ. ಅದಕ್ಕಾಗಿ ಪಿಜಿಗೆ ಸೇರದೆ ಬೇರೆ ದಾರಿ ಇರಲಿಲ್ಲ. ಅಕ್ಕನ ಮನೆ ಇದೆ. ಆದರೆ ಅದು ನಾನು ಕೆಲಸ ಮಾಡುವ ಸ್ಥಳದಿಂದ ತುಂಬಾ ದೂರ. ಆ ಕಾರಣ ಅಲ್ಲಿಗೂ ಹೋಗುವಂತಿರಲಿಲ್ಲ. ಜೊತಗೆ ನನಗೆ ಯಾರ ಹಂಗಲ್ಲೂ ಇರದೇ ಸ್ವತಂತ್ರವಾಗಿ ಬದಕಲು ಇಷ್ಟ. ನಮ್ಮ ಪಿಜಿಯನ್ನು ನಡೆಸುವವರು ಒಬ್ಬರು ಆಂಟಿ. ಇಲ್ಲಿ ಸೆಕ್ಯುರಿಟಿ, ಸಿಸಿ ಕ್ಯಾಮೆರಾ ಎಲ್ಲವೂ ಇದೆ. ನಾನು ಪಿಜಿಯಲ್ಲಿ ಸಂತೋಷದಿಂದ ಇದ್ದೇನೆ. ನನ್ನ ರೂಮ್‌ಮೇಟ್ಸ್‌ಗಳು ಬೇರೆ ಭಾಷೆಯವರಾದರೂ ವಯಸ್ಸಿನಲ್ಲಿ ಚಿಕ್ಕವಳಾದ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಕಳೆದ ಒಂದೂವರೆ ವರ್ಷದಿಂದ ಪಿಜಿಯಲ್ಲಿ ವಾಸಿಸುವ ನನಗೆ ಆಂಧ್ರ ಸ್ಟೈಲ್‌ನ ಆಹಾರಕ್ಕೆ ಹೊಂದಿಕೊಳ್ಳಲು ಕೊಂಚ ಸಮಯ ಬೇಕಾಗಿತ್ತು. ಅದು ಬಿಟ್ಟರೆ ತೊಂದರೆ ಅಂತ ಇಲ್ಲಿಯವರೆಗೂ ಏನು ಅನ್ನಿಸಿಲ್ಲ. ನನ್ನ ಜೀವನದ ಪಯಣದಲ್ಲಿ ಪಿಜಿ ಕೂಡ ಒಂದು ಭಾಗವಾಗಿದೆ.

–ಸುಧಾರಾಣಿ, ಕುಂದನಹಳ್ಳಿ.

ನಮ್ಮೂರು ಸಾಗರ. ನಾನು ಇಂರ್ಟನ್‌ಶಿಪ್‌ ದೆಸೆಯಿಂದ ಬೆಂಗಳೂರಿಗೆ ಬಂದೆ. ಇಲ್ಲಿ ಸಂಬಂಧಿಕರ ಮನೆಯಿದೆ. ಆದರೆ ನಾನು ಇಲ್ಲಿ ಇರುವುದು ದೀರ್ಘಾವಧಿಗೆ. ಹಾಗೆ ದೀರ್ಘಕಾಲ ಇನ್ನೊಬ್ಬರ ಮನೆಯಲ್ಲಿ ಇರುವವರಿಂದ ಅವರಿಗೂ ತೊಂದರೆ ಎನ್ನಿಸಬಹುದು. ಸುಮ್ಮನೆ ಬೇರೆಯವರಿಗೆ ಹೊರೆಯಾಗಿರುವುದು ಬೇಡ ಎಂದುಕೊಂಡು ಪಿಜಿಗೆ ಸೇರಿದೆ. ಇಲ್ಲಿ ನೀಡುವ ಆಹಾರ ನನಗೆ ಅಷ್ಟು ಸೆಟ್ ಆಗುತ್ತಿಲ್ಲ. ಆದರೂ ಹೊಂದಿಕೊಳ್ಳಬೇಕು. ಸ್ವಚ್ಛತೆಯ ವಿಷಯಕ್ಕೆ ಬಂದರೆ ಪರ್ವಾಗಿಲ್ಲ ಎನ್ನಬಹುದು. ಸೆಕ್ಯೂರಿಟಿ ವಿಷಯವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಎರಡು ಫ್ಲೋರ್‌ಗೂ ಸಿಸಿ ಕ್ಯಾಮೆರಾ ಅಳವಡಿಸಿದ್ದಾರೆ. ಪಿಜ ಓನರ್‌ಗಳು ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ನಮ್ಮ ಕಷ್ಟಕ್ಕೆ ಹೆಗಲಾಗುತ್ತಾರೆ. ನಮಗೆ ರಾತ್ರಿ ಹತ್ತರ ಒಳಗೆ ಪಿಜಿಯಲ್ಲಿ ಇರಬೇಕು ಎಂಬ ನಿಯಮ ಇದೆ. ಅನಿರ್ವಾಯ ಕಾರಣಗಳಿದ್ದರೆ ಮಾತ್ರ ಅನುಮತಿ ಪಡೆದು ಲೇಟಾಗಿ ಬರಬಹುದು. ನನಗೆ ಪಿಜಿಯಲ್ಲಿನ ಆಹಾರ ಬಿಟ್ಟರೆ ಬೇರೆನೂ ತೊಂದರೆ ಅನ್ನಿಸಿಲ್ಲ.

–ಶ್ರೀದೇವಿ, ಹನುಮಂತ ನಗರ

ನಾನು ಸುಮಾರು ಆರು ವರ್ಷಗಳ ಕಾಲ ಪಿಜಿಯಲ್ಲಿದ್ದೆ. ಮೂರು ಬಾರಿ ಪಿಜಿ ಬದಲಾಯಿಸಿದ್ದೆ. ಎಲ್ಲಾ ಪಿಜಿಯಲ್ಲೂ ಒಂದೊಂದು ಸಮಸ್ಯೆಯಿತ್ತು. ಮೊದಲೆಲ್ಲಾ ಪಿಜಿಯಲ್ಲಿ ಸುರಕ್ಷತೆಗೆ ಅಷ್ಟೊಂದು ಗಮನ ನೀಡುತ್ತಿರಲಿಲ್ಲ. ಎಲ್ಲ ಪಿಜಿಯಲ್ಲೂ ನನಗೆ ಆಹಾರ ಹಿಡಿಸುತ್ತಿರಲಿಲ್ಲ. ಸ್ವಚ್ಛತೆಯ ವಿಷಯದಲ್ಲೂ ನನಗೆ ಸಮಸ್ಯೆ ಎನ್ನಿಸುತ್ತಿತ್ತು. ಆದರೆ ಪಿಜಿಯಲ್ಲಿನ ಖುಷಿಯ ವಿಷಯವೆಂದರೆ ಒಳ್ಳೆಯ ಸ್ನೇಹಿತಯರು ಸಿಕ್ಕಿದ್ದರು. ಪಿಜಿಯಲ್ಲಿನ ನನ್ನ ರೂಮ್‌ಮೇಟ್‌ಗಳು ಇಂದಿಗೂ ನನ್ನ ಕಷ್ಟಕ್ಕೆ ಹೆಗಲಾಗುತ್ತಾರೆ. ಆದರೆ ನಾನು ಪಿಜಿ ಬಿಡಲು ಮುಖ್ಯ ಕಾರಣ ಮದುವೆಯ ವಿಚಾರ. ಪಿಜಿಯಲ್ಲಿರುವ ಹೆಣ್ಣುಮಕ್ಕಳ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲ ಇರುವುದಿಲ್ಲ, ಗಂಡು ಸಿಗುವುದಿಲ್ಲ ಎಂಬುದು ಮನೆಯವರ ವಾದ. ಆ ಕಾರಣಕ್ಕೆ ಪಿಜಿ ಬಿಟ್ಟು ಅಣ್ಣಂದಿರ ಜೊತೆ ಮನೆ ಮಾಡಿಕೊಂಡು ಇದ್ದೆ. ಆದರೆ ಅಲ್ಲಿ ಅಡು‌ಗೆ ಮಾಡುವುದು, ಮನೆ ಕ್ಲೀನ್ ಮಾಡುವುದು, ಪಾತ್ರೆ ತೊಳೆಯುವುದು ಎಲ್ಲಾ ಸೇರಿ ಹೈರಾಣಾಗಿ ಹೋಗಿದ್ದೆ. ನಿಜವಾಗಲೂ ನನಗೆ ಪಿಜಿಯ ಮಹತ್ವ ಆಗ ಅರಿವಾಗಿತ್ತು. ಈಗ ಪಿಜಿಗಳ ಸ್ವರೂಪವೂ ಬದಲಾಗಿದೆ. ಆಹಾರ ಹಾಗೂ ಸ್ವಚ್ಛತೆಯ ಕಡೆಗೆ ಸರ್ಕಾರವೂ ಗಮನ ನೀಡಿ ನೀತಿ ನಿಯಮಗಳನ್ನು ಮಾಡಿದ್ದು ಖುಷಿಯ ವಿಚಾರ. 

–ಪಲ್ಲವಿ, ಮಂಗಳೂರು

***

ಇವೆಲ್ಲಾ ಕಡ್ಡಾಯ

* ಸಿ.ಸಿ. ಕ್ಯಾಮೆರಾ.

* ಭದ್ರತಾ ಸಿಬ್ಬಂದಿ.

* ಮಹಿಳೆಯರಿಗೆ ಮಹಿಳಾ ವಾರ್ಡನ್ ನೇಮಿಸಬೇಕು.

* ಕಟ್ಟಡ ವ್ಯಾಪ್ತಿಯಲ್ಲಿ ಯಾವುದೇ ಅಪರಾಧ ಕೃತ್ಯಗಳು ನಡೆದರೂ ತಕ್ಷಣವೇ ಪೊಲೀಸರಿಗೆ ತಿಳಿಸಬೇಕು. 

* ಶುಚಿತ್ವ ಹಾಗೂ ಆಹಾರ ಗುಣಮಟ್ಟದ ನಿರ್ವಹಣೆ.

* ಪಿಜಿ ಕಟ್ಟಡಗಳ ಆರಂಭಕ್ಕೆ ಸ್ಥಳೀಯ ಠಾಣೆಗಳಿಂದ ಅನುಮತಿ ಪಡೆಯುವುದು ಕಡ್ಡಾಯ. ಗ್ರಾಹಕರ ಬಗ್ಗೆ ಠಾಣೆಗಳಿಗೆ ಮಾಹಿತಿ ನೀಡುವುದು.

ವಹಿಸಬೇಕಾದ ಎಚ್ಚರಿಕೆಗಳು

* ತೀರಾ ಆಪ್ತರನ್ನು ಹೊರತುಪಡಿಸಿ ಉಳಿದವರನ್ನು ಪಿ.ಜಿ. ಹತ್ತಿರಕ್ಕೆ ಕರೆ ತರಬಾರದು.

* ಮೊಬೈಲ್ ನಂಬರ್ ಅನ್ನು ಅಅ‍ಪರಿಚಿತರಿಗೆ ನೀಡಬಾರದು.

* ಏನೇ ತೊಂದರೆಯಾದರೂ ತಕ್ಷಣಕ್ಕೆ ಪಿ.ಜಿ. ಓನರ್‌ಗಳ ಗಮನಕ್ಕೆ ತರಬೇಕು.

* ಮನೆಯವರಿಗೆ ಪಿ.ಜಿ.ಯ ಸಂಪೂರ್ಣ ವಿವರಗಳನ್ನು ತಿಳಿಸಿರಬೇಕು.

* ತುರ್ತು ಪರಿಸ್ಥಿತಿಯಲ್ಲಿ ಸಂ‍ಪರ್ಕಿಸಲು ಪಾಲಕ/ಪೋಷಕರ ವಿವರಗಳನ್ನು ಪಿ.ಜಿ.ಗೆ ನೀಡಬೇಕು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.