ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಿಯಾಲ ಸೀರೆ ಬ್ರ್ಯಾಂಡ್‌ ಅಲ್ಲ, ನಂಬಿಕೆಯೇ ಪ್ರಧಾನ

Last Updated 16 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಕಾರ್ತೀಕ ಮಾಸ ಮುಗಿದ್ದಿದ್ದು ಮದುವೆಗಳಿಗೆ ತೆರೆಬಿದ್ದಿದೆ. ಈ ಧನುರ್ಮಾಸದಲ್ಲಿ ವಿವಾಹ ಮಹೋತ್ಸವಗಳಿಲ್ಲದ ಕಾರಣ ಸೀರೆ ಅಂಗಡಿಗಳಲ್ಲಿ ವಹಿವಾಟು ಕಡಿಮೆಯಾಗಿದೆ. ಬೆಂಗಳೂರಿನ ಹೈಟೆಕ್‌ ಸೀರೆ ಶೋರೂಂನಲ್ಲೂ ಮಾರಾಟ ತಗ್ಗಿದೆ. ಆದರೆ ಮಂಡ್ಯ ಜಿಲ್ಲೆಯ ಐತಿಹಾಸಿಕ ಹಳ್ಳಿಯೊಂದರ ಸೀರೆ ಅಂಗಡಿಗಳಲ್ಲಿ ಈ ಧನುರ್ಮಾಸದಲ್ಲೂ ಭರ್ಜರಿ ಸೀರೆ ವಹಿವಾಟು ನಡೆಯುತ್ತಿದೆ. ರಾಜ್ಯ, ಹೊರರಾಜ್ಯಗಳಿಂದಲೂ ಬರುವ ಮಹಿಳೆಯರು ತಮ್ಮ ಮನಸ್ಸಿಗೊಪ್ಪುವ ಸೀರೆ ಖರೀದಿಸುತ್ತಿದ್ದಾರೆ.

ಕೊಡಿಯಾಲ... ಶ್ರೀರಂಗಪಟ್ಟಣ ತಾಲ್ಲೂಕಿನ ಈ ಹಳ್ಳಿಯ ಹೆಸರು ಕೇಳಿದರೆ ಮಹಿಳೆಯರ ಮನಸ್ಸು ಅರಳುತ್ತದೆ. ಇಲ್ಲಿ ಉತ್ಪಾದನೆಯಾಗಿ, ಮಾರಾಟವಾಗುವ ಶುದ್ಧ ಕಾಟನ್‌, ರೇಷ್ಮೆ ಸೀರೆಯ ಗಮ್ಮತ್ತು ಉಟ್ಟವರಿಗೆ ಮಾತ್ರ ಗೊತ್ತು. ಒಮ್ಮೆ ಕೊಡಿಯಾಲ ಸೀರೆಯುಟ್ಟವರು ಮತ್ತೆ ಮತ್ತೆ ಈ ಹಳ್ಳಿ ಅರಸಿ ಬರುತ್ತಾರೆ. ಹೊರ ರಾಜ್ಯ, ಹೊರ ದೇಶದಲ್ಲೂ ಈ ಸೀರೆಗಳು ಪ್ರಸಿದ್ಧಿ ಪಡೆದಿವೆ.

‘ಕೊಡಿಯಾಲ ಸೀರೆ’ ಎಂಬುದು ಜಾಹೀರಾತುಗಳ ಬ್ರ್ಯಾಂಡ್‌ ಉತ್ಪನ್ನವಲ್ಲ, ಇದು ಸಾವಿರಾರು ಗ್ರಾಹಕರ ನಂಬಿಕೆ. ಇದು 400 ವರ್ಷಗಳಿಂದ ಮಹಿಳೆಯರ ಮನಸೂರೆಗೊಳ್ಳುತ್ತಿದೆ. ಈ ಊರಿನ ಸೀರೆ ವ್ಯಾಪಾರಕ್ಕೆ ಆಷಾಡ, ಧನುರ್ಮಾಸಗಳ ತೊಡಕಿಲ್ಲ. ವರ್ಷದ 365 ದಿನಗಳೂ ಸೀರೆ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದೆ. ಗ್ರಾಮವೊಂದರಲ್ಲಿ ನಡೆಯುವ ತಿಂಗಳ ಸೀರೆ ವಹಿವಾಟು ಕೋಟಿ ತಲುಪುತ್ತದೆ ಎಂಬುದು ಆಶ್ಚರ್ಯ ಮೂಡಿಸುತ್ತದೆ.

ಮಂಡ್ಯದಿಂದ 10 ಕಿ.ಮೀ ದೂರದಲ್ಲಿರುವ ಕೊಡಿಯಾಲ ಗ್ರಾಮಕ್ಕೆ ಹೋದರೆ ಮಗ್ಗಗಳ ಸದ್ದು ಕಿವಿಗಡಚುತ್ತದೆ. 250 ಪದ್ಮಶಾಲಿ ಕುಟುಂಬಗಳು ಜನ್ಮಜಾತವಾಗಿ ಬಂದ ಕುಲಕಸುಬು ನೇಕಾರಿಕೆಯನ್ನು ಮುನ್ನಡೆಸುತ್ತಿವೆ. ಆಧುನಿಕತೆಯ ಆರ್ಭಟದಿಂದಾಗಿ ಮುಕ್ಕಾಲು ಪಾಲು ವಿದ್ಯುತ್‌ ಮಗ್ಗಗಳತ್ತ ಪರಿವರ್ತನೆಯಾಗಿದ್ದರೂ ಅಲ್ಲಲ್ಲಿ ಕೈಮಗ್ಗಗಳೂ ಕಾಣುತ್ತವೆ. ವಿದ್ಯುತ್‌ ಮಗ್ಗಗಳಲ್ಲಿ ಹತ್ತಿ ಸೀರೆ ನೇಯ್ದರೆ, ಕೈಮಗ್ಗಗಳಲ್ಲಿ ಪರಿಶುದ್ಧ ರೇಷ್ಮೆ ಸೀರೆ ನೇಯುತ್ತಾರೆ. ಇಲ್ಲಿನ ಪ್ರತಿ ಮನೆಯೂ ಸೀರೆ ಅಂಗಡಿಯೇ !

‘ಸೀರೆಗಳಲ್ಲಿ ಆರೋಗ್ಯವಿದೆ, ನೇಕಾರರಿಂದ ಗ್ರಾಹಕರಿಗೆ’ ಎಂಬುದೇ ಕೊಡಿಯಾಲ ಸೀರೆಗಳ ಧ್ಯೇಯ ವಾಕ್ಯ. ರಾಸಾಯನಿಕಗಳ ಮಿಶ್ರಣವಿಲ್ಲದ ನೈಸರ್ಗಿಕ ನೂಲಿನಿಂದ ಮನೆಯಲ್ಲೇ ಸೀರೆ ತಯಾರಾಗುತ್ತವೆ. ಗ್ರಾಹಕರು ಕೇಳಿದ ನೂಲಿನಲ್ಲಿ, ಬಣ್ಣದಲ್ಲಿ ಕಣ್ಣ ಮುಂದೆಯೇ ಸೀರೆ ನೇಯ್ದು ಕೊಡುತ್ತಾರೆ. ಈ ಸೀರೆಯುಟ್ಟಾಗ ದೇಹಕ್ಕೆ ಜಿಗುಟು, ಒರಟು ಆನುಭವವಿಲ್ಲ, ಐರನ್‌, ಡ್ರೈಕ್ಲೀನ್‌ ಬೇಕಿಲ್ಲ, ಬಣ್ಣ ಮಾಸುವುದಿಲ್ಲ. ಹೆಚ್ಚು ಕಾಲ ಬಾಳಿಕೆ ಬರುವ ಕೊಡಿಯಾಲ ಸೀರೆಗಳು ಮನೆಯಲ್ಲಿರಬೇಕು ಎಂಬುದು ಗ್ರಾಹಕರ ಒಟ್ಟಾರೆ ಅನಿಸಿಕೆ.

ಎಂಆರ್‌ಪಿ ನಿಗದಿ ಇಲ್ಲ

ಕೊಡಿಯಾಲದ ಮನೆಗಳಲ್ಲಿ ತಯಾರಾಗುವ ಸೀರೆಗಳಿಗೆ ಎಂಆರ್‌ಪಿ (ಗರಿಷ್ಠ ಸಗಟು ದರ) ನಿಗದಿಯಾಗಿರುವುದಿಲ್ಲ. ಸೀರೆಯ ನೂಲಿಗೆ ತಕ್ಕಂತೆ, ಉತ್ಪಾದನೆಯ ಖರ್ಚಿಗೆ ಅನುಗುಣವಾಗಿ ನೇಕಾರರು ಸ್ಥಳದಲ್ಲೇ ಬೆಲೆ ಹೇಳುತ್ತಾರೆ. ಸಗಟು, ಚಿಲ್ಲರೆ ಸೀರೆಗಳ ಮಾರಾಟವಿದೆ.

‘ಕೊಡಿಯಾಲ ಸೀರೆ ದೇಶದ ಮೂಲೆಮೂಲೆಗಳಲ್ಲಿ ದೊರೆಯುತ್ತವೆ. ವರ್ತಕರು ನಮ್ಮ ಸೀರೆಗಳನ್ನು ಬ್ರ್ಯಾಂಡ್‌ ಆಗಿ ಮಾರುವುದಿಲ್ಲ. ಬೆಲೆ ಹೆಚ್ಚಳ ಮಾಡಿ ಅವರವರ ಬ್ರ್ಯಾಂಡ್‌ ಮಾಡಿಕೊಳ್ಳುತ್ತಾರೆ. ಕೊಡಿಯಾಲ ಸೀರೆ ಬೇಕು ಎಂದು ಬೇಡಿಕೆ ಇಟ್ಟಾಗ ಮಾತ್ರ ತೋರಿಸುತ್ತಾರೆ. ಹೀಗಾಗಿ ಹೆಚ್ಚಿನ ಗ್ರಾಹಕರು ನಮ್ಮ ಊರಿಗೇ ಬಂದು ಸೀರೆ ಖರೀದಿಸುತ್ತಾರೆ’ – ಕಂಬದಮನೆ ನಾರಾಯಣಪ್ಪ, ಶೋರೂಂ ಮಾಲೀಕ ಕೃಷ್ಣ, ಸೀರೆ ವಹಿವಾಟಿನ ವಿಶೇಷತೆಯನ್ನು ತರೆದಿಡುತ್ತಾರೆ.

ಕಂಬದ ಮನೆ ಸೀರೆ ಅಂಗಡಿ ಪ್ರವೇಶಿಸಿದರೆ ದೇಸಿ ಸಂಸ್ಕೃತಿಯ ಅನುಭವವಾಗುತ್ತದೆ. ನಾಡ ಹೆಂಚು, ತೊಟ್ಟಿ ಮನೆ, ಹೊರಗೆ ಹಾಗೂ ಒಳಗೆ 20 ಕಂಬಗಳಿವೆ. ಇಲ್ಲಿಯ ಪ್ರತಿ ಮನೆಯೂ ಹೀಗೆಯೇ ಇದೆ. ಸೀರೆ ಕೊಳ್ಳುವ ಗ್ರಾಹಕರಿಗೆ ಆಪ್ತ ಅನುಭವ ನೀಡುತ್ತದೆ.

ಇತಿಹಾಸದ ಪುಟ ತಿರುವಿದಾಗ

400 ವರ್ಷಗಳ ಹಿಂದೆ ಟಿಪ್ಪು ಸುಲ್ತಾನ್‌ ಹೈದರಾಬಾದ್‌ನಿಂದ ಕೆಲ ನೇಕಾರರನ್ನು ಕರೆತಂದು ಶ್ರೀರಂಗಪಟ್ಟಣ ಸಮೀಪದ ಗಂಜಾಂ ಗ್ರಾಮದಲ್ಲಿರಿಸಿದ್ದರು. ನೇಕಾರರು ಟಿಪ್ಪು ಹಾಗೂ ಮೈಸೂರು ರಾಜರಿಗೆ ರೇಷ್ಮೆ ವಸ್ತ್ರ ನೇಯ್ದು ಕೊಡುತ್ತಿದ್ದರು. ಕಾಲಾನಂತರ ನೇಕಾರರು ಮಂಡ್ಯ ಜಿಲ್ಲೆಯ ಕೊಡಿಯಾಲ, ಕಿಕ್ಕೇರಿ, ಮೇಲುಕೋಟೆ, ಹೊಸಹೊಳಲು ಗ್ರಾಮಗಳಲ್ಲಿ ಹಂಚಿಹೋದರು.

ಆಧುನಿಕತೆಯ ಅಬ್ಬರಕ್ಕೆ ಸಿಲುಕಿದ ನೇಕಾರರು ತಮ್ಮ ಕಸುಬು ನಿಲ್ಲಿಸಿದರು. ಆದರೆ ಕೊಡಿಯಾಲ ಗ್ರಾಮದ ನೇಕಾರರು ಕಾಲಕ್ಕೆ ತಕ್ಕಂತೆ ತಮ್ಮ ಕಸುಬನ್ನೂ ಬದಲಿಸಿಕೊಂಡರು. ಕೈಮಗ್ಗಗಳನ್ನು ವಿದ್ಯುತ್‌ ಮಗ್ಗಗಳತ್ತ ಪರಿವರ್ತಿಸಿಕೊಂಡರು. ಗ್ರಾಮಕ್ಕೆ 24 ಗಂಟೆ ವಿದ್ಯುತ್‌ ಪೂರೈಸುವ ಎಕ್ಸ್‌ಪ್ರೆಸ್‌ ಲೈನ್‌ ವ್ಯವಸ್ಥೆ ಪಡೆದರು. ಬದಲಾವಣೆಯತ್ತ ಮುನ್ನಡೆದರೂ ತಮ್ಮ ಉತ್ಪನ್ನದ ಗುಣಮಟ್ಟ ಬದಲಿಸಲಿಲ್ಲ. ಹೀಗಾಗಿ ಇಲ್ಲಿಯ ಸೀರೆಗಳು ಗುಣಮಟ್ಟಕ್ಕೆ ಹೆಸರುವಾಸಿಯಾದವು.

ಚಿತ್ರಗಳು: ಸಂತೋಷ್ ಚಂದ್ರಮೂರ್ತಿ

ಕಂಪೂಟರೈಸ್ಡ್ ಮಗ್ಗಗಳು

ಕೊಡಿಯಾಲದ ನೇಕಾರಿಕೆ ಈಗ ಇನ್ನೊಂದು ಮಗ್ಗುಲಿಗೆ ಹೊರಳಿದೆ. ವಿದ್ಯುತ್‌ ಮಗ್ಗಗಳಿಗೆ ಗಣಕೀಕೃತ ವ್ಯವಸ್ಥೆ ಅಳವಡಿಸಿಕೊಂಡಿದ್ದಾರೆ. ಇದರಿಂದಾಗಿ ಬಹು ವಿನ್ಯಾಸದ ಸೀರೆಗಳು ಗ್ರಾಹಕರ ಗಮನ ಸೆಳೆಯುತ್ತಿವೆ.

ಕಂಪ್ಯೂಟರ್‌ ಮೂಲಕ ಸೀರೆಗಳ ವಿನ್ಯಾಸ ನಡೆಯುತ್ತದೆ. ಅದನ್ನು ಮೆಮೊರಿ ಕಾರ್ಡ್‌ನಲ್ಲಿ ಸಂಗ್ರಹಸಿ ಮಗ್ಗಗಳಲ್ಲಿ ಅಳವಡಿಸಿರುವ ಕಂಟ್ರೋಲ್‌ ಯೂನಿಟ್‌ ಸಂಪರ್ಕಿಸಲಾಗುತ್ತದೆ. ವಿನ್ಯಾಸದನ್ವಯ ಮಗ್ಗಗಳು ಸೀರೆ ನೇಯುತ್ತವೆ.

ನೈಸರ್ಗಿಕ ಬಣ್ಣಗಳ ಸೀರೆ
‘ಕೊಡಿಯಾಲ ರೇಷ್ಮೆ ಸೀರೆ ಕೈಮಗ್ಗ ಸಂಘ’ದ ಅಧ್ಯಕ್ಷರೂ ಆಗಿರುವ ಗೋವಿಂದರಾಜು ಅವರು 30 ವರ್ಷಗಳಿಂದ ಗ್ರಾಮದಲ್ಲಿ ನೇಕಾರಿಕೆ ಮಾಡುತ್ತಿದ್ದಾರೆ. ಅವರು ವಿದ್ಯುತ್‌ ಮಗ್ಗದತ್ತ ಆಕರ್ಷಿತರಾಗದೇ ಕೈಮಗ್ಗದ ಮೂಲಕವೇ ಸೀರೆ ನೇಯುತ್ತಾ ಬಂದಿದ್ದು ‘ಕೊಡಿಯಾಲ ಗಾಂಧಿ‌’ ಎಂದೇ ಪ್ರಸಿದ್ಧಿ ಪಡೆದಿದ್ದಾರೆ.

ಪ್ರಕೃತಿಯಲ್ಲಿ ಸಿಗುವ ತರಕಾರಿ, ಹಣ್ಣುಗಳನ್ನು ಹದ ಮಾಡಿ ಸಾವಯವ ಹತ್ತಿ ಹಾಗೂ ರೇಷ್ಮೆ ಸೀರೆ ನೇಯುತ್ತಾರೆ. ಕ್ಯಾರೆಟ್‌, ಬೀಟರೂಟ್‌, ನುಗ್ಗೆ ಸೊಪ್ಪು, ನೇರಳೆ, ಮಾವು, ಕಿತ್ತಳೆ ನೇರಳೆ ಹಣ್ಣುಗಳ ಬಣ್ಣದಾಂಶವನ್ನು ಹದ ಮಾಡಿ ನೂಲು ರೂಪಿಸಿಕೊಂಡು ಸೀರೆ ನೇಯುತ್ತಾರೆ.

‘ಬೆಂಗಳೂರಿನಲ್ಲಿ ಒಂದು ಕಡೆ ತರಕಾರಿ, ಹಣ್ಣಿನ ಬಣ್ಣದಂಶ ಬೇರ್ಪಡಿಸಿ ಕೊಡುತ್ತಾರೆ. ಅಲ್ಲಿ ನೂಲಿಗೆ ಬಣ್ಣಗೂಡಿಸಿ ತಂದು ನಮ್ಮ ಮನೆಯಲ್ಲೇ ಕೈಮಗ್ಗದಲ್ಲಿ ಸೀರೆ ನೇಯುತ್ತೇನೆ. ಈ ಸೀರೆಗಳಿಗೆ ಅಪಾರ ಬೇಡಿಕೆ ಇದೆ. ಹಣ ಎಷ್ಟಾದರೂ ಸರಿ ಸೀರೆ ಕೊಳ್ಳುವವರಿದ್ದಾರೆ. ವಿದೇಶಗಳಲ್ಲಿ ನೆಲೆಸಿರುವ ಭಾರತೀಯ ಮಹಿಳೆಯರು ನಮ್ಮ ಮನೆ ಹುಡುಕಿಕೊಂಡು ಬರುತ್ತಾರೆ. ಈ ಸೀರೆಗಳ ಸಾಕ್ಷ್ಯಚಿತ್ರವೂ ನಿರ್ಮಾಣವಾಗಿವೆ’ ಎಂದು ಗೋವಿಂದರಾಜು ಹೇಳಿದರು.

‘ಕೊಡಿಯಾಲ ಸೀರೆಗಳ ಬಗ್ಗೆ ನನಗೆ ಅಪಾರ ನಂಬಿಕೆ ಇದೆ. ಮಂಡ್ಯಕ್ಕೆ ಯಾರೇ ಬಂದರೂ ಈ ಸೀರೆಗಳನ್ನು ಉಡುಗೊರೆಯಾಗಿ ಕೊಡುತ್ತೇನೆ. ಈಚೆಗೆ ಮೇಲುಕೋಟೆಗೆ ಬಂದಿದ್ದ ಇನ್ಫೋಸಿಸ್‌ ಫೌಂಡೇಷನ್ ಅಧ್ಯಕ್ಷರಾದ ಸುಧಾಮೂರ್ತಿ ಅವರಿಗೂ ಉಡುಗೊರೆಯಾಗಿ ಕೊಟ್ಟಿದ್ದೇನೆ’ ಎಂದು ಪಾಂಡವಪುರ ಉಪ ವಿಭಾಗಾಧಿಕಾರಿ ಶೈಲಜಾ ಹೇಳಿದರು.

ಶಿಕ್ಷಕಿಯರಿಗೆ ಕೈಮಗ್ಗದ ಸೀರೆ ಉಡುಗೊರೆ

‘ಕೊಡಿಯಾಲ ಕೈಮಗ್ಗದಲ್ಲಿ ತಯಾರಾಗುವ ಸೀರೆಗಳನ್ನು ನಾನು ಎರಡು ದಶಕಗಳಿಂದ ಉಡುತ್ತಿದ್ದೇನೆ. ಆ ಸೀರೆ ಮೈಮೇಲಿದ್ದರೆ ಸಿಗುವ ಅನುಭವ ಅತೀ ಸುಂದರವಾದುದು. ಒಂದು ರೀತಿಯ ಉತ್ಸಾಹ ನಮ್ಮದಾಗುತ್ತದೆ. ಇದನ್ನರಿತ ನಾನು ನಮ್ಮ ಶೈಕ್ಷಣಿಕ ಸಂಸ್ಥೆಯ ವಿವಿಧ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕಿಯರಿಗೆ ಕೈಮಗ್ಗದ ಸೀರೆಗಳನ್ನು ಉಡುಗೊರೆಯಾಗಿ ನೀಡುತ್ತಿದ್ದೇನೆ. ಎರಡು ಬಾರಿ ನೂರಕ್ಕೂ ಹೆಚ್ಚು ಸೀರೆ ಖರೀದಿ ಮಾಡಿದ್ದೇನೆ. ಈ ಸೀರೆಯುಟ್ಟು ಉತ್ಸಾಹದಿಂದ ಪಾಠ ಮಾಡಲಿ ಎಂಬ ಉದ್ದೇಶ ನನ್ನದು. ನಾವು ಹೇಳಿದ ವಿನ್ಯಾಸದಲ್ಲಿ ಸೀರೆ ನೇಯ್ದು ಕೊಡುತ್ತಾರೆ. ಕೊಡಿಯಾಲ ಸೀರೆಗಳು ಮಹತ್ವ ಉಟ್ಟವರಿಗಷ್ಟೇ ಗೊತ್ತು. ಅಲ್ಲಿಯ ನೇಕಾರಿಗೆ ಉಳಿಯಬೇಕು, ಆ ಸೀರೆಗಳಿಗೆ ಬ್ರ್ಯಾಂಡ್‌ ರೂಪ ಸಿಗಬೇಕು’
ಮೀರಾ ಶಿವಲಿಂಗಯ್ಯ, ಎಸ್‌.ಬಿ.ಶಿಕ್ಷಣ ಸಂಸ್ಥೆ ಕಾರ್ಯದರ್ಶಿ, ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT