ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮುದಾಯದ ಜತೆ ಕಟ್ಟ ಕಟ್ಟಿದ ಕಥೆ

Last Updated 9 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಮೇ ತಿಂಗಳಲ್ಲಿ ನೀರು ಹರಿಯುವ ‘ತೋಡು’ಗಳನ್ನು ಗುರುತಿಸಿದರು. ಈಗ ತೋಡುಗಳಿಗೆ ಕಟ್ಟ ಕಟ್ಟಲಾರಂಭಿಸಿದ್ದಾರೆ. ಸಮುದಾಯದ ಸಹಭಾಗಿತ್ವದಲ್ಲಿ ‘ನೀನೆಪ’ ತಂಡ ಕೈಗೊಂಡ ‘ಕಟ್ಟ ಕಟ್ಟುವ’ ಅಭಿಯಾನ, ಬೇಸಿಗೆಯಲ್ಲಿ ನೀರ ನೆಮ್ಮದಿ ತರುವ ವಿಶ್ವಾಸ ಮೂಡಿಸಿದೆ.

‘ಈವರೆಗೂ ನಮ್ಮೂರಲ್ಲಿ ನೀರಿನ ಕೊರತೆ ಕಂಡಿರಲಿಲ್ಲ. ಆದರೆ ಕಳೆದ ಬೇಸಿಗೆಯಲ್ಲಿ ಮೊದಲ ಬಾರಿ ಪಂಚಾಯತ್ ನೀರಿಗೆ ಕಾಯುವ ಪರಿಸ್ಥಿತಿ ಬಂತು. ಆಗಲೇ ನಾವೆಲ್ಲ ನೀರುಳಿಸುವ, ನೀರಿಂಗಿಸುವ ಪ್ರತಿಜ್ಞೆ ಮಾಡಿದ್ವಿ’

ಕಾಸರಗೋಡಿನ ಪೆರ್ಲ ಸಮೀಪದ ಸಜಂಗದ್ದೆಯ ಕೆಲವು ಹಿರಿಯರು ತೋಡುಗಳಲ್ಲಿ ಹರಿಯುವ ನೀರಿಗೆ ಕಟ್ಟ ಕಟ್ಟುವ (ನೀರು ನಿಲ್ಲಿಸುವ ತಾತ್ಕಾಲಿಕ ತಡೆಗೋಡೆ) ಕಾರ್ಯದಲ್ಲಿ ತೊಡಗುತ್ತಾ ಮಾತು ಶುರು ಮಾಡಿದರು. ಅವರ ಮಾತುಗಳಲ್ಲಿ ಕಳೆದ ಬೇಸಿಗೆಯಲ್ಲಿ ಎದುರಿಸಿದ ನೀರಿನ ಸಂಕಟದ ಅವಲೋಕನವಿತ್ತು. ಭವಿಷ್ಯದಲ್ಲಿ ನೀರಿನ ಸಂಕಟ ಎದುರಾಗಬಾರದು ಎಂಬ ಉದ್ದೇಶದಿಂದಲೇ ಅವರು ಕಟ್ಟ ಕಟ್ಟುತ್ತಿದ್ದರು…!

‌ಕಟ್ಟ ಕಟ್ಟುವುದು ಒಂದು ಅಭಿಯಾನ. ಇದಕ್ಕೆಂದೇ ರೂಪುಗೊಂಡಿದ್ದು ‘ನೀರ ನೆಮ್ಮದಿಯತ್ತ ಪಡ್ರೆ’ (ನೀನೆಪ) ತಂಡ. ಈ ತಂಡದವರು ನಡೆಸಿದ ಕಟ್ಟ ನಿರ್ಮಾಣ ಕಾರ್ಯದಲ್ಲಿ ಸುತ್ತಮುತ್ತಲಿನ ಊರಿನವರೆಲ್ಲ ಕೈ ಜೋಡಿಸಿದ್ದರು. ‘ಹಬ್ಬ'ದ ರೀತಿಯಲ್ಲಿ ಕಟ್ಟ ಕಟ್ಟುವ ಪ್ರಕ್ರಿಯೆ ನಡೆಯುತ್ತಿತ್ತು. ಇದನ್ನು ನೋಡಲು ಸುತ್ತಲಿನ ಶಾಲಾ ಕಾಲೇಜು ವಿದ್ಯಾರ್ಥಿಗಳು ಬಂದಿದ್ದರು.

ಅಭಿಯಾನ ಶುರುವಾದ ಮೊದಲ ದಿನವೇ ನಾಲ್ಕು ಕಟ್ಟಗಳು ನಿರ್ಮಾಣವಾದವು. ಆ ಮೂಲಕ ಬೇಸಿಗೆಯಲ್ಲಿ ನೀರ ನೆಮ್ಮದಿ ಕಂಡುಕೊಳ್ಳಲು ‘ನೀರ ನೆಮ್ಮದಿಯತ್ತ ಪಡ್ರೆ’ ತಂಡ ದಾಪುಗಾಲಿಟ್ಟಿದೆ. ಜನವರಿ ತಿಂಗಳೊಳಗೆ ನಲ್ವತ್ತು ಕಟ್ಟಗಳನ್ನು ಕಟ್ಟಿ, ತೋಡುಗಳಲ್ಲಿ ನೀರು ನಿಲ್ಲಿಸುವ ಯೋಜನೆಯನ್ನು ಹಾಕಿಕೊಂಡಿದೆ.

ಆರೇಳು ತಿಂಗಳ ಯೋಜನೆ..

ಕರ್ನಾಟಕದ ಗಡಿಭಾಗದಲ್ಲಿದೆ ಪೆರ್ಲ. ಅದರ ಪಕ್ಕದಲ್ಲಿರುವುದು ಸಜಂಗದ್ದೆ. ಅದು ಪಡ್ರೆ ಗ್ರಾಮಕ್ಕೆ ಸೇರಿದ ಹಳ್ಳಿ. ಇದಕ್ಕೆ ಹೊಂದಿಕೊಂಡಿರುವ ಮತ್ತೊಂದು ಊರು ಸ್ವರ್ಗ. ವಾರ್ಷಿಕ ಮೂರೂವರೆ ಸಾವಿರ ಮಿಲಿ ಮೀಟರ್ ಮಳೆ ಬೀಳುವ ಪ್ರದೇಶವಿದು. ಒಂದು ಕಾಲದಲ್ಲಿ ಈ ಗ್ರಾಮಗಳೆಲ್ಲ ‘ಜಲಸಮೃದ್ಧಿ’ಯಲ್ಲಿ ಸ್ವರ್ಗಗಳಾಗಿದ್ದವು. ಎಲ್ಲಿ ಬರ ಬಂದರೂ ಇಲ್ಲಿ ಮಾತ್ರ ನೀರ ನೆಮ್ಮದಿ ಇತ್ತು. ಸುತ್ತಮುತ್ತಲ ಗ್ರಾಮಗಳ ಅಡಿಕೆ ತೋಟ ಕೆಂಪಗಾದರೂ ಈ ಜಾಗದಲ್ಲಿ ಮಾತ್ರ ಹಚ್ಚಹಸಿರು.
ಅಂತಹ ‘ಸ್ವರ್ಗ’ವೂ ಕಳೆದ ಬೇಸಿಗೆಯಲ್ಲಿ ನರಕವಾಗತೊಡಗಿತ್ತು. ಆಗ ಪಡ್ರೆ ಗ್ರಾಮದ ಕೆಲವು ಮಂದಿ ಜಲಪತ್ರಕರ್ತ ಶ್ರೀಪಡ್ರೆ ಅವರ ನೇತೃತ್ವದಲ್ಲಿ ಜಲಸಂರಕ್ಷಣೆಗೆ ಸಂಕಲ್ಪ ಮಾಡಿದರು. ‘ನೀನೆಪ’ (ನೀರ ನೆಮ್ಮದಿಯತ್ತ ಪಡ್ರೆ) ಎಂಬ ತಂಡ ರಚನೆಯಾಯಿತು. ಕಳೆದ ಮೇ ತಿಂಗಳಲ್ಲಿ ‘ತೋಡಿನೆಡೆಗೆ ನಮ್ಮ ನಡಿಗೆ’ ಎಂಬ ಜಲಜಾಗೃತಿ ಕಾರ್ಯಕ್ರಮ ರೂಪುಗೊಂಡಿತು.

ತೋಡಿನೆಡೆಗೆ ನಮ್ಮ ನಡಿಗೆ

‘ಜಲ ಜಾಗೃತಿಯಷ್ಟೇ ಆದರೆ ಸಾಲದು, ತಮ್ಮ ಪ್ರದೇಶದಲ್ಲಿ ನೀರು ಹರಿಯುವ ತೋಡುಗಳನ್ನು ಮತ್ತು ಅವುಗಳ ಉಗಮ ಸ್ಥಾನವನ್ನು ಗುರುತಿಸಬೇಕು. ಅಧ್ಯಯನ ನಡೆಸಬೇಕು’ ಎಂಬ ಮಾತು ಹಿರಿಯರಿಂದ ಸಲಹೆ ರೂಪದಲ್ಲಿ ಕೇಳಿ ಬಂತು. ಇದರ ಜತೆಗೆ ನೀರಿಂಗಿಸುವ, ಮಿತ ನೀರು ಬಳಸುವ ಕುರಿತು ಶಿಕ್ಷಣ ಸಂಸ್ಥೆಗಳಲ್ಲಿ, ಸಾರ್ವಜನಿಕರಲ್ಲಿ ಜಲಜಾಗೃತಿ ಮೂಡಿಸುವ, ಕೊಳವೆ ಬಾವಿಗೆ ಮರುಪೂರಣ ಮಾಡುವಂತಹ ಹಲವು ಕಾರ್ಯಯೋಜನೆ ಸಿದ್ಧವಾಯಿತು. ಅದರನ್ವಯ ಕಳೆದ ಮೇ ತಿಂಗಳಿನಲ್ಲಿ ರೂಪುಗೊಂಡಿದ್ದೇ ‘ತೋಡಿನೆಡೆಗೆ ನಮ್ಮ ನಡಿಗೆ’ ಅಭಿಯಾನ.

ಈ ಅಭಿಯಾನದಲ್ಲಿ ಕಟ್ಟಗಳಿದ್ದ ದಿನಗಳಲ್ಲಿ ನೀರ ನೆಮ್ಮದಿ ಹೇಗಿತ್ತು, ನಂತರ ಏನಾಯ್ತು ಎಂಬುದರ ಬಗ್ಗೆ ಸಾಕಷ್ಟು ಚರ್ಚೆಯಾಯಿತು. ಹಳೆಯ ನೆನಪು, ಇವತ್ತಿನ ಸಂಕಟ ಎಲ್ಲವೂ ಮಂಥನವಾಯಿತು. ಅಂತಿಮವಾಗಿ ತೋಡುಗಳಿಗೆ ಕಟ್ಟ ಕಟ್ಟಬೇಕು ಎಂಬ ಯೋಚನೆ ಬಂತು.

ಆರಂಭ ಶೂರತ್ವ ಇಲ್ಲ

ಇಂಥ ಜಲಸಂರಕ್ಷಣಾ ಅಭಿಯಾನಗಳಲ್ಲಿ ಸಾಮಾನ್ಯವಾಗಿ ಆರಂಭ ಶೂರತ್ವವೇ ಮೇಳೈಸಿರುತ್ತದೆ. ನಾಲ್ಕಾರು ಮಳೆಯಾಗುತ್ತಿದ್ದಂತೆ ಅವೆಲ್ಲವೂ ಕೊಚ್ಚಿಹೋಗುತ್ತದೆ. ಆದರೆ ‘ನೀನೆಪ’ ತಂಡದವರದ್ದು ಹಾಗಾಗಲಿಲ್ಲ. ತಾವು ಅಂದುಕೊಂಡಿದ್ದ ಕಟ್ಟ ಕಟ್ಟುವ ಯೋಜನೆ ಬಗ್ಗೆ ಸಾಕಷ್ಟು ಚರ್ಚೆ ಮಾಡಿದರು. ಸಮುದಾಯ ಸಹಭಾಗಿತ್ವದಲ್ಲೇ ಈ ಕಾರ್ಯ ನಡೆಯಬೇಕು ಎಂದು ತೀರ್ಮಾನಿಸಿ, ಮನೆಮನೆಗೆ ತೆರಳಿ ‘ಕಟ್ಟೋಣ ಬನ್ನಿ’ ಅಂತ ಆಹ್ವಾನಿಸಿದರು. ಗ್ರಾಮಗಳಲ್ಲಿ ಕಟ್ಟದ ಮಾಹಿತಿ ಇರುವ ಕರ ಪತ್ರ ಹಂಚಿದರು. ಇಷ್ಟೆಲ್ಲ ಚರ್ಚೆ, ಅಭಿಯಾನ, ಆಹ್ವಾನ ಪ್ರಕ್ರಿಯೆಗಳು ನಡೆಯುವುದರೊಳಗೆ ನವೆಂಬರ್ ಕಳೆದು ಡಿಸೆಂಬರ್ ಆರಂಭವಾಗುತಿತ್ತು. ಕಟ್ಟ ಕಟ್ಟುವ ಸಂಕಲ್ಪ ಕೃತಿ ರೂಪಕ್ಕೆ ಇಳಿಯಲು ಶುರವಾಯಿತು‌.

ಈ ಕಟ್ಟ ಕಟ್ಟಲು ಜತೆಯಾದವರದ್ದು ಬಹಳ ವಿಶಾಲ ಮನಸ್ಸು. ಏಕೆಂದರೆ, ಅವರ್ಯಾರೂ ‘ಆಚೆ ಮನೆಯವರ ಜಾಗದಲ್ಲಿ ಕಟ್ಟ ಕಟ್ಟಿದರೆ ನನಗೇನು ಲಾಭ’ ಅಂತ ಯೋಚಿಸಲಿಲ್ಲ. ಕಟ್ಟ ಕಟ್ಟಿದರೆ ‘ನಮ್ಮೂರಿನಲ್ಲಿ ನೀರಿಂಗುತ್ತದೆ’ ಎಂದೇ ಯೋಚಿಸಿದರು. ಇಂಥವರು ದಕ್ಕಿದ್ದು ಗ್ರಾಮದ ಪುಣ್ಯ. ಹಾಗಾಗಿಯೇ ಕಟ್ಟ ಕಟ್ಟುವ ತೋಡಿನಿಂದ ಕಿಲೋ ಮೀಟರ್ ದೂರದಲ್ಲಿದ್ದವರೂ ಈ ಯೋಜನೆಯ ಪ್ರಸರಣಕ್ಕೆ ಕೈ ಜೋಡಿಸಿದರು. ತೋಡು ಹರಿಯುವ ಜಾಗದಲ್ಲೆಲ್ಲಾ ತಿರುಗಾಡಿ ಕಟ್ಟ ಕಟ್ಟುವಂತೆ ಆಯಾ ಜಮೀನಿನ ಮಾಲೀಕರನ್ನು ಪ್ರೇರೇಪಿಸಿದರು.

ಹೀಗೆ ಪಡ್ರೆಯ ಜನರ ಮನಸ್ಸುಗಳು ನೀರ ನೆಮ್ಮದಿಯತ್ತ ಸಾಂದ್ರಗೊಳ್ಳತೊಡಗಿದವು. ಅಂತಿಮ ವಾಗಿ ಅಲ್ಲಲ್ಲಿ ಒಂದೊಂದರಂತೆ ಪಡ್ರೆ ಗ್ರಾಮದ ವ್ಯಾಪ್ತಿಯಲ್ಲಿ ಸುಮಾರು ನಲವತ್ತು ಕಟ್ಟಗಳನ್ನು ಕಟ್ಟುವ ನೀಲನಕ್ಷೆ ಸಿದ್ಧವಾಯಿತು. ಕಟ್ಟ ಕಟ್ಟಲು ಬೇಕಿರುವ ವೆಚ್ಚಗಳನ್ನು ಆಯಾಜಾಗದ ಮನೆಯವರೇ ಭರಿಸಿದರು.

ಡಿ.1ರಿಂದ ‘ಕಟ್ಟಗಳ ಹಬ್ಬ’

ಕಟ್ಟಗಳ ಬಗೆಗೆ ಮುಂದಿನ ಪೀಳಿಗೆಗೆ ಮಾಹಿತಿ, ಜಾಗೃತಿ ನೀಡುವುದೂ ‘ನೀನೆಪ’ ತಂಡದ ಯೋಜನೆ. ಹಾಗಾಗಿ ಕಟ್ಟಕಟ್ಟುವ ದಿನದಂದು ಅಕ್ಕಪಕ್ಕದ ಕಾಲೇಜು, ಶಾಲೆಗಳಿಗೂ ಮಾಹಿತಿ ನೀಡಿ ವಿದ್ಯಾರ್ಥಿಗಳನ್ನೂ ಈ ಕಾರ್ಯಕ್ಕೆ ಜೋಡಿಸಬೇಕೆಂಬ ಯೋಚನೆ ಬಂತು. ‘ಗ್ರಾಮ ಪಂಚಾಯಿತಿಯನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳೋಣ’ ಅಂತ ಸಲಹೆ ಬಂತು. ‘ಕಟ್ಟಗಳ ಹಬ್ಬ’ ಎಂಬ ಶೀರ್ಷಿಕೆಯಡಿ ಡಿಸೆಂಬರ್ 1ರಂದು ಚಾಲನೆ ಪಡೆಯಿತು. ಪಡ್ರೆಯ ಸಜಂಗದ್ದೆ ಎಂಬ ಕಿರು ಪ್ರದೇಶದಲ್ಲಿ ‘ಕಟ್ಟ ಕಟ್ಟುವ ಹಬ್ಬ’ ಶುರುವಾಯಿತು.

ಮೊದಲ ದಿನವೇ ಸಣ್ಣ ಸಣ್ಣ ನಾಲ್ಕು ಕಟ್ಟಗಳನ್ನು ಕಟ್ಟುವುದರ ಮೂಲಕ ನೀರು ನಿಲ್ಲಿಸುವ ನಿರ್ಣಯ ಜಾರಿಯಾಯಿತು.

ಕಲ್ಲುಮಣ್ಣಿನ ಕಟ್ಟ, ಗೋಣಿ ಚೀಲದ ಕಟ್ಟ, ಪ್ಲಾಸ್ಟಿಕ್ ಕಟ್ಟ, ಮರಳಿನ ಚೀಲದ ಕಟ್ಟ ಹೀಗೆ ವಿಭಿನ್ನ ರೀತಿಯಲ್ಲಿ ನಾಲ್ಕು ಕಟ್ಟಗಳನ್ನು ಕಟ್ಟಿದರು. ಕಟ್ಟ ನಿರ್ಮಾಣ ವೀಕ್ಷಿಸಲು ಬಂದಿದ್ದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕಟ್ಟದ ವಿಧಗಳ ಬಗೆಗೆ ಮಾಹಿತಿ ಒದಗಿಸಲಾಯಿತು. ವಿದ್ಯಾರ್ಥಿಗಳು ಆಸಕ್ತಿಯಿಂದ ವೀಕ್ಷಿಸಿದರು. ‘ಕಟ್ಟದ ಬಗೆಗೆ ಗೊತ್ತಿತ್ತು. ಆದರೆ ಹೇಗೆ ಕಟ್ಟಬೇಕು, ಅದರ ತಂತ್ರಗಾರಿಕೆ ಏನು ಅನ್ನುವುದು ಗೊತ್ತಿರಲಿಲ್ಲ. ಪಡ್ರೆಯ ಕಟ್ಟಗಳಲ್ಲಿ ಭಾಗವಹಿಸಿ ಕಟ್ಟದ ಮತ್ತು ನೀರುಳಿಸುವ ಮಹತ್ವದ ಬಗೆಗೆ ಅರಿವಾಗಿದೆ’ ಎಂದು ಅಭಿಪ್ರಾಯಪಟ್ಟರು ವಿದ್ಯಾರ್ಥಿ ಸಜೀತ್ ಕೆ.

ಕಟ್ಟಗಳಿಗೆ ಬೇಕಿರುವ ಮೂಲವಸ್ತುಗಳಾದ ಪ್ಲಾಸ್ಟಿಕ್, ಮಣ್ಣು, ಅಡಿಕೆಮರದ ತುಂಡುಗಳನ್ನೆಲ್ಲಾ ಪೂರ್ವತಯಾರಿ ಮಾಡಿಟ್ಟು ಕೊಂಡದ್ದರಿಂದ ಮತ್ತು ಪುಟ್ಟ ಕಟ್ಟಗಳಾಗಿದ್ದರಿಂದ ಬೆಳಿಗ್ಗೆ ಒಂಬತ್ತಕ್ಕೆ ಆರಂಭಗೊಂಡ ಕಟ್ಟಗಳ ಕೆಲಸ ಮಧ್ಯಾಹ್ನ ಮೂರರ ವೇಳೆಗೆ ಮುಕ್ತಾಯವಾಯಿತು. ಈ ತಿಂಗಳು ಪೂರ್ತಿ ಪಡ್ರೆಯ ಸುತ್ತ ಕಟ್ಟುವ ಕೆಲಸ ಮುಂದುವರಿಯಲಿದೆ.

ಸಕಾರಾತ್ಮಕ ಪರಿಣಾಮದ ವಿಶ್ವಾಸ

‘ನಾವು 1995ರವರೆಗೆ ಕಟ್ಟ ಕಟ್ಟುತ್ತಿದ್ದೆವು. ಆದರೆ ಕಾರಣಾಂತರಗಳಿಂದ ನಿಲ್ಲಿಸಿಬಿಟ್ಟಿದ್ದೆವು. ಕಟ್ಟ ಕಟ್ಟುತ್ತಿದ್ದಾಗ ಮೇ ತಿಂಗಳ ಕೊನೆಯವರೆಗೂ ಬತ್ತದ ಬಾವಿ ನಂತರದ ವರ್ಷಗಳಲ್ಲಿ ಖಾಲಿಯಾಗುತ್ತಾ ಬರತೊಡಗಿತು. ಹಾಗಾಗಿ ಈಗ ಮತ್ತೆ ಕಟ್ಟುವ ಯೋಚನೆ ಮಾಡಿದ್ದೇವೆ. ಮುಂದಿನ ಎರಡು ಮೂರು ವರ್ಷಗಳಲ್ಲಿ ಇದರ ಸಕಾರಾತ್ಮಕ ಪರಿಣಾಮ ಕಾಣಬಹುದು’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದು ಕಟ್ಟ ಕಟ್ಟುವವರಲ್ಲಿ ಒಬ್ಬರಾದ ಪಡ್ಬು ಗೋವಿಂದ ಭಟ್.

‘ಕಟ್ಟಕಟ್ಟುವ ಕಾರ್ಯಕ್ಕಿಳಿದಿದ್ದೇವೆ. ಗ್ರಾಮದಲ್ಲಿ ಎಲ್ಲರೂ ಇದಕ್ಕೆ ಕೈಜೋಡಿಸುತ್ತಿದ್ದಾರೆ. ನಾನಾ ಭಾಗಗಳಲ್ಲಿ ಕಟ್ಟ ಕಟ್ಟುವುದಕ್ಕೆ ತಂಡಗಳು ಸಿದ್ಧವಾಗುತ್ತಿವೆ' ಎನ್ನುತ್ತಾ ಅಭಿಯಾನ ಪ್ರಗತಿ ವಿವರಿಸಿದರು ನೀನೆಪ ತಂಡದ ಸದಸ್ಯ ಶ್ರೀನಿವಾಸ ಪೆರಿಕ್ಕಾನ.

ಈಗ ಕಟ್ಟ ಕಟ್ಟುವ ನೀನೆಪ ತಂಡದ ಕೆಲಸ ಸುತ್ತಲಿನ ಗ್ರಾಮಗಳ ಜನರಿಗೆ ಉತ್ತೇಜನ ನೀಡಿದೆ. ಅಲ್ಲಿಯೂ ‘ಜಲಸಂರಕ್ಷಣೆ’ ಕೈಗೊಳ್ಳುವ ಮಾತುಗಳು ಕೇಳಿಬರುತ್ತಿವೆ.

ಕರಾವಳಿ ಅಷ್ಟೇ ಅಲ್ಲದೇ ರಾಜ್ಯದ ಪ್ರತಿ ಗ್ರಾಮದಲ್ಲೂ ಚಿಕ್ಕ ಪುಟ್ಟ ತೊರೆ, ತೋಡು, ಹಳ್ಳಗಳಿವೆ. ನೀರುಳಿಸುವ ಮನಸ್ಸಿದ್ದರೆ ಕಟ್ಟದಂತಹ ಯಾವುದೇ ಜಲಸಂರಕ್ಷಣಾ ಚಟುವಟಿಕೆ ಕೈಗೊಳ್ಳಬಹುದು.

ಪಡ್ರೆ ಗ್ರಾಮ ಇಂಥ ಸಮುದಾಯ ಆಧಾರಿತ ಕಾಯಕಕ್ಕೆ ಶ್ರೀಕಾರ ಹಾಕಿದೆ. ಈ ಕಾರ್ಯದಿಂದ ನೀನೆಪ ತಂಡ ‘ಕಟ್ಟದವರು’ ಎಂಬ ಹೊಸ ಅಭಿದಾನವನ್ನೇ ಪಡೆದಿದೆ.

ಮನಸ್ಸುಗಳನ್ನು ಕೂಡಿಸಿದ ಅಭಿಯಾನ

‘ಕಟ್ಟ ಕಟ್ಟುವ ಈ ಅಭಿಯಾನ ಕೇವಲ ನೀರನ್ನು ಮಾತ್ರ ಸಂಗ್ರಹಿಸುವುದಿಲ್ಲ. ಜತೆಗೆ ಮನಸ್ಸುಗಳನ್ನೂ ಜೋಡಿಸಿದೆ. ನೀರಿನ ಕುರಿತಾದ ಸಾಮೂಹಿಕ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ’ ಎನ್ನುತ್ತಾರೆ ಅಭಿಯಾನಕ್ಕೆ ರೂಪುರೇಶೆ ಕೊಟ್ಟ ಜಲಪತ್ರಕರ್ತ ಶ್ರೀಪಡ್ರೆಯವರು.
‘ಕೆರೆ ಬಾವಿಗಳ ನೀರನ್ನು ಹೆಚ್ಚಿಸದೆ ಕೊಳವೆ ಬಾವಿಗಳನ್ನೇ ನೆಚ್ಚಿಕೊಂಡರೆ ಯಾವತ್ತೂ ಅಪಾಯ‘ಎಂದು ಎಚ್ಚರಿಸುವ ಅವರು, ‘ಕಟ್ಟಗಳು ಅಂತರ್ಜಲದೆಡೆಗಿನ ಅವಲಂಬನೆ ಕಡಿಮೆಗೊಳಿಸುತ್ತವೆ’ ಎಂದು ಸಲಹೆ ನೀಡುತ್ತಾರೆ.

ಕಟ್ಟ ಎಂದರೆ...

ಸಣ್ಣ ಪುಟ್ಟ ತೊರೆ, ತೋಡು, ಹಳ್ಳಗಳಿಂದ ತೊಡಗಿ ಮಧ್ಯಮ ಗಾತ್ರದ ಹೊಳೆಗಳವರೆಗೆ ಹರಿಯುವ ನೀರಿಗೆ ತಡೆಯೊಡ್ಡಿ ನಿಲ್ಲಿಸುವುದೇ ಕಟ್ಟ. ಹೀಗೆ ನೀರು ನಿಲ್ಲಿಸುವುದರಿಂದ ಸುತ್ತಮುತ್ತಲಿನ ಕೆರೆ,ಬಾವಿಗಳಲ್ಲಿ ನೀರಿನ‌ಮಟ್ಟ ಹೆಚ್ಚುತ್ತದೆ. ಪರಿಣಾಮ, ಕೊಳವೆ ಬಾವಿಯೆಡೆಗಿನ ಅತಿಯಾದ ಅವಲಂಬನೆ ಕಡಿಮೆಯಾಗುತ್ತದೆ. ಇದೊಂದು ತಾತ್ಕಾಲಿಕ ರಚನೆ.

ಚಿತ್ರಗಳು: ಅಜಿತ್ ಸ್ವರ್ಗ ಮತ್ತು ‘ನೀನೆಪ’ ಸಂಗ್ರಹ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT