ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತೂರಲ್ಲೇ ಚೆಂದ ಸುತ್ತೂರು ಜಾತ್ರೆ

Last Updated 20 ಜನವರಿ 2020, 19:30 IST
ಅಕ್ಷರ ಗಾತ್ರ

ಸುತ್ತೂರು ಜಾತ್ರೆ ಎಂದರೆ ಅದೊಂದು ಬಗೆಯ ಯಾತ್ರೆ. ಕೇವಲ ಒಂದು ರಥ, ಒಂದು ವಿಗ್ರಹ, ಪೂಜೆ, ಒಂದಿಷ್ಟು ಖರೀದಿ, ಸಿಹಿತಿನಿಸುಗಳ ಮೇಳ... ಇವಿಷ್ಟೇ ಇಲ್ಲಿ ಇರುವುದಿಲ್ಲ. ಈ ಜಾತ್ರೆಯ ಒಳ ಹೊಕ್ಕರೆ ಒಂದಿಡಿ ದಿನ ಸುತ್ತಿದರೂ ನೋಡುವುದು ಮುಗಿಯದಂತಹ ವೈವಿಧ್ಯಮಯ ಪ್ರದರ್ಶನಗಳು ಇಲ್ಲಿವೆ. ಒಂದು ಬಗೆಯ ಯಾತ್ರೆಯ ಅನುಭವವನ್ನು ಜಾತ್ರೆ ಕಟ್ಟಿಕೊಡುತ್ತದೆ. ಹೀಗಾಗಿಯೇ, ಇದು ನಿರಂತರ ಜೀವಂತಿಕೆ ಕಾಯ್ದುಕೊಂಡು ಪ್ರತಿ ತಲೆಮಾರುಗಳನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ‘ಜನ ಮರುಳೋ ಜಾತ್ರೆ ಮರುಳೋ’ ಎಂಬ ಮಾತನ್ನು ಸುಳ್ಳು ಮಾಡುವಂತೆ ಜನಪದೀಯ ಅಂಶಗಳನ್ನು ಉಳಿಸಿಕೊಂಡಿದೆ. ಪ್ರಜ್ಞಾಪೂರ್ವಕವಾಗಿ ಜನಜಾಗೃತಿ ಉಂಟು ಮಾಡುತ್ತಿದೆ.

ರಥೋತ್ಸವದೊಂದಿಗೆ ಆರಂಭ...

ಭಕ್ತರ ಜಯಘೋಷಗಳ ನಡುವೆ ಶಿವಯೋಗಿಗಳ ಉತ್ಸವಮೂರ್ತಿಯನ್ನು ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸುತ್ತಾರೆ. ನಂತರ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಮಠಾಧೀಶರು ಪೂಜೆ ಸಲ್ಲಿಸಿ, ನಂತರ ರಥ ಎಳೆಯುತ್ತಾರೆ. ಜಾನಪದ ಕಲಾತಂಡಗಳು, ಕಳಸ ಹೊತ್ತ ಮಹಿಳೆಯರು ಉತ್ಸವಕ್ಕೆ ವಿಶೇಷ ಮೆರಗು ನೀಡುತ್ತವೆ. ಪ್ರತಿ ವರ್ಷ ಹೀಗೆ ರಥೋತ್ಸವ ಆರಂಭವಾಗುತ್ತದೆ.

ಮೂರು ವರ್ಷಗಳ ಹಿಂದೆ ಚಿಕ್ಕರಥದಲ್ಲಿ ಉತ್ಸವ ನಡೆಯುತ್ತಿತ್ತು. ಈಗ 55 ಅಡಿ ಎತ್ತರ, 17 ಅಡಿ ಅಗಲದ ಬೃಹತ್ ರಥವೂ ಉತ್ಸವದಲ್ಲಿ ಜತೆಯಾಗಿದ್ದು, ಭಕ್ತರ ಸಂಭ್ರಮ ಹೆಚ್ಚಿಸಿದೆ. ಅಂದಾಜು ₹2 ಕೋಟಿ ವೆಚ್ಚದಲ್ಲಿ 55 ಅಡಿ ಎತ್ತರದ, 17 ಅಡಿ ಅಗಲದ ರಥದಲ್ಲಿ 10 ನಂದಿ ತೊಲೆಗಳಿವೆ. 108 ಲಿಂಗಗಳು, ಬಸವಾದಿ ಶರಣರ ಚಿತ್ರಗಳು, ಸುತ್ತೂರು ಮಠದ ಪರಂಪರೆಯ 24 ಸ್ವಾಮೀಜಿಗಳ ಹೆಸರುಗಳನ್ನೂ ರಥದ ಮೇಲೆ ಕೆತ್ತಿಸಲಾಗಿದೆ.

ಬೃಹತ್ ಕೃಷಿಮೇಳ

ಸುತ್ತೂರು ಜಾತ್ರೆಯಲ್ಲಿ ರಥೋತ್ಸವ, ಉತ್ಸವಗಳ ಜತೆಗೆ, ಬೃಹತ್‌ ಕೃಷಿ ಮೇಳ, ರಾಸುಗಳ ಪ್ರದರ್ಶನವೂ ವಿಶೇಷ ಆಕರ್ಷಣೆ. ಈ ಮೇಳದಲ್ಲಿ ಕೃಷಿ ವಿಜ್ಞಾನಿಗಳು, ಪ್ರಗತಿಪರ ರೈತರು. ವಿಷಯ ಮಂಡಿಸುತ್ತಾರೆ. ವಿಷಯ ತಜ್ಞರೊಂದಿಗೆ ಸಂವಾದ ಮಾಡುತ್ತಾರೆ. ಈ ಕಾರಣಕ್ಕಾಗಿ ದೂರ ದೂರದ ಊರುಗಳಿಂದ ರೈತರು ಈ ಜಾತ್ರೆಗೆ ಬರುತ್ತಾರೆ.

‘ಒಂದು ಎಕರೆಯಲ್ಲಿ ಕೃಷಿ ಬ್ರಹ್ಮಾಂಡ’– ಪ್ರತಿ ವರ್ಷ ಕೃಷಿ ಮೇಳದ ಆಕರ್ಷಣೆ. ‘ಈ ವರ್ಷದ ವಿಶೇಷ ಎಂದರೆ ಎಲ್ಲ ಬಗೆಯ ಬೆಳೆಗಳನ್ನು ಒಂದು ಎಕರೆಯಲ್ಲಿ ಬೆಳೆಸಲಾಗಿದೆ. ವಿಶೇಷವಾಗಿ ನಾಟಿ ತರಕಾರಿ ಬೀಜಗಳನ್ನೇ ಬಿತ್ತನೆ ಮಾಡಿದ್ದಾರೆ. ಸಾವಯವ ಕೈತೋಟ, ತಾರಸಿ ತೋಟದಲ್ಲಿ ನಾಟಿ ತರಕಾರಿ ಬೆಳೆಸುವ ಹಾಗೂ ಬಳಸುವ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಸಿರಿಧಾನ್ಯ, ವಿದೇಶಿ ಬೆಳೆಗಳನ್ನೂ ಬೆಳೆದಿದ್ದೇವೆ‘ ಎನ್ನುತ್ತಾರೆ ಜೆಎಸ್‌ಎಸ್‌ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಶಾಮರಾಜು ಹೊಸಮನಿ. ಒಟ್ಟು117 ಬಗೆಯ ಬೆಳೆಗಳು, ವಿವಿಧ ತಳಿಗಳ ಜಾನುವಾರುಗಳು ಕೃಷಿಕರಿಗೆ ದಾರಿದೀಪದಂತಿವೆ.‌ ಈ ಜಾತ್ರೆಯಲ್ಲಿ ರೈತರಷ್ಟೇ ಅಲ್ಲದೇ, ಹೆಚ್ಚಿನ ಪ್ರಮಾಣದಲ್ಲಿ ಶಾಲಾ – ಕಾಲೇಜು ಮಕ್ಕಳೂ ಪಾಲ್ಗೊಳ್ಳುತ್ತಾರೆ. ಸುತ್ತೂರಿನ ಮಠದ ವಿದ್ಯಾಸಂಸ್ಥೆಗಳು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಶಿಕ್ಷಕರೊಂದಿಗೆ ವಿದ್ಯಾರ್ಥಿಗಳು, ಅವರ ಪೋಷಕರೂ ಜಾತ್ರೆಗೆ ಬರುತ್ತಾರೆ.

ಈ ಜಾತ್ರೆಯಲ್ಲಿ ನಡೆಯುವ ದನಗಳ ಜಾತ್ರೆ ಮತ್ತೊಂದು ಪ್ರಧಾನ ಆಕರ್ಷಣೆ. ರಾಸುಗಳ ಕೊಡು – ಕೊಳ್ಳುವಿಕೆ ಒಂದು ಹಬ್ಬವೇ ಸರಿ. ಈ ದನಗಳ ಜಾತ್ರೆಗೆ ಹೋಗುವುದು ಎಂದರೆ ರೈತರಿಗೆ ಅದೊಂದು ಬಗೆಯ ಪ್ರತಿಷ್ಠೆಯ ವಿಷಯ.

ವಸ್ತು ಪ್ರದರ್ಶನದ ಆಕರ್ಷಣೆ

ಜಾತ್ರೆಯ ಮತ್ತೊಂದು ಪ್ರಮುಖ ಆಕರ್ಷಣೆ ವಸ್ತುಪ್ರದರ್ಶನ. ಇದರಲ್ಲಿ ಕೈಮಗ್ಗ, ಕರಕುಶಲ ಉತ್ಪನ್ನಗಳು, ಕೈಗಾರಿಕೋತ್ಪನ್ನಗಳು, ಗ್ರಾಮೀಣ ಉತ್ಪನ್ನಗಳು, ಸ್ವಸಹಾಯ ಸಂಘ ಹಾಗೂ ಸ್ತ್ರೀಶಕ್ತಿ ಸಂಘಗಳು ಸಿದ್ಧಪಡಿಸಿದ ಗೃಹಬಳಕೆ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಇರಲಿದೆ. ಜೆಎಸ್‌ಎಸ್‌ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಸಿದ್ಧಪಡಿಸಿದ 200ಕ್ಕೂ ಹೆಚ್ಚು ಶಿಕ್ಷಣ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ಮಾದರಿಗಳ ಪ್ರದರ್ಶನ ಇರುತ್ತದೆ. ಇದರಲ್ಲಿ ಸರ್ಕಾರದ ವಿವಿಧ ಇಲಾಖೆ ಅಧಿಕಾರಿಗಳು, ಕೈಗಾರಿಕೆ ಸಂಸ್ಥೆಗಳು ಹಾಗೂ ಮಹಿಳಾ ಉದ್ಯಮಿಗಳು ಭಾಗವಹಿಸುವರು. ಅಲ್ಲದೆ, ವೈದ್ಯಕೀಯ ಹಾಗೂ ತಾಂತ್ರಿಕ ವಸ್ತುಪ್ರದರ್ಶನ ಕೂಡಾ ಇರಲಿದೆ.

ಭಜನಾ ಕಲೆಗೆ ಮರುಜೀವ

ಅಳಿಯುತ್ತಿರುವ ಭಜನಾ ಕಲೆ ಉಳಿಸುವುದಕ್ಕಾಗಿ ಪ್ರತಿ ವರ್ಷವೂ ರಾಜ್ಯಮಟ್ಟದ ಭಜನಾ ಮೇಳ ಆಯೋಜಿಸಲಾಗುತ್ತದೆ. ಇದು 28ನೇ ವರ್ಷದ ಸ್ಪರ್ಧೆ. ಇದರಲ್ಲಿ ಉತ್ತರ ಕರ್ನಾಟಕ, ಮಧ್ಯ ಕರ್ನಾಟಕಗಳಿಂದ 800ಕ್ಕೂ ಅಧಿಕ ಭಜನಾ ತಂಡಗಳು ಭಾಗವಹಿಸುತ್ತವೆ. ಜಾತ್ರೆ ನಡೆಯುವಷ್ಟು ದಿನ ನಿತ್ಯ ಮುಂಜಾನೆಯಿಂದ ಸಂಜೆಯವರೆಗೆ ನಿರಂತರವಾಗಿ ಭಜನಾ ಕಲೆ ಪ್ರದರ್ಶಿಸುತ್ತವೆ. ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದು ವಿಶೇಷ. ಇದರ ಜತೆಗೆ ಏಕತಾರಿ, ಸೋಬಾನೆ ಪದಗಳ ಸ್ಪರ್ಧೆಗಳೂ ನಡೆಯಲಿವೆ.

ಪ್ರತಿ ವರ್ಷ ನಡೆಯುವ ಸಾಮೂಹಿಕ ವಿವಾಹ ಈ ಭಾಗದ ಬಡವರಿಗೆ ನೆರವಾಗುವ ಕಾರ್ಯಕ್ರಮ. ಜಾತಿ, ಧರ್ಮ ತಾರತಮ್ಯ ರಹಿತವಾಗಿ ಸರಳ ರೀತಿಯಲ್ಲಿ ನಡೆಯುವ ಕಾರ್ಯಕ್ರಮ ಇದು. ಈ ಬಾರಿ ಜ 22ರಂದು ಸಾಮೂಹಿಕ ವಿವಾಹ ಮಹೋತ್ಸವ ನಡೆಯುತ್ತಿದೆ. ಕಳೆದ ವರ್ಷ ಇಲ್ಲಿ ವಿವಾಹವಾದ ಜೋಡಿಗಳು ಈ ವರ್ಷದ ಜಾತ್ರೆಗೆ ಬರುತ್ತಾರೆ.

ಜಾತ್ರೆಗೆ ಬಂದವರಿಗೆ ಹಸಿವು ನೀಗಿಸಲು ಪ್ರತಿ ದಿನ ಮೂರು ಹೊತ್ತು ಉಪಾಹಾರ, ಊಟದ ವ್ಯವಸ್ಥೆ ಇರುತ್ತದೆ. ಇಲ್ಲಿ ವಿದ್ಯಾರ್ಥಿಗಳೇ ಸ್ವಯಂಸೇವಕರು. ವಿದ್ಯಾರ್ಥಿ ದೆಸೆಯಲ್ಲೇ ಸೇವಾ ಮನೋಭಾವ ಬಿತ್ತುವುದಕ್ಕೆ ಜಾತ್ರೆ ಸಹಕಾರಿ.

ಇಂದಿನಿಂದ ಜಾತ್ರೆ ಶುರು

ಮೈಸೂರು ಜಿಲ್ಲೆಯ ಸುತ್ತೂರಲ್ಲಿ ಆದಿಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳ ಈ ವರ್ಷದ ಜಾತ್ರಾ ಮಹೋತ್ಸವ ಜನವರಿ 21ರಿಂದ 26ರ ವರೆಗೆ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯಲಿದೆ. 21ರಂದು ವೀರಭದ್ರೇಶ್ವರ ಕೊಂಡೋತ್ಸವ, 22ರಂದು ಕರ್ತೃ ಗದ್ದುಗೆಯಲ್ಲಿ ನಂಜುಂಡೇಶ್ವರ, ನಂದಿ ಹಾಗೂ ವಿನಾಯಕ ಮೂರ್ತಿಗಳ ಪುನರ್‌ ಪ್ರತಿಷ್ಠಾಪನೆ, 23ರಂದು ರಥೋತ್ಸವ, 24ರಂದು ಮಹದೇಶ್ವರ ಕೊಂಡೋತ್ಸವ ಹಾಗೂ ಸಾವಯವ ಕೃಷಿ ಮತ್ತು ವೈಜ್ಞಾನಿಕವಾಗಿ ನೀರಿನ ಬಳಕೆ ಕುರಿತು ವಿಚಾರ ಸಂಕಿರಣ, 25ರಂದು ತೆಪ್ಪೋತ್ಸವ ಜೊತೆಗೆ ಲಕ್ಷದೀಪೋತ್ಸವ, ಹಾಲರವಿ ಉತ್ಸವ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ.

ವಿವಿಧ ಸ್ಪರ್ಧೆಗಳು

ಜಾತ್ರೆಯಲ್ಲಿ ಚಿತ್ರಸಂತೆ, ಸ್ಥಳದಲ್ಲೇ ಚಿತ್ರ ಬಿಡಿಸುವುದು, ರಂಗೋಲಿ, ಗಾಳಿಪಟ ಹಾರಾಟ, ರಸಪ್ರಶ್ನೆ ಸ್ಪರ್ಧೆಗಳಿವೆ. ಗ್ರಾಮೀಣ, ಪ್ರಾಥಮಿಕ ಹಾಗೂ ಜೆಎಸ್‌ಎಸ್‌ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ದೇಸಿ ಆಟಗಳನ್ನು ಆಯೋಜಿಸಲಾಗಿದೆ. ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯೂ ಇದೆ. ವಿಜೇತರಾದ ಪೈಲ್ವಾನರಿಗೆ ‘ಸುತ್ತೂರು ಕೇಸರಿ ಪ್ರಶಸ್ತಿ’, ‘ಸುತ್ತೂರು ಕುಮಾರ ಪ್ರಶಸ್ತಿ’ಗಳನ್ನು ನೀಡಲಾಗುತ್ತದೆ.

ಗಾಯನ, ನೃತ್ಯ, ನಾಟಕ

ಸುತ್ತೂರಿನ ಗದ್ದುಗೆಯ ಆವರಣದಲ್ಲಿ ಗಾಯನ, ನೃತ್ಯ ಹಾಗೂ ನಾಟಕ ಪ್ರದರ್ಶನವಿದೆ. ಗ್ರಾಮೀಣ ಭಾಗದ ನಾಟಕ ತಂಡಗಳಿಂದ ಇಪ್ಪತ್ತಕ್ಕೂ ಹೆಚ್ಚು ಪೌರಾಣಿಕ ನಾಟಕಗಳು ನಾಲ್ಕು ವೇದಿಕೆಗಳ ಮೇಲೆ ಏಕಕಾಲಕ್ಕೆ ಪ್ರದರ್ಶನಗೊಳ್ಳುತ್ತವೆ. ಈ ನಾಟಕಗಳನ್ನು ವೀಕ್ಷಿಸಲೆಂದೇ ಹತ್ತಾರು ಕಿಲೊಮೀಟರ್‌ಗಳಿಂದ ಜನರು ಬರುವುದು ವಾಡಿಕೆಯಾಗಿದೆ.

ಶಾಂತಿ ಬೋಧಿಸಿದ ಸುತ್ತೂರು ಮಠ

ಸುತ್ತೂರು ಮಠ ಜಗತ್ತಿಗೆ ಶಾಂತಿ ಬೋಧಿಸಿದ ಮಠ. ಕ್ರಿ.ಶ 950ರಲ್ಲಿ ತಮಿಳುನಾಡಿನ ಚೋಳರು ಹಾಗೂ ತಲಕಾಡಿನ ಗಂಗರ ಸೈನ್ಯವು ಕಪಿಲಾ ನದಿಯ ದಂಡೆಯ ಮೇಲೆ ಬೀಡುಬಿಟ್ಟು ಇನ್ನೇನು ಯುದ್ದವಾಗಬೇಕು ಎನ್ನುವಾಗ ಶಿವರಾತ್ರೀಶ್ವರ ಶಿವಯೋಗಿಗಳು ಇಬ್ಬರಿಗೂ ಶಾಂತಿ ಮಂತ್ರ ಬೋಧಿಸುತ್ತಾರೆ. ನಡೆಯಲಿದ್ದ ಭಾರಿ ನರಮೇಧವನ್ನು ತಪ್ಪಿಸುತ್ತಾರೆ ಎಂಬ ಐತಿಹ್ಯ ಇದೆ.

ಈ ಭಾಗದ ಜನಪದ ದೈವ ಮಲೆಮಹದೇಶ್ವರ ಸುತ್ತೂರು ಮಠಕ್ಕೆ ಭೇಟಿ ಕೊಟ್ಟ ಕುರಿತೂ ಸಾಕಷ್ಟು ಕಥೆಗಳಿವೆ. ಇದಕ್ಕೆ ಪೂರಕ ಎಂಬಂತೆ ಮಲೆಮಹದೇಶ್ವರ ಬೀಸಿದ ರಾಗಿಕಲ್ಲು, ಅವರು ಬಳಸುತ್ತಿದ್ದ ವಸ್ತುಗಳು ಇಲ್ಲಿನ ವಸ್ತು ಸಂಗ್ರಹಾಲಯಗಳಲ್ಲಿವೆ. ಮಲೆಮಹದೇಶ್ವರ ಮಹಾಕಾವ್ಯದಲ್ಲಿ ‘ಸುತ್ತೂರು ಮಠದ ಕವಟ್ಲು’ ಎಂಬ ಒಂದು ಪ್ರತ್ಯೇಕ ಅಧ್ಯಾಯವೇ ಇದೆ. ‘ಸುತ್ತೂರು ಮಠ ಸುಖ ಎಂದು ಹೋದರೆ ರಾಗಿ ಬೀಸೋದು ತಪ್ಪಲಿಲ್ಲ’ ಎಂಬ ಗಾದೆ ಮಾತು ಮಠದ ಕಾಯಕ ಸಂಸ್ಕೃತಿಗೆ ಹಿಡಿದ ಕೈಗನ್ನಡಿಯಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT