ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ.26ರ ರ‍್ಯಾಲಿಗೆ ಹತ್ತು ಲಕ್ಷ ರೈತರು: ಎಐಕೆಎಸ್‌ಸಿಸಿ ಸಂಚಾಲಕ ಯೋಗೇಂದ್ರ ಯಾದವ್‌

Last Updated 16 ಜನವರಿ 2021, 15:39 IST
ಅಕ್ಷರ ಗಾತ್ರ

ಬೆಂಗಳೂರು: ‘ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಹೊಸ ಕೃಷಿ ಸಂಬಂಧಿ ಕಾಯ್ದೆಗಳನ್ನು ರದ್ದುಪಡಿಸಲು ಆಗ್ರಹಿಸಿ ಜನವರಿ 26ರಂದು ದೆಹಲಿಯಲ್ಲಿ ನಡೆಯುವ ‘ಕಿಸಾನ್‌ ಗಣತಂತ್ರ ಪರೇಡ್‌’ನಲ್ಲಿ ಹತ್ತು ಲಕ್ಷ ರೈತರು ಪಾಲ್ಗೊಳ್ಳಲಿದ್ದಾರೆ’ ಎಂದು ಅಖಿಲ ಭಾರತ ಕಿಸಾನ್‌ ಸಂಘರ್ಷ ಸಮನ್ವಯ ಸಮಿತಿ (ಎಐಕೆಎಸ್‌ಸಿಸಿ) ಸಂಚಾಲಕ ಯೋಗೇಂದ್ರ ಯಾದವ್‌ ತಿಳಿಸಿದರು.

ನಗರದಲ್ಲಿ ರೈತ, ಕಾರ್ಮಿಕ ಮತ್ತು ದಲಿತ ಸಂಘಟನೆಗಳ ಮುಖಂಡರೊಂದಿಗೆ ಶನಿವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು, ಅವರು, ‘ಗಣರಾಜ್ಯೋತ್ಸವ ಪರೇಡ್‌ಗೆ ನಾವು ಯಾವುದೇ ರೀತಿಯಲ್ಲೂ ತೊಂದರೆ ಮಾಡುವುದಿಲ್ಲ. ಸಾರ್ವಜನಿಕ ಆಸ್ತಿಗೂ ಹಾನಿ ಮಾಡುವುದಿಲ್ಲ. ಸಂಪೂರ್ಣ ಶಾಂತಿಯುತವಾಗಿ ರೈತರ ಹೋರಾಟ ನಡೆಯಲಿದೆ’ ಎಂದರು.

ಇದು ರಾಷ್ಟ್ರೀಯ ಹೋರಾಟ. ಪಂಜಾಬ್‌, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳದ ರೈತರು ಹೆಚ್ಚಿನಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ. ಜೊತೆಗೆ ಬಹುತೇಕ ಎಲ್ಲ ರಾಜ್ಯಗಳ ರೈತ ಪ್ರತಿನಿಧಿಗಳೂ ‘ಕಿಸಾನ್‌ ಗಣತಂತ್ರ ಪರೇಡ್‌’ನಲ್ಲಿ ಜತೆಆಗುವರು. ‘ಗಣತಂತ್ರ’ ಎಂದರೆ ‘ಜನರ ಧ್ವನಿ’ ಎಂಬುದನ್ನು ಇದು ನಿರೂಪಿಸಲಿದೆ ಎಂದು ಹೇಳಿದರು.

ಮುಕ್ತ ಅವಕಾಶದ ವಿಶ್ವಾಸ: ಗಣರಾಜ್ಯೋತ್ಸವದ ದಿನ ನಡೆಯುವ ರೈತರ ಶಾಂತಿಯುತ ಚಳವಳಿಗೆ ಸರ್ಕಾರ ಅಡ್ಡಿಪಡಿಸುವುದಿಲ್ಲ ಮತ್ತು ಮುಕ್ತವಾಗಿ ನಡೆಸಲು ಅವಕಾಶ ನೀಡುವ ವಿಶ್ವಾಸವಿದೆ. ರೈತರ ಹೋರಾಟ ಹತ್ತಿಕ್ಕುವ ನೈತಿಕ ಬಲ ಯಾರಿಗೂ ಇಲ್ಲ. ಸರ್ಕಾರ ರೈತರ ಪರೇಡ್‌ ತಡೆಯುತ್ತದೆ ಎಂದು ಊಹಿಸಲೂ ಆಗದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜ.26ರ ಹೋರಾಟಕ್ಕೆ ಪೂರಕವಾಗಿ ಜ.23ರಂದು ದೇಶದಾದ್ಯಂತ ರಾಜಭವನಗಳ ಎದುರು ರೈತರ ಪ್ರತಿಭಟನೆಗಳು ನಡೆಯಲಿವೆ. ಜ.26ರಂದು ಸರ್ಕಾರಗಳ ಕಡೆಯಿಂದ ಗಣರಾಜ್ಯೋತ್ಸವ ಪರೇಡ್‌ ನಡೆಯುವ ಎಲ್ಲೆಡೆ ‘ಕೃಷಿಕ್‌ ಗಣತಂತ್ರ ಪರೇಡ್’ ನಡೆಯಲಿದೆ’ ಎಂದು ಹೇಳಿದರು.

ಲಕ್ಷಾಂತರ ಮಂದಿ ರೈತರು ದೆಹಲಿಯ ಗಡಿಯಲ್ಲಿ ಇದ್ದಾರೆ. ಕೇಂದ್ರ ಸರ್ಕಾರ ಬೇರೆ ಬೇರೆ ರೀತಿಯಲ್ಲಿ ರೈತರನ್ನು ಬೆದರಿಸುವ ಪ್ರಯತ್ನ ಮಾಡುತ್ತಿದೆ ಎಂದು ದೂರಿದರು.

ರೈತರ ನಾಶಕ್ಕೆ ದಾರಿ: ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಜಾರಿಗೆ ತಂದಿರುವ ಗೋಹತ್ಯೆ ನಿಷೇಧ ಕಾಯ್ದೆ ರೈತರ ನಾಶಕ್ಕೆ ಕಾರಣವಾಗಲಿದೆ. ಪಶುಸಂಗೋಪನೆಯೇ ರೈತರಿಗೆ ಬಲ ತುಂಬಿದೆ. ಈಗ ತಂದಿರುವ ಕಾಯ್ದೆಯು ಪಶುಸಂಗೋಪನೆ, ಹಸುಗಳು, ರೈತರು ಎಲ್ಲವನ್ನೂ ಏಕಕಾಲಕ್ಕೆ ನಾಶ ಮಾಡಲಿದೆ ಎಂದು ಯೋಗೇಂದ್ರ ಯಾದವ್ ಹೇಳಿದರು.

ಕೃಷಿ ವಿಜ್ಞಾನಿ ಡಾ.ಪ್ರಕಾಶ್ ಕಮ್ಮರಡಿ, ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌, ಕೇರಳದ ಕೆ.ವಿ. ಬಿಜು, ತಮಿಳುನಾಡಿನ ಟಿ.ಎನ್‌. ಈಶ್ವರನ್‌, ಆಂಧ್ರಪ್ರದೇಶದ ಪುನೀತ್‌ ನಂದ ಪತ್ರಿಕಾಗೋಷ್ಠಿಯಲ್ಲಿದ್ದರು.

ಒಂದು ಇಂಚೂ ಕದಲಿಲ್ಲ

‘ಕೃಷಿ ಸಂಬಂಧಿ ಕಾಯ್ದೆಗಳ ಹಿಂಪಡೆಯುವ ವಿಚಾರದಲ್ಲಿ ಕೇಂದ್ರ ಸರ್ಕಾರ ಒಂದು ಇಂಚು ಕೂಡ ಕದಲಿಲ್ಲ. ಹತ್ತು ಸುತ್ತಿನ ಮಾತುಕತೆಯಲ್ಲೂ ಸರ್ಕಾರದ ನಿಲುವು ಒಂದೇ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕೈಗಳನ್ನು ಯಾರೋ ಕಟ್ಟಿ ಹಾಕಿದ್ದಾರೆ ಅನಿಸುತ್ತಿದೆ’ ಎಂದು ಯೋಗೇಂದ್ರ ಯಾದವ್‌ ಹೇಳಿದರು.

'ಚುನಾವಣಾ ಬಾಂಡ್‌ಗಳ ದೇಣಿಗೆಯ ಸಂಪೂರ್ಣ ಮಾಹಿತಿ ಬಹಿರಂಗವಾದರೆ ಪ್ರಧಾನಿಯ ಕೈಕಟ್ಟಿ ಹಾಕಿರುವವರು ಯಾರು ಎಂಬುದು ತಿಳಿಯುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT