ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

114 ‘ನಮ್ಮ ಕ್ಲಿನಿಕ್‌’ಗೆ ಡಿ.14ಕ್ಕೆ ಚಾಲನೆ

ರಾಜ್ಯದ ಜನರಿಗೆ ನಮ್ಮ ಕ್ಲಿನಿಕ್‌ನಲ್ಲಿ ಸಂಪೂರ್ಣ ಉಚಿತ ಆರೋಗ್ಯ ಸೇವೆಗಳು
Last Updated 12 ಡಿಸೆಂಬರ್ 2022, 18:41 IST
ಅಕ್ಷರ ಗಾತ್ರ

ಬೆಂಗಳೂರು: ‘ಬಡ ಜನರಿಗೆ ಸುಲಭವಾಗಿ ಆರೋಗ್ಯ ಸೇವೆ ಒದಗಿಸಲು ರೂಪಿಸಿರುವ 438 ‘ನಮ್ಮ ಕ್ಲಿನಿಕ್‌’ಗಳನ್ನು ಜನವರಿ ಅಂತ್ಯದ ಒಳಗೆ ರಾಜ್ಯದಾದ್ಯಂತ ಆರಂಭವಾಗಲಿವೆ’ ಎಂದು ಆರೋಗ್ಯ ಸಚಿವ ಕೆ. ಸುಧಾಕರ್‌ ತಿಳಿಸಿದರು.

‘ಒಟ್ಟು ₹150 ಕೋಟಿ ಮೊತ್ತದ ಯೋಜನೆ ಇದಾಗಿದೆ. ಮೊದಲ ಹಂತವಾಗಿ ಡಿ.14ರಂದು 114 ಕ್ಲಿನಿಕ್‌ಗಳು ಏಕಕಾಲದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಉದ್ಘಾಟನೆಗೊಳ್ಳಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

’ಮೊದಲಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿ ಹೊರತುಪಡಿಸಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಕ್ಲಿನಿಕ್‌ಗಳು ಆರಂಭವಾಗಲಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಜನವರಿ ಮೊದಲ ವಾರದಲ್ಲಿ ಏಕಕಾಲಕ್ಕೆ 150 ಹಾಗೂ ತಿಂಗಳಾಂತ್ಯದ ವೇಳೆಗೆ ಎಲ್ಲ 243 ಕ್ಲಿನಿಕ್‌ಗಳು ಕಾರ್ಯಾರಂಭ ಮಾಡಲಿವೆ’ ಎಂದು ವಿವರಿಸಿದರು.

‘ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಆರಂಭವಾಗಲಿರುವ ನಮ್ಮ ಕ್ಲಿನಿಕ್‌ಗಳು ಬಡ ಜನರ ಆರೋಗ್ಯ ಸಂಜೀವಿನಿಯಾಗಿ ಕಾರ್ಯನಿರ್ವಹಿಸಲಿವೆ. 10 ರಿಂದ 20 ಸಾವಿರ ಜನಸಂಖ್ಯೆಗೆ ಒಂದರಂತೆ ನಮ್ಮ ಕ್ಲಿನಿಕ್‌ಗಳು ಆರಂಭವಾಗಲಿದೆ. ಪ್ರತಿ ಕ್ಲಿನಿಕ್‌ನಲ್ಲಿ ಒಬ್ಬ ವೈದ್ಯಾಧಿಕಾರಿ, ಒಬ್ಬರು ಶುಶ್ರೂಷಕರು, ಒಬ್ಬರು ಲ್ಯಾಬ್ ಟೆಕ್ನಿಷಿಯನ್, ಒಬ್ಬರು ಡಿ ಗ್ರೂಪ್ ನೌಕರ ಸೇವೆ ನೀಡಲಿದ್ದಾರೆ’ ಎಂದರು.

‘ಬಹುತೇಕ ಕ್ಲಿನಿಕ್‌ಗಳು ಸರ್ಕಾರಿ ಕಟ್ಟಡಗಳಲ್ಲೇ ಕಾರ್ಯನಿರ್ವಹಿಸಲಿವೆ. ಈಗಾಗಲೇ 300 ವೈದ್ಯರ ನೇಮಕವಾಗಿದ್ದು, ಕೆಲವೆಡೆ ವೈದ್ಯರ ಕೊರತೆ ಇದೆ. ಅಂತಹ ಸ್ಥಳಗಳಲ್ಲಿ ಪರ್ಯಾಯ ವ್ಯವಸ್ಥೆ ಮಾಡಲಾಗಿದ್ದು, ಕಡ್ಡಾಯ ಗ್ರಾಮೀಣ ಸೇವೆಯಲ್ಲಿರುವ 80ರಿಂದ 100 ವೈದ್ಯರನ್ನು ಅಲ್ಲಿಗೆ ನೇಮಿಸಲಾಗಿದೆ’ ಎಂದು ತಿಳಿಸಿದರು.

‘ನಮ್ಮ ಕ್ಲಿನಿಕ್‌ಗಳು ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 9.30ರಿಂದ 4.30ರವರೆಗೆ ಕಾರ್ಯನಿರ್ವಹಿಸಲಿವೆ. ಭಾನುವಾರ ರಜಾ ದಿನವಾಗಿದೆ’ ಎಂದು ತಿಳಿಸಿದರು.

ಎಲ್ಲಿ, ಎಷ್ಟು ಕ್ಲಿನಿಕ್‌ಗಳು?‌

ಬಿಬಿಎಂಪಿ ವ್ಯಾಪ್ತಿಯಲ್ಲಿ 243, ಬಾಗಲಕೋಟೆಯಲ್ಲಿ 18, ಬೆಳಗಾವಿಯಲ್ಲಿ 21, ದಕ್ಷಿಣ ಕನ್ನಡ 12, ಬಳ್ಳಾರಿ, ಗದಗ ಮತ್ತು ಕಲಬುರಗಿಯಲ್ಲಿ ತಲಾ 11, ತುಮಕೂರು, ಉಡುಪಿ,ಉತ್ತರ ಕನ್ನಡ ಮತ್ತು ವಿಜಯಪುರದಲ್ಲಿ ತಲಾ 10, ಬೆಂಗಳೂರು ಗ್ರಾಮಾಂತರದಲ್ಲಿ 9, ರಾಯಚೂರಿನಲ್ಲಿ 8, ವಿಜಯನಗರ, ಬೀದರ್, ಧಾರವಾಡ ಮತ್ತು ಮೈಸೂರಿನಲ್ಲಿ ತಲಾ 6, ಹಾಸನ, ಹಾವೇರಿಯಲ್ಲಿ ತಲಾ 5, ಚಿಕ್ಕಮಗಳೂರು, ಮಂಡ್ಯದಲ್ಲಿ ತಲಾ 4, ಚಾಮರಾಜನಗರ,
ಚಿಕ್ಕಬಳ್ಳಾಪುರ, ಕೋಲಾರ, ಕೊಪ್ಪಳ, ರಾಮನಗರ ಮತ್ತು
ಯಾದಗಿರಿಯಲ್ಲಿ ತಲಾ 3 ಹಾಗೂ ಚಿತ್ರದುರ್ಗ, ದಾವಣಗೆರೆ ಮತ್ತು ಕೊಡುಗು ಜಿಲ್ಲೆಯಲ್ಲಿ ತಲಾ ಒಂದು.

12 ಸೇವೆಗಳು ಲಭ್ಯ

‘ನಮ್ಮ ಕ್ಲಿನಿಕ್‌’ಗಳಲ್ಲಿ 12 ರೀತಿಯ ಆರೋಗ್ಯ ಸೇವೆಗಳು ಲಭ್ಯ. ಗರ್ಭಿಣಿ ಮತ್ತು ಜನನ ಸಮಯದ ಆರೈಕೆ, ನವಜಾತ ಶಿಶುವಿನ ಸಮಗ್ರ ಆರೈಕೆ, ಬಾಲ್ಯ ಮತ್ತು ಹದಿಹರೆಯದವರಿಗೆ ಸೇವೆಗಳು, ಸಾರ್ವತ್ರಿಕ ಲಸಿಕಾಕರಣದ ಸೇವೆಗಳು, ಕುಟುಂಬ ಕಲ್ಯಾಣ ಗರ್ಭ ನಿರೋಧಕ ಸೇವೆಗಳು, ಸಾಂಕ್ರಾಮಿಕ ರೋಗಗಳ ನಿರ್ವಹಣೆ, ಸಾಮಾನ್ಯ ಮತ್ತು ಸಣ್ಣ ಪ್ರಮಾಣದ ಕಾಯಿಲೆಗಳಿಗೆ ಸೇವೆ, ಮಧುಮೇಹ, ರಕ್ತದೊತ್ತಡಕ್ಕೆ ಚಿಕಿತ್ಸೆ, ಸಕ್ಕರೆ ಕಾಯಿಲೆ, ದೀರ್ಘಾವಧಿ ಕಾಯಿಲೆಗಳು, ಬಾಯಿ, ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್‌, ಬಾಯಿಯ ಆರೋಗ್ಯ ಸಮಸ್ಯೆಗಳು, ಕಣ್ಣಿನ ತಪಾಸಣೆ, ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸೇವೆಗಳು ಲಭ್ಯ ಎಂದು ಆರೋಗ್ಯ ಸಚಿವ ಕೆ. ಸುಧಾಕರ್‌ ತಿಳಿಸಿದರು.

ಜತೆಗೆ ವೃದ್ಧಾಪ್ಯ ಆರೈಕೆ, ತುರ್ತು ವೈದ್ಯಕೀಯ ಸೇವೆಗಳು, ಉಚಿತ ಆರೋಗ್ಯ ತಪಾಸಣೆ ಸೇರಿದಂತೆ ಔಷಧಗಳು ಸಂಪೂರ್ಣ ಉಚಿತವಾಗಿ ದೊರೆಯಲಿವೆ. 14 ಪ್ರಯೋಗ ಶಾಲಾ ಪರೀಕ್ಷೆಗಳು ಇಲ್ಲಿ ಲಭ್ಯವಿದ್ದು, ಟೆಲಿ ಕನ್ಸಲ್ಟೇಷನ್‌ ಸರ್ವೀಸಸ್‌, ಕ್ಷೇಮ ಚಟುವಟಿಕೆಗಳು ಕೂಡ ಉಚಿತವಾಗಿವೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT