ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

145 ಕ್ಷೇತ್ರ ಅನುಕೂಲಕರ ಎಂದು ಬಿಜೆಪಿ ಲೆಕ್ಕಾಚಾರ: ಮತದಾರನ ಮನ ಅರಿಯಲು ಬೂತ್‌ ಪಡೆ

l ಕಡೇ ಹಂತದ ಬೂತ್ ಅಭಿಯಾನಕ್ಕೆ ಚಾಲನೆ
Last Updated 28 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ 145 ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಅನುಕೂಲಕರ ಪರಿಸ್ಥಿತಿ ಇದೆಯೆಂದು ಲೆಕ್ಕಾಚಾರ ಹಾಕಿರುವ ಬಿಜೆಪಿ, ಈ ಕ್ಷೇತ್ರಗಳಲ್ಲಿನ ಮತ ದಾರರನ್ನು ಗರಿಷ್ಠ ಸಂಖ್ಯೆಯಲ್ಲಿ ತನ್ನ ತೆಕ್ಕೆಗೆ ಹಾಕಿಕೊ ಳ್ಳಲುಬೂತ್ ಮಟ್ಟದಲ್ಲಿ ಕೊನೆ ಹಂತದ ಅಭಿಯಾನ ಆರಂಭಿಸಿದೆ.

ಈ 145 ಕ್ಷೇತ್ರಗಳಲ್ಲಿ ಕನಿಷ್ಠ 95 ಕ್ಷೇತ್ರಗಳನ್ನು ಗೆಲ್ಲಲು ಗುರಿ ನಿಗದಿ ಮಾಡಿಕೊಂಡಿರುವ ಬಿಜೆಪಿಯು ಬೂತ್‌ ಮಟ್ಟದಲ್ಲಿ ಪೇಜ್‌ ಪ್ರಮುಖ್‌ಗಳ ಮೂಲಕ ಮತದಾರರನ್ನು ಸಂಪರ್ಕಿಸುವ ಕೆಲಸಕ್ಕೆ ಚಾಲನೆ ನೀಡಿದೆ. ಪ್ರತಿ ಪೇಜ್‌ ಪ್ರಮುಖ್ 30 ರಿಂದ 50 ಮತದಾರರನ್ನು ಖುದ್ದಾಗಿ ಭೇಟಿ ಮಾಡಿ ಮನವೊಲಿಸುವ ಕಾರ್ಯ ಆರಂಭಿಸಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ.

ಪ್ರತಿ ಬೂತ್‌ನಲ್ಲೂ ಮತದಾರರನ್ನು ಎ, ಬಿ, ಸಿ ಮತ್ತು ಡಿ ಎಂದು ವರ್ಗೀಕರಣ ಮಾಡಿಕೊಂಡಿದೆ. ಎ ಎಂದರೆ ಕಟ್ಟಾ ಬಿಜೆಪಿ ಮತದಾರರು. ಇವರು ಕಡ್ಡಾಯವಾಗಿ ಮತ ಚಲಾಯಿಸುವಂತೆ ನೋಡಿಕೊಳ್ಳುವುದು, ಬಿ ಎಂದರೆ ಯಾರಿಗೆ ಮತ ಹಾಕಬೇಕು ಎಂಬ ಗೊಂದಲದಲ್ಲಿ ಇರುವವರು. ಸಿ ಎಂದರೆ ಬಿಜೆಪಿಗೆ ಮತ ಹಾಕದವರು. ಈ ವರ್ಗದವರನ್ನು ಸೆಳೆಯಲು ಗರಿಷ್ಠ ಪ್ರಯತ್ನ ಹಾಕುವುದು. ಡಿ ಎಂದರೆ ಸತ್ತವರು ಮತ್ತು ಊರುಬಿಟ್ಟವರು ಎಷ್ಟಿದ್ದಾರೆ ಎಂದು ಖಚಿತಪಡಿಸಿಕೊಳ್ಳುವುದು. ಅವುಗಳನ್ನು ತೆಗೆಸಲು ಚುನಾವಣಾ ಆಯೋಗಕ್ಕೆ ಮಾಹಿತಿ ನೀಡುವುದು.

ಈಗಾಗಲೇ ಬೂತ್‌ ಮಟ್ಟದಲ್ಲಿ ಮೂರು ಹಂತಗಳಲ್ಲಿ ಮತದಾರರನ್ನು ಸಂಪರ್ಕಿಸಿ ವರದಿಗಳನ್ನು ರಾಜ್ಯ ಸಮಿತಿಗೆ ಕಳುಹಿಸಲಾಗಿದೆ. ಇದರ ಆಧಾರದಲ್ಲಿ ಪಕ್ಷದ ಕಾರ್ಯತಂತ್ರ ಗಳನ್ನು ಕಾಲ ಕಾಲಕ್ಕೆ ಬದಲಿಸಿಕೊಳ್ಳಲಾಗುತ್ತಿದೆ. ಬಿಜೆಪಿಯಿಂದ ದೂರ ಇರುವ ಮತದಾರರನ್ನು ಸೆಳೆಯಲು ಅಗತ್ಯವಿರುವ ಮಾರ್ಪಾಡು
ಗಳನ್ನು ಮಾಡಿಕೊಳ್ಳಲಾಗುತ್ತಿದೆ. ಬಿಜೆಪಿ ದುರ್ಬಲವಾಗಿರುವ ಪ್ರದೇಶಗಳಲ್ಲಿ ಮೋದಿ, ಅಮಿತ್‌ ಶಾ ಅವರ ಕಾರ್ಯಕ್ರಮ ಮತ್ತು ರೋಡ್‌ ಶೋ ನಡೆಸಿರುವುದು ಈ ಕಾರ್ಯತಂತ್ರದ ಭಾಗವಾಗಿದೆ ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದರು.

ಮತದಾರರ ಮನಸ್ಸಿನಲ್ಲಿ ಪರಿ ವರ್ತನೆ ಆಗಿದೆಯೇ? ಯಾವ ಸಮುದಾಯ ಮುನಿಸಿಕೊಂಡಿದೆ. ಕಾಂಗ್ರೆಸ್‌ ಅಥವಾ ಜೆಡಿಎಸ್‌ ಬಗ್ಗೆ ಮತದಾರರ ಮನಸ್ಸಿನಲ್ಲಿ ಏನಿದೆ ಎಂದು ಬೂತ್‌ ಅಭಿಯಾನದ ಕೊನೆ ಘಟ್ಟದಲ್ಲಿ ತಿಳಿದು ರಾಜ್ಯ ಸಮಿತಿಗೆ ವರದಿ ನೀಡಲಾಗುತ್ತದೆ ಎಂದು ಹೇಳಿದರು.

ಪ್ರತಿ ಶಾಸಕರ ಬಗ್ಗೆಯೂ 3 ಬಾರಿ ಸಮೀಕ್ಷೆ ನಡೆಸಿ, ಕ್ಷೇತ್ರದ ಸ್ಥಿತಿ ಗತಿಯ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿದೆ. ಬೂತ್‌ ಮಟ್ಟದ ಮಾಹಿತಿ ಸಮೀಕ್ಷೆಗೆ ಪೂರಕವಾಗಿದ್ದರೆ, ಗೆಲ್ಲಲು ಸಾಧ್ಯವೇ ಇಲ್ಲದ ಪರಿಸ್ಥಿತಿ ಎದುರಿಸುತ್ತಿರುವ ಶಾಸಕರಿಗೆ ಟಿಕೆಟ್‌ ನೀಡುವ ಸಾಧ್ಯತೆಯೇ ಇಲ್ಲ. ಅಂತಹ ಕ್ಷೇತ್ರಗಳಲ್ಲಿ ಪರ್ಯಾಯ ಅಭ್ಯರ್ಥಿಗಳ ಹುಡುಕಾಟವೂ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಮೋದಿ, ಶಾ ಯೋಗಿ ರ್‍ಯಾಲಿ

ಈ ಬಾರಿ ಚುನಾವಣಾ ಪ್ರಚಾರಕ್ಕಾಗಿ ಬರುವ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ 6 ರಿಂದ 7 ಬಾರಿ, ಅಮಿತ್‌ ಶಾ 10 ಬಾರಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ 5 ಕ್ಕೂ ಹೆಚ್ಚು ಬಾರಿ ಬರುವರು.

ಸಾರ್ವಜನಿಕ ಸಭೆಗಳು ಮತ್ತು ರೋಡ್‌ ಶೋಗಳಿಗೆ ಆದ್ಯತೆ ನೀಡಲಾಗುವುದು. ಈ ಮೂಲಕ ರಾಜ್ಯದಲ್ಲಿ ಬಿಜೆಪಿ ಪರ ಅಲೆ ಸೃಷ್ಟಿಸಲಾಗುವುದು. ಇದಲ್ಲದೇ ರಾಜ್ಯದ ವಿವಿಧ ಪ್ರದೇಶಗಳಿಗೆ ಅನುಗುಣವಾಗಿ ಚಲನಚಿತ್ರ ನಟರನ್ನೂ ಪ್ರಚಾರಕ್ಕೆ ಬಳಸಿಕೊಳ್ಳುವ ಚಿಂತನೆಯೂ ನಡೆದಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ.

ವಲಸಿಗರ ಮೇಲೆ ಕಾಂಗ್ರೆಸ್‌ ನಾಯಕರ ಕಣ್ಣು

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಮೊದಲ ಪಟ್ಟಿಯಲ್ಲಿ 124 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿರುವ ಕಾಂಗ್ರೆಸ್‌, ಎರಡನೇ ಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆ ಚುರುಕುಗೊಳಿಸಿದೆ. ಸೋಮವಾರ ತಡರಾತ್ರಿ ಯವರೆಗೆ ಉಳಿದ 100 ಕ್ಷೇತ್ರಗಳಿಗೆ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ತಯಾರಿಸಲು ಚುನಾವಣಾ ಸ್ಕ್ರೀನಿಂಗ್‌ ಸಮಿತಿ ಸಭೆ ನಡೆದಿದೆ.

ಸುಮಾರು ಏಳು ತಾಸು ನಡೆದ ಸಭೆಯಲ್ಲಿ 34 ಕ್ಷೇತ್ರಗಳಿಗೆ ಮಾತ್ರ ಸಂಭವನೀಯ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲಾಗಿದೆ. ಇನ್ನೂ ಕೆಲವು ಕ್ಷೇತ್ರಗಳಿಗೆ ಸಂಭವನೀಯ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲು ಇದೇ 30ರಂದು ಮತ್ತೊಂದು ಸುತ್ತಿನ ಸಭೆ ನಡೆಯಲಿದೆ.

ಏಪ್ರಿಲ್‌ 3ರಂದು ದೆಹಲಿಯಲ್ಲಿ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯುವ ಸಾಧ್ಯತೆಯಿದೆ. ಈ ಸಭೆಯಲ್ಲಿ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸುವ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ‘ಮಾರ್ಚ್ 30ರ ನಂತರ ಎರಡನೇ ಪಟ್ಟಿ ಬಿಡುಗಡೆ ಮಾಡಲಾಗುವುದು. ಮೊದಲ ಪಟ್ಟಿಯಲ್ಲಿ ‌ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ' ಎಂ‌ದಿದ್ದಾರೆ.

ಈ ಮಧ್ಯೆ, ‘ಆಪರೇಷನ್‌ ಕಮಲ’ದ ಪರಿಣಾಮ ಪಕ್ಷ ತ್ಯಜಿಸಿ ಬಿಜೆಪಿ ಸೇರಿದ ಶಾಸಕರಿರುವ ಕ್ಷೇತ್ರಗಳಿಗೆ ಅಭ್ಯರ್ಥಿ ಹೆಸರು ಅಂತಿಮಗೊಳಿಸದೇ ಇರಲು ಕಾಂಗ್ರೆಸ್‌ ನಾಯಕರು ನಿರ್ಧರಿಸಿದ್ದಾರೆ. ಸ್ಕ್ರೀನಿಂಗ್‌ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. ಅಲ್ಲದೆ, ಈ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವಿಷಯದಲ್ಲಿ ಕಾದು ನೋಡುವ ತಂತ್ರದ ಅನುಸರಿಸಲು ನಾಯಕರು ಮುಂದಾಗಿದ್ದಾರೆ.

ಯಲ್ಲಾಪುರ ಕ್ಷೇತ್ರದಲ್ಲಿ ಕೆಲವು ತಿಂಗಳ ಹಿಂದೆ ಬಿಜೆಪಿಗೆ ರಾಜೀನಾಮೆ ಕಾಂಗ್ರೆಸ್‌ ಸೇರಿರುವ ವಿ. ಎಸ್‌. ಪಾಟೀಲ ಅವರು ಟಿಕೆಟ್‌ ನಿರೀಕ್ಷೆಯಲ್ಲಿದ್ದಾರೆ. ಆದರೆ, ಪಕ್ಷ ತ್ಯಜಿಸಿ ಬಿಜೆಪಿ ತೆಕ್ಕೆಗೆ ಜಾರಿರುವ ಶಿವರಾಮ ಹೆಬ್ಬಾರ್‌ ಅವರು ಕಾಂಗ್ರೆಸ್‌ಗೆ ಮರಳಬಹುದೇ
ಎಂಬ ನಿರೀಕ್ಷೆಯಲ್ಲಿದ್ದಾರೆ ಕಾಂಗ್ರೆಸ್‌ ನಾಯಕರು. ಸಚಿವರಾದ ಕೆ. ಗೋಪಾಲಯ್ಯ, ಎಸ್‌.ಟಿ. ಸೋಮಶೇಖರ್‌, ಬೈರತಿ ಬಸವರಾಜು ಕೂಡಾ ಪಕ್ಷಕ್ಕೆ ಮರಳಬಹುದು ಎನ್ನುವುದು ನಾಯಕರ ನಿರೀಕ್ಷೆ. ಹೀಗಾಗಿ, ಈ ಸಚಿವರು ಪ್ರತಿನಿಧಿಸುವ ಮಹಾಲಕ್ಷ್ಮಿ ಲೇಔಟ್‌, ಯಶವಂತಪುರ, ಕೆ.ಆರ್‌. ಪುರ ಕ್ಷೇತ್ರಗಳಿಗೆ ಯಾವುದೇ ಅಭ್ಯರ್ಥಿಯ ಬಗ್ಗೆ ಚರ್ಚೆ ನಡೆದಿಲ್ಲ. ಅವರು ಪಕ್ಷಕ್ಕೆ ಮರಳದಿದ್ದರೆ ಕೊನೆಯ ಹಂತದಲ್ಲಿ ಈ ಕ್ಷೇತ್ರಗಳಿಗೆ ಟಿಕೆಟ್‌ ಅಂತಿಮಗೊಳಿಸಲು ಚರ್ಚೆ ನಡೆದಿದೆ ಎಂದೂ ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಮುಖಂಡ ಚೆಲುವರಾಯ ಸ್ವಾಮಿ, ‘ವಲಸಿಗ ಸಚಿವರು ಕಾಂಗ್ರೆಸ್ಸಿಗೆ ಬರುವ ಬಗ್ಗೆ ಚರ್ಚೆ ನಡೆದಿದೆ. ಅಂತಿಮವಾಗಿ ಏನೆನ್ನುವುದು ಗೊತ್ತಿಲ್ಲ ಚುನಾವಣೆ ಘೋಷಣೆ ಆದ ಬಳಿಕ ಗೊತ್ತಾಗುತ್ತದೆ. ಸೋಮಶೇಖರ್, ಬೈರತಿ ಸೇರಿದಂತೆ ಹಲವರು ಕಾಂಗ್ರೆಸ್ ಸೇರುವ ಬಗ್ಗೆ ಚರ್ಚೆ ಇದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT