ಭಾನುವಾರ, ಮೇ 22, 2022
21 °C
ರಂಗೇರಿದ ಅಖಿಲ ಭಾರತ ವೀರಶೈವ ಮಹಾಸಭಾ ಚುನಾವಣೆ

15 ಸಾವಿರ ಮತದಾರರ ಹೆಚ್ಚಳ!

ಕೆ. ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

ಬಳ್ಳಾರಿ: ರಾಜ್ಯದ 11 ಜಿಲ್ಲೆಗಳಲ್ಲಿ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ಸದಸ್ಯರ ಚುನಾವಣೆ ಫೆ.14ರಂದು ನಡೆಯಲಿದ್ದು, ಇದೇ ಮೊದಲ ಬಾರಿಗೆ ದೊಡ್ಡಮಟ್ಟದಲ್ಲಿ ‘ಚುನಾವಣೆ ರಾಜಕೀಯ’ ರಂಗೇರಿದೆ. ಸಭಾ ಸ್ಥಾಪನೆಯಾಗಿ 116 ವರ್ಷವಾಗಿದೆ.

₹1 ಸಾವಿರ ಶುಲ್ಕ ನೀಡಿ ಸದಸ್ಯರಾದವರ ಸಂಖ್ಯೆ ಕನಿಷ್ಠ 1 ಸಾವಿರವಿದ್ದರೆ ಮಾತ್ರ ಜಿಲ್ಲಾ ಘಟಕಕ್ಕೆ ಚುನಾವಣೆ ನಡೆಸಬೇಕು ಎಂಬ ನಿಯಮಕ್ಕೆ ಈ ಬಾರಿ ಮಹತ್ವ ದೊರಕಿದ್ದು, ಚುನಾವಣೆ ಕಣದಲ್ಲಿರುವವರ ಪರಿಶ್ರಮದ ಫಲವಾಗಿ, ಡಿ.31ರ ಹೊತ್ತಿಗೆ ಅಂದಾಜು 15 ಸಾವಿರ ಮಂದಿ ಹೊಸ ಸದಸ್ಯರು ಸೇರ್ಪಡೆಯಾಗಿದ್ದಾರೆ. ಮಹಾಸಭಾಕ್ಕೆ ₹1.50 ಕೋಟಿ ಶುಲ್ಕ ಸಂಗ್ರಹವಾಗಿದೆ. 

ಕೆಲವೇ ನೂರು ಸದಸ್ಯರಿದ್ದ ಜಿಲ್ಲೆಗಳಲ್ಲಿ ಈಗ ಸಾವಿರಾರು ಸದಸ್ಯರಿದ್ದಾರೆ. ವೀರಶೈವರು ಹೆಚ್ಚಿರುವ ಜಿಲ್ಲೆಗಳಲ್ಲಿ ಒಂದಾದ ಬಳ್ಳಾರಿಯೊಂದರಲ್ಲೇ ಸದಸ್ಯರ ಸಂಖ್ಯೆ 229 ರಿಂದ 3 ಸಾವಿರ ದಾಟಿದೆ.

ಪ್ರತಿ ಆರು ವರ್ಷಕ್ಕೊಮ್ಮೆ ನಡೆಯುತ್ತಿದ್ದ ಚುನಾವಣೆಯನ್ನು, 2018ರ ಬೈಲಾ ತಿದ್ದುಪಡಿ ಬಳಿಕ ಐದು ವರ್ಷಕ್ಕೆ ನಿಗದಿಪಡಿಸಲಾಗಿದೆ. ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆ 2019ರಲ್ಲಿ ನಡೆದಿದ್ದು, ಎಲ್ಲ ಘಟಕಗಳ ಅವಧಿಯನ್ನು ಅಂದಿನಿಂದಲೇ ಪರಿಗಣಿಸುವುದರಿಂದ, ಈಗ ಚುನಾವಣೆಯಲ್ಲಿ ಅಸ್ತಿತ್ವಕ್ಕೆ ಬರಲಿರುವ ಘಟಕಗಳ ಅವಧಿಯು ಮೂರು ವರ್ಷವಷ್ಟೇ ಉಳಿಯಲಿದೆ.

‘ಅವಿರೋಧ’ಕ್ಕೇ ಒತ್ತು: ‘ಬಹಳಷ್ಟು ಜಿಲ್ಲೆಗಳಲ್ಲಿ ಸದಸ್ಯರ ಸಂಖ್ಯೆ ಕಡಿಮೆ ಇದ್ದುದರಿಂದ ಪ್ರಜಾಪ್ರಭುತ್ವದ ಮಾದರಿಯಲ್ಲಿ ಚುನಾವಣೆ ನಡೆಯುತ್ತಿರಲಿಲ್ಲ. ಹೊಸ ಸದಸ್ಯರ ನೋಂದಣಿಯನ್ನೂ ನಿರ್ಲಕ್ಷ್ಯಿಸಲಾಗಿತ್ತು. ಅವಿರೋಧ ಆಯ್ಕೆಗಳೇ ನಡೆದು ಅಡಾಕ್‌ ಸಮಿತಿಗಳೇ ಜಾರಿಯಲ್ಲಿರುತ್ತಿದ್ದವು’ ಎಂದು ಸಭಾದ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿ ರೇಣುಕಪ್ರಸನ್ನ‌ ‘ಪ್ರಜಾವಾಣಿ’ಗೆ ಬುಧವಾರ ತಿಳಿಸಿದರು.

‘ಭೀಮಣ್ಣ ಖಂಡ್ರೆಯವರು ಅಧ್ಯಕ್ಷರಾದ ಬಳಿಕ ಸದಸ್ಯತ್ವ ನೋಂದಣಿಗೆ ಮಹತ್ವ ನೀಡಲಾಯಿತು. ಗೌರವ ಸದಸ್ಯರ ಸಂಖ್ಯೆ 3 ಸಾವಿರದಿಂದ 80 ಸಾವಿರಕ್ಕೇರಿತು. ಈಗಿನ ಅಧ್ಯಕ್ಷ ಶ್ಯಾಮನೂರು ಶಿವಶಂಕರಪ್ಪನವರ ಕಾಳಜಿಯಿಂದ ಈಗ ಮತದಾರರ ಸಂಖ್ಯೆ ದುಪ್ಪಟ್ಟಾಗಿದೆ’ ಎಂದು ಮಾಹಿತಿ ನೀಡಿದರು.

‘ಸಭಾದ ಅಂದಾಜಿನ ಪ್ರಕಾರ ರಾಜ್ಯದಲ್ಲಿ 1.50 ಕೋಟಿ ವೀರಶೈವರಿದ್ದಾರೆ. ಆದರೆ ಸಭಾಗೆ ಸುಮಾರು 1.60 ಲಕ್ಷ ಸದಸ್ಯರಿದ್ದಾರೆ. ಜನಸಂಖ್ಯೆಗೆ ಹೋಲಿಸಿದರೆ ಇದು ಕಡಿಮೆ. ಮುಂದಿನ ದಿನಗಳಲ್ಲಿ ಸದಸ್ಯರ ಸಂಖ್ಯೆ ಹೆಚ್ಚಲಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು