ಕಲಬುರ್ಗಿ: ‘ರಾಜ್ಯದಲ್ಲಿ ಒಟ್ಟಾರೆ 90 ಲಕ್ಷ ರೈತರಿಗೆ ಪ್ರಸಕ್ತ ವರ್ಷ ₹ 20,810 ಕೋಟಿ ಸಾಲ ವಿತರಿಸುವ ಗುರಿ ಹೊಂದಲಾಗಿದೆ‘ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಕಲಬುರ್ಗಿ–ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ವತಿಯಿಂದ ಶನಿವಾರ ಇಲ್ಲಿ ಏರ್ಪಡಿಸಿದ್ದ ರೈತರಿಗೆ ಸಾಲ ವಿತರಣೆ ಕಾರ್ಯಕ್ರಮದಲ್ಲಿ ರೈತರಿಗೆ ಸಾಂಕೇತಿಕವಾಗಿ ಸಾಲದ ಚೆಕ್ ವಿತರಿಸಿಅವರು ಮಾತನಾಡಿದರು.
‘ರಾಜ್ಯದಲ್ಲಿ 30.26 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ₹ 19,370 ಕೋಟಿ ಅಲ್ಪಾವದಿ ಬೆಳ ಸಾಲ, 60 ಲಕ್ಷ ರೈತರಿಗೆ ಶೇ 3ರಷ್ಟು ಬಡ್ಡಿ ದರದಲ್ಲಿ ₹ 1,440 ಕೋಟಿ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲ ನೀಡಲಾಗುವುದು’ ಎಂದರು.
ನಿರೀಕ್ಷೆಗೂ ಮೀರಿ ಉತ್ತಮ ಮಳೆ ಆಗುತ್ತಿದೆ. ಉತ್ತಮ ಬೆಳೆ ನಿರೀಕ್ಷೆಯಲ್ಲಿ ರೈತರು ಇದ್ದಾರೆ. ಜನಸಾಮಾನ್ಯರ ನೆರವಿಗೆ, ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಸಹಕಾರ ಬ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತಿವೆ. ಕಲಬುರ್ಗಿ, ಯಾದಗಿರಿ ಜಿಲ್ಲೆಗಳ 1,437 ಗ್ರಾಮಗಳ ರೈತರಿಗೆ ಕೃಷಿ, ಕೃಷಿಯೇತರ ಸಾಲ ವಿತರಣೆ ಮಾಡಲಾಗುತ್ತಿದೆ. ರೈತರು, ಗ್ರಾಹಕರ ನೆರವಿಗೆ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಕೋವಿಡ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ 10 ಸಾವಿರ ರೈತರಿಗೆ ₹ 50 ಕೋಟಿ ಸಾಲ ನೀಡುತ್ತಿರುವ ಕಲಬುರ್ಗಿ, ಯಾದಗಿರಿ ಜಿಲ್ಲಾ ಸಹಕಾರ ಬ್ಯಾಂಕ್ ಕಾರ್ಯ ಶ್ಲಾಘನೀಯ ಎಂದರು.
ರಾಜ್ಯದಲ್ಲಿ 5,500 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕಾರ್ಯಕ್ಷಮತೆ ಹೆಚ್ಚಿಸಲು ₹ 198 ಕೋಟಿ ವೆಚ್ಚದಲ್ಲಿ ಕಂಪ್ಯೂಟರೀಕರಣಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ,ಕಳೆದ ವರ್ಷ 17 ಲಕ್ಷ ರೈತರಿಗೆ ₹ 15,300 ಕೋಟಿ ಸಾಲ ನೀಡಬೇಕು ಎಂಬ ಗುರಿಯನ್ನು ಮುಖ್ಯಮಂತ್ರಿ ಅವರು ನೀಡಿದ್ದರು. ಆದರೆ, ₹ 16,795 ಕೋಟಿ ಸಾಲ ನೀಡಿದ್ದೇವೆ. ಶೇ 95ರಷ್ಟು ಸಾಲ ವಸೂಲಿ ಮಾಡಲಾಗಿದೆ. ಈ ವರ್ಷ 30 ಲಕ್ಷ ರೈತರಿಗೆ ₹ 20,810 ಕೋಟಿ ಸಾಲ ನೀಡುವ ಗುರಿಯನ್ನು ನೀಡಲಾಗಿದೆ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜ ಕುಮಾರ ಪಾಟೀಲ ತೆಲ್ಕೂರ ಮಾತನಾಡಿ, ಮೂರು ವರ್ಷಗಳಿಂದ ರೈತರಿಗೆ ಸಾಲ ನೀಡಲು ಸಾಧ್ಯವಾಗಿರಲಿಲ್ಲ. ಮುಚ್ಚುವ ಹಂತದಲ್ಲಿದ್ದ ಬ್ಯಾಂಕ್ ಈಗ ಬಲಿಷ್ಠವಾಗಿದೆ. ಸದ್ಯ 10 ಸಾವಿರ ರೈತರಿಗೆ ₹50 ಕೋಟಿ ಸಾಲ ನೀಡಲಾಗುತ್ತಿದೆ ಎಂದರು.
ಸಂಸದ ಡಾ.ಉಮೇಶ ಜಾಧವ ಮಾತನಾಡಿದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಆರ್.ಸಜ್ಜನ, ನಿರ್ದೇಶಕರಾದ ಸೋಮಶೇಖರ ಗೋನಾಯಕ, ಗೌತಮ ವೈ.ಪಾಟೀಲ, ಶರಣಬಸಪ್ಪ ಪಾಟೀಲ ಅಷ್ಟಗಿ, ಸೋಮಶೇಖರ ಗೋನಾಯಕ, ಅಶೋಕ ಸಾವಳೇಶ್ವರ, ಬಾಪುಗೌಡ ಡಿ.ಪಾಟೀಲ, ಶಿವಾನಂದ ಎ.ಮಾನಕರ, ಗುರುನಾಥರೆಡ್ಡಿ ಪಿ.ಹಳಿಸಗರ, ಬಸವರಾಜ ಎ.ಪಾಟೀಲ, ಸಿದ್ರಾಮರೆಡ್ಡಿ ಎ.ಕೌಳೂರು ಇದ್ದರು.
ಆಳಂದ, ಚಿಂಚೋಳಿ, ಸುರಪುರ, ಕೆಂಭಾವಿಯ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಸಾಂಕೇತಿಕವಾಗಿ ಸಾಲಪತ್ರ ವಿತರಿಸಲಾಯಿತು. ಡಾ.ಎಸ್.ಎಸ್.ಗುಬ್ಬಿ ಅವರು ರಚಿಸಿದ ಮಹಾಪ್ರಳಯ ಕೃತಿಯನ್ನು ಮುಖ್ಯಮಂತ್ರಿ ಬಿಡುಗಡೆ ಮಾಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.