ಬೆಳಗಾವಿ ಜಿಲ್ಲೆಯ 22 ಶಿಕ್ಷಕರಿಗೆ ಕೋವಿಡ್-19 ದೃಢ

ಬೆಳಗಾವಿ: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ನಾಲ್ವರು ಹಾಗೂ ಬೆಳಗಾವಿ ಶೈಕ್ಷಣಿಕ ಜಿಲ್ಲೆಯ 18 ಮಂದಿ ಸೇರಿ 22 ಶಿಕ್ಷಕರಿಗೆ ಕೋವಿಡ್- 19 ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.
ಇಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
'ಸರ್ಕಾರದ ಸೂಚನೆಯಂತೆ ಶಾಲೆ- ಕಾಲೇಜು ಆರಂಭಿಸಲಾಗಿದೆ. ಅದೇ ರೀತಿ ವಿದ್ಯಾಗಮ ಚಟುವಟಿಕೆಗಳನ್ನು ಕೂಡ ನಡೆಸಲಾಗುತ್ತಿದೆ. ಇದಕ್ಕೂ ಮುನ್ನ ಕೋವಿಡ್ ಪರೀಕ್ಷೆ ಮಾಡಿಸುವಂತೆ ಸೂಚಿಸಲಾಗಿತ್ತು. ಕ್ರಮೇಣ ವರದಿಗಳು ಬರುತ್ತಿವೆ ಎಂದು ಮಾಹಿತಿ ನೀಡಿದರು.
'ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಹುಕ್ಕೇರಿಯಲ್ಲಿ ಇಬ್ಬರು ಹಾಗೂ ರಾಯಬಾಗದಲ್ಲಿ ಇಬ್ಬರು ಶಿಕ್ಷಕರಲ್ಲಿ ಸೋಂಕು ದೃಢಪಟ್ಟಿದೆ. ಅಂತೆಯೇ ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಬೆಳಗಾವಿ ನಗರದಲ್ಲಿ 4, ಗ್ರಾಮೀಣದಲ್ಲಿ 10, ರಾಮದುರ್ಗದಲ್ಲಿ 3, ಕಿತ್ತೂರಿನ ಒಬ್ಬರು ಸೇರಿ ಒಟ್ಟು 18 ಶಿಕ್ಷಕರಿಗೆ ಕೋವಿಡ್ ದೃಢಪಟ್ಟಿದೆ. ಇವರಾರೂ ಶಾಲೆಗೆ ಹೋಗಿರಲಿಲ್ಲ. ಹೀಗಾಗಿ ಆ ಶಾಲಾ-ಕಾಲೇಜುಗಳನ್ನು ಬಂದ್ ಮಾಡುವ ಅವಶ್ಯಕತೆ ಇಲ್ಲ. ಆದರೆ, ತಾಲ್ಲೂಕಿನ ಕಡೋಲಿಯ ಶಾಲೆಯಲ್ಲಿ ನಾಲ್ವರು ಶಿಕ್ಷಕರಿಗೆ ಸೋಂಕು ದೃಢಪಟ್ಟಿದ್ದರಿಂದಾಗಿ ಆ ಶಾಲೆಯನ್ನು ಬಂದ್ ಮಾಡಲಾಗಿದೆ. ವಾರದ ಬಳಿಕ ಶಾಲೆಯನ್ನು ಸ್ಯಾನಿಟೈಸ್ ಮಾಡಿ ಮತ್ತೆ ಆರಂಭ ಮಾಡುತ್ತೇವೆ ಎಂದು ತಿಳಿಸಿದರು.
ಈ ಶಿಕ್ಷಕರು ಮಕ್ಕಳ ಸಂಪರ್ಕಕ್ಕೆ ಬಂದಿರಲಿಲ್ಲ. ಹೀಗಾಗಿ ಪೋಷಕರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದರು.
ಜಿಲ್ಲೆಯಲ್ಲಿ ಇನ್ನೂ ನೂರಾರು ಶಿಕ್ಷಕರ ಕೋವಿಡ್ ಪರೀಕ್ಷಾ ವರದಿ ಬರುವುದು ಬಾಕಿ ಇದೆ. ಕೋವಿಡ್ ನೆಗೆಟಿವ್ ಬಂದವರನ್ನು ಮಾತ್ರ ಶಾಲೆಯಲ್ಲಿ ಬಳಸಲಾಗುತ್ತಿದೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.