ಮಂಗಳವಾರ, ಡಿಸೆಂಬರ್ 1, 2020
24 °C

ಪ್ರವಾಹದಿಂದ ₹ 24,942 ಕೋಟಿ ಮೊತ್ತದ ನಷ್ಟ: ಕಂದಾಯ ಸಚಿವ ಅಶೋಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

R Ashoka

ಬೆಂಗಳೂರು: ‘ರಾಜ್ಯದಲ್ಲಿ ಪ್ರವಾಹದಿಂದ ₹ 24,942 ಕೋಟಿ ಮೊತ್ತದ ಹಾನಿ ಸಂಭವಿಸಿದೆ. ಈ ಬಗ್ಗೆ ಈಗಾಗಲೇ ಕೇಂದ್ರಕ್ಕೆ ಪತ್ರ ಬರೆದು, ಪರಿಹಾರ ನೀಡುವಂತೆ ಮನವಿ ಮಾಡಿದ್ದೇವೆ’ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.

ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘180 ತಾಲ್ಲೂಕುಗಳನ್ನು ಪ್ರವಾಹಪೀಡಿತವೆಂದು ಘೋಷಿಸಿದ್ದೇವೆ. ಪ್ರವಾಹದಿಂದ 90 ಜನ ಮೃತಪಟ್ಟಿದ್ದಾರೆ. ಮೃತರ ಕುಟುಂಬಗಳಿಗೆ ತಲಾ ₹ 5 ಲಕ್ಷ ಪರಿಹಾರ ನೀಡಿದ್ದೇವೆ’ ಎಂದರು.

‘ಈಗಾಗಲೇ ₹ 4.50 ಕೋಟಿ ಪರಿಹಾರ ವಿತರಿಸಿದ್ದೇವೆ. 1,935 ಜಾನುವಾರುಗಳು ಬಲಿ ಆಗಿವೆ. 21.60 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಪರಿಹಾರ ವಿತರಿಸಲು ಈಗಾಗಲೇ ಕ್ರಮಕೈಗೊಳ್ಳಲಾಗಿದೆ’ ಎಂದೂ ಅವರು ವಿವರಿಸಿದರು.

‘ಪ್ರವಾಹದಿಂದ 29,560 ಮನೆಗಳಿಗೆ ನೀರು ನುಗ್ಗಿದೆ. 48,224 ಮನೆಗಳಿಗೆ ಹಾನಿಯಾಗಿದೆ. ಸಂಪೂರ್ಣ ಹಾನಿಗೊಳಗಾದ ಮನೆಗಳಿಗೆ ₹ 5 ಲಕ್ಷ, ಭಾಗಶಃ ಹಾನಿಗೆ ಒಳಗಾದ ಮನೆಗಳಿಗೆ ₹ 3 ಲಕ್ಷ ಪರಿಹಾರ ನೀಡುತ್ತಿದ್ದೇವೆ. ಬೆಳೆ ಪರಿಹಾರವಾಗಿ ತಕ್ಷಣ ₹10 ಸಾವಿರ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.

‘ರಾಯಚೂರು ಜಿಲ್ಲೆ ಹೊರತುಪಡಿಸಿ ಉಳಿದ ಎಲ್ಲ ಕಡೆ ₹ 10 ಸಾವಿರ ಬೆಳೆ ಪರಿಹಾರ ವಿತರಣೆಯಾಗಿದೆ. ರಾಯಚೂರು ಜಿಲ್ಲಾಧಿಕಾರಿ ಜೊತೆ ಮಾತನಾಡಿದ್ದೇನೆ. ಮೂರು ದಿನಗಳಲ್ಲಿ ಪರಿಹಾರ ಧನ ವಿತರಿಸುವಂತೆ ಸೂಚನೆ ನೀಡಿದ್ದೇನೆ’ ಎಂದರು.

ಶಿವಕುಮಾರ್‌ ಆಟ ನಡೆಯಲ್ಲ: ‘ಉಪ ಚುನಾವಣೆ ನಡೆದ ಆರ್.ಆರ್. ನಗರ ಕ್ಷೇತ್ರದ ಉಸ್ತುವಾರಿಯನ್ನು ಪಕ್ಷ ನನಗೆ ನೀಡಿತ್ತು. ಸುಮಾರು 25 ವರ್ಷಗಳಿಂದ ಪಕ್ಷದ ಕಾರ್ಯಕರ್ತ, ಶಾಸಕ, ಸಚಿವನಾಗಿ‌ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಉಪಚುನಾವಣೆ ವೇಳೆ ಅಲ್ಲೇ ಇದ್ದು ದುಡಿದಿದ್ದೇನೆ. ಈ ಕ್ಷೇತ್ರದಲ್ಲಿ ಡಿ.ಕೆ ಶಿವಕುಮಾರ್ ಆಟ ನಡೆಯುವುದಿಲ್ಲ. 25 ಸಾವಿರ ಮತಗಳ ಅಂತರದಿಂದ ನಾವು (ಬಿಜೆಪಿ) ಗೆಲ್ಲುತ್ತೇವೆ. ಡಿ.ಕೆ. ಶಿವಕುಮಾರ್‌ ಫಲಿತಾಂಶ ಬರುವ ಮೊದಲೇ ಶಸ್ತ್ರ ತ್ಯಾಗ ಮಾಡಿದ್ದಾರೆ’ ಎಂದರು.

‘ನಾನೇ ಇಲ್ಲಿ ಅಭ್ಯರ್ಥಿ ಎಂದು ಹೇಳಿಕೊಂಡು ಶಿವಕುಮಾರ್‌ ಕ್ಷೇತ್ರದಲ್ಲೆಲ್ಲಾ ಓಡಾಡಿದ್ದರು. ನಾನೂ‌ ಕೂಡ ನಾನೇ ಅಭ್ಯರ್ಥಿ ಎಂದು ಪ್ರಚಾರ ಮಾಡಿದ್ದೇನೆ. ಸಿದ್ದರಾಮಯ್ಯ ಕೂಡ ಈ ಕ್ಷೇತ್ರದಲ್ಲಿ ತಮ್ಮ ಪಕ್ಷದ ಸೋಲು ಒಪ್ಪಿಕೊಂಡಿದ್ದಾರೆ’ ಎಂದರು.

ಉಪ ಚುನಾವಣೆ ಫಲಿತಾಂಶದ ಬಳಿಕ ನಾಯಕತ್ವ ಬದಲಾವಣೆ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಫಲಿತಾಂಶದ ಬಳಿಕ ಯಾವುದೇ ಬದಲಾವಣೆ ಆಗುವುದಿಲ್ಲ. ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ. ಅವರು ಇನ್ನಷ್ಟು ಗಟ್ಟಿಯಾಗಲಿದ್ದಾರೆ’ ಎಂದರು.

‘ದೆಹಲಿ ಮೂಲಗಳಿಂದಲೇ ಹೇಳುತ್ತಿದ್ದೇನೆ ಯಡಿಯೂರಪ್ಪ ಬದಲಾವಣೆ ನಿಶ್ಚಿತ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅಶೋಕ, ‘ಸಿದ್ದರಾಮಯ್ಯ ಯಾವಾಗ ಜ್ಯೋತಿಷಿಯಾದರೊ ಗೊತ್ತಿಲ್ಲ. ಯಾವಾಗ ಜ್ಯೋತಿಷಿ ಶಾಲೆಯ ಮೊರೆ ಹೋದರೊ. ಅವರು ಇನ್ನೂ ಭ್ರಮೆಯಲ್ಲೇ ಇದ್ದಾರೆ. ಅಧಿಕಾರ ಕಳೆದುಕೊಂಡು ಹೀಗೆ ಆಗಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು