ಶುಕ್ರವಾರ, ಡಿಸೆಂಬರ್ 3, 2021
26 °C

ಬೆಂಗಳೂರು: ಒಂದೇ ಶಾಲೆಯ 33 ವಿದ್ಯಾರ್ಥಿಗಳಿಗೆ ಕೋವಿಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ದೊಮ್ಮಸಂದ್ರದಲ್ಲಿನ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ 33 ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯೊಬ್ಬರು ಕೋವಿಡ್ ಪೀಡಿತರಾಗಿದ್ದಾರೆ. 

‘ದಿ ಇಂಟರ್‌ನ್ಯಾಷನಲ್ ಸ್ಕೂಲ್ ಬೆಂಗಳೂರು’ ಶಿಕ್ಷಣ ಸಂಸ್ಥೆಯಲ್ಲಿ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಅಲ್ಲಿ ಈವರೆಗೆ ವಿದ್ಯಾರ್ಥಿಗಳು ಸೇರಿದಂತೆ 497 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. 8ನೇ ತರಗತಿಯ ಒಬ್ಬ ವಿದ್ಯಾರ್ಥಿ, 9ನೇ ತರಗತಿಯ 12 ವಿದ್ಯಾರ್ಥಿಗಳು, 10ನೇ ತರಗತಿಯ 8 ವಿದ್ಯಾರ್ಥಿಗಳು, 11ನೇ ತರಗತಿಯ 3 ವಿದ್ಯಾರ್ಥಿಗಳು ಹಾಗೂ 12 ತರಗತಿಯ 9 ವಿದ್ಯಾರ್ಥಿಗಳು ಕೋವಿಡ್ ಪೀಡಿತರಾಗಿದ್ದಾರೆ. 32 ವಿದ್ಯಾರ್ಥಿಗಳಿಗೆ ಸಂಸ್ಥೆಯ ವೈದ್ಯಕೀಯ ಕೇಂದ್ರದಲ್ಲಿಯೇ ಆರೈಕೆ ಮಾಡಲಾಗುತ್ತಿದೆ. 

ಮಹದೇವಪುರ ವಲಯದಲ್ಲಿ ವಾಸವಿದ್ದ ಇಬ್ಬರು ವಿದ್ಯಾರ್ಥಿಗಳಿಗೆ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡಿದ್ದವು. ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಯಿತು. ಕೋವಿಡ್ ಪೀಡಿತರಾಗಿರುವುದು ದೃಢಪಡುತ್ತಿದ್ದಂತೆ ಎಲ್ಲ ನೇರ ಹಾಗೂ ಪರೋಕ್ಷ ಸಂಪರ್ಕಿತರನ್ನು ಪರೀಕ್ಷೆ ಮಾಡಲಾಗಿದೆ. 

‘ಶಿಕ್ಷಣ ಸಂಸ್ಥೆಯ ಎಲ್ಲ ಸಿಬ್ಬಂದಿ ಕೋವಿಡ್ ಲಸಿಕೆ ಪಡೆದಿದ್ದಾರೆ. ಸೋಂಕಿತರು ಲಕ್ಷಣ ರಹಿತರಾಗಿದ್ದಾರೆ. ಹೀಗಾಗಿ, ಆಸ್ಪತ್ರೆಗೆ ದಾಖಲಿಸಲಿಲ್ಲ. ಸಂಪರ್ಕಿತರಿಗೆ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದ್ದು, ಶಿಕ್ಷಣ ಸಂಸ್ಥೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಸೋಂಕಿತ ವಿದ್ಯಾರ್ಥಿಗಳಿಗೆ ಆರೈಕೆ ಒದಗಿಸುತ್ತಿರುವ ಕೇಂದ್ರ ಹಾಗೂ ವಸತಿ ನಿಲಯವನ್ನು ಪ್ರತ್ಯೇಕಿಸಲಾಗಿದೆ’ ಎಂದು ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ. ಶ್ರೀನಿವಾಸ್ ತಿಳಿಸಿದರು. 

‘ಕೋವಿಡ್ ಮಾರ್ಗಸೂಚಿ ಅನುಸಾರ ಕೆಲ ಪಾಲಕರು ಸಂಸ್ಥೆಯಿಂದ ವಿದ್ಯಾರ್ಥಿಗಳನ್ನು ಮನೆಗೆ ಕರೆದೊಯ್ದಿದ್ದಾರೆ. ವೈದ್ಯಕೀಯ ತಂಡವು ಪರಿಶೀಲನೆ ನಡೆಸಿ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ’ ಎಂದು ವಿವರಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು