ಗುರುವಾರ , ಮಾರ್ಚ್ 23, 2023
25 °C

ಶೇ 40 ಕಮಿಷನ್ | ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ಮಾಡಿ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ’ಬಿಜೆಪಿಯವರು ಸತ್ಯ ಹರಿಶ್ಚಂದ್ರನ ಮಕ್ಕಳಾಗಿದ್ದರೆ ಗುತ್ತಿಗೆಗಳಲ್ಲಿ ಶೇ 40 ಕಮಿಷನ್‌ ಆರೋಪದ ಬಗ್ಗೆ ಈಗಲಾದರೂ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಕಾಂಗ್ರೆಸ್‌ ಅವಧಿಯ ಭ್ರಷ್ಟಾಚಾರ ಆರೋಪಗಳ ಬಗ್ಗೆಯೂ ತನಿಖೆ ನಡೆಸಲಿ’ ಎಂದು ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಎಸೆದರು. 

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ವಿಷಯದಲ್ಲಿ ದಮ್‌, ತಾಕತ್‌ ಪ್ರದರ್ಶಿಸಲಿ’ ಎಂದರು. ಕಾಂಗ್ರೆಸ್‌ ಪಕ್ಷಕ್ಕೆ ಕರ್ನಾಟಕ ಎಟಿಎಂ ಆಗಿದೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಕ್ಕೆ ತಿರುಗೇಟು ನೀಡಿದರು. 

‘ಕಳೆದ ಚುನಾವಣೆ ಸಂದರ್ಭದಲ್ಲಿ ನಮ್ಮ ಸರ್ಕಾರದ ವಿರುದ್ಧ ರಾಜಕೀಯ ಭಾಷಣಕ್ಕಾಗಿ ಶೇ 10 ಭ್ರಷ್ಟಾಚಾರದ ಆರೋಪ ಮಾಡಿದರು. ಯಾವುದೇ ದಾಖಲೆಗಳನ್ನು ನೀಡಲಿಲ್ಲ. ಆದರೆ, ಬಿಜೆಪಿ ಸರ್ಕಾರದ ಮೇಲೆ ಶೇ 40 ಕಮಿಷನ್ ಆರೋಪ ಇದೆ. ಗುತ್ತಿಗೆದಾರರ ಸಂಘದವರು ದಾಖಲೆ ಸಮೇತ ಪ್ರಧಾನಿಗೆ ದೂರು ನೀಡಿದ್ದಾರೆ. ಇಬ್ಬರು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೂ, ಬಿಜೆಪಿಯವರು ತನಿಖೆ ನಡೆಸುತ್ತಿಲ್ಲ’ ಎಂದರು.

‘ಹಿಂದೂತ್ವದ ರಾಜಕಾರಣ ಬಹಳ ಅಪಾಯಕಾರಿ. ಬಿಜೆಪಿಯವರು ಹಿಂದೂ ರಾಷ್ಟ್ರ ಮಾಡುತ್ತೇವೆ, ಹಿಂದುತ್ವದ ದೇಶ ಮಾಡುತ್ತೇವೆ ಎಂಬ ಹೇಳುತ್ತಾರೆ. ಇವೆಲ್ಲ ದೇಶಕ್ಕೆ ಅಪಾಯಕಾರಿ. ಇದರಿಂದಾಗಿ, ದೇಶದ ಜನರು, ಮುಸ್ಲಿಮರು ಆತಂಕದಲ್ಲಿದ್ದಾರೆ’ ಎಂದರು. 

ಸಿದ್ದರಾಮಯ್ಯ ಪುತ್ರ ಬಿಜೆಪಿಗೆ ಸೇರುತ್ತಾರೆ ಎಂಬ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಅವನೊಬ್ಬ ವಿದೂಷಕ. ಅವನಿಗೆ ರಾಜಕೀಯ ಜ್ಞಾನ ಇಲ್ಲ. ಅವನು ಏನೇನೋ ಮಾತನಾಡುತ್ತಾನೆ. ಅವನ ಹೇಳಿಕೆಗಳಿಗೆ ಪ್ರತಿಕ್ರಿಯಿಸಲ್ಲ’ ಎಂದರು. 

‘ಬಿಜೆಪಿಯವರು ರಥಯಾತ್ರೆ ಮಾಡಲಿ. ಚುನಾವಣೆಯಲ್ಲಿ ಯಾರನ್ನು ಗೆಲ್ಲಿಸಬೇಕು ಎಂದು ಜನರು ತೀರ್ಮಾನ ಮಾಡುತ್ತಾರೆ. ಬಿಜೆಪಿಯವರು ಈ ಚುನಾವಣೆಯಲ್ಲಿ 65ರಿಂದ 70 ಸ್ಥಾನಗಳನ್ನು ಗೆಲ್ಲುತ್ತಾರೆ ಅಷ್ಟೇ. ಕಾಂಗ್ರೆಸ್‌ 130 ಸ್ಥಾನಗಳನ್ನು ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯಲಿದೆ’ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು