ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

7.50 ಲಕ್ಷ ಪಿಂಚಣಿದಾರರ ಭೌತಿಕ ಪರಿಶೀಲನೆ: 4.19 ಲಕ್ಷ ಮಂದಿ ‘ಅನರ್ಹ’

ಪ್ರಜಾವಾಣಿ ವಿಶೇಷ ವರದಿ
Last Updated 16 ಸೆಪ್ಟೆಂಬರ್ 2021, 2:19 IST
ಅಕ್ಷರ ಗಾತ್ರ

ಬೆಂಗಳೂರು: ವೃದ್ಧಾಪ್ಯ, ಸಂಧ್ಯಾ ಸುರಕ್ಷಾ, ವಿಧವಾ, ಅಂಗವಿಕಲ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಲ್ಲಿನ ಪಿಂಚಣಿ ಫಲಾನುಭವಿಗಳ ಪೈಕಿ, 4.19 ಲಕ್ಷ ಮಂದಿಯನ್ನು ಅನರ್ಹರೆಂದು ಗುರುತಿಸಿ ರಾಜ್ಯ ಸರ್ಕಾರ ಪಿಂಚಣಿ ರದ್ದು ಮಾಡಿದೆ. ಆ ಮೂಲಕ, ವಾರ್ಷಿಕ ₹ 504 ಕೋಟಿ ಬೊಕ್ಕಸದಲ್ಲೆ ಉಳಿದಿದೆ.

ಪಿಂಚಣಿ ಫಲಾನುಭವಿಗಳನ್ನು ನಿಖರವಾಗಿ ಗುರುತಿಸಲು ಆಧಾರ್‌ ಕಡ್ಡಾಯಗೊಳಿಸಲಾಗಿದೆ. ಈವರೆಗೆ ಶೇ 95.58 ಫಲಾನುಭವಿಗಳ ಆಧಾರ್‌ ಹೊಂದಿಕೆ ಆಗಿದೆ. ಅಸಮರ್ಪಕ ವಿಳಾಸ, ಅಂಚೆ ಸಂಖ್ಯೆ, ಬ್ಯಾಂಕ್ ಖಾತೆ ಹೊಂದಿಲ್ಲದ ಒಟ್ಟು 7.50 ಲಕ್ಷ ಪ್ರಕರಣಗಳಲ್ಲಿ ಪಿಂಚಣಿದಾರರನ್ನು ಭೌತಿಕವಾಗಿ ಪರಿಶೀಲನೆಗೆ ಒಳಪಡಿಸಿ, ಅನರ್ಹರನ್ನು ಗುರುತಿಸಲಾಗಿದೆ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ.

‘ಪಿಂಚಣಿ ಅನರ್ಹರ ಪಾಲಾಗಬಾರದು. ಮೃತಪಟ್ಟವರನ್ನು ಯೋಜನೆಯಿಂದ ಹೊರಗಿಡಬೇಕು. ಆದರೆ, ಆಧಾರ್‌ ಜೋಡಣೆ ಗೊಂದಲ, ತಪ್ಪು ವಿಳಾಸ, ಬ್ಯಾಂಕ್‌ ಸಮಸ್ಯೆ–ಹೀಗೆ ನಾನಾ ಕಾರಣಗಳಿಗೆ ಪಿಂಚಣಿ ರದ್ದತಿ ಸರಿಯಾದ ಕ್ರಮವಲ್ಲ. ಉಳಿತಾಯದ ಹೆಸರಿನಲ್ಲಿ ಅರ್ಹರ ಹಕ್ಕಿಗೆ ಕತ್ತರಿ ಪ್ರಯೋಗ ಆಗಬಾರದು. ಗ್ರಾಮಗಳಲ್ಲಿ ಸಮೀಕ್ಷೆ ನಡೆಸುವ ನೆಪದಲ್ಲಿ ಅಧಿಕಾರಿಗಳು ಅರ್ಹರನ್ನೂ ಅನರ್ಹಗೊಳಿಸಿದ್ದಾರೆ. ಇಂಥ ಪ್ರಕರಣಗಳ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಶೀಲಿಸಬೇಕು’ ಎನ್ನುವುದು ಪಿಂಚಣಿದಾರರ ಮನವಿ.

‘ಅರ್ಹ ಪಿಂಚಣಿದಾರರನ್ನು ಸ್ಥಳೀಯವಾಗಿ ಪರಿಶೀಲಿಸುವಂತೆ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯದಿಂದ ಆಗಾಗ ಪಟ್ಟಿ ಬರುತ್ತದೆ. ಅನೇಕರು ಇನ್ನೂ ಆಧಾರ್‌ ನೀಡಿಲ್ಲ. ವಾಸ ಸ್ಥಳ, ಬ್ಯಾಂಕಿಗೆ ಆಧಾರ್‌ ಜೋಡಣೆ, ವಾರ್ಷಿಕ ಆದಾಯ ಮಿತಿ ಹೆಚ್ಚಳ ಪರಿಶೀಲಿಸುವಂತೆ ಕೇಂದ್ರ ಕಚೇರಿಯಿಂದ ಸೂಚಿಸಲಾಗುತ್ತದೆ. ವಾಸ ಬದಲಿಸಿದ ಅನೇಕರು ಆಧಾರ್‌ನಲ್ಲಿ ತಿದ್ದುಪಡಿ ಮಾಡಿರುವುದಿಲ್ಲ. 80–90 ವರ್ಷ ವಯೋಮಾನ ದಾಟಿದವರು ಆಧಾರ್‌ ತಿದ್ದುಪಡಿಗೆ ಮುಂದಾದರೂ, ಅವರ ಬಯೋಮೆಟ್ರಿಕ್‌ ತೆಗೆದುಕೊಳ್ಳುವುದೇ ಇಲ್ಲ. ಓಡಾಡಲು ಸಾಧ್ಯ ಇಲ್ಲದೇ ಇರುವುದರಿಂದ ಆಧಾರ್‌ ಮಾಡಿಸದ ಅಂಗವಿಕಲರೂ ಇದ್ದಾರೆ. ಹೀಗೆ ಅರ್ಹತೆ ಇದ್ದರೂ ಇಂಥ ಸಮಸ್ಯೆಗಳಿಂದ ಅನೇಕರು ಪಿಂಚಣಿ ವಂಚಿತರಾಗಿರುವ ನಿದರ್ಶನಗಳಿವೆ’ ಎಂದು ಉಪ ತಹಶೀಲ್ದಾರ್‌ರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.

‘ಬಿಪಿಎಲ್‌ ಪಡಿತರ ಚೀಟಿ ಪಡೆ ಯಲು ಆದಾಯ ಮಿತಿ ವಾರ್ಷಿಕ ₹ 1.20 ಲಕ್ಷ ಇದ್ದರೂ, ಪಿಂಚಣಿ ಪಡೆಯಲು ನಗರ ಪ್ರದೇಶಕ್ಕೆ ₹ 17 ಸಾವಿರ, ಗ್ರಾಮೀಣ ಪ್ರದೇಶಕ್ಕೆ ₹ 12 ಸಾವಿರ ಆದಾಯ ಮಿತಿ ಇತ್ತು. ಅದನ್ನು ಇತ್ತೀಚೆಗೆ ಎಲ್ಲರಿಗೂ ₹ 32 ಸಾವಿರವಾಗಿ ಪರಿಷ್ಕರಿಸಲಾಗಿದೆ. ಪಿಂಚಣಿ ಪಡೆಯಲು ಆದಾಯ ಮಿತಿ ಕಡಿಮೆ ನಮೂದಿಸಿ, ಒಂದೇ ಮನೆಯಲ್ಲಿ ಎರಡು ಪಡಿತರ ಚೀಟಿ ಮಾಡಿಸಿಕೊಂಡ ಕುಟುಂಬಗಳಿವೆ. ಆಧಾರ್‌ ಜೋಡಣೆ ಆಗದಿರುವುದು, ಆದಾಯ ಮಿತಿ ಹೆಚ್ಚಳ, ವಾಸಸ್ಥಳ ಬದಲು, ವಲಸೆ ಕಾರಣಕ್ಕೆ ಪಿಂಚಣಿ ರದ್ದು ಮಾಡಲಾಗಿದೆ. ಆಧಾರ್‌ ಜೋಡಣೆಯಾದ ತಕ್ಷಣ ಎರಡು ಯೋಜನೆಗಳಲ್ಲಿ (ಡಿ– ಡುಪ್ಲಿಕೇಷನ್‌) ಪಿಂಚಣಿ ಪಡೆಯುತ್ತಿರುವ ಪ್ರಕರಣಗಳೂ ಪತ್ತೆ ಆಗಿವೆ. ಹೆಸರುಗಳ ವ್ಯತ್ಯಾಸದಿಂದ ಬ್ಯಾಂಕ್‌ ಖಾತೆಗಳಿಗೆ ಆಧಾರ್‌ ಜೋಡಣೆಯಾಗದೆ ಪಿಂಚಣಿ ತಡೆಹಿಡಿದ ಪ್ರಕರಣಗಳೂ ಇವೆ’ ಎಂದೂ ಅವರು ತಿಳಿಸಿದರು.

ಸ್ವಯಂಚಾಲಿತ ವ್ಯವಸ್ಥೆ ಅಗತ್ಯ

‘65 ವರ್ಷ ದಾಟಿದವರಿಗೆ ಸಂಧ್ಯಾ ಸುರಕ್ಷಾ ಯೋಜನೆಯಡಿ ₹ 1,200 ಪಿಂಚಣಿ ನೀಡಲಾಗುತ್ತಿದೆ. ಈಗಾಗಲೇ ವಿಧವಾ, ಅಂಗವಿಕಲ, ಮನಸ್ವಿನಿ ಪಿಂಚಣಿ ಪಡೆಯುತ್ತಿರುವವರು ಸದ್ಯ ಸಿಗುವ ಮೊತ್ತ ಕಡಿಮೆ ಎಂಬ ಕಾರಣಕ್ಕೆ 65 ವರ್ಷ ದಾಟುತ್ತಿದ್ದಂತೆ ಸಂಧ್ಯಾ ಸುರಕ್ಷಾ ಯೋಜನೆಗೆ ಪರಿವರ್ತಿಸಿಕೊಳ್ಳಲು ಅವಕಾಶವಿದೆ. ಈ ಅವಧಿ ಯಲ್ಲಿ ಪಿಂಚಣಿ ಯೋಜನೆಯಿಂದ ಹೊರಗುಳಿಯಬೇಕಾಗುತ್ತದೆ. ಇದನ್ನು ತಪ್ಪಿಸಲು ತಂತ್ರಾಂಶ ಆಧಾರಿತ ಸ್ವಯಂ ಚಾಲಿತ ವ್ಯವಸ್ಥೆಯನ್ನು ಸರ್ಕಾರ ರೂಪಿಸ ಬೇಕು’ ಎಂದೂ ಹೇಳಿದರು.

7.50 ಲಕ್ಷ ಪಿಂಚಣಿದಾರರ ಭೌತಿಕ ಪರಿಶೀಲನೆ: 4.19 ಲಕ್ಷ ಮಂದಿ ‘ಅನರ್ಹ’

ಸಿಬ್ಬಂದಿ ಕೊರತೆ

‘ಗ್ರಾಮೀಣ ಭಾಗದಲ್ಲಿ ಅಟಲ್‌ ಜನಸ್ನೇಹಿ ಕೇಂದ್ರಗಳಲ್ಲಿ ಹೊರ ಗುತ್ತಿಗೆ ಸಿಬ್ಬಂದಿಯನ್ನು ಮರು ನೇಮಕ ಮಾಡಿಕೊಳ್ಳದೇ ಇರುವುದರಿಂದ, ಸಿಬ್ಬಂದಿ ಇಲ್ಲ ಎಂಬ ಕಾರಣಕ್ಕೆ ಆಧಾರ್ ತಿದ್ದುಪಡಿ ಬಹುತೇಕ ಸ್ಥಗತಗೊಂಡಿದೆ. ಮಲೆನಾಡಿನ ಬಹುತೇಕ ಕಡೆ ಈ ಸಮಸ್ಯೆ ಇದೆ. ಪ್ರತಿ ನಾಡಕಚೇರಿಯಲ್ಲಿ ಆಧಾರ್‌ ತಿದ್ದುಪಡಿ ಕಲ್ಪಿಸಿ, ಪ್ರತ್ಯೇಕ ಸಿಬ್ಬಂದಿ ಯನ್ನು ನಿಯೋಜಿಸಬೇಕು’ ಎಂದು
ಪಿಂಚಣಿದಾರರೊಬ್ಬರು ಹೇಳಿದರು.

‘ತಹಶೀಲ್ದಾರ್ ಕಚೇರಿಗಳಲ್ಲಿ ಕಚೇರಿ ಸಿಬ್ಬಂದಿಗಿಂತ ಮಧ್ಯವರ್ತಿಗಳೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಪಿಂಚಣಿಗಾಗಿ, ಪಡಿತರ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ವಾಸಸ್ಥಳ ಪ್ರಮಾಣಪತ್ರ ಪಡೆಯುವುದೇ ಸಾಹಸದ ಕೆಲಸ. ಪಿಂಚಣಿ ಪಡೆಯಲು ಅರ್ಹತೆ ಇದ್ದರೂ ಅಧಿಕಾರಿಗಳ ವಿಳಂಬ ನೀತಿ, ಬೇಜವಾ ಬ್ದಾರಿಯಿಂದ ನಿತ್ಯ ಕಚೇರಿಯಿಂದ ಕಚೇ ರಿಗೆ ಅಲೆಯುವಂತಾಗಿದೆ’ ಎಂದೂ ಅಳಲು ತೋಡಿಕೊಂಡರು.

ಅನರ್ಹರ ಪತ್ತೆ ಹೇಗೆ?

‘ಪಿಂಚಣಿದಾರರ ವಾರ್ಷಿಕ ಭೌತಿಕ ಪರಿಶೀಲನೆ ನಡೆಸಲಾಗುತ್ತಿದೆ. ವಿವಿಧ ಇಲಾಖೆಗಳ ದತ್ತಾಂಶಗಳಲ್ಲಿನ ಮಾಹಿತಿ ಆಧರಿಸಿ (ಇ–ಜನ್ಮ, ಪಡಿತರಚೀಟಿ) ಮೃತ, ವಲಸೆ, ಅನರ್ಹರನ್ನು ಗುರುತಿಸಲಾಗುತ್ತದೆ. ವಿವಿಧ ಯೋಜನೆಗಳಲ್ಲಿ ನಕಲು ಪತ್ತೆ ಹಚ್ಚಲು ಎಲ್ಲ ಹಂತಗಳಲ್ಲೂ ಆಧಾರ್‌ ಹಾಗೂ ಬ್ಯಾಂಕ್‌ ಖಾತೆ ಮತ್ತು ಇತರ ಕಾರ್ಯವಿಧಾನದ ಮೂಲಕ ‘ಡಿ–ಡುಪ್ಲಿಕೇಷನ್‌’ ವ್ಯವಸ್ಥೆ ಮಾಡಲಾಗುತ್ತದೆ. ಇ–ಆಡಳಿತ ಇಲಾಖೆಯ ಕುಟುಂಬ ದತ್ತಾಂಶದೊಂದಿಗೆ ಪಿಂಚಣಿ ದತ್ತಾಂಶವನ್ನು ಸಂಪರ್ಕಿಸಿ, ವಯಸ್ಸು, ಕೃಷಿ ಭೂಮಿ, ಮಾಲೀಕತ್ವ, ಆದಾಯ ಸೇರಿದಂತೆ ಲಭ್ಯ ಮಾನದಂಡಗಳ ಆಧಾರದಲ್ಲಿ ಸ್ವಯಂ ಪ್ರೇರಿತವಾಗಿ ಪಿಂಚಣಿ ಸೌಲಭ್ಯ ಒದಗಿಸಲಾಗುತ್ತದೆ’ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ.

ಪಿಂಚಣಿದಾರರ ಭೌತಿಕ ಪರಿಶೀಲನೆ ಸಂದರ್ಭದಲ್ಲಿ ಕುಟುಂಬ ದತ್ತಾಂಶ ಆಧರಿಸಿ, ಮೃತ, ವಲಸೆ, ಅನರ್ಹ ಫಲಾನುಭವಿಗಳನ್ನು ಗುರುತಿಸಿ ಪಿಂಚಣಿ ರದ್ದುಪಡಿಸಲಾಗುತ್ತದೆ.

- ಆರ್‌. ಅಶೋಕ, ಕಂದಾಯ ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT