ಶನಿವಾರ, ಸೆಪ್ಟೆಂಬರ್ 25, 2021
22 °C
ಸದ್ಯವೇ ಮಸೂದೆ ಮಂಡನೆ

ಅಪಘಾತದಲ್ಲಿ ಕಾರ್ಮಿಕ ಮೃತಪಟ್ಟರೆ ₹5 ಲಕ್ಷ ಪರಿಹಾರ: ಶಿವರಾಂ ಹೆಬ್ಬಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕಾರ್ಮಿಕರು, ಆಟೊ, ಟ್ಯಾಕ್ಸಿ, ಟ್ರಕ್‌, ಬಸ್‌ ಚಾಲಕರೂ ಸೇರಿದಂತೆ ಮೆಕ್ಯಾನಿಕ್‌, ಕ್ಲೀನರ್‌ಗಳು ಅಪಘಾತದಲ್ಲಿ ಮೃತಪಟ್ಟರೆ ಅವರ ಕುಟುಂಬದವರಿಗೆ ₹ 5 ಲಕ್ಷದವರೆಗೆ ಪರಿಹಾರ ನೀಡಲು ಕಾಯ್ದೆ ರೂಪಿಸಲಾಗುವುದು ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್‌ ತಿಳಿಸಿದರು.

ಕಾರ್ಮಿಕರ ಬದುಕು ಹಸನಾಗಿಸಲು ಹಲವು ಕಲ್ಯಾಣ ಯೋಜನೆಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು. ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಕಾರ್ಮಿಕ ಅದಾಲತ್‌ ನಡೆಸಲು ಉದ್ದೇಶಿಸಲಾಗಿದೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಮಿಕರಿಗೆ ಸಹಾಯಧನ, ಮಕ್ಕಳ ವಿದ್ಯಾಭ್ಯಾಸ, ಮದುವೆ– ಮುಂಜಿಯಂತಹ ಸಂದರ್ಭದಲ್ಲಿ ಧನ ಸಹಾಯ ನೀಡಲು ವಿಶೇಷ ಕಾರ್ಯಕ್ರಮ ರೂಪಿಸ ಲಾಗುವುದು ಎಂದು ಹೇಳಿದರು.

ಆಟೊ, ಟ್ಯಾಕ್ಸಿ, ಟ್ರಕ್‌, ಬಸ್‌ ಚಾಲಕರೂ ಸೇರಿ ಮೆಕ್ಯಾನಿಕ್‌, ಕ್ಲೀನರ್‌ಗಳಿಗೂ ನೆರವಾಗುವುದು ಉದ್ದೇಶಿತ ಕಾಯ್ದೆಯ ಗುರಿ. ಇದಕ್ಕೆ ಸಂಪನ್ಮೂಲ ಸಂಗ್ರಹಿಸಲು ವಾಹನಗಳ ಮೇಲೆ 0.5 ವಿಶೇಷ ಸೆಸ್‌ ವಿಧಿಸಲು ಚಿಂತನೆ ನಡೆಸಲಾಗಿದೆ ಎಂದರು.

‘ಕಳೆದ ಒಂದು ವರ್ಷದಿಂದ ಕಾರ್ಮಿಕ ಸಚಿವನಾಗಿದ್ದು, ಕಾರ್ಮಿಕರ ಸಮಸ್ಯೆಗಳನ್ನು ಅರಿಯುವಲ್ಲಿ ಸಹಕಾರಿಯಾಗಿದೆ. ಸಂಘಟಿತ, ಅಸಂಘಟಿತ, ವಲಸೆ ಕಾರ್ಮಿಕರಿಗೆ ಪ್ರತ್ಯೇಕ ಕಾಯ್ದೆಗಳಿವೆ. ಎಲ್ಲ ಕಾರ್ಮಿಕರಿಗೂ ಅನುಕೂಲ ಆಗಲು ಹೊಸ ಕಾನೂನು ಜಾರಿ ಮಾಡಲಾಗುವುದು. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದು’ ಎಂದು ಹೇಳಿದರು.

ರಾಜ್ಯದ ಕಾರ್ಮಿಕರಿಗೆ ಸಂಬಂಧಿಸಿ ದಂತೆ ಹಲವಾರು ಸಮಸ್ಯೆಗಳು ಇಲಾಖೆಯ ವಿವಿಧ ಹಂತಗಳಲ್ಲಿ ಬಾಕಿ ಉಳಿದಿದ್ದು, ಈ ಎಲ್ಲ ಸಮಸ್ಯೆಗಳನ್ನು ಒಂದೇ ಬಾರಿಗೆ ಪರಿಹರಿಸಲು ಕಾರ್ಮಿಕ ಅದಾಲತ್‌ಗಳನ್ನು ನಡೆಸಲಾಗುವುದು ಎಂದು ಅವರು ಹೇಳಿದರು.

‘ರಾಜ್ಯದಲ್ಲಿ ವಲಸೆ ಕಾರ್ಮಿಕರಿಗೆ ವಸತಿ ಯೋಜನೆ ರೂಪಿಸಿದ್ದು, ಬೆಂಗಳೂರು, ಬೆಳಗಾವಿ, ಹಾಸನ, ಶಿವಮೊಗ್ಗ, ಮೈಸೂರು ಸೇರಿ ಹಲವೆಡೆ ವಸತಿ ಸಮುಚ್ಛಯ ನಿರ್ಮಿಸಲು ಚಿಂತನೆ ನಡೆಸಲಾಗಿದೆ’ ಎಂದು ಹೆಬ್ಬಾರ್‌ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು