ಶನಿವಾರ, ಮೇ 15, 2021
24 °C

6- 9ನೇ ತರಗತಿವರೆಗೆ ಬೇಗ ಪರೀಕ್ಷೆ: ‘ಕ್ಯಾಮ್ಸ್’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೋವಿಡ್ ಕಾರಣಕ್ಕೆ ಶಾಲೆಗಳು ಮುಚ್ಚುವಂಥ ಪರಿಸ್ಥಿತಿ ಉದ್ಭವಿಸುವ ಮೊದಲೇ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ 6ರಿಂದ 9ನೇ ತರಗತಿವರೆಗೆ ಬೇಗ ಪರೀಕ್ಷೆ ಮುಗಿಸಲು ಕಾಲಾವಕಾಶ ಕಲ್ಪಿಸಬೇಕು’ ಎಂದು ರಾಜ್ಯ ಸರ್ಕಾರವನ್ನು ಕರ್ನಾಟಕ ಖಾಸಗಿ ಪ್ರಾಥಮಿಕ, ಪ್ರೌಢ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್‌) ಒತ್ತಾಯಿಸಿದೆ.

ಈ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ಅವರಿಗೆ ಪತ್ರ ಬರೆದಿರುವ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್, ‘ಪರೀಕ್ಷೆಗೆ ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದ ಸಿದ್ಧತೆಗೂ ಸೂಕ್ತ ಸಮಯಾವಕಾಶ ಬೇಕಾಗುತ್ತದೆ. ಆದ್ದರಿಂದ, ಪರೀಕ್ಷೆ ನಡೆಸಲು ಕ್ಯಾಮ್ಸ್ ನಿರ್ಧರಿಸಿದ್ದು, ಅಭಿಪ್ರಾಯಕ್ಕಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ’ ಎಂದು ತಿಳಿಸಿದ್ದಾರೆ.

‘ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಜೂನ್‌ನಿಂದಲೇ ಆನ್‌ಲೈನ್ ಪಾಠ‌ ಆರಂಭವಾಗಿದೆ. ಪಠ್ಯ ಪುನರಾವರ್ತನೆಯೂ ಮುಗಿದಿದೆ. ವರ್ಷವಿಡೀ ಕಲಿತಿದ್ದು ವ್ಯರ್ಥವಾಗದ ರೀತಿಯಲ್ಲಿ 6ರಿಂದ 9ನೇ ತರಗತಿ ಪರೀಕ್ಷೆ ನಡೆಬೇಕಾಗಿದೆ. ಅಲ್ಲದೆ, ಕೋವಿಡ್‌ನಿಂದಾಗಿ ಮುಂದಿನ ದಿನಗಳಲ್ಲಿ ಶಾಲೆಗೆ ರಜಾ ಕೊಟ್ಟು ಮಕ್ಕಳಿಗೆ ಈ ವರ್ಷ ಕೂಡಾ ಪರೀಕ್ಷೆ ಇಲ್ಲದಾಗುವ ಭೀತಿ ಎದುರಾಗಿದೆ’ ಎಂದಿದ್ದಾರೆ.

‘ಆಯಾ ಶಾಲೆಗಳ ಅನುಕೂಲಕ್ಕೆ ಪೂರಕವಾಗಿ ಮತ್ತು ಪೋಷಕರ ಅಭಿಪ್ರಾಯದಂತೆ ತಕ್ಷಣ ಪರೀಕ್ಷೆ ಪ್ರಕ್ರಿಯೆ ಮಾಡಲು ಕ್ಯಾಮ್ಸ್ ಮುಂದಾಗಿದೆ. ಈ ಅಂಶವನ್ನು ಶಿಕ್ಷಣ ಇಲಾಖೆಯ ಗಮನಕ್ಕೂ ತರಲಾಗಿದೆ.‌ ಇಲಾಖೆಯ ನಿಯಾಮಾನುಸಾರ 10 ಮತ್ತು 12ನೇ ತರಗತಿಯ ಪರೀಕ್ಷೆಯನ್ನು ನಿಗದಿಯಂತೆ ನಡೆಸಲಾಗುವುದು. ವರ್ಷವಿಡೀ ಆನ್‌ಲೈನ್‌ ಮತ್ತು ಆಫ್‌ಲೈನ್ ತರಗತಿ ನಡೆಸಿ ಶಿಕ್ಷಕ ವರ್ಗ ಶ್ರಮಿಸಿದ್ದು, ಅವರಿಗೆ ಬೇಸಿಗೆ ರಜಾ ಅನಿವಾರ್ಯವಾಗಿದೆ’ ಎಂದೂ ಮನವಿ‌ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು