ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ | ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 2 ವಾರ ಬಾಕಿ: ಬಿಡುಗಡೆ ಆಗದ ‘ಆಮಂತ್ರಣ’!

Last Updated 22 ಡಿಸೆಂಬರ್ 2022, 22:15 IST
ಅಕ್ಷರ ಗಾತ್ರ

ಹಾವೇರಿ: ಏಲಕ್ಕಿ ಕಂಪಿನ ನಾಡಿನಲ್ಲಿ ಜನವರಿ 6ರಂದು ಆರಂಭಗೊಳ್ಳಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಎರಡೇ ವಾರ ಉಳಿದಿದೆ, ಸಮ್ಮೇಳನದ ಆಮಂತ್ರಣ ಪತ್ರಿಕೆಯೇ ಬಿಡುಗಡೆಯಾಗದಿರುವುದು ಚರ್ಚೆಗೆ ಗ್ರಾಸವಾಗಿದೆ ಹಾಗೂ ಪ್ರಚಾರ ಕಾರ್ಯಕ್ಕೆ ಹಿನ್ನಡೆಯಾಗಿದೆ.

ಸಾಹಿತ್ಯ ಪರಿಷತ್ತು ಒಂದು ತಿಂಗಳು ಮುಂಚಿತವಾಗಿ ಆಮಂತ್ರಣ ಪತ್ರಿಕೆಯನ್ನು ಸಿದ್ಧಪಡಿಸುತ್ತದೆ. ಆಮಂತ್ರಿತರು, ಸಾಹಿತಿಗಳು, ಗಣ್ಯರು ಹಾಗೂ ಜನಪ್ರತಿನಿಧಿಗಳಿಗೆ ತಲುಪಿಸುವ ಕಾರ್ಯ ಮಾಡುತ್ತದೆ.

ಹಾವೇರಿಯಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಕ್ಕೆ ಕೇವಲ 14 ದಿನಗಳು ಉಳಿದಿದ್ದರೂ, ಆಮಂತ್ರಣ ಪತ್ರಿಕೆ ಸಿದ್ಧಪಡಿಸಿ, ಮುದ್ರಿಸುವ ಕಾರ್ಯ ಶುರುವಾಗಿಲ್ಲ. 3 ದಿನ ನಡೆಯುವಸಮ್ಮೇಳನದ ಕಾರ್ಯಕ್ರಮಗಳ ಬಗ್ಗೆ ಯಾರೊಬ್ಬರಿಗೂ ಸ್ಪಷ್ಟ ಚಿತ್ರಣ ಸಿಗುತ್ತಿಲ್ಲ ಎಂಬ ಟೀಕೆಗಳುವ್ಯಕ್ತವಾಗಿವೆ.

ಪ್ರಶ್ನೆಗಳಿಗೆ ಸಿಗದ ಉತ್ತರ: ಆಮಂತ್ರಣ ಪತ್ರಿಕೆಯನ್ನು ಮುದ್ರಿಸುವುದು, ಬಿಡುಗಡೆ ಯಾವಾಗ? ಅಂಚೆ ಮೂಲಕ ತಲುಪಿಸಲು ತಡವಾಗದೆ? ಕಾರ್ಯಕ್ರಮದಲ್ಲಿ ಯಾರ್‍ಯಾರಿಗೆ ಅವಕಾಶ ಸಿಕ್ಕಿವೆ...? ಹೀಗೆ ಸಾಲು ಸಾಲು ಪ್ರಶ್ನೆಗಳನ್ನು ಸಾಹಿತ್ಯಾಸಕ್ತರು ಕೇಳುತ್ತಿದ್ದಾರೆ. ಇದಕ್ಕೆ ಜಿಲ್ಲಾ ಮಟ್ಟದ ಕಸಾಪ ಪದಾಧಿಕಾರಿಗಳ ಬಳಿ ಉತ್ತರವೇ ಇಲ್ಲ.

ಆಹ್ವಾನ ಪತ್ರಿಕೆಯೇ ಸಿಕ್ಕಿಲ್ಲ: ‘20 ದಿನ ಮುಂಚಿತವಾಗಿಯೇ ಕೇಂದ್ರ ಕಸಾಪ ಕಚೇರಿಯಿಂದ ಎಲ್ಲ ಜಿಲ್ಲೆಗಳ ಘಟಕಗಳಿಗೆ ಪತ್ರಿಕೆ ತಲುಪಿದ್ದರೆ ಸ್ಥಳೀಯ ಗಣ್ಯರಿಗೆ, ಸಾಹಿತಿಗಳಿಗೆ ಆಹ್ವಾನಿಸಲು ಸಾಧ್ಯವಾಗುತ್ತಿತ್ತು.’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕಲಬುರಗಿ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ವೀರಭದ್ರ ಸಿಂಪಿ ಬೇಸರ ವ್ಯಕ್ತಪಡಿಸಿದರು.

ಸೋರಿಕೆ: ಡಿಸೆಂಬರ್‌ 8ರಂದು ಸಾಮಾಜಿಕ ಜಾಲತಾಣದಲ್ಲಿ, ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಹರಿದಾಡಿ ಗೊಂದಲ ಉಂಟಾಗಿತ್ತು. ಆಗ ಕಸಾಪ ಅಧ್ಯಕ್ಷ ಮಹೇಶ ಜೋಶಿಯವರು ‘ಇದು ಅಧಿಕೃತ ಆಮಂತ್ರಣ ಪತ್ರಿಕೆಯಲ್ಲ. ಡಿಟಿಪಿ ಹಂತದಲ್ಲಿದ್ದ ಪ್ರತಿಯನ್ನು ಯಾರೋ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ’ ಎಂದು ಸ್ಪಷ್ಟನೆ ನೀಡಿದ್ದರು.

ಹೆಸರಿಗಾಗಿ ಒತ್ತಡ?

ಸಮ್ಮೇಳನದಲ್ಲಿ ಪ್ರದರ್ಶನ ನೀಡಲು ಕಲಾತಂಡಗಳಿಂದ ಹಾಗೂ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಹಾಕಿಸಿಕೊಳ್ಳಲು ಕೆಲವು ಕನ್ನಡಪರ ಸಂಘಟನೆಗಳಿಂದಭಾರಿ ಒತ್ತಡ ಬರುತ್ತಿರುವ ಕಾರಣ, ಕೇಂದ್ರ ಕಸಾಪ ಪದಾಧಿಕಾರಿಗಳು ಹೆಸರನ್ನು ಸೇರಿಸುವ ಮತ್ತು ಕೈಬಿಡುವ ಕಸರತ್ತಿನಲ್ಲಿ ತೊಡಗಿರುವುದರಿಂದ ಆಮಂತ್ರಣ ಪತ್ರಿಕೆ ಬಿಡುಗಡೆ ವಿಳಂಬವಾಗಿದೆ ಎಂದು ಕಸಾಪ ಪದಾಧಿಕಾರಿಯೊಬ್ಬರು ತಿಳಿಸಿದರು.

***

25 ಸಾವಿರ ಆಮಂತ್ರಣ ಪತ್ರಿಕೆಗಳನ್ನು ಸಿದ್ಧಪಡಿಸಿದ್ದೇವೆ. ಬಿಡುಗಡೆಗೆ ಸಿಎಂ ಅವರ ದಿನಾಂಕ ಕೇಳಿದ್ದೇವೆ. ಶೀಘ್ರವೇ ದಿನಾಂಕ ಸಿಗುವ ನಿರೀಕ್ಷೆಯಿದೆ

ಮಹೇಶ ಜೋಶಿ, ಕಸಾಪ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT