ಸೋಮವಾರ, ಅಕ್ಟೋಬರ್ 18, 2021
26 °C
ಅಧಿಕಾರಿಗಳು ಸೋದರತ್ತೆಯ ಮಕ್ಕಳಾ: ರಮೇಶ್‌ ಕುಮಾರ್ ಕಿಡಿ

ಶೇ 99ರಷ್ಟು ರಸ್ತೆ ಉಬ್ಬುಗಳು ಅವೈಜ್ಞಾನಿಕ: ಸಿ.ಸಿ.‍ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದ ಹೆದ್ದಾರಿಗಳಲ್ಲಿರುವ ಶೇ 99ರಷ್ಟು ರಸ್ತೆ ಉಬ್ಬುಗಳು ಹಾಗೂ ವೇಗ ನಿಯಂತ್ರಕಗಳು ಅವೈಜ್ಞಾನಿಕ ಎಂದು ಲೋಕೋಪಯೋಗಿ ಸಚಿವ ಸಿ.ಸಿ.‍ಪಾಟೀಲ ಹೇಳಿದರು. 

ವಿಧಾನಸಭೆಯಲ್ಲಿ ಸೋಮವಾರ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಕೆ.ಆರ್.ರಮೇಶ್‌ ಕುಮಾರ್, ‘ಹೊಸಕೋಟೆ ಮಾಡಿಕೆರೆ ಕ್ರಾಸ್‌ ಮಧ್ಯೆ ಕೆಶಿಪ್ ನಿರ್ಮಿಸಿರುವ ರಸ್ತೆ ಉದ್ದ ಎಷ್ಟು ಹಾಗೂ ಎಷ್ಟು ರಸ್ತೆ ಉಬ್ಬುಗಳನ್ನು ಹಾಕಿದ್ದಾರೆ. ರಾಷ್ಟ್ರೀಯ ಹೆದ್ದಾರಿ 234ರ ಮುಳಬಾಗಿಲಿನಿಂದ ಚಿಕ್ಕಬಳ್ಳಾಪುರದ ವರೆಗೆ ಎಷ್ಟು ಅಧಿಕೃತ ಹಂಪ್‌ಗಳಿವೆ’ ಎಂದು ‍ಪ್ರಶ್ನೆ ಕೇಳಿದರು. ಅದಕ್ಕೆ ಸಚಿವರು, ‘ಹೊಸಕೋಟೆ– ಮಾಡಿಕೆರೆ ಕ್ರಾಸ್‌ನಲ್ಲಿ 33 ಅಧಿಕೃತ ಹಂ‍ಪ್‌ಗಳಿವೆ’ ಎಂದು ಉತ್ತರಿಸಿದರು.

ಈ ಮಾತಿನಿಂದ ಕೆರಳಿದ ರಮೇಶ್‌ ಕುಮಾರ್‌, ‘ಸಚಿವರಿಗೆ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆ. 47 ಹಂಪ್‌ಗಳಿವೆ. ಈ ಹಂಪ್‌ಗಳನ್ನು ಹಾಕಿದ್ದು ಯಾರು. ನಿಮ್ಮ ಅಧಿಕಾರಿಗಳು ಪರಿಶೀಲನೆ ಮಾಡುವುದಿಲ್ಲವೇ. ಇದಕ್ಕೆ ಕಾರಣರಾದ ಎಂಜಿನಿಯರ್‌ಗಳನ್ನು ಅಮಾನತು ಮಾಡಿ. ನಿಮ್ಮ ಅಧಿಕಾರಿಗಳು ನಮ್ಮನ್ನು ಬಫೂನ್‌ಗಳು ಎಂದು ಭಾವಿಸಿದ್ದಾರಾ’ ಎಂದೂ ಆಕ್ರೋಶದಿಂದ ಪ್ರಶ್ನಿಸಿದರು. ‘ಅಧಿಕಾರಿಗಳು ಸಂಜೆ ಡಾಬಾದಲ್ಲಿ ಕುಳಿತು ರಮೇಶ್‌ ಕುಮಾರ್ ಅವರಿಂದ ಏನೂ ಮಾಡಲೂ ಸಾಧ್ಯವಾಗಲಿಲ್ಲ ಎಂದೂ ನಗಾಡುತ್ತಾರೆ’ ಎಂದರು.

ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ನನ್ನ ಕ್ಷೇತ್ರದಲ್ಲೂ ರಸ್ತೆ ಉಬ್ಬುಗಳಿಂದ ಸಮಸ್ಯೆ ಎದುರಿಸಿದ್ದೇನೆ. ಅಧಿಕಾರಿಗಳ ಅಮಾನತು ಮಾಡಿದರೆ ರಸ್ತೆ ಉಬ್ಬು ಸಮಸ್ಯೆ ಪರಿಹಾರ ಆಗುವುದಿಲ್ಲ. ಜಿಲ್ಲಾಧಿಕಾರಿಗಳು ಹಾಗೂ ಪಾಲಿಕೆಗಳ ಸಹಕಾರ ಪಡೆದು ಹಂತ ಹಂತವಾಗಿ ರಸ್ತೆಗಳ ಉಬ್ಬುಗಳನ್ನು ತೆಗೆಸಲಾಗುವುದು’ ಎಂದು ಭರವಸೆ ನೀಡಿದರು.  ಕೆ.ಆರ್.ರಮೇಶ್‌ ಕುಮಾರ್, ‘ನಿಯಮದ ಪ್ರಕಾರ ಹೆದ್ದಾರಿಗಳಲ್ಲಿ ರಸ್ತೆ ಉಬ್ಬುಗಳು ಇರುವಂತಿಲ್ಲ. ಇದಕ್ಕೆ ಅವಕಾಶ ನೀಡಿದ ಅಧಿಕಾರಿಗಳನ್ನು ಅಮಾನತು ಮಾಡಿ. ನಾನು ನಿಮ್ಮ ₹10 ಕೋಟಿ ಅನುದಾನ ಕೇಳಿದೆನಾ. ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದಷ್ಟೇ ಕೇಳಿದ್ದೇನೆ. ಅವರೇನೂ ನಿಮ್ಮ ಸೋದರತ್ತೆ ಮಕ್ಕಳಾ. ಅವರು ಭೂಲೋಕಕ್ಕೆ ಇಳಿದು ಬಂದವರಾ’ ಎಂದು ಕಟುವಾಗಿ ಪ್ರಶ್ನಿಸಿದರು. ‘ಅವೈಜ್ಞಾನಿಕ ರಸ್ತೆ ಉಬ್ಬು ನಿರ್ಮಾಣಕ್ಕೆ ಅವಕಾಶ ನೀಡಿದ ಅಧಿಕಾರಿಗಳಿಗೆ ಈ ವರ್ಷ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿ’ ಎಂದೂ ವ್ಯಂಗ್ಯವಾಗಿ ಹೇಳಿದರು.

ಈ ಸಮಸ್ಯೆಯನ್ನು ಒಂದೇ ದಿನದಲ್ಲಿ ಪರಿಹಾರ ಮಾಡಲು ಸಾಧ್ಯವಿಲ್ಲ ಎಂದು ಸಚಿವರು ಉತ್ತರಿಸಿದರು. ಈ ಉತ್ತರದಿಂದ ಸಮಾಧಾನಗೊಳ್ಳದ ರಮೇಶ್‌ ಕುಮಾರ್‌, ‘ನನ್ನ ಪ್ರಶ್ನೆಯನ್ನು ವಾಪಸ್‌ ಪಡೆಯುತ್ತೇನೆ. ಇಂತಹ ಅವಮಾನವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ’ ಎಂದರು.

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಉದಾಹರಣೆ ನೀಡಿದ ರಮೇಶ್‌ ಕುಮಾರ್‌, ‘ವಿಮಾನ ನಿಲ್ದಾಣಕ್ಕೆ ಹೋಗುವವರನ್ನು ಈ ರಸ್ತೆಯಲ್ಲಿ ಪೊಲೀಸರು ಪರಿಶೀಲನೆ ಮಾಡುತ್ತಾರೆ. ಜತೆಗೆ, ಈ ರಸ್ತೆಯಲ್ಲಿ ಟೆಂಪೊಗಳು, ರಿಕ್ಷಾಗಳು, ಸ್ಕೂಟರ್‌ಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಒಂದು ವೇಳೆ ವಿಮಾನ ಕೈ ತಪ್ಪಿದರೆ ನಿಲ್ದಾಣಕ್ಕೆ ಹೋಗುವವರು ಏನು ಮಾಡಬೇಕು. ಯೋಚನೆ ಮಾಡದೆ ಕೈಗೊಳ್ಳುವ ಕ್ರಮಗಳಿಂದ ಈ ರೀತಿ ಸಮಸ್ಯೆ ಆಗುತ್ತದೆ’ ಎಂದರು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಬಿಜೆ‍ಪಿಯ ಕೆ.ಜಿ.ಬೋಪಯ್ಯ ಸಹ ರಸ್ತೆ ಉಬ್ಬು ಸಮಸ್ಯೆಗಳ ಬಗ್ಗೆ ಧ್ವನಿಗೂಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು