ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ. ಪಂ. ಚುನಾವಣೆ ಫಲಿತಾಂಶ | ಒಂದೇ ಒಂದು ಮತದ ಅಂತರದಿಂದ ಗೆದ್ದ ಅಭ್ಯರ್ಥಿಗಳು

Last Updated 30 ಡಿಸೆಂಬರ್ 2020, 11:39 IST
ಅಕ್ಷರ ಗಾತ್ರ

ಬೆಂಗಳೂರು: ಚುನಾವಣೆಯಲ್ಲಿ ಒಂದೊಂದು ಮತವು ಅತ್ಯಂತ ಪ್ರಮುಖವಾಗುತ್ತದೆ. ಅದರಲ್ಲೂ ಮತದಾರರು ಐನೂರು ಸಾವಿರದ ಆಸುಪಾಸಿನಲ್ಲಿರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂಬುದಕ್ಕೆ ಇವತ್ತು ನಡೆದ ಮತ ಎಣಿಕೆಯ ಹಲವು ಘಟನೆಗಳು ಸಾಕ್ಷಿಯಾಗಿವೆ. ತೀವ್ರ ಹಣಾಹಣಿ ಇದ್ದ ಹಲವು ಕಡೆ ಅಭ್ಯರ್ಥಿಗಳು ಕೇವಲ ಒಂದೇ ಒಂದು ಮತದ ಅಂತರದಿಂದ ಗೆಲುವು ದಾಖಲಿಸಿದ್ದಾರೆ.

ಒಂದು ಮತ ಅಂತರದಿಂದ ಇಬ್ಬರು ಅಭ್ಯರ್ಥಿಗಳು ವಿಜಯ

ಮೊಳಕಾಲ್ಮುರು (ಚಿತ್ರದುರ್ಗ) ತಾಲ್ಲೂಕಿನ ಎರಡು ಗ್ರಾಮ ಪಂಚಾಯಿತಿ ಸ್ಥಾನಗಳಿಗೆ ಇಬ್ಬರು ಕೇವಲ ಒಂದು ಮತ ಅಂತರದಿಂದ ಗೆಲುವು ಸಾಧಿಸಿದ್ದಾರೆ. ತುಮಕೂರು ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕುಮ್ತಿ ಮತಗಟ್ಟೆಯಿಂದ ಜಂಗಮ ಕಾಮಯ್ಯ ಅವರು 167 ಮತಗಳನ್ನು ಗಳಿಸಿ ಜಯಶೀಲರಾಗಿದ್ದಾರೆ. ಇವರ ವಿರುದ್ಧ ಸ್ಪರ್ಧಿಸಿದ್ದ ಗುಡ್ಲನಾಯಕ 166 ಮತ ಪಡೆದುಪರಾಭವಗೊಂಡಿದ್ದಾರೆ.

ರಾಯಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಯರಪೋತ ಜೋಗಿ ಹಳ್ಳಿಯಲ್ಲಿ ಬಸಮ್ಮ 152 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಇವರ ವಿರುದ್ಧ ಸ್ಪರ್ಧಿಸಿದ್ದ ತಾಯಮ್ಮ 151 ಮತಗಳಿಸಿ ಪರಾಭವಗೊಂಡಿದ್ದಾರೆ.

ಒಂದು ಮತದ ಅಂತರ: ಬೆಳಗಾವಿಜಿಲ್ಲೆಗೋಕಾಕತಾಲ್ಲೂಕಿನ ಬಗರನಾಳ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 5ನೇ ವಾರ್ಡ್‌ ಪ.ಜಾ. ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಲ್ಲವ್ವ ಮಹಾಂತೇಶ ಹರಿಜನ 473 ಮತಗಳನ್ನು ಪಡೆದ ಪ್ರತಿಸ್ಪರ್ಧಿ ಮಹಾದೇವಿ ಜಗದೀಶ ಹರಿಜನ ಅವರನ್ನು ಒಂದು ಮತದಅಂತರದಿಂದ ಪರಾಭವಗೊಳಿಸಿ ಆಯ್ಕೆಗೊಂಡಿದ್ದಾರೆ.

ಚಾಮರಾಜನಗರ: ತಾಲ್ಲೂಕಿನ ವೆಂಕಟಯ್ಯನಛತ್ರ ಗ್ರಾಮದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕೃಷ್ಣಮೂರ್ತಿ ಅವರು ಒಂದು ಮತದಿಂದ ಗೆದ್ದಿದ್ದಾರೆ.

ಕಮಲಾಪುರ: ಒಂದು ಮತದಿಂದ ಗೆಲುವು

ಕಮಲಾಪುರ (ಕಲಬುರ್ಗಿ ಜಿಲ್ಲೆ) ತಾಲ್ಲೂಕಿನ ಅಂಬಲಗಾ ಗ್ರಾಮ ಪಂಚಾಯಿತಿಯ ಮಲ್ಲಿನಾಥ ಮಾಚಿ 305 ಮತ ಪಡೆದು ಕೇವಲ ಒಂದು ಮತ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಇವರ ಪ್ರತಿಸ್ಪರ್ಧಿ ರಾಜಶೇಖರ ಮೇಗಪಿ 304 ಮತ ಪಡೆದು ಪರಾಭವಗೊಂಡಿದ್ದಾರೆ.

ಇಬ್ಬರು ಮತಪತ್ರಗಳಿಗೆ ಹೆಬ್ಬೆಟ್ಟಿನ ಗುರುತು ಹಾಕಿದ್ದು ಅವು ರಾಜಶೇಖರ ಅವರ ಆಟೊ ಚಿಹ್ನೆ ಮೇಲೆ ಒತ್ತಿದ್ದಾರೆ. 34 ಮತಗಳು ಅಸಿಂಧು ಆಗಿವೆ.

ಮಿರಿಯಾಣ ಗ್ರಾ.ಪಂ. ಒಂದು ಮತದ ಗೆಲುವು

ಚಿಂಚೋಳಿ ತಾಲ್ಲೂಕಿನ ಮಿರಿಯಾಣ ಗ್ರಾ.ಪಂ. ವ್ಯಾಪ್ತಿಯ ಕಲ್ಲೂರು ರೋಡ್ ಗ್ರಾಮದಲ್ಲಿ ಅಭ್ಯರ್ಥಿಯೊಬ್ಬರು ಒಂದೇ ಮತದಿಂದ ಗೆಲುವು ಸಾಧಿಸಿದ್ದಾರೆ. ರವಿಶಂಕರ ಶರಣಪ್ಪ 326 ಮತ ಪಡೆದರೆ, ರಾಜಕುಮಾರ ಭೀಮಶಾ 325 ಮತಗಳು ಪಡೆದಿದ್ದರು. ಆಗ ಚುನಾವಣಾಧಿಕಾರಿ ಮಲ್ಲಿಕಾರ್ಜುನ ಪಾಲಾಮೂರ ಅವರು ಅಧಿಕ‌ ಮತ ಪಡೆದ ರವಿಶಂಕರ ಗೆಲುವು ಘೋಷಿಸಿದರು.

ಒಂದು ಮತದ ಅಂತರದಿಂದ ಗೆದ್ದ ಅಭ್ಯರ್ಥಿ: ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಸೊನ್ನ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್.ಮರಿಲಿಂಗಪ್ಪ ತಮ್ಮ ಸಮೀಪ ಪ್ರತಿಸ್ಪರ್ಧಿ ಬಿ.ಷಣ್ಮುಖಪ್ಪ ಅವರ ವಿರುದ್ಧ ಕೇವಲ 1 ಮತದ ಅಂತರದಲ್ಲಿ ಜಯಗಳಿಸಿದರು.

ಮರಿಲಿಂಗಪ್ಪ 440 ಮತಗಳನ್ನು ಪಡೆದರೆ, ಬಿ.ಷಣ್ಮುಖಪ್ಪ 439 ಮತಗಳನ್ನು ಪಡೆದು ಪರಾಜಿತರಾದರು. ಮರುಎಣಿಕೆ ಮಾಡುವಂತೆ ಮನವಿ ಸಲ್ಲಿಸಿದರಾದರು, ಅರ್ಜಿ ಸಲ್ಲಿಸಲು ನೀಡಿದ ಗಡುವು ಮೀರಿದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಮನವಿ ತಿರಸ್ಕರಿಸಿದರು.

ಮರು ಎಣಿಕೆ ನಡೆದರೂ ಗೆಲುವು ಸಿಗಲಿಲ್ಲ: ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಗೋಲಭಾವಿ ಗ್ರಾಮ ಪಂಚಾಯ್ತಿಯ ವಾರ್ಡ್ ನಂ 2ರಲ್ಲಿ ಸ್ಪರ್ಧಿಸಿದ್ದ ಕಲಾವತಿ ಮಾಂಗ ಒಂದು ಮತದ ಅಂತರದಿಂದ ಜಯ ಗಳಿಸಿದ್ದಾರೆ.

ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಕಲಾವತಿ 297 ಮತಗಳನ್ನು ಪಡೆದರೆ ಅವರ ಪ್ರತಿ ಸ್ಲರ್ಧಿ ಚಂದ್ರವ್ವ ಮಾಂಗ ಅವರಿಗೆ 296 ಮತಗಳು ಬಿದ್ದಿವೆ. ಚಂದ್ರವ್ವನ ಕೋರಿಕೆಯಂತೆ ಮರು ಎಣಿಕೆ ಮಾಡಿದರೂ ವಿಜಯಲಕ್ಷ್ಮಿ ಕಲಾವತಿಗೆ ಒಲಿದಿದೆ.

ತೀವ್ರ ಹಣಾಹಣಿಯಲ್ಲಿ ಒಂದು ಮತದಿಂದ ಗೆಲುವು: ತುಮಕೂರು ತಾಲ್ಲೂಕಿನ ಬುಗಡನಹಳ್ಳಿ ಗ್ರಾಮ ಪಂಚಾಯ್ತಿಯ ಹನುಮಂತಪುರ ಕ್ಷೇತ್ರದ ಅಭ್ಯರ್ಥಿ ಟಿ.ವಿ. ಶಿವಕುಮಾರ್ ಕೇವಲ ಒಂದು ಮತದ ಅಂತರದಿಂದ ಸಮೀಪ ಪ್ರತಿ ಸ್ಪರ್ಧಿ ಕೃಷ್ಣಪ್ಪ ಅವರನ್ನು ಸೋಲಿಸಿದ್ದಾರೆ. ಅಭ್ಯರ್ಥಿ ಟಿ.ವಿ..ಶಿವಕುಮಾರ್ ಅವರಿಗೆ 163 ಮತಗಳು ಬಂದಿದ್ದರೆ ಪ್ರತಿಸ್ಪರ್ಧಿ ಕೃಷ್ಣಪ್ಪಗೆ 162 ಮತ ಪಡೆದಿದ್ದಾರೆ‌. ಈ ಮೂಲಕ ಒಂದು ಮತದ ಅಂತರದಿಂದ ಶಿವಕುಮಾರ್ ಜಯಗಳಿಸಿದ್ದಾರೆ.

ಒಂದೇ ಮತದಲ್ಲಿ ರೋಚಕ ಗೆಲುವು: ಗಂಗಾವತಿ ತಾಲ್ಲೂಕಿನ 18 ಗ್ರಾಮ ಪಂಚಾಯಿತಿಯ ಮತ ಎಣಿಕೆ ಕಾರ್ಯ ಭರದಿಂದ ಸಾಗಿದ್ದು, ತಾಲ್ಲೂಕಿನ ಸಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಜಿನಹಳ್ಳಿ ಗ್ರಾಮದ ರಾಣಿ ನಾಗೇಂದ್ರ ಎನ್ನುವವರು ಕೇವಲ ಒಂದು ಮತದಿಂದ ರೋಚಕ ಗೆಲುವು ದಾಖಲಿಸಿದ್ದಾರೆ.

ಎದುರಾಳಿ ಅಭ್ಯರ್ಥಿಯಾದ ಶಾಂತಮ್ಮ 78 ಮತಗಳನ್ನು ಪಡೆದರೆ, ರಾಣಿ ನಾಗೇಂದ್ರ 79 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಗೆಲುವು ದಾಖಲಿಸಿದ್ದಾರೆ.

ತಿರಸ್ಕೃತ ಮತ ಪರಿಶೀಲನೆಯಲ್ಲಿ ಗೆದ್ದ ಅಭ್ಯರ್ಥಿ: ಶಿರಸಿ ತಾಲ್ಲೂಕಿನ ವಾನಳ್ಳಿ ಗ್ರಾಮ ಪಂಚಾಯ್ತಿಯ ಗೋಣಸರ ವಾರ್ಡಿನಲ್ಲಿ ವೀಣಾ ಗೌಡ ತಿರಸ್ಕೃತ ಮತ ಎಣಿಕೆಯಲ್ಲಿ ಗೆಲುವು ಸಾಧಿಸಿದ್ದಾರೆ. ಹಿಂದುಳಿದ ವರ್ಗ(ಎ) ಮಹಿಳೆ ಮೀಸಲು ಸ್ಥಾನಕ್ಕೆ ನಡೆದಿದ್ದ ಸ್ಪರ್ಧೆಯಲ್ಲಿ ಪಾರ್ವತಿ ಗೌಡ ಹಾಗೂ ವೀಣಾ ಗೌಡ ತಲಾ 127 ಮತ ಪಡೆದಿದ್ದರು. ಈ ವೇಳೆ ತಿರಸ್ಕೃತಗೊಂಡಿದ್ದ ಮತಗಳನ್ನು ಮರುಪರಿಶೀಲಿಸಲಾಯಿತು. ವೀಣಾ ಗೌಡ ಅವರು ಪಡೆದಿದ್ದ ಆಟೊ ಚಿಹ್ನೆಗೆ ಮತದ ಮುದ್ರೆಯ ಅಲ್ಪ ಭಾಗ ತಾಗಿಕೊಂಡಿದ್ದರಿಂದ ಅದನ್ನು ಗೆಲುವಿಗೆ ಪರಿಗಣಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT