ಮಂಗಳವಾರ, ಜನವರಿ 31, 2023
18 °C

ದಿನಾಂಕ ಇಲ್ಲದ ಪತ್ರ ಟ್ವೀಟ್‌: ಎಎಪಿ ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಮಹದಾಯಿ ಮತ್ತು ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಜಲ ಆಯೋಗ(ಸಿಡಬ್ಲ್ಯೂಸಿ) ಅನುಮತಿ ನೀಡಿದ ಕುರಿತು ದಿನಾಂಕವೇ ಇಲ್ಲದ ಪತ್ರವನ್ನು 2022ರ ಡಿ. 29ರಂದು ಟ್ವೀಟ್‌ ಮಾಡಿದ್ದಾರೆ’ ಎಂದು ಆಮ್‌ ಆದ್ಮಿ ಪಕ್ಷ(ಎಎಪಿ) ಆಕ್ಷೇಪ ವ್ಯಕ್ತಪಡಿಸಿದೆ.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ಮುಖಂಡ ಬೃಜೇಶ್ ಕಾಳಪ್ಪ, ‘ಮಹದಾಯಿ ಮತ್ತು ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರಗಳು ರಾಜ್ಯದ ಜನರನ್ನು ವಂಚಿಸುತ್ತಿದ್ದಾರೆ. ಕೇವಲ ಚುನಾವಣೆಯ ಉದ್ದೇಶದಿಂದ ಕೇಂದ್ರ ಜಲ ಆಯೋಗವು ಅನುಮತಿ ನೀಡಿದೆ ಎಂದು ಬಿಂಬಿಸಲಾಗುತ್ತಿದೆ’ ಎಂದು ಆರೋಪಿಸಿದರು.

ಬಿಜೆಪಿಯ ಡಬಲ್‌ ಎಂಜಿನ್‌ ಸರ್ಕಾರವು ಮಹದಾಯಿ ವಿವಾದದಲ್ಲಿ ರಾಜ್ಯಕ್ಕೆ ನ್ಯಾಯ ದೊರಕಿಸಿಕೊಟ್ಟಿದೆ ಎಂದು ಇಷ್ಟಕ್ಕೇ ಬಿಂಬಿಸುವುದು ಸರಿಯಲ್ಲ. ಕೇಂದ್ರ ಸರ್ಕಾರ 2010ರಲ್ಲಿ ಸುಪ್ರೀಂಕೋರ್ಟ್‌ ನ್ಯಾ. ಜೆ. ಎಂ. ಪಾಂಚಾಲ್‌ ಅವರ ನೇತೃತ್ವದಲ್ಲಿ ಮಹದಾಯಿ ನದಿ ವಿವಾದ ನ್ಯಾಯಮಂಡಳಿ ರಚಿಸಿತ್ತು. ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ಸರ್ಕಾರಗಳ ವಾದಗಳನ್ನು ಆಲಿಸಿ 2018ರ ಅಗಸ್ಟ್‌ 14ರಂದು ನ್ಯಾಯಮಂಡಳಿಯು ತನ್ನ ವರದಿಯನ್ನು ಸರ್ಕಾರಕ್ಕೆ ಒಪ್ಪಿಸಿತ್ತು. ಆದರೆ ಆ ತೀರ್ಪಿನ ಅನುಷ್ಠಾನಕ್ಕೆ ಇಷ್ಟು ವರ್ಷ ಕಾಯುವ ಅಗತ್ಯವೇನಿತ್ತು’ ಎಂದು ಪ್ರಶ್ನಿಸಿದರು.

ಮಹದಾಯಿ ಹೋರಾಟಗಾರ ಮತ್ತು ಎಎಪಿ ಮುಖಂಡ ವಿಕಾಸ್ ಸೊಪ್ಪಿನ್‌ ಮಾತನಾಡಿ, ‘ಬಿಜೆಪಿಯು ಈ ವಿಚಾರದಲ್ಲಿ ಬೀಗಬೇಕಾದ ಅಗತ್ಯವಿಲ್ಲ. ಬದಲಾಗಿ, ಈ ಯೋಜನೆಯಿಂದ ಅನುಕೂಲ ಪಡೆಯಬಹುದಾದ ಹುಬ್ಬಳ್ಳಿ-ಧಾರವಾಡ, ನರಗುಂದ, ನವಲಗುಂದ, ಬಾದಾಮಿ, ರೋಣ, ಗದಗ ಹಾಗೂ ಸುಮಾರು 100 ಗ್ರಾಮಗಳಿಗೆ ಶೀಘ್ರವೇ ಕುಡಿಯುವ ನೀರು ಒದಗಿಸಲು ಗಂಭೀರ ಪ್ರಯತ್ನ ಮಾಡಲಿ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.