ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

9 ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ – ಬ್ರೇಕ್ ಇನ್‌ಸ್ಪೆಕ್ಟರ್ ಬಳಿ 30 ನಿವೇಶನ!

Last Updated 15 ಜುಲೈ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ಸಾರಿಗೆ ಇಲಾಖೆ ಮೋಟಾರು ವಾಹನ ನಿರೀಕ್ಷಕರ (ಬ್ರೇಕ್ ಇನ್‌ಸ್ಪೆಕ್ಟರ್) ಬಳಿ 30 ನಿವೇಶನ, 82 ಎಕರೆ ಕೃಷಿ ಜಮೀನು, ಬೆಂಗಳೂರಿನಲ್ಲಿ ಶಾಲಾ ಕಟ್ಟಡ, ತುಮಕೂರಿನಲ್ಲಿ ಫಾರ್ಮ್ ಹೌಸ್, 3 ಕಾರು, 4 ದ್ವಿಚಕ್ರ ವಾಹನ!

ಬೆಂಗಳೂರಿನ ಕೋರಮಂಗಲ ಆರ್‌ಟಿಒ ಕಚೇರಿಯಲ್ಲಿ ಮೋಟಾರು ವಾಹನ ಹಿರಿಯ ನಿರೀಕ್ಷಕರಾಗಿರುವ ಎ.ಕೃಷ್ಣಮೂರ್ತಿ ಮನೆ ಮತ್ತು ಕಚೇರಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ಅಧಿಕಾರಿಗಳು ದಾಳಿ ನಡೆಸಿದಾಗ ಇವರು ಸಂಪಾದಿಸಿರುವ ಆಸ್ತಿಗೆ ಸಂಬಂಧಿಸಿದ ಇಷ್ಟು ಬೃಹತ್ ಪ್ರಮಾಣದ ದಾಖಲೆಗಳು ಪತ್ತೆಯಾಗಿವೆ.

ಹಂಪಿನಗರ, ದೊಮ್ಮಲೂರಿನಲ್ಲಿ ತಲಾ ಒಂದು ವಾಸದ ಮನೆ ಇವರ ಬಳಿ ಇದೆ ಎಂಬುದನ್ನು ಎಸಿಬಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಮುಖ್ಯ ಯೋಜನಾಧಿಕಾರಿ ಆಗಿರುವ ಆರ್‌.ಪಿ. ಕುಲಕರ್ಣಿ ಅವರು ಬೆಂಗಳೂರಿನಲ್ಲಿ ಒಂದು ವಾಸದ ಮನೆ, 4 ಫ್ಲಾಟ್, 3 ನಿವೇಶನ, 2 ಕಾರು ಹೊಂದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಎಂಜಿನಿಯರ್ ಜಿ. ಶ್ರೀಧರ್ ಅವರು ಮೈಸೂರಿನಲ್ಲಿ 1 ಮನೆ, ಕೆ.ಆರ್‌.ಪೇಟೆ ತಾಲ್ಲೂಕಿನಲ್ಲಿ ವಾಸದ ಮನೆ, ವಿವಿಧ ನಗರಗಳಲ್ಲಿ 4 ನಿವೇಶನ ಹೊಂದಿದ್ದಾರೆ.

ಬೀದರ್ ಜಿಲ್ಲೆ ಬಸವಕಲ್ಯಾಣದ ಗ್ರಾಮೀಣ ನೀರು ಸರಬರಾಜು ಅಭಿವೃದ್ಧಿ ಉಪ ವಿಭಾಗದ ಕಿರಿಯ ಎಂಜಿನಿಯರ್ ಸುರೇಶ್ ಅವರು ಬಸವಕಲ್ಯಾಣದಲ್ಲಿ ಮನೆ, ಬಾಲ್ಕಿಯಲ್ಲಿ ಪೆಟ್ರೋಲ್ ಬಂಕ್, ವಿವಿಧ ನಗರಗಳಲ್ಲಿ 4 ನಿವೇಶನ ಹೊಂದಿದ್ದಾರೆ. ಕೆಆರ್‌ಐಡಿಎಲ್ ಉಡುಪಿ ಜಿಲ್ಲೆ ಕಾರ್ಯಪಾಲಕ ಎಂಜಿನಿಯರ್ ಕೃಷ್ಣ ಎಸ್. ಹೆಬ್ಸೂರು ಅವರು ಉಡುಪಿಯಲ್ಲಿ ಮನೆ, ಬೆಂಗಳೂರಿನ ಜಿಗಣಿ, ಹುಬ್ಬಳ್ಳಿಯಲ್ಲಿ ತಲಾ ಒಂದು ನಿವೇಶನ ಹೊಂದಿದ್ದಾರೆ.

ಮಂಡ್ಯ ಜಿಲ್ಲೆ ಉಪ ಅರಣ್ಯ ಸಂರಕ್ಷಣಾಧಿಕಾರಿ(ಸಾಮಾಜಿಕ ಅರಣ್ಯ) ಟಿ. ವೆಂಕಟೇಶ್ ಅವರು ಮೈಸೂರಿನಲ್ಲಿ 2 ನಿವೇಶನ, ಬೇರೆ ನಗರಗಳಲ್ಲಿ 9 ನಿವೇಶನ, 12 ಎಕರೆ ಕೃಷಿ ಭೂಮಿ ಹೊಂದಿದ್ದಾರೆ. ಮಾಲೂರು ನಗರ ಯೋಜನಾ ಪ್ರಾಧಿಕಾರದ ಸಹಾಯಕ ನಿರ್ದೇಶಕ ಎಚ್.ಆರ್. ಕೃಷ್ಣಮೂರ್ತಿ ಅವರು ಬೆಂಗಳೂರು, ಶಿವಮೊಗ್ಗ ಮತ್ತು ದಾವಣಗೆರೆಯಲ್ಲಿ ತಲಾ ಒಂದು ಮನೆ, ವಿವಿಧೆಡೆ 4 ನಿವೇಶನ, ಚನ್ನಗಿರಿ ತಾಲ್ಲೂಕಿನಲ್ಲಿ 15 ಎಕರೆ ಕೃಷಿ ಭೂಮಿ ಹೊಂದಿರುವುದು ಬೆಳಕಿಗೆ ಬಂದಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.

ಗುರುವಾರ ಬೆಳಿಗ್ಗೆ 43 ತಂಡಗಳನ್ನು ಮಾಡಿಕೊಂಡು ಎಸಿಬಿ ಅಧಿಕಾರಿಗಳು ಏಕ ಕಾಲದಲ್ಲಿ ದಾಳಿ ಆರಂಭಿಸಿದ್ದು, ಶೋಧ ಮುಂದುವರಿದಿದೆ ಎಂದು ಮೂಲಗಳ ಹೇಳಿವೆ.

ಎಂಜಿನಿಯರ್‌ 35 ಎಕರೆ ಕೃಷಿ ಭೂಮಿ ಒಡೆಯ

ಕೆಪಿಟಿಸಿಎಲ್‌ ವಿಜಯಪುರದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸಿದ್ದರಾಮ ಮಲ್ಲಿಕಾರ್ಜುನ ಬಿರಾದಾರ ಅವರು ವಿಜಯಪುರದಲ್ಲಿ 3 ನಿವೇಶನ, 3 ವಾಸದ ಮನೆ, 4 ನಿವೇಶನ, 35 ಎಕರೆ ಕೃಷಿ ಭೂಮಿ, 2 ಕಾರು ಹೊಂದಿದ್ದಾರೆ ಎಂಬುದಕ್ಕೆ ದಾಖಲೆಗಳು ಎಸಿಬಿ ದಾಳಿ ವೇಳೆ ಪತ್ತೆಯಾಗಿದೆ.

ಬಳ್ಳಾರಿಯ ಜೆಸ್ಕಾಂ ಎಲೆಕ್ಟ್ರಿಕ್ ಇನ್‌ಸ್ಪೆಕ್ಟರ್ ಎ.ಎನ್. ವಿಜಯಕುಮಾರ್ ಅವರು ಬೆಂಗಳೂರು ಮತ್ತು ಬಳ್ಳಾರಿಯಲ್ಲಿ ತಲಾ ಒಂದು ವಾಸದ ಮನೆ, ವಿವಿಧ ನಗರಗಳಲ್ಲಿ 8 ನಿವೇಶನ, 2 ಕಾರು ಹೊಂದಿರುವುದು ಬೆಳಕಿಗೆ ಬಂದಿದೆ.

ಕಿರಿಯ ಎಂಜಿನಿಯರ್ ಮನೆಯಲ್ಲಿ760 ಗ್ರಾಂ ಚಿನ್ನ, ₹ 17 ಲಕ್ಷ ನಗದು ಪತ್ತೆ

ಬಸವಕಲ್ಯಾಣ​: ‘ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಿರಿಯ ಎಂಜಿನಿಯರ್ ಸುರೇಶ ಮೋರೆ ಅವರ ಮನೆಯಲ್ಲಿ760 ಗ್ರಾಂ ಚಿನ್ನಾಭರಣ, 1960 ಗ್ರಾಂ ಬೆಳ್ಳಿ, ₹10 ಲಕ್ಷದ ಬಾಂಡ್ ಮತ್ತು ₹17 ಲಕ್ಷ ನಗದು, ಮೆಹಕರ್‌ನಲ್ಲಿನ ಪೆಟ್ರೋಲ್ ಪಂಪ್‌ನಲ್ಲಿ ₹25 ಲಕ್ಷ ನಗದು ಸಿಕ್ಕಿದೆ’ ಎಂದು ಎಸಿಬಿ ಮೂಲಗಳು ತಿಳಿಸಿವೆ.

ಬಸವಕಲ್ಯಾಣದ ಶಿವಾಜಿನಗರ ಹಾಗೂ ಭಾಲ್ಕಿ ತಾಲ್ಲೂಕಿನ ಮೆಹಕರ್ ಗ್ರಾಮದಲ್ಲಿರುವ ಮನೆಗಳ ಮೇಲೆ ಎಸಿಬಿ ಅಧಿಕಾರಿಗಳು ಗುರುವಾರ ದಾಳಿ ಮಾಡಿದರು.

‘ಭಾಲ್ಕಿ ಹಾಗೂ ಬಸವಕಲ್ಯಾಣದಲ್ಲಿ 4 ನಿವೇಶನಗಳು ಹಾಗೂ ಎರಡಂತಸ್ತಿನ ಮನೆ ಇವರ ಹೆಸರಲ್ಲಿದೆ.ಅವರ ಬಳಿ ₹1.65 ಕೋಟಿಗೂ ಹೆಚ್ಚಿನ ಆಸ್ತಿ ಪತ್ತೆಯಾಗಿದೆ. ನ್ಯಾಯಯುತವಾಗಿ ಅವರ ಬಳಿ ₹45 ಲಕ್ಷ ಬೆಲೆ ಬಾಳುವಷ್ಟು ಮಾತ್ರ ಆಸ್ತಿ ಇರಬೇಕಾಗಿತ್ತು’ ಎಂದು ಎಸಿಬಿಯವರು ಮಾಹಿತಿ ನೀಡಿದ್ದಾರೆ.

ರಾಜ್ಯದ ವಿವಿಧೆಡೆ ನಡೆದ ಎಸಿಬಿ ದಾಳಿಗಳ ವಿವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT