ಶನಿವಾರ, ಸೆಪ್ಟೆಂಬರ್ 25, 2021
24 °C
ಕಾರ್ಮಿಕ ಇಲಾಖೆ ಅಧಿಕಾರಿಗಳಿಂದ ಲಂಚ ವಸೂಲಿ ಆರೋಪ

ಎಸಿಬಿ ದಾಳಿ: ₹ 1.54 ಲಕ್ಷ ನಗದು ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾರ್ಮಿಕರನ್ನು ಹೊಂದಿರುವ ಸಂಸ್ಥೆಗಳು, ಏಜೆನ್ಸಿಗಳಿಗೆ ನೋಟಿಸ್‌ ಜಾರಿಮಾಡಿ ಲಂಚ ಸಂಗ್ರಹಿಸುತ್ತಿದ್ದ ಮಾಹಿತಿ ಆಧರಿಸಿ ನಗರದ ಸಹಾಯಕ ಕಾರ್ಮಿಕ ಆಯುಕ್ತ ವೃತ್ತ– 2 ಮತ್ತು ಅವರ ಅಧೀನ ಕಚೇರಿಗಳ ಮೇಲೆ ಮಂಗಳವಾರ ದಾಳಿಮಾಡಿ ಶೋಧ ನಡೆಸಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ₹ 1.54 ಲಕ್ಷ ನಗದು ವಶಪಡಿಸಿಕೊಂಡಿದೆ.

ಕೈಗಾರಿಕೆಗಳು, ಕಾರ್ಖಾನೆಗಳು, ಬೃಹತ್‌ ಮಳಿಗೆಗಳು, ಮಾಲ್‌ಗಳು, ಖಾಸಗಿ ಕಚೇರಿಗಳು, ಹೋಟೆಲ್‌ಗಳು, ಒಳಾಂಗಣ ವಿನ್ಯಾಸಕರು ಮತ್ತು ಕಟ್ಟಡ ನಿರ್ಮಾಣ ಮಾಡುವವರಿಗೆ ಕಾರ್ಮಿಕ ಕಾಯ್ದೆ, ನಿಯಮಗಳ ಉಲ್ಲಂಘನೆ ಆರೋಪದಡಿ ನೋಟಿಸ್‌ ಜಾರಿ ಮಾಡಿರುವ ಕಾರ್ಮಿಕ ಇಲಾಖೆ ಅಧಿಕಾರಿಗಳು, ಭಾರಿ ಪ್ರಮಾಣದ ಲಂಚ ವಸೂಲಿ ಮಾಡುತ್ತಿದ್ದಾರೆ ಎಂಬ ಮಾಹಿತಿ ಎಸಿಬಿ ಬೆಂಗಳೂರು ನಗರ ಘಟಕದ ಅಧಿಕಾರಿಗಳಿಗೆ ಲಭಿಸಿತ್ತು. ಮಾಹಿತಿ ಆಧರಿಸಿ ಎಫ್‌ಐಆರ್‌ ದಾಖಲಿಸಿ, ಶೋಧ ನಡೆಸಲಾಗಿದೆ.

ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತ ಸಂತೋಷ್‌ ಹಿಪ್ಪರಗಿ ಮತ್ತು ಅವರ ಅಧೀನದ ಕೆಲವು ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿಗಳಲ್ಲಿ ದಾಖಲೆ ಇಲ್ಲದ ನಗದು ಪತ್ತೆಯಾಗಿದೆ. ಕಾರ್ಮಿಕ ಕಾಯ್ದೆ, ನಿಯಮ ಉಲ್ಲಂಘನೆ ಆರೋಪದಡಿ ಕೆಲವು ಸಂಸ್ಥೆಗಳಿಗೆ ನೀಡಿದ್ದ ನೋಟಿಸ್‌ನ ಪ್ರತಿಗಳೂ ನಗದು ಜತೆ ಪತ್ತೆಯಾಗಿವೆ. ಎಸಿಬಿ ಬೆಂಗಳೂರು ನಗರ ಘಟಕದ ಎಸ್‌.ಪಿ. ಜಿ.ಎಚ್‌.ಯತೀಶ್‌ಚಂದ್ರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು.

‘ನಗದು ಮತ್ತು ಕೆಲವು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ನಗದು ಮೂಲ ಕುರಿತು ಸಂಬಂಧಿಸಿದ ಅಧಿಕಾರಿಗಳು, ನೌಕರರ ವಿಚಾರಣೆ ನಡೆಸಲಾಗುವುದು’ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಸಂತೋಷ್‌ ಹಿಪ್ಪರಗಿ ಕೆಲವು ದಿನಗಳ ಹಿಂದೆ ಲಂಚ ಪ್ರಕರಣದಲ್ಲಿ ಎಸಿಬಿಯಿಂದ ಬಂಧಿತರಾಗಿದ್ದರು. ನ್ಯಾಯಾಲಯದಿಂದ ಜಾಮೀನು ಪಡೆದು ಕರ್ತವ್ಯಕ್ಕೆ ಮರಳಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು