ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸಿಬಿ ಲೋಕಾಯುಕ್ತದ ಅಧೀನದಲ್ಲೇ ಇರಬೇಕು: ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ

Last Updated 24 ಜನವರಿ 2022, 8:31 IST
ಅಕ್ಷರ ಗಾತ್ರ

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳವನ್ನು (ಎಸಿಬಿ) ಲೋಕಾಯುಕ್ತದ ಅಧೀನಲ್ಕೆ ತಂದು, ಲೋಕಾಯುಕ್ತಕ್ಕೆ ಹಿಂದಿನಂತೆ ಹೆಚ್ಚಿನ ಅಧಿಕಾರ ನೀಡಬೇಕು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಒತ್ತಾಯಿಸಿದರು.

ಇದೇ 27ರಂದು ಲೋಕಾಯುಕ್ತ ಹುದ್ದೆಯಿಂದ ನಿವೃತ್ತರಾಗುತ್ತಿರುವ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 'ಎಸಿಬಿ ಸರ್ಕಾರದ ಅಧೀನದಲ್ಲಿ ಇರುವುದರಿಂದ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಲೋಕಾಯುಕ್ತ ಒಂದು ಸ್ವತಂತ್ರ ಸಂಸ್ಥೆ. ಇದರ ಅಧೀನಕ್ಕೆ ಎಸಿಬಿಯನ್ನು ನೀಡಿದರೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಹೆಚ್ಚಿನ ಕೆಲಸ ಮಾಡಲು ಸಾಧ್ಯವಿದೆ' ಎಂದರು.

ಹಿಂದೆ ಲೋಕಾಯುಕ್ತದ ಪೊಲೀಸ್ ವಿಭಾಗವೇ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ತನಿಖೆ ನಡೆಸುವ ಅಧಿಕಾರ ಹೊಂದಿತ್ತು. ಅದನ್ನು ಬದಲಿಸಿ ಎಸಿಬಿ ಸೃಜಿಸಲಾಯಿತು. ಎಸಿಬಿ ಸರ್ಕಾರದ ಅಧೀನದಲ್ಲಿ ಇರುವುದು ಸರಿಯಲ್ಲ. ಲೋಕಾಯುಕ್ತದ ಅಧೀನದಲ್ಲಿ ಇರುವುದು ಸರಿಯಾದ ವ್ಯವಸ್ಥೆ ಎಂದು ಹೇಳಿದರು.

ತಾವು ಲೋಕಾಯುಕ್ತ ಹುದ್ದೆಯ ಅಧಿಕಾರ ಸ್ವೀಕರಿಸಿದ ದಿನದಿಂದ ಈವರೆಗೆ 20,199 ದೂರುಗಳನ್ನು ವಿಲೇವಾರಿ ಮಾಡಲಾಗಿದೆ. 2,677 ಇಲಾಖಾ ವಿಚಾರಣೆಗಳನ್ನು ಪೂರ್ಣಗೊಳಿಸಲಾಗಿದೆ. 13,000 ಇತರ ದೂರುಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ವಿವರಿಸಿದರು.

ತಪ್ಪಿತಸ್ಥ ಸರ್ಕಾರಿ ನೌಕರರು ಮತ್ತು ಚುನಾಯಿತ ಪ್ರತಿನಿಧಿಗಳ ವಿರುದ್ಧ ಲೋಕಾಯುಕ್ತ ಕಾಯ್ದೆಯ ಸೆಕ್ಷನ್ 12(3)ರ ಅಡಿಯಲ್ಲಿ 2,122 ಮತ್ತು ಸೆಕ್ಷನ್ 21(1)ರ ಅಡಿಯಲ್ಲಿ 587 ವರದಿಗಳನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಈ ಪೈಕಿ 1,226 ಪ್ರಕರಣಗಳಲ್ಲಿ ಕ್ರಮ ಕೈಗೊಂಡಿರುವ ಬಗ್ಗೆ ವರದಿ ಬರುವುದು ಬಾಕಿ ಇದೆ ಎಂದು ಲೋಕಾಯುಕ್ತರು ತಿಳಿಸಿದರು.

ಹುದ್ದೆಯ ಸೂಕ್ಷ್ಮತೆ ತಿಳಿದಿರಲಿಲ್ಲ: 'ಹೆಚ್ಚಿನ ಆದಾಯದ ಕೆಲಸ ಇದ್ದರೂ ಸಮಾಜ ಸೇವೆಯ ಅವಕಾಶ ಎಂದು ಪರಿಗಣಿಸಿ ಲೋಕಾಯುಕ್ತ ಹುದ್ದೆಗೆ ಬಂದಿದ್ದೆ. ಬರುವಾಗ ಈ ಹುದ್ದೆಯ ಸೂಕ್ಷ್ಮತೆ ತಿಳಿದಿರಲಿಲ್ಲ. ನನ್ನ ಮೇಲೆ ಮಾರಕಾಸ್ತ್ರದಿಂದ ದಾಳಿಯಾದ ಬಳಿಕವೇ ಹುದ್ದೆಯ ಸೂಕ್ಷ್ಮತೆ ತಿಳಿಯಿತು' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಆಸ್ತಿ ವಿವರ ಸಲ್ಲಿಸುವ ಅಗತ್ಯವಿಲ್ಲ: ಲೋಕಾಯುಕ್ತರ ಹುದ್ದೆ ಸರ್ಕಾರಿ ನೌಕರಿಯೂ ಅಲ್ಲ, ಜನಪ್ರತಿನಿಧಿಯೂ ಅಲ್ಲ. ಸ್ವತಂತ್ರ ಸಾಂವಿಧಾನಿಕ ಸಂಸ್ಥೆ. ಈ ಕಾರಣದಿಂದ ಲೋಕಾಯುಕ್ತರು ಆಸ್ತಿ ವಿವರ ಸಲ್ಲಿಸಬೇಕಾದ ಅಗತ್ಯ ಇಲ್ಲ ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT