ಶನಿವಾರ, ನವೆಂಬರ್ 27, 2021
22 °C

ಡಾ. ಕಲಬುರ್ಗಿ ಹತ್ಯೆ: ಡಿ. 20ರಿಂದ ವಿಚಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ಹಿರಿಯ ಸಂಶೋಧಕ ಡಾ. ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನು ಇಲ್ಲಿನ 4ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಡಿ. 20 ಹಾಗೂ 21ಕ್ಕೆ ನಿಗದಿಪಡಿಸಿ ಬುಧವಾರ ಆದೇಶಿಸಿತು.

ಪ್ರಕರಣದ ಆರು ಆರೋಪಿಗಳಲ್ಲಿ ಧಾರವಾಡ ಕೇಂದ್ರ ಕಾರಾಗೃಹದಲ್ಲಿದ್ದ ಪ್ರವೀಣ ಚತರು ಹಾಗೂ ಮುಂಬೈನ ಆರ್ಥರ್‌ ರಸ್ತೆ ಜೈಲಿನಲ್ಲಿದ್ದ ಅಮಿತ ಬದ್ದಿ, ಗಣೇಶ ಮಿಸ್ಕಿನ್ ಹಾಗೂ ವಾಸುದೇವ ಸೂರ್ಯವಂಶಿಯನ್ನು ನ್ಯಾಯಾಲಯಕ್ಕೆ ಭಿಗಿ ಭದ್ರತೆಯಲ್ಲಿ ಕರೆತರಲಾಯಿತು.

ಪ್ರಕರಣದ ವಿಚಾರಣೆಯನ್ನು ಧಾರವಾಡದಲ್ಲೇ ನಡೆಸುವಂತೆ ಆರೋಪಿಗಳು ನ್ಯಾಯಾಲಯವನ್ನು ಕೇಳಿಕೊಂಡರು. ಜತೆಗೆ ತಮ್ಮನ್ನು ಭೇಟಿಯಾಗಲು ಬಂದ ಕುಟುಂಬದವರು ಹಾಗೂ ವಕೀಲರೊಂದಿಗೆ ಮಾತನಾಡಲು ಅವಕಾಶ ಕೋರಿದರು. ಇವುಗಳಲ್ಲಿ ಭೇಟಿಯ ಕೋರಿಕೆಯನ್ನು ಮಾನ್ಯ ಮಾಡಿದ ನ್ಯಾಯಾಧೀಶರು, ನ್ಯಾಯಾಲಯದ ಆವರಣದಲ್ಲೇ ಭೇಟಿಗೆ ಅವಕಾಶ ನೀಡಿದರು.

ವಿಚಾರಣೆ ಸಂದರ್ಭದಲ್ಲಿ ಮರಾಠಿ ಹಾಗೂ ಹಿಂದಿಯಲ್ಲಿ ಮಾತನಾಡುತ್ತಿದ್ದ ಆರೋಪಿಗಳ ವಿರುದ್ಧ ನ್ಯಾಯಾಧೀಶೆ ಪಂಚಾಕ್ಷರಿ ಅವರು ಗರಂ ಆದರು. ಕರ್ನಾಟಕದವರಾಗಿದ್ದು ಕನ್ನಡದಲ್ಲಿ ಮಾತನಾಡಿ ಎಂದು ತಾಕೀತು ಮಾಡಿದರು. ಆಗ ಆರೋಪಿಗಳು ಕನ್ನಡದಲ್ಲೇ ಉತ್ತರಿಸಿದರು. 

ನ್ಯಾಯಾಲಯದಿಂದ ಹೊರಬಂದ ಆರೋಪಿಗಳು, ’ನಾವು ಅಮಾಯಕರು. ಎಸ್‌ಐಟಿ ಅಧಿಕಾರಿಗಳು ನಮ್ಮನ್ನು  ಇದರಲ್ಲಿ ಸಿಲುಕಿಸಿದ್ದಾರೆ. ಪ್ರಜಾಪ್ರಭುತ್ವದ ಮೇಲೆ ನಮಗೆ ನಂಬಿಕೆ ಇದೆ. ನಾವೆಲ್ಲರೂ ಆರೋಪಮುಕ್ತರಾಗಿ ಹೊರಬರುತ್ತೇವೆ‘ ಎಂದು ಕೂಗಿದರು.

ಮಹಾರಾಷ್ಟ್ರದ ವಿಚಾರವಾದಿಗಳಾದ ಗೋವಿಂದ ಪಾನ್ಸರೆ ಮತ್ತು ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಮುಂಬೈನ ಕೇಂದ್ರ ಕಾರಾಗೃಹಕ್ಕೆ ಮರಳಿಸುವಂತೆ ಅನುಮತಿ ಕೋರಿದ ಅರ್ಜಿಯೂ ನ್ಯಾಯಾಲಯಕ್ಕೆ ಸಲ್ಲಿಕೆಯಾಯಿತು. ಪ್ರಕರಣದ ವಿಚಾರಣೆಯನ್ನು ಶೀಘ್ರದಲ್ಲಿ ನಡೆಸಬೇಕು ಎಂಬ ಹೈಕೋರ್ಟ್‌ ಸೂಚನೆ ಹಿನ್ನೆಲೆಯಲ್ಲಿ ವಿಶೇಷ ಅಭಿಯೋಜಕರನ್ನೂ ಸರ್ಕಾರ ನೇಮಕ ಮಾಡಿದೆ.

ಡಿ. 20 ಹಾಗೂ 21ರಂದು ವಿಚಾರಣೆ ನಡೆಸುವುದಾಗಿ ತಿಳಿಸಿ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು