ಅವಿಶ್ವಾಸ ನಿರ್ಣಯ: ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಅಗ್ನಿಪರೀಕ್ಷೆ

ಬೆಂಗಳೂರು: ವಿಧಾನಪರಿಷತ್ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ವಿರುದ್ಧದ ಅವಿಶ್ವಾಸ ನಿಲುವಳಿ ಸೂಚನೆ ಮಂಗಳವಾರದ ಒಂದು ದಿನದ ವಿಶೇಷ ಅಧಿವೇಶನದ ಪ್ರಮುಖ ಕಾರ್ಯಸೂಚಿಯಾಗಿದ್ದು, ಆ ಬಳಿಕ ಗೋಹತ್ಯೆ ನಿಷೇಧ ಮಸೂದೆಯನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.
ಕಳೆದ ಗುರುವಾರ ಮೇಲ್ಮನೆ ಕಲಾಪವನ್ನು ಏಕಾಏಕಿ ಅನಿರ್ಧಿಷ್ಟ ಅವಧಿಗೆ ಮುಂದೂಡಿದ್ದರಿಂದ ವಿಶೇಷ ಅಧಿವೇಶನ ಕರೆಯಲು ಸೂಚನೆ ನೀಡಬೇಕು ಎಂದು ಬಿಜೆಪಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿತ್ತು.
ತಮ್ಮ ವಿರುದ್ಧದ ಅವಿಶ್ವಾಸ ಗೊತ್ತುವಳಿಗೆ ಸಂಬಂಧಿಸಿದಂತೆ ತಾಂತ್ರಿಕ ಸಮಸ್ಯೆಗಳಿದ್ದು, ಕಾನೂನು ಸಲಹೆ ಕೇಳಿ ಮುಂದುವರಿಯುವುದಾಗಿ ಪ್ರತಾಪಚಂದ್ರ ಶೆಟ್ಟಿ ಹೇಳಿದ್ದಾರೆ.
ಅವಿಶ್ವಾಸ ನೋಟಿಸ್ ನೀಡಿ 14 ದಿನಗಳು ಕಳೆದಿದೆ. ಕಳೆದ ಗುರುವಾರಕ್ಕೆ 15 ನೇ ದಿನವಾಗಿದೆ ಆದ್ದರಿಂದ ಅದನ್ನು ಕೈಗೆತ್ತಿಕೊಳ್ಳಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
ವಿಧಾನಪರಿಷತ್ ಸಚಿವಾಲಯದ ಮೂಲಗಳ ಪ್ರಕಾರ, ಸಭಾಪತಿಯವರಿಗೆ ಬೇರೆ ಮಾರ್ಗವಿಲ್ಲ. ಖಾಸಗಿ ವಕೀಲರ ಮೂಲಕ ಸಲಹೆ ಪಡೆಯಲು ಅವರಿಗೆ ಸಾಧ್ಯವಿಲ್ಲ. ಅವಿಶ್ವಾಸವನ್ನು ಎದುರಿಸಲೇಬೇಕು. ಸದನವೇ ಸರ್ವೋಚ್ಛವಾಗಿದ್ದು, ಅಲ್ಲಿ ತೆಗೆದುಕೊಳ್ಳುವ ನಿರ್ಣಯಕ್ಕೆ ಅವರು ತಲೆ ಬಾಗಬೇಕಾಗುತ್ತದೆ.
ಹಿಂದೆ ಡಿ.ಎಚ್.ಶಂಕರಮೂರ್ತಿ ವಿರುದ್ಧ ಕಾಂಗ್ರೆಸ್ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಿದಾಗ, ಅದರ ಚರ್ಚೆಗೆ ವಿಸ್ತೃತ ಅವಕಾಶ ನೀಡಿದ್ದು ಮಾತ್ರವಲ್ಲದೆ, ಸಭಾಪತಿ ಪೀಠದಲ್ಲಿ ಕೂರದೇ ಉಪ ಸಭಾಪತಿ ಮೂಲಕ ಕಲಾಪ ನಡೆಸಲಾಯಿತು. ತಮ್ಮ ವಿರುದ್ಧ ಬಂದ ಎಲ್ಲ ಆರೋಪಗಳಿಗೂ ಡಿ.ಎಚ್.ಶಂಕರಮೂರ್ತಿ ಸಮಜಾಯಿಷಿಗಳನ್ನು ನೀಡಿದರು. ಅವಿಶ್ವಾಸ ನಿರ್ಣಯದ ಮೇಲೆ ಮತದಾನ ನಡೆದಾಗ ಅದಕ್ಕೆ ಸೋಲುಂಟಾಯಿತು. ಶಂಕರಮೂರ್ತಿ ಸಭಾಪತಿಯಾಗಿ ಮುಂದುವರಿದರು.
ಜೆಡಿಎಸ್ ಬೆಂಬಲ
ಪ್ರತಾಪಚಂದ್ರ ಶೆಟ್ಟಿಯವರನ್ನು ಸಭಾಪತಿ ಸ್ಥಾನದಿಂದ ಇಳಿಸಲು ಬಿಜೆಪಿಯು ಜೆಡಿಎಸ್ ಬೆಂಬಲವನ್ನು ಕೇಳಿದೆ. ಬೆಂಬಲ ನೀಡುವುದಾಗಿ ಜೆಡಿಎಸ್ ವರಿಷ್ಠರು ಭರವಸೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.
ಇತ್ತೀಚಿನ ದಿನಗಳಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಸಂಬಂಧ ಹಳಸಿದ್ದು, ಬಿಜೆಪಿ ಬಗ್ಗೆ ಮೃದು ಧೋರಣೆ ತಾಳಿರುವುದರಿಂದ ಸಭಾಪತಿ ಪದಚ್ಯುತಿ ಸಲೀಸಾಗಿ ನಡೆಯಲಿದೆ. ಈ ಸಹಾಯಕ್ಕಾಗಿ ಸಭಾಪತಿ ಸ್ಥಾನಕ್ಕೆ ಜೆಡಿಎಸ್ ಪಟ್ಟು ಹಿಡಿಯುವ ಸಾಧ್ಯತೆಯೂ ಇಲ್ಲ ಎಂದು ಹೇಳಲಾಗಿದೆ.
ಗೋಹತ್ಯೆ ನಿಷೇಧ ಮಸೂದೆ ಬಗ್ಗೆ ಮುಗುಂ
ವಿಧಾನಸಭೆಯಲ್ಲಿ ಅಂಗೀಕಾರಗೊಂಡ ಗೋಹತ್ಯೆ ನಿಷೇಧ ಮಸೂದೆಯ ಬಗ್ಗೆ ಬಿಜೆಪಿ ಬಾಯಿ ಬಿಡುತ್ತಿಲ್ಲ. ಅವಿಶ್ವಾಸ ವಿಷಯ ಮುಗಿದ ಮೇಲೆ ಕೈಗೆತ್ತಿಕೊಳ್ಳಬಹುದು. ಆದರೆ, ಸಭಾಪತಿ ಇಳಿಸುವುದೇ ನಮ್ಮ ಆದ್ಯತೆ ಎಂದು ಬಿಜೆಪಿ ಸದಸ್ಯರು ಹೇಳಿದ್ದಾರೆ.
ವಿಧಾನಪರಿಷತ್ತಿನಲ್ಲಿ ಈ ಮಸೂದೆ ಅಂಗೀಕಾರ ಪಡೆಯದೇ ಇದ್ದರೆ, ಸರ್ಕಾರ ಸುಗ್ರೀವಾಜ್ಞೆ ಹೊರಡಿಸಬೇಕಾಗುತ್ತದೆ. ವಿಧಾನಸಭೆಯಲ್ಲಿ ಏಕಾಏಕಿ ಹೆಚ್ಚುವರಿ ಕಾರ್ಯಸೂಚಿ ಪಟ್ಟಿಯಲ್ಲಿ ಮಸೂದೆಯನ್ನು ಸೇರಿಸಿ ಮಂಡಿಸಲಾಯಿತು. ಅದೇ ರೀತಿಯ ತಂತ್ರ ಅನುಸರಿಸಲೂ ಬಹುದು. ಆದರೆ, ಜೆಡಿಎಸ್ ಬೆಂಬಲ ಇಲ್ಲದೆ, ಮಸೂದೆ ಅಂಗೀಕಾರ ಅಂಗೀಕರಿಸುವುದು ಕಷ್ಟ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.