ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಜರು ಭೂ ಪ್ರದೇಶ ಪುನಶ್ಚೇತನಕ್ಕೆ ಕ್ರಮ: ಬಸವರಾಜ ಬೊಮ್ಮಾಯಿ

ಅರಣ್ಯ ಪ್ರದೇಶ ಶೇ 30ಕ್ಕೆ ಏರಿಸಲು ಕ್ರಮ l ‘ಮಣ್ಣು ಉಳಿಸಿ’ ಅಭಿಯಾನದಲ್ಲಿ ಸಿ.ಎಂ ಹೇಳಿಕೆ
Last Updated 19 ಜೂನ್ 2022, 20:43 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ 2.50 ಲಕ್ಷ ಹೆಕ್ಟೇರ್‌ ಭೂ ಪ್ರದೇಶವು ಬಂಜರಾಗಿದ್ದು, ಆ ಭೂಮಿಯ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗುವುದು‘ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.

ಅರಮನೆ ಮೈದಾನದಲ್ಲಿ ಭಾನುವಾರ ಈಶಾ ಫೌಂಡೇಶನ್‌ ಆಯೋಜಿಸಿದ್ದ ‘ಮಣ್ಣು ಉಳಿಸಿ’ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಅರಣ್ಯ ಪ್ರದೇಶದ ವ್ಯಾಪ್ತಿ ಶೇ 33 ರಿಂದ ಶೇ 24ಕ್ಕೆ ಕುಗ್ಗಿದೆ. ಐದು ವರ್ಷಗಳಲ್ಲಿ ಅರಣ್ಯ ಪ್ರದೇಶವನ್ನು ಶೇ 30ಕ್ಕೆ ಹೆಚ್ಚಿಸಲು ಪ್ರಯತ್ನಿಸಲಾಗುವುದು. ರೈತರೊಂದಿಗೆ ನಗರವಾಸಿಗಳು ಕೈಜೋಡಿಸಬೇಕಾಗಿದೆ. ತಿಂಗಳಲ್ಲಿ ನಾಲ್ಕು ದಿನ ನಗರ ಜನರು ರೈತರೊಂದಿಗೆ ಕಾಲಕಳೆಯಬೇಕು’ ಎಂದು ಸಲಹೆ ನೀಡಿದರು.

‘ಬಿಎಸ್‌ವೈ ನೇತೃತ್ವದ ಸರ್ಕಾರದ ಅವಧಿಯಲ್ಲಿ ಮಣ್ಣಿನಲ್ಲಿ ಪೋಷಕಾಂಶ ವೃದ್ಧಿಗೆ ಭೂಚೇತನ ಯೋಜನೆ ತಂದಿತ್ತು. ನಮ್ಮ ಸರ್ಕಾರ ಮಣ್ಣು ಉಳಿಸಲು ಮೊದಲ ಆದ್ಯತೆ ನೀಡಲಿದೆ. ಪರಿಸರ ರಕ್ಷಣೆಗೆ ಬಜೆಟ್‌ನಲ್ಲಿ ₹ 100 ಅನುದಾನ ಮೀಸಲಿಡಲಾಗಿದೆ’ ಎಂದರು.

ಶಾಸಕ ಬಿ.ಎಸ್‌.ಯಡಿಯೂರಪ್ಪ ಅವರು, ‘ಶುದ್ಧ ಗಾಳಿ, ನೀರು ಸಿಗುತ್ತಿಲ್ಲ. ಕುಡಿಯಲು ಲಭ್ಯವಿರುವ ನೀರಿನ ಪ್ರಮಾಣ ಕಡಿಮೆಯಾಗಿದೆ. ಮನುಷ್ಯ ಕ್ಷಣಿಕ ಆಸೆಗೆ ಪ್ರಕೃತಿ ಹಾಳು ಮಾಡುತ್ತಿದ್ದಾನೆ. ಪ್ರಾಕೃತಿಕ ಸಂಪತ್ತು ಉಳಿಸಲು ಒಗ್ಗಟ್ಟಾಗಿ ಯತ್ನಿಸಬೇಕಿದೆ’ ಎಂದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌, ‘ಮಣ್ಣು ಉಳಿಸುವ ವಿಚಾರದಲ್ಲಿ ಸದ್ಗುರು ಅವರು ವಿಶ್ವಕ್ಕೇ ರಾಯಭಾರಿ. 100 ದಿನದಲ್ಲಿ, 24 ದೇಶಗಳ 30 ಸಾವಿರ ಕಿ.ಮೀ ಬೈಕ್‌ನಲ್ಲೇ ಸಂಚರಿಸಿ ಈ ಕುರಿತು ಜಾಗೃತಿ ಮೂಡಿಸಿದ್ದಾರೆ. ಇದು, ಸಾಮಾನ್ಯವಾದ ಸಂಗತಿಯಲ್ಲ’ ಎಂದರು.

ಈಶಾ ಫೌಂಡೇಶನ್‌ನ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್‌ ಅವರು, ‘ಮಣ್ಣಿನ ಮಹತ್ವ ಬಹಳ ದೊಡ್ಡದು. ಮಣ್ಣಿನ ಫಲವತ್ತತೆ ಉಳಿಸಲು ಎಲ್ಲರೂ ಪ್ರಯತ್ನಿಸಬೇಕು. ಮಣ್ಣು ಉಳಿಸಿ ಅಭಿಯಾನಕ್ಕೆ ವಿವಿಧ ದೇಶಗಳ ಬೆಂಬಲ ಸಿಕ್ಕಿದೆ. ಮಣ್ಣಿನ ಫಲವತ್ತತೆ ಉಳಿದರೆ ರೈತರು ಉಳಿಯಲಿದ್ದಾರೆ. ನಮ್ಮ ಸುಂದರ ಕನಸುಗಳು ಉಳಿಯಲಿವೆ’ ಎಂದು ನುಡಿದರು.

‘ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಮಣ್ಣು ಉಳಿಸಲು ಸ್ವಯಂ ಸೇವಕರು ಸಾಕಷ್ಟು ಶ್ರಮ ಹಾಕಿದ್ದಾರೆ. ನಾವು ಇದುವರೆಗೂ 320 ಕೋಟಿ ಜನರನ್ನು ತಲುಪಿದ್ದೇವೆ’ ಎಂದರು. ಇದೇ ವೇಳೆ ವಿವಿಧ ಯೋಜನೆಗೆ ಒಡಂಬಡಿಕೆ ಮಾಡಿಕೊಳ್ಳಲಾಯಿತು.

ಪಠ್ಯಕ್ಕೆ ಮಣ್ಣಿನ ಸಂರಕ್ಷಣೆ ವಿಷಯ: ನಾಗೇಶ್

‘ಮುಂದಿನ ಶೈಕ್ಷಣಿಕ ವರ್ಷದಿಂದ ‘ಮಣ್ಣಿನ ಸಂರಕ್ಷಣೆ’ ಕುರಿತು ಪಠ್ಯಪುಸ್ತಕದಲ್ಲಿ ಪಾಠ ಸೇರ್ಪಡೆ ಮಾಡಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಹೇಳಿದರು.

‘ಕೀಟನಾಶಕ, ರಾಸಾಯನಿಕಗಳ ಅತಿಯಾದ ಬಳಕೆಯಿಂದ ದಿನದಿಂದ ದಿನಕ್ಕೆ ಮಣ್ಣಿನ ಗುಣಮಟ್ಟ ಹಾಳಾಗುತ್ತಿದೆ. ಪಂಚಭೂತಗಳು ದೇವರೆಂದು ನಂಬಿರುವ ದೇಶ ನಮ್ಮದು. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಸಾವಯವ ಕೃಷಿಗೆ ಉತ್ತೇಜನ ನೀಡಿದ್ದರು’ ಎಂದು ತಿಳಿಸಿದರು.

***

ಒಂದು ಇಂಚಿನಷ್ಟು ಭೂಮಿ ಹಾಳು ಮಾಡಿದರೂ ನಾವು 600 ವರ್ಷಗಳಷ್ಟು ಹಿಂದಕ್ಕೆ ಚಲಿಸುತ್ತೇವೆ
- ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT