ಬುಧವಾರ, ಆಗಸ್ಟ್ 17, 2022
30 °C

ಜೈಲಿನಲ್ಲೇ ನಟಿಯರ ಕೂದಲು ಮಾದರಿ ಸಂಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಡ್ರಗ್ಸ್ ಜಾಲ ಪ್ರಕರಣದಲ್ಲಿ ಜೈಲು ಸೇರಿರುವ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಅವರ ಕೂದಲು ಮಾದರಿಯನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶನಿವಾರ (ಡಿ. 5) ಸಂಗ್ರಹಿಸಲಾಗಿದೆ.

ಅಂತರರಾಷ್ಟ್ರೀಯ ಡ್ರಗ್ಸ್ ಜಾಲದಲ್ಲಿ ಭಾಗಿಯಾಗಿದ್ದ ಆರೋಪದಡಿ ನಟಿಯರು, ಅವರ ಕೆಲ ಸ್ನೇಹಿತರು, ಉದ್ಯಮಿಗಳು ಹಾಗೂ ಇತರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಆರೋಪಿಗಳೆಲ್ಲರೂ ಜೈಲಿನಲ್ಲಿದ್ದು, ಅವರ ವಿರುದ್ಧ ಪೊಲೀಸರು ದೋಷಾರೋಪ ಪಟ್ಟಿ ಸಿದ್ಧಪಡಿಸುತ್ತಿದ್ದಾರೆ.

ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಸಿಸಿಬಿ ಪೊಲೀಸರು, ವಿಚಾರಣೆಗಾಗಿ ಕಸ್ಟಡಿಗೆ ಪಡೆದಿದ್ದರು. ಅದೇ ಅವಧಿಯಲ್ಲಿ ನಟಿಯರ ಕೂದಲು ಮಾದರಿ ಸಂಗ್ರಹಿಸಿದ್ದ ಪೊಲೀಸರು, ಹೈದರಾಬಾದ್ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು.

‘ಮಾದರಿ ಸಂಗ್ರಹಿಸಿದ್ದ ವಿಧಾನ ಅವೈಜ್ಞಾನಿಕ’ ಎಂದು ಹೇಳಿದ್ದ ಪ್ರಯೋಗಾಲಯದ ಸಿಬ್ಬಂದಿ, ಮಾದರಿಯನ್ನು ವಾಪಸು ಕಳುಹಿಸಿತ್ತು. ಅಷ್ಟರಲ್ಲಿ ನಟಿಯರನ್ನು ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿತ್ತು. ನಟಿಯರಿಂದ ಎರಡನೇ ಬಾರಿ ಕೂದಲು ಮಾದರಿ ಸಂಗ್ರಹಕ್ಕೆ ಕೋರಿ ಸಿಸಿಬಿ ಪೊಲೀಸರು, ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ನಟಿಯರು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.

ಅರ್ಜಿ ಪರಿಷ್ಕರಿಸಿದ್ದ ನ್ಯಾಯಾಲಯ, ಕೂದಲು ಮಾದರಿ ಸಂಗ್ರಹಕ್ಕೆ ಅನುಮತಿ ನೀಡಿ ಆದೇಶ ಹೊರಡಿಸಿತ್ತು.

ಜೈಲಿಗೆ ವೈದ್ಯರ ಸಮೇತ ಹೋಗಿದ್ದ ಪೊಲೀಸರು

‘ನಟಿಯರನ್ನು ಜೈಲಿನಿಂದ ಆಸ್ಪತ್ರೆಗೆ ಕರೆತಂದು ಕೂದಲು ಮಾದರಿ ಸಂಗ್ರಹಿಸಲು ಯೋಚಿಸಲಾಗಿತ್ತು. ಆದರೆ, ಭದ್ರತೆ ಕಾರಣದಿಂದ ಬೌರಿಂಗ್ ಆಸ್ಪತ್ರೆ ವೈದ್ಯರನ್ನೇ ಜೈಲಿಗೆ ಕರೆದೊಯ್ದು ಕೂದಲು ಮಾದರಿ ಸಂಗ್ರಹಿಸಲಾಯಿತು’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.

‘ಪ್ರಕರಣ ಸಂಬಂಧ ಸಾಕಷ್ಟು ಪುರಾವೆಗಳನ್ನು ಸಂಗ್ರಹಿಸಲಾಗುತ್ತಿದೆ. ಡ್ರಗ್ಸ್ ಸೇವನೆ ದೃಢಪಡಿಸುವುದಕ್ಕಾಗಿ ಕೂದಲು ಮಾದರಿಯನ್ನೂ ಸಂಗ್ರಹಿಸಲಾಗಿದೆ’ ಎಂದೂ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು