ಗುರುವಾರ , ಜೂನ್ 17, 2021
21 °C

ಅನುಮತಿ ಇಲ್ಲದೆ ಹೆಸರು ಬಳಕೆ:ಪ್ರಧಾನಿ ನಿಂದನೆ ಜಾಹೀರಾತಿಗೆ ದ್ವಾರಕನಾಥ್ ಸ್ಪಷ್ಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಪ್ರಜಾವಾಣಿ’ಯಲ್ಲಿ ಮೇ 9ರಂದು ಪ್ರಕಟವಾದ ಜಾಹೀರಾತಿನಲ್ಲಿ ನನ್ನ ಅನುಮತಿ ಇಲ್ಲದೆ ನನ್ನ ಹೆಸರು, ಭಾವಚಿತ್ರ ಹಾಗೂ ದೂರವಾಣಿ ಬಳಸಲಾಗಿದೆ’ ಎಂದು ಹಿರಿಯ ವಕೀಲ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್. ದ್ವಾರಕಾನಾಥ್ ಸ್ಪಷ್ಟಪಡಿಸಿದ್ದಾರೆ.

‘ಈ ಜಾಹೀರಾತನ್ನು ಕಂಡ ತಕ್ಷಣ ನಾನು ನನ್ನ ವಿರೋಧವನ್ನು ವ್ಯಕ್ತಪಡಿಸಿದ್ದೇನೆ. ‘ಪ್ರಜಾವಾಣಿ’ ಯನ್ನು ಸುಮಾರು ನಲವತ್ತು ವರ್ಷಗಳಿಂದ ಓದುತ್ತಾ, ಪತ್ರಿಕೆಗೆ ಅನೇಕ ಸಲ ಬರೆಯುತ್ತಾ ಬಂದಿರುತ್ತೇನೆ. ಆದರೆ ಯಾರೋ ನನ್ನ ಫೋಟೊ ಮತ್ತು ದೂರವಾಣಿ ಸಂಖ್ಯೆ ಕೊಟ್ಟು ನನ್ನ ಅರಿವಿಗೆ ಅಥವಾ ಗಮನಕ್ಕೆ ಬಾರದ ವಿಷಯಗಳನ್ನು ಅದರಲ್ಲಿ ಬರೆದು ಜಾಹೀರಾತು ಎಂದು ಕೊಟ್ಟರೆ, ಕನಿಷ್ಠ ನನ್ನ ಗಮನಕ್ಕೆ ತರಬೇಕಾಗಿತ್ತು’ ಎಂದೂ ಅವರು ಹೇಳಿದ್ದಾರೆ. 

‘ಸಾರ್ವಜನಿಕ ಹಿತದೃಷ್ಟಿಯಿಂದ ನನ್ನ ಭಿನ್ನಾಭಿಪ್ರಾಯವನ್ನು ಬರಹ, ಭಾಷಣ, ಮಾತು, ಚರ್ಚೆಯ ಮೂಲಕ ವ್ಯಕ್ತಪಡಿಸಿರಬಹುದು. ಆದರೆ ನಾನು ಎಂದೂ ಯಾರನ್ನೂ, ಎಂಥದ್ದೇ ಸಂದರ್ಭದಲ್ಲೂ ವೈಯಕ್ತಿಕವಾಗಿ, ಏಕವಚನದಲ್ಲಿ, ಅವಾಚ್ಯ ಶಬ್ದಗಳಿಂದ ನಿಂದಿಸಿಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತೇನೆ’ ಎಂದೂ ಅವರು ಹೇಳಿದ್ದಾರೆ.

ಬಿಜೆಪಿ ಖಂಡನೆ: ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿರುದ್ಧ ‘ಪ್ರಜಾವಾಣಿ’ಯಲ್ಲಿ ಮೇ 9ರಂದು ‘ಕರ್ನಾಟಕ ಜನಶಕ್ತಿ ಬೆಂಗಳೂರು’ ಹೆಸರಿನಲ್ಲಿ ಪ್ರಕಟವಾಗಿದ್ದ ಜಾಹೀರಾತು ನಿಂದನಾತ್ಮಕ ಮತ್ತು ಅಸಂಬದ್ಧ ಎಂದು ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ.

‘ನಮ್ಮ ಸಂವಿಧಾನವೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎಲ್ಲರಿಗೂ ನೀಡಿದೆ. ಅದನ್ನು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸುವುದು ನಮ್ಮೆಲ್ಲರ ಕರ್ತವ್ಯ. ಆದರೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಅಸಭ್ಯ ಭಾಷೆಯ ಬಳಕೆ ಮತ್ತು ತೀರಾ ಕನಿಷ್ಠ ಮಟ್ಟದ ಟೀಕೆಗಳು ಅನಾಗರಿಕ ಮತ್ತು ಖಂಡನೀಯ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹೇಳಿದ್ದಾರೆ.

‘ಅತ್ಯಂತ ಕನಿಷ್ಠ ಮಟ್ಟದ ಮಾತುಗಳಲ್ಲಿ ದೇಶದ ಪ್ರಧಾನಿಯನ್ನು, ಮುಖ್ಯಮಂತ್ರಿಯನ್ನು ಮತ್ತು ರಾಜಕೀಯ ಪಕ್ಷಗಳನ್ನು ಟೀಕಿಸಲಾಗಿದೆ. ಈ ಜಾಹೀರಾತಿನಲ್ಲಿ ಪ್ರಕಟಿಸಲಾಗಿರುವ ಭಾಷೆ ಮತ್ತು ತಪ್ಪು ಮಾಹಿತಿಯನ್ನು ತೀವ್ರವಾಗಿ ಆಕ್ಷೇಪಿಸುತ್ತೇನೆ’ ಎಂದೂ ಅವರು ಹೇಳಿದ್ದಾರೆ.

‘ಈ ಜಾಹೀರಾತಿನ ಮೂಲಕ ರಾಜ್ಯದಲ್ಲಿ ಆತಂಕಕಾರಿ ವಾತಾವರಣ ನಿರ್ಮಿಸಲು ನಡೆಸಿದ ಷಡ್ಯಂತ್ರವನ್ನು ಕಟು ಶಬ್ದಗಳಿಂದ ತೀವ್ರವಾಗಿ ಖಂಡಿಸುತ್ತೇನೆ. ಈ ರೀತಿಯ ಅವಹೇಳನಕಾರಿ ಮತ್ತು ಪ್ರಚೋದನಕಾರಿ ಜಾಹೀರಾತುಗಳನ್ನು ಪ್ರಕಟಿಸುವ ಮೊದಲು ಪರಿಶೀಲನೆ ಮಾಡಬೇಕಿತ್ತು’ ಎಂದು ಬಿಜೆಪಿ ಎಸ್‍ಸಿ ಮೋರ್ಚಾದ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

‘ಕರ್ನಾಟಕ ಜನಶಕ್ತಿ ಬೆಂಗಳೂರು ಸಂಘಟನೆಯ ವ್ಯಕ್ತಿಗಳು ಬಳಸಿರುವ ಭಾಷೆ ಯಾವುದೇ ಪತ್ರಿಕೆಯಲ್ಲಿ ಪ್ರಕಟವಾಗಲು ಯೋಗ್ಯವಾದುದಲ್ಲ. ಅದನ್ನು ಪ್ರಕಟಣೆಗೆ ಕಳುಹಿಸಿದ ಸಂಘಟನೆ ಮತ್ತು ಇತರರ ವಿರುದ್ಧ ಕೋರ್ಟ್‍ನಲ್ಲಿ ಮೊಕದ್ದಮೆ ಹೂಡಲಾಗುವುದು. ಈ ಸಂಘಟನೆಯ ಮತ್ತು ಮುಖಂಡರ ಕ್ರಮ ಅಕ್ಷಮ್ಯ’ ಎಂದೂ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಕೋವಿಡ್‌ ವಿಶ್ವದಾದ್ಯಂತ ಹಬ್ಬಿದೆ. ಆದರೆ, ಅದನ್ನು ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ತಂದರು ಎಂಬ ಟೀಕೆ ಅತ್ಯಂತ ಖಂಡನಾರ್ಹ. ಪ್ರಧಾನಿಯವರ ದೂರದೃಷ್ಟಿ ಮತ್ತು ಸಕಾಲಿಕ ಕ್ರಮದಿಂದಾಗಿ 2020ರಲ್ಲಿ ಕೊರೊನಾವನ್ನು ನಿಗ್ರಹಿಸಲು ಮತ್ತು ಮರಣ ಪ್ರಮಾಣ ಅತ್ಯಂತ ಕನಿಷ್ಠ ಇರುವಂತೆ ನೋಡಿಕೊಳ್ಳಲು ಸಾಧ್ಯವಾಗಿದೆ’ ಎಂದೂ ಅವರು ಹೇಳಿದ್ದಾರೆ.

‘2021ರಲ್ಲೂ ದೇಶದಲ್ಲಿ ಹರಡುತ್ತಿರುವ ಕೊರೊನಾ ನಿಗ್ರಹ ಮಾಡುವಲ್ಲಿ ಕೇಂದ್ರ ಮತ್ತು ರಾಜ್ಯದ ಆಡಳಿತಗಳು ಯಶಸ್ವಿ ಆಗಲಿವೆ ಎಂಬ ವಿಶ್ವಾಸ ಜನರಲ್ಲಿದೆ. ಈ ವಿಚಾರದ ಅರಿವಿದ್ದರೂ “ಪ್ರಧಾನಿ ಕೊಲೆಗಡುಕ” ಎಂದು ಅತ್ಯಂತ ಕಳಪೆ ಮಟ್ಟದ ಟೀಕೆ ಮಾಡಿದ್ದು ಸರಿಯಲ್ಲ’ ಎಂದೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು