ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧಾರ್ ಅಕ್ರಮ: ತನಿಖೆಗೆ ಹೈಕೋರ್ಟ್ ಅಸ್ತು

ರಾಷ್ಟ್ರೀಯ ಭದ್ರತೆಗೆ ಅಪಾಯ– ನ್ಯಾಯಪೀಠದ ಆತಂಕ
Last Updated 6 ಅಕ್ಟೋಬರ್ 2021, 19:57 IST
ಅಕ್ಷರ ಗಾತ್ರ

ಬೆಂಗಳೂರು: ’ಆಧಾರ್‌ ಗುರುತಿನ ಚೀಟಿ ನೋಂದಣಿ ಪ್ರಕ್ರಿಯೆಯಲ್ಲಿ ನಡೆಯುವ ಅಕ್ರಮಗಳುರಾಷ್ಟ್ರೀಯ ಭದ್ರತೆಗೆ ಒದಗುವ ಅಪಾಯ‘ ಎಂದು ಆತಂಕ ವ್ಯಕ್ತಪಡಿಸಿರುವ ಹೈಕೋರ್ಟ್‌, ’ಇಂತಹ ಕೃತ್ಯಗಳ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಚ್ಚಿನ ಜಾಗ್ರತೆ ವಹಿಸಬೇಕು‘ ಎಂದು ಎಚ್ಚರಿಸಿದೆ.

ಆಧಾರ್ ಕಿಟ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಜೆ.ಪಿ. ನಗರದ ಮೆಸರ್ಸ್‌ ‘ಎಡುರೇಸ್‌‘ ಕಂಪನಿ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ಕುರಿತ ಸಮಗ್ರ ತನಿಖೆಗೆನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಅಸ್ತು ಎಂದಿದೆ. ಈ ಸಂಬಂಧ 2017ರಲ್ಲಿ ತನಿಖೆಗೆ ನೀಡಲಾಗಿದ್ದ ಮಧ್ಯಂತರ ತಡೆ ತೆರವುಗೊಳಿಸಿದೆ.

’ಕಿಟ್‌ಗಳಿಗೆ ₹ 40 ಸಾವಿರದಿಂದ ₹ 2 ಲಕ್ಷದವರೆಗೆ ಪಡೆಯಲಾಗಿದೆ ಮತ್ತು ಪ್ರತಿ ಆಧಾರ್ ಕಾರ್ಡ್‌ಗೆ ₹100ರಿಂದ ₹ 200 ಪಡೆಯಲಾಗಿದೆ ಎಂಬ ಆರೋಪವಿದೆ. ಆಧಾರ್ ಪ್ರಾಧಿಕಾರದ ಅಧಿಕಾರಿಗಳೇ ಈ ಬಗ್ಗೆ ಪರಿಶೀಲನೆ ನಡೆಸಿ, ದೂರು ದಾಖಲಿಸಿದ್ದಾರೆ. ಆದ್ದರಿಂದ, ಅರ್ಜಿ
ದಾರರು ಈ ಪ್ರಕರಣದಲ್ಲಿ ನಿರಪರಾಧಿ ಎಂದು ಸಾಬೀತುಪಡಿಸಲು ವಿಚಾರಣಾ ನ್ಯಾಯಾಲಯದ ವಿಚಾರಣೆ ಎದುರಿಸ
ಲೇಬೇಕಿದೆ‘ ಎಂದು ಆದೇಶಿಸಿದೆ.

ಕೇಂದ್ರ ಸರ್ಕಾರ ಪರ ವಾದ ಮಂಡಿಸಿದ್ದ ಸಹಾಯಕ ಸಾಲಿಸಿಟರ್ ಜನರಲ್ ಶಾಂತಿಭೂಷಣ್ ಮತ್ತು ರಾಜ್ಯ ಪಬ್ಲಿಕ್‌ ಪ್ರಾಸಿಕ್ಯೂಟರ್ ಬಿ.ಜಿ.ನಮಿತಾ ಕಲ್ಲೇಶ್‌, ಈ ಪ್ರಕರಣದಲ್ಲಿಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ (ಯುಐಡಿಎಐ) ಅಧಿಕಾರಿಗಳು ‘ನಮ್ಮ ಕೇಂದ್ರ’ಕ್ಕೆ ನಾಗರಿಕರ ಸೋಗಿನಲ್ಲಿ ಭೇಟಿ ನೀಡಿ, ಪರಿಶೀಲಿಸಿದಾಗ ಅಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದ್ದುದು ಬೆಳಕಿಗೆ ಬಂದಿದೆ ಎಂಬ ಅಂಶವನ್ನು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು.

’ಈ ಪ್ರಕರಣದಲ್ಲಿ ನೆರೆ ರಾಷ್ಟ್ರಗಳ ಪ್ರಜೆಗಳಿಗೂ ಮನಬಂದಂತೆ ಆಧಾರ್ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಆದ್ದರಿಂದ, ಅರ್ಜಿದಾರರ ವಿರುದ್ಧದ ಆರೋಪಗಳ ಕುರಿತು ಸಮಗ್ರ ವಿಚಾರಣೆ ನಡೆಯಬೇಕಿದ್ದು, ಎಫ್‌ಐಆರ್‌ ರದ್ದುಪಡಿಸದೆ ತನಿಖೆ ನಡೆಯಲು ಆದೇಶಿಸಬೇಕು‘ ಎಂದು ಕೋರಿದ್ದರು.

ಪ್ರಕರಣವೇನು?: ಯುಐಡಿಎಐ ಜೊತೆ ಮುಂಬೈ ಮೂಲದ ಯುಟಿಲಿಟಿ ಫಾರ್ಮ್ಸ್ ಪ್ರೈವೇಟ್ ಲಿಮಿಟೆಡ್‌ ಕರ್ನಾಟಕ
ದಲ್ಲಿ ಅಧಾರ್ ನೋಂದಣಿ ಪ್ರಕ್ರಿಯೆ ಕೈಗೊಳ್ಳಲು ಅನುಮತಿ ಪಡೆದಿತ್ತು.

ಅಂತೆಯೇ ಯುಟಿಲಿಟಿ ಸಂಸ್ಥೆಯು, ಸಿಬ್ಬಂದಿಯನ್ನು ಪಡೆಯುವ ನಿಟ್ಟಿನಲ್ಲಿ ಎಡುರೇಸ್ ಕಂಪೆನಿಗೆ2015ರ ಏಪ್ರಿಲ್‌ 15ರಂದು ಉಪ ಗುತ್ತಿಗೆ ನೀಡಿತ್ತು.ಇದರ ಅನುಸಾರ ಎಡುರೇಸ್‌ ಜೆ.ಪಿ. ನಗರದಲ್ಲಿ ‘ನಮ್ಮ ಕೇಂದ್ರ’ ಹೆಸರಿನಲ್ಲಿ ಕೇಂದ್ರವೊಂದನ್ನು ಆರಂಭಿಸಿ ಅಲ್ಲಿ ಅಕ್ರಮವಾಗಿ ಆಧಾರ್ ಕಿಟ್‌ಗಳನ್ನು ಹೊರ ರಾಜ್ಯಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು.

ಈ ಬಗ್ಗೆ ಪರಿಶೀಲನೆ ನಡೆಸಿದ್ದ ಯುಐಡಿಎಐ ಅಧಿಕಾರಿಗಳು 2017ರ ಏಪ್ರಿಲ್‌ 6ರಂದು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದರು.

ಎಡುರೇಸ್‌ ಕಂಪೆನಿ ಸಿಇಒ ಆರ್‌.ಪಿ.ನರೇಶ್ ಕುಮಾರ್ ಹಾಗೂ ಮುಂಬೈನ ’ಯುಟಿಲಿಟಿ’ ಸಂಸ್ಥೆಯ ಪ್ರತಿನಿಧಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 465 (ಫೋರ್ಜರಿ), 468 (ವಂಚನೆ ಉದ್ದೇಶದಿಂದ ಫೋರ್ಜರಿ), 471 (ವಂಚನೆಗಾಗಿ ದಾಖಲೆಗಳ ಬಳಕೆ), 420 (ವಂಚನೆ), 120–ಬಿ (ಅಪರಾಧಿಕ ಒಳಸಂಚು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT