ಬುಧವಾರ, ಆಗಸ್ಟ್ 10, 2022
23 °C
ಕೋವಿಡ್ ಎರಡನೇ ಅಲೆಯ ಸಾಧ್ಯತೆ *ಕೇಂದ್ರ ಸರ್ಕಾರಕ್ಕೆ ಆರೋಗ್ಯ ಇಲಾಖೆ ಶಿಫಾರಸು

ಏರೋ ಇಂಡಿಯಾ: ಸೀಮಿತ ಜನರಿಗಷ್ಟೇ ಪ್ರವೇಶ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್ ಎರಡನೇ ಅಲೆಯ ಆತಂಕದ ಕಾರಣ ಆರೋಗ್ಯ ಇಲಾಖೆಯು ಏರೋ ಇಂಡಿಯಾ–2021 ಕಾರ್ಯಕ್ರಮವನ್ನು ‘ಹೈಬ್ರಿಡ್’ ಮಾದರಿಯಲ್ಲಿ (ಸೀಮಿತ ಜನರಿಗೆ ಅವಕಾಶ) ನಡೆಸಲು ಕೇಂದ್ರ ರಕ್ಷಣಾ ಇಲಾಖೆಗೆ ಶಿಫಾರಸು ಮಾಡಿದೆ.

ಕೋವಿಡ್‌ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಮುಂದಿನ ಫೆಬ್ರುವರಿ 3 ರಿಂದ 7ರವರೆಗೆ ಯಲಹಂಕದ ವಾಯುನೆಲೆಯಲ್ಲಿ 13ನೇ ಅಂತರರಾಷ್ಟ್ರೀಯ ಏರೋ ಇಂಡಿಯಾ–2021 ಕಾರ್ಯಕ್ರಮವನ್ನು ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆದರೆ, ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆಯಿದ್ದು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಜನರು ಸೇರದಂತೆ ನೋಡಿಕೊಳ್ಳಬೇಕು ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯು ಸರ್ಕಾರಕ್ಕೆ ಸೂಚಿಸಿದೆ. ಹೀಗಾಗಿ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಅವರು ರಕ್ಷಣಾ ಇಲಾಖೆಗೆ ಪತ್ರ ಬರೆದಿದ್ದಾರೆ. 

ಐದು ದಿನಗಳು ನಡೆಯುವ ಏರೋ ಇಂಡಿಯಾ ಕಾರ್ಯಕ್ರಮಕ್ಕೆ ಕೋವಿಡ್ ಕಾರಣ ಕೆಲವರಿಗೆ ಮಾತ್ರ ಪ್ರವೇಶ ನೀಡಬೇಕು. ಜನರಿಗೆ ವರ್ಚುವಲ್ ವೇದಿಕೆಯಲ್ಲಿ ವೀಕ್ಷಣೆಗೆ ಅವಕಾಶ ಮಾಡಿಕೊಡಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ. ಆದರೆ, ಈ ಬಗ್ಗೆ ಜನವರಿ ಮೊದಲ ವಾರದಲ್ಲಿ ಕೋವಿಡ್ ಪ್ರಕರಣಗಳನ್ನು ಆಧರಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎನ್ನುವುದು ಇಲಾಖೆಯ ಮೂಲಗಳು ತಿಳಿಸಿವೆ.

ತಜ್ಞರ ಜತೆಗೆ ಸಭೆ: ‘ಕೋವಿಡ್ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಈ ಬಗ್ಗೆ ಸಭೆ ನಡೆಸಿ, ಎಷ್ಟು ಮಂದಿಗೆ ಪ್ರವೇಶ ನೀಡಬಹುದು ಎಂಬ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಎಲ್ಲರಿಗೂ ಅವಕಾಶ ನೀಡಲು ಸಾಧ್ಯವಾಗದಿದ್ದಲ್ಲಿ ಪಾಸ್‌ಗಳ ವಿತರಣೆ ವೇಳೆಯೇ ವರ್ಚುವಲ್ ಎಂದು ನಮೂದಿಸಲಾಗುತ್ತದೆ. ಐದು ವಿಭಾಗಗಳಲ್ಲಿ ಪಾಸ್‌ಗಳನ್ನು ನೀಡಿದಲ್ಲಿ ಮೊದಲೆರಡು ವಿಭಾಗಗಳ ಪಾಸ್‌ ಪಡೆದವರಿಗೆ ಮಾತ್ರ ಪ್ರವೇಶ ನೀಡಬೇಕಾಗುತ್ತದೆ. ಉಳಿದ ವಿಭಾಗದ ಪಾಸ್ ಪಡೆದವರು ವರ್ಚುವಲ್ ಮಾದರಿಯಲ್ಲಿ ವೀಕ್ಷಿಸಬೇಕಾಗುತ್ತದೆ’ ಎಂದು ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು