ಗುರುವಾರ , ಆಗಸ್ಟ್ 5, 2021
22 °C
ಪಾವಿನಕುರ್ವಾದಲ್ಲಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ವಿರೋಧ

ಶರಾವತಿ ದಂಡೆಯಲ್ಲಿ ಬಂದರು ‘ಗುಮ್ಮ’

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಹೊನ್ನಾವರ ತಾಲ್ಲೂಕಿನ ಪಾವಿನಕುರ್ವಾದಲ್ಲಿ ಖಾಸಗಿ ಬಂದರು ನಿರ್ಮಾಣಕ್ಕೆ ನಡೆಯುತ್ತಿರುವ ಸಿದ್ಧತೆಗಳು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಇಲ್ಲಿ ಬಂದರು ನಿರ್ಮಾಣದಿಂದ ಮೀನುಗಾರರಿಗೆ ಮತ್ತು ಕಡಲಾಮೆಗಳ ಸಂತತಿಗೆ ಧಕ್ಕೆಯಾಗಲಿದೆ ಎಂಬ ಆತಂಕ ವ್ಯಕ್ತವಾಗಿದೆ.

ಶರಾವತಿ ನದಿ ಅರಬ್ಬಿ ಸಮುದ್ರ ಸೇರುವ ಅಳಿವೆಯ ಬಳಿ ಬಂದರು ನಿರ್ಮಿಸಲು ಉದ್ದೇಶಿಸಲಾಗಿದೆ. ಸುಮಾರು ₹ 600 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರವು 93 ಎಕರೆ ಜಮೀನು ಮಂಜೂರು ಮಾಡಲು ಮುಂದಾಗಿದೆ ಎಂಬುದೂ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಕಾಸರಕೋಡಿನಿಂದ ಟೊಂಕಾ ಮೂಲಕ ವಿಶಾಲವಾದ ರಸ್ತೆ ನಿರ್ಮಾಣಕ್ಕೆ ಜೂನ್ 26ರಂದು ಚಾಲನೆ ನೀಡಲು ಹೊನ್ನಾವರ ಪೋರ್ಟ್ ಕಂಪನಿ ಮುಂದಾಗಿತ್ತು. ಜೆ.ಸಿ.ಬಿ ಯಂತ್ರಗಳು ಕಡಲತೀರದಲ್ಲಿದ್ದ ಮೀನುಗಾರರ ಶೆಡ್‌ಗಳನ್ನು ತೆರವು ಮಾಡಲು ಶುರು ಮಾಡಿದ್ದಕ್ಕೆ ಸ್ಥಳೀಯರಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು. ಬಳಿಕ ಕಾಮಗಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಯಿತು. ಇದಕ್ಕೂ ಮೊದಲೇ ಬಂದರು ಯೋಜನೆಯನ್ನು ವಿರೋಧಿಸಿ ಒಂದು ತಿಂಗಳಿಗೂ ಅಧಿಕ ಕಾಲ ನಿರಂತರವಾಗಿ ಧರಣಿಗಳು ನಡೆದಿದ್ದವು.

ಈ ನಡುವೆ, ಉದ್ದೇಶಿತ ಯೋಜನಾ ಪ್ರದೇಶದಲ್ಲಿ ‘ಆಲಿವ್ ರಿಡ್ಲೆ’ ಆಮೆಗಳು ಮೊಟ್ಟೆಯಿಡುತ್ತವೆ. ಕಾಮಗಾರಿಯಿಂದ ಅವುಗಳಿಗೆ ತೊಂದರೆಯಾಗಲಿದೆ ಎಂದು ಹೊನ್ನಾವರದ ಹಸಿಮೀನು ವ್ಯಾಪಾರಿಗಳ ಸಂಘವು ಹೈಕೋರ್ಟ್ ಮೊರೆ ಹೋಗಿತ್ತು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು, ಯೋಜನೆ ಜಾರಿಯಾಗುವ ಯಾವುದೇ ಭಾಗ ಆಮೆಗಳ ವಾಸಸ್ಥಾನವೇ ಎಂಬುದನ್ನು ಗುರುತಿಸಬೇಕು. ಈ ಬಗ್ಗೆ ರಾಷ್ಟ್ರೀಯ ಕಡಲತೀರದ ಸುಸ್ಥಿರ ನಿರ್ವಹಣೆ ಕೇಂದ್ರದ (ಎನ್‌.ಸಿ.ಎಸ್‌.ಸಿ.ಎಂ) ಮೂಲಕ ಸಮೀಕ್ಷೆ ಮಾಡಿಸಲು ಸೂಚಿಸಿತ್ತು. ಈ ಕಾರ್ಯವು ಶೀಘ್ರವೇ ಆರಂಭವಾಗುವ ನಿರೀಕ್ಷೆಯಿದ್ದು, ಅಗತ್ಯ ಸಹಕಾರ ನೀಡಲಾಗುವುದು ಎನ್ನುತ್ತಾರೆ ಸಂಘದ ಪ್ರಮುಖರಾದ ಗಣಪತಿ ಈಶ್ವರ ತಾಂಡೇಲ್.

ಈ ಭಾಗದ ಕಡಲಜೀವ ವಿಜ್ಞಾನಿ ಡಾ.ಪ್ರಕಾಶ ಮೇಸ್ತ ಅವರೂ ಇಲ್ಲಿ ಆಮೆಗಳಿರುವುದನ್ನು ಪ್ರತಿಪಾದಿಸುತ್ತಾರೆ. ‘ಅವುಗಳು ದಡಕ್ಕೆ ತಡರಾತ್ರಿ ಬರುತ್ತವೆ. ಅತ್ಯಂತ ಸೂಕ್ಷ್ಮವಾಗಿ ಮರಳಿನಲ್ಲಿ ಮೊಟ್ಟೆಯಿಟ್ಟು ಪುನಃ ಸಮುದ್ರಕ್ಕೆ ಮರಳುತ್ತವೆ. ಸ್ಥಳೀಯ ಮೀನುಗಾರರು, ವಿವಿಧ ಸಂಘಟನೆಯವರು ಈ ಹಿಂದೆ ಗಮನಿಸಿದ್ದಾರೆ. ಇಲ್ಲಿ ಮಾನವ ಸಂಚಾರ ಕಡಿಮೆ ಇರುವ ಕಾರಣ ಅವುಗಳಿಗೆ ಮೊಟ್ಟೆಯಿಡಲು ಅತ್ಯಂತ ಸೂಕ್ತ ಪ್ರದೇಶವಾಗಿದೆ’ ಎಂದು ಅವರು ಹೇಳುತ್ತಾರೆ.

ಸದ್ಯಕ್ಕೆ ಕಾಮಗಾರಿ ಸ್ಥಗಿತವಾಗಿದ್ದು, ಸ್ಥಳೀಯರು ಪ್ರತಿಭಟನೆ, ಧರಣಿಗಳನ್ನು ಹಿಂಪಡೆದಿದ್ದಾರೆ. ಸರ್ಕಾರದ ಮುಂದಿನ ನಡೆಯನ್ನು ಆಧರಿಸಿ ಹೋರಾಟದ ರೂಪರೇಷೆ ಹಮ್ಮಿಕೊಳ್ಳುವುದಾಗಿ ಹೋರಾಟಗಾರರು ತಿಳಿಸಿದ್ದಾರೆ.

ಸರ್ವೆ ನಂಬರ್ ಬದಲು?

ಯೋಜನೆ ಜಾರಿಯಾಗುವ ಸ್ಥಳದ ಸರ್ವೆ ನಂಬರ್ ಬದಲಾಗಿದೆ ಎಂಬ ಆರೋಪವಿದೆ. ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿಗೆ ಹೈಕೋರ್ಟ್ ಪೀಠ ಸೂಚಿಸಿತ್ತು. ಈ ಬಗ್ಗೆ ‘‍ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ‘ನ್ಯಾಯಾಲಯದ ಆದೇಶದ ಮೂಲ ಪ್ರತಿ ಕೈಸೇರಿದ ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲಿಸಿ ವರದಿ ಸಲ್ಲಿಸಲಾಗುವುದು’ ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು