ಭಾನುವಾರ, ಜೂನ್ 26, 2022
22 °C
ಜಗಳೂರು: ಕೆರೆ ತುಂಬಿಸುವ ಯೋಜನೆಗೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ

ಮಧ್ಯ ಕರ್ನಾಟಕದಲ್ಲಿ ಕೃಷಿ, ಕೈಗಾರಿಕೆ ಕ್ರಾಂತಿ: ಸಿಎಂ ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜಗಳೂರು: ‘ನೀರಾವರಿ, ಕೃಷಿ ಹಾಗೂ ಕೈಗಾರಿಕೆ ಕ್ರಾಂತಿ ಮಾಡುವ ಮೂಲಕ ಮಧ್ಯ ಕರ್ನಾಟಕದ ಭವ್ಯ ಭವಿಷ್ಯವನ್ನು ನಮ್ಮ ಸರ್ಕಾರ ಬರೆಯುತ್ತಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಭದ್ರಾ ಮೇಲ್ದಂಡೆ ಯೋಜನೆಯಿಂದ ಜಗಳೂರಿನ 9 ಕೆರೆ ತುಂಬಿಸುವ ಹಾಗೂ 18,423 ಹೆಕ್ಟೇರ್‌ ಪ್ರದೇಶಕ್ಕೆ ಹನಿ ನೀರಾವರಿ ಸೌಲಭ್ಯ ಕಲ್ಪಿಸುವ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ಇದುವರೆಗೂ ಮಧ್ಯ ಕರ್ನಾಟಕ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಬರೀ ಘೋಷಣೆಗಳನ್ನು ಮಾಡಲಾಗುತ್ತಿತ್ತು. ಯಾವ ಕೆಲಸವನ್ನೂ ಆರಂಭಿಸುತ್ತಿರಲಿಲ್ಲ. ಪ್ರಗತಿಯಲ್ಲಿದ್ದ ಯೋಜನೆಗಳನ್ನು ಪೂರ್ಣಗೊಳಿಸುವ ತಾಕತ್ತು ಹಿಂದಿನ ಸರ್ಕಾರಗಳಿಗೆ ಇರಲಿಲ್ಲ. ವೋಟ್‌ಬ್ಯಾಂಕ್‌ ರಾಜಕಾರಣ ಮಾಡುತ್ತಿದ್ದವು. ವಿರೋಧ ಪಕ್ಷದವರು ಈಗ ಭದ್ರಾ ಮೇಲ್ದಂಡೆ ಯೋಜನೆಯನ್ನು ನಾವು ಮಾಡಿದ್ದೇವೆ ಎಂದು ಸುಳ್ಳಿನ ಕಂತೆಯನ್ನು ಹೇಳುತ್ತಿದ್ದಾರೆ’ ಎಂದು ಆಕ್ಷೇಪಿಸಿದರು. 

‘ನೀರಾವರಿ, ಶಿಕ್ಷಣ, ಆರೋಗ್ಯ ಹಾಗೂ ಕೈಗಾರಿಕಾ ವಲಯಗಳ ಅಭಿವೃದ್ಧಿಗೆ ನಮ್ಮ ಸರ್ಕಾರ ವಿಶೇಷ ಯೋಜನೆಗಳನ್ನು ರೂಪಿಸುತ್ತಿದೆ. ನಮ್ಮ ಸರ್ಕಾರ ಮಧ್ಯ ಕರ್ನಾಟಕದ ಬಗ್ಗೆ ವಿಶೇಷ ಕಳಕಳಿ ವಹಿಸುತ್ತಿದೆ’ ಎಂದರು.

‘ರೈತರು ಬೆಳೆದ ಉತ್ಪನ್ನಗಳಿಗೆ ಯೋಗ್ಯ ಬೆಲೆ ಸಿಗಬೇಕು ಹಾಗೂ ಈ ಭಾಗದ ಜನರ ಕೈಗೆ ಕೆಲಸ
ಸಿಗಬೇಕು ಎಂದು ನೀರಾವರಿ ಹಾಗೂ ಕೈಗಾರಿಕೆಗೆ ಒತ್ತು ಕೊಟ್ಟಿದ್ದೇವೆ. ಮುಂಬೈ–ಚೆನ್ನೈ ಕೈಗಾರಿಕಾ ಕಾರಿಡಾರ್ ಯೋಜನೆ ಮೂಲಕ ತುಮಕೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಧಾರವಾಡ ಜಿಲ್ಲೆಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಮಧ್ಯ ಕರ್ನಾಟಕಕ್ಕೆ ಭವ್ಯ ಭವಿಷ್ಯ ಕಲ್ಪಿಸಿಕೊತ್ತೇವೆ’ ಎಂದು ಮುಖ್ಯಮಂತ್ರಿ ಹೇಳಿದರು.

‘ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮಾಡಲು ಪ್ರಧಾನಿ ನರೇಂದ್ರ ಮೋದಿ ತೀರ್ಮಾನಿಸಿದ್ದಾರೆ. ಮುಂಬರುವ ತಿಂಗಳಲ್ಲಿ ಕೇಂದ್ರ ಸಚಿವ ಸಂಪುಟದಲ್ಲಿ ಇದಕ್ಕೆ ಅನುಮೋದನೆ ಸಿಗಲಿದೆ. ₹ 16 ಸಾವಿರ ಕೋಟಿ ಅನುದಾನ ಸಿಗಲಿದೆ.

ಚಿತ್ರದುರ್ಗ ಹಾಗೂತುಮಕೂರು ಜಿಲ್ಲೆಗಳ 337 ಕೆರೆ ತುಂಬಿಸುವ ಯೋಜನೆಯನ್ನು
ಸಂಪೂರ್ಣಗೊಳಿಸುವ ಶಕ್ತಿಯನ್ನು ಮೋದಿ ನೀಡಲಿದ್ದಾರೆ. ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ಆರಂಭಿಸಿದ್ದ ಭದ್ರಾ ಮೇಲ್ದಂಡೆ ಯೋಜನೆಯನ್ನು ಪ್ರಧಾನಿ ಮೋದಿ ಪೂರ್ಣಗೊಳಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು