ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಐಸಿಸಿ‌ ಪುನರ್‌ರಚನೆ: ಮೊಯ್ಲಿಗೆ ಹಿನ್ನಡೆ, ಬಡ್ತಿ ಪಡೆದ ಕೃಷ್ಣ ಬೈರೇಗೌಡ

ಎಐಸಿಸಿ‌ ಪುನರ್‌ರಚನೆ: ಮೂಲ ಕಾಂಗ್ರೆಸ್ಸಿಗರಿಗೆ ಮಣೆ l ಹೊಸ ತಲೆಮಾರಿಗೆ ಆದ್ಯತೆ
Last Updated 12 ಸೆಪ್ಟೆಂಬರ್ 2020, 19:31 IST
ಅಕ್ಷರ ಗಾತ್ರ

ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಪುನರಚನೆ ವೇಳೆ ಕರ್ನಾಟಕಕ್ಕೆ ಪ್ರಮುಖ ಪಾಲು ಸಿಕ್ಕಿದೆ. 2–3 ದಶಕಗಳಿಂದ ಕಾಂಗ್ರೆಸ್ ಪಡಸಾಲೆಯಲ್ಲಿ ಹೊಕ್ಕುಬಳಕೆ ಮಾಡಿಕೊಂಡೇ ತಮ್ಮ ಪ್ರಭಾವಳಿ ಇಟ್ಟುಕೊಂಡಿದ್ದ ರಾಜ್ಯದ ಹಿರಿ ತಲೆಗಳನ್ನು ಹೊರಗೆ ಕಳುಹಿಸ ಲಾಗಿದ್ದು, ಹೊಸ ತಲೆಮಾರನ್ನು ರಾಷ್ಟ್ರಮಟ್ಟಕ್ಕೆ ಕರೆದೊಯ್ಯುವತ್ತ ಆ ಪಕ್ಷದ ಹೈಕಮಾಂಡ್ ಹೆಜ್ಜೆ ಇಟ್ಟಿದೆ.

ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್. ಮುನಿಯಪ್ಪ, ಎಚ್.ಕೆ. ಪಾಟೀಲರಂತಹ ಹಿರೀಕರಿಗೆ ಆದ್ಯತೆ ಮೇರೆಗೆ ಜವಾಬ್ದಾರಿ ನೀಡಲಾಗಿದ್ದರೆ, ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ಬಿ.ವಿ. ಶ್ರೀನಿವಾಸ್‌ ಪಕ್ಷದ ಸಂಘಟನೆಯಲ್ಲಿ ಮಹತ್ವದ ಸ್ಥಾನ ಪಡೆದಿರುವುದು ಈ ಪುನರ್‌ರಚನೆಯ ವಿಶೇಷ.

ಎಐಸಿಸಿಯ ಬೇರೆ ಬೇರೆ ಹುದ್ದೆಗಳಲ್ಲಿ ಹಿಂದೆ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದವರ ಪೈಕಿ ಜನತಾ ಪರಿವಾರದಿಂದ ಕಾಂಗ್ರೆಸ್‌ಗೆ ಬಂದವರಿಗೆ ಪ್ರಾತಿನಿಧ್ಯ ಸಿಕ್ಕಿತ್ತು. ಇತ್ತೀಚಿನ ವರ್ಷಗಳಲ್ಲಿ ಮೂಲ ಕಾಂಗ್ರೆಸಿಗರಿಗೆ ಈ ಬಾರಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಹೈಕಮಾಂಡ್ ಮಣೆ ಹಾಕಿದೆ.

ಈಗ ನೇಮಕವಾಗಿರುವವರ ಪೈಕಿ ಕೃಷ್ಣ ಬೈರೇಗೌಡ ಮಾತ್ರ ಅಲ್ಪಾವಧಿ ಬೇರೆ ಪಕ್ಷದಲ್ಲಿದ್ದವರು. ಸುಮಾರು 16 ವರ್ಷದ ಹಿಂದೆ ಕಾಂಗ್ರೆಸ್‌ ಸೇರಿ, ಆ ಪಕ್ಷದ ಜಾಯಮಾನಕ್ಕೆ ಒಗ್ಗಿಕೊಂಡವರು.

ಪಕ್ಷದ ಹಿರಿಯ ನಾಯಕರಾದಮಲ್ಲಿ ಕಾರ್ಜುನ ಖರ್ಗೆ ಅವರನ್ನು ಎಐಸಿಸಿ ಪ್ರಧಾನ ಕಾರ್ಯ ದರ್ಶಿ ಹಾಗೂ ಮಹಾರಾಷ್ಟ್ರ ಉಸ್ತುವಾರಿಯ ಹೊಣೆಯಿಂದ ಬಿಡುಗಡೆ ಮಾಡಲಾಗಿದ್ದು, ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಮುಂದುವರಿಸಲಾಗಿದೆ. ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಅವರನ್ನು ಆಯ್ಕೆ ಮಾಡುವ ಉದ್ದೇಶದಿಂದ ಪ್ರಮುಖ ಜವಾಬ್ದಾರಿಯಿಂದ ಅವರನ್ನು ಹೊರಗಿಡಲಾಗಿದೆ.

ಪಾಟೀಲ–ದಿನೇಶ್‌ಗೆ ಆದ್ಯತೆ: ಕೆಪಿಸಿಸಿ ಅಧ್ಯಕ್ಷರಾಗಿ ಸುಮಾರು 2 ವರ್ಷ ಕಾರ್ಯನಿರ್ವಹಿಸಿದ್ದ ದಿನೇಶ್ ಅವರು ಪೂರ್ಣ ಅಧಿಕಾರ ಅನುಭವಿಸಿರಲಿಲ್ಲ. ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಸೋಲಿನ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ಈಗ ಅವರಿಗೆ ಕಾರ್ಯಕಾರಿ ಸಮಿತಿಯ ಶಾಶ್ವತ ಆಹ್ವಾನಿತ ಸದಸ್ಯ ಸ್ಥಾನ ಸಿಕ್ಕಿದೆ. ತಮಿಳುನಾಡು, ಗೋವಾ ರಾಜ್ಯಗಳ ಉಸ್ತುವಾರಿ ಹೊಣೆಯೂ ಹೆಗಲೇರಿದೆ.

ದಿನೇಶ್‌ ರಾಜೀನಾಮೆ ಕೊಟ್ಟ ಕಾಲದಲ್ಲಿ ಹೊಸ ನಾಯಕನ ಹುಡುಕಾಟ ನಡೆದಾಗ ಎಚ್.ಕೆ. ಪಾಟೀಲರು ಈ ಹುದ್ದೆಯ ಆಕಾಂಕ್ಷಿಯಾಗಿದ್ದರು. ಜೆಡಿಎಸ್‌–ಕಾಂಗ್ರೆಸ್ ಮೈತ್ರಿ ಸರ್ಕಾರ ಪತನವಾದ ಬಳಿಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸ್ಥಾನದ ಮೇಲೆಯೂ ಅವರು ಕಣ್ಣಿಟ್ಟಿದ್ದರು. ಆದರೆ, ಅವು ದಕ್ಕಿರಲಿಲ್ಲ. ಪಾಟೀಲರಿಗೆ ಈಗ ಕಾರ್ಯಕಾರಿ ಸಮಿತಿಯ ಶಾಶ್ವತ ಆಹ್ವಾನಿತ ಸದಸ್ಯ ಸ್ಥಾನದ ಜತೆಗೆ ಮಹಾರಾಷ್ಟ್ರದ ಉಸ್ತುವಾರಿ ಕೂಡ ದಕ್ಕಿದೆ.

ಮಹಾರಾಷ್ಟ್ರದಲ್ಲಿ ಶಿವಸೇನೆ–ಕಾಂಗ್ರೆಸ್ ಮೈತ್ರಿ ಸರ್ಕಾರ ನಡೆಯುತ್ತಿರುವ ಹೊತ್ತಿನಲ್ಲಿ ಪಾಟೀಲರಿಗೆ ಸಿಕ್ಕಿರುವ ಹೊಸ ಜವಾಬ್ದಾರಿ ಪಕ್ಷದ ಸಂಘಟನೆಯ ದೃಷ್ಟಿಯಿಂದ ಗುರುತರವಾದುದು ಎಂಬ ವಿಶ್ಲೇಷಣೆಯೂ ನಡೆದಿದೆ.

ಕೃಷ್ಣ ಬೈರೇಗೌಡರಿಗೆ ಬಡ್ತಿ: ಕಾಂಗ್ರೆಸ್‌ನ ‘ಅಧಿಕಾರ ಶಕ್ತಿಕೇಂದ್ರ’ದಲ್ಲಿ ಪ್ರಮುಖ ಸ್ಥಾನ ಪಡೆದವರ ಪೈಕಿ ಆಸ್ಕರ್ ಫರ್ನಾಂಡಿಸ್ ಮೊದಲಿಗರಾದರೆ, ವೀರಪ್ಪ ಮೊಯಿಲಿ ಕೂಡ ಅದೇ ಮಾದರಿಯಲ್ಲಿದ್ದವರು. ಅನಾರೋಗ್ಯದ ಕಾರಣಕ್ಕೆ ಆಸ್ಕರ್‌ ಅವರನ್ನು ಈ ಬಾರಿ ಯಾವುದೇ ಹುದ್ದೆಯಲ್ಲಿ ಮುಂದುವರಿಸಿಲ್ಲ. ಆದರೆ, ಯಾವುದಾದರೂ ಒಂದು ಹುದ್ದೆಯಲ್ಲಿ ಕಾಯಂ ಆಗಿ ಇರುತ್ತಿದ್ದ ಮೊಯಿಲಿ, 20 ವರ್ಷಗಳಲ್ಲಿ ಮೊದಲ ಬಾರಿ ಹುದ್ದೆ ಕಳೆದುಕೊಂಡಿದ್ದಾರೆ.

ನಾಯಕತ್ವದ ವಿರುದ್ಧ ಪತ್ರ ಬರೆದ 23 ಜನರ ಪೈಕಿ ಒಬ್ಬರಾಗಿರುವ ಮೊಯಿಲಿ, ಕೇಂದ್ರ ಚುನಾವಣಾ ಮಂಡಳಿಯ ಸದಸ್ಯತ್ವದಿಂದ ಹೊರದಬ್ಬಲ್ಪಟ್ಟಿದ್ದಾರೆ. ವಿಶೇಷವೆಂದರೆ ಈ ಸ್ಥಾನ ಕರ್ನಾಟಕದ ಯುವ ನಾಯಕ ಹಾಗೂ ರಾಹುಲ್ ಗಾಂಧಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಕೃಷ್ಣ ಬೈರೇಗೌಡರಿಗೆ ಸಿಕ್ಕಿದೆ. ಹಾಗೆ ನೋಡಿದರೆ, ಕೃಷ್ಣ ಅವರಿಗೆ ಇದು ಪಕ್ಷದಲ್ಲಿ, ರಾಜಕಾರಣ ದಲ್ಲಿ ಸಿಕ್ಕಿದ ದೊಡ್ಡ ಬಡ್ತಿಯೇ ಆಗಿದೆ.

ವೇಣು ಬದಲು ಸುರ್ಜೇವಾಲಾ

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಗುರಿಯಿಟ್ಟುಕೊಂಡಿರುವ ಹೈಕಮಾಂಡ್, ಪಕ್ಷದ ರಾಜ್ಯ ಉಸ್ತುವಾರಿಯನ್ನು ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ನೀಡಿದೆ.

ಇಲ್ಲಿಯವರೆಗೆ ಉಸ್ತುವಾರಿಯಾಗಿದ್ದ ಕೆ.ಸಿ. ವೇಣುಗೋಪಾಲ್‌, ಎಐಸಿಸಿ ಪ್ರಧಾನ ಕಾರ್ಯದರ್ಶಿ(ಸಂಘಟನೆ)ಯಂತಹ ಮಹತ್ವದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ರಾಜ್ಯ ಉಸ್ತುವಾರಿಯಿಂದ ದೇಶದ ಎಲ್ಲ ರಾಜ್ಯಗಳ ಸಂಘಟನೆಯ ಜವಾಬ್ದಾರಿ ಪಡೆದ ವೇಣುಗೋಪಾಲ್‌, ಬಡ್ತಿ‌ ಪಡೆದಿದ್ದಾರೆ. ಸುರ್ಜೇವಾಲಾ ಅವರು ಹಿಂದೆ ಕರ್ನಾಟಕದಲ್ಲಿ ನಡೆದ ಚುನಾವಣೆಗಳ ಜವಾಬ್ದಾರಿ ಹೊತ್ತುಕೊಂಡವರು. ಇಲ್ಲಿನವರ ಒಡನಾಟ ಹಾಗೂ ರಾಹುಲ್ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಕಾರಣಕ್ಕೆ ಸುರ್ಜೇವಾಲಾರಿಗೆ ಹೊಸ ಹೊಣೆ ವಹಿಸಲಾಗಿದೆ.

ಮಹಾರಾಷ್ಟ್ರ ಉಸ್ತುವಾರಿ ಕೈ ಬಿಟ್ಟಿದ್ದಕ್ಕೆ ಬೇಸರವಿಲ್ಲ– ಖರ್ಗೆ

ಬೆಂಗಳೂರು: ‘ಪಕ್ಷದ ಮಹಾರಾಷ್ಟ್ರ ಉಸ್ತುವಾರಿಯಿಂದ ಕೈಬಿಟ್ಟಿದ್ದಕ್ಕೆ ಬೇಸರವಿಲ್ಲ. ಎಲ್ಲವೂ ನಮ್ಮ‌ ಕೈಯಲ್ಲಿ‌ ಇರುವುದಿಲ್ಲ. ಎಲ್ಲವೂ ನನಗೆ ಸಿಗಬೇಕೆಂಬ ಆಸೆಯೂ ಇಲ್ಲ. ನಾನು ಒಂದು ತತ್ವಾದರ್ಶ ಹೊಂದಿದವನು’ ಎಂದು ರಾಜ್ಯಸಭೆಯಕಾಂಗ್ರೆಸ್ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ನಾನು ನೆಹರು, ಅಂಬೇಡ್ಕರ್ ಅವರ ಸಾಮಾಜಿಕ‌ ನ್ಯಾಯಕ್ಕೆ ಬದ್ಧನಾಗಿರುವವನು’ ಎಂದರು.

‘ಪಕ್ಷದ ಸಿದ್ಧಾಂತ ಅನುಷ್ಠಾನಕ್ಕೆ ತರಲು ಯಾರೇ ಇರಲಿ. ಅದಕ್ಕೆ ನನ್ನ ಒಪ್ಪಿಗೆ ಇದೆ. ನನಗೆ ಹುದ್ದೆ ಸಿಗಲಿಲ್ಲ ಎಂದು ವ್ಯಥೆ ಪಟ್ಟವನೂ ಅಲ್ಲ. ಪ್ರಜಾಪ್ರಭುತ್ವ ಉಳಿಯಬೇಕಾದರೆ ಎಲ್ಲರೂ ಇರಬೇಕು. ಆ ದಿಕ್ಕಿನಲ್ಲೇ ನಾನು ಮುನ್ನಡೆದಿರುವವನು’ ಎಂದರು.

‘ರಾಜ್ಯಸಭೆ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ನಾನು ಬೇಡಿಕೆ ಇಟ್ಟಿಲ್ಲ. ಆ ಸ್ಥಾನದಲ್ಲಿ ಈಗ ಗುಲಾಂ‌ ನಬಿ ಇದ್ದಾರೆ. ಅದರ ಬಗ್ಗೆ ಹೈಕಮಾಂಡ್ ನಿಲುವು ತೆಗೆದುಕೊಳ್ಳಲಿದೆ. ಆ ತೀರ್ಮಾನಕ್ಕೆ ನಾನು‌ ತಲೆ ಬಾಗುತ್ತೇನೆ’ ಎಂದೂ ಹೇಳಿದರು.

ಪಕ್ಷದ ಗತ ವೈಭವ ಸ್ಥಾಪಿಸಲು ಯತ್ನಿಸುವೆ– ಎಚ್‌.ಕೆ. ಪಾಟೀಲ

ಬೆಂಗಳೂರು: ‘ಪಕ್ಷದ ನಾಯಕಿ ಸೋನಿಯಾ ಗಾಂಧಿಯವರು ರಾಷ್ಟ್ರೀಯ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯತ್ವದ ಜೊತೆಗೆ ಮಹಾರಾಷ್ಟ್ರದ ಉಸ್ತುವಾರಿ ನೀಡಿದ್ದಾರೆ. ರಾಜಕೀಯವಾಗಿ ಸಾಕಷ್ಟು ಸವಾಲುಗಳಿರುವ ಈ ರಾಜ್ಯದಲ್ಲಿ ಪಕ್ಷದ ಗತವೈಭವ ಸ್ಥಾಪಿಸಲು ಯತ್ನಿಸುವೆ’ ಎಂದು ರಾಷ್ಟ್ರೀಯ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ, ಮಹಾರಾಷ್ಟ್ರ ಉಸ್ತುವಾರಿಯಾಗಿ ನೇಮಕಗೊಂಡ ಎಚ್.ಕೆ. ಪಾಟೀಲ ಹೇಳಿದರು.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಮಹತ್ವದ ಜವಾಬ್ದಾರಿ ನೀಡಿದ್ದಾರೆ. ಅದಕ್ಕಾಗಿ ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರಿಗೆ ಆಭಾರಿಯಾಗಿದ್ದೇನೆ’ ಎಂದರು.

‘ನಾನು ವಿದ್ಯಾರ್ಥಿ ದೆಸೆಯಿಂದಲೇ ಕಾಂಗ್ರೆಸ್‌ಗೆ ಬಂದವನು. ಈಗಾಗಲೇ ಹಲವು ಸ್ಥಾನಮಾನಗಳನ್ನು ಪಡೆದಿದ್ದೇನೆ. ಮಲ್ಲಿಕಾರ್ಜುನ ಖರ್ಗೆ ಈವರೆಗೆ ಮಹಾರಾಷ್ಟ್ರದ ಉಸ್ತುವಾರಿಯಾಗಿದ್ದರು. ಅವರ ಮಾರ್ಗದರ್ಶನ ನನಗೆ ಸಿಗಲಿದೆ’ ಎಂದರು.

ಅಧಿವೇಶನದಲ್ಲಿ ಪ್ರಸ್ತಾವ:ಡ್ರಗ್ ಜಾಲದಲ್ಲಿ ಆರೋಪ ಎದುರಿಸುತ್ತಿರುವ ಕಾಂಗ್ರೆಸ್‌ ಶಾಸಕ ಜಮೀರ್ ಅಹ್ಮದ್ ಖಾನ್ ಅವರನ್ನು ಸಮರ್ಥಿಸಿಕೊಂಡ ಪಾಟೀಲ, ‘ಜಮೀರ್ ಅಹ್ಮದ್ ಖಾನ್, ತಮ್ಮ ವಿರುದ್ಧದ ಆರೋಪ ಸಾಬೀತಾದರೆ ಪೂರ್ತಿ ಆಸ್ತಿಯನ್ನೇ ಸರ್ಕಾರಕ್ಕೆ ಕೊಡುವುದಾಗಿ ಹೇಳಿದ್ದಾರೆ. ಡ್ರಗ್ ಜಾಲದ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ’ ಎಂದರು.

ಸರ್ಕಾರ ವಾಸ್ತವ ತಿಳಿಸಲಿ:‘ಕೋವಿಡ್‌ನಿಂದ ಮೃತಪಟ್ಟವರ ಪ್ರಮಾಣದ ಬಗ್ಗೆ ಸರ್ಕಾರ ವಾಸ್ತವ ತಿಳಿಸಬೇಕು. ರಾಷ್ಟ್ರೀಯ ಸರಾಸರಿಗಿಂತ ರಾಜ್ಯದ್ದೇ ಹೆಚ್ಚಿದೆ. ಸರ್ಕಾರ ಜನರಿಗೆ ತಪ್ಪು ಮಾಹಿತಿ ನೀಡುತ್ತಿದೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT