ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ | ಪರ್ಯಾಯ ತಂತ್ರಜ್ಞಾನ ದುಬಾರಿ

Last Updated 21 ನವೆಂಬರ್ 2020, 20:10 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಫ್ಲೋರೈಡ್‌ಯುಕ್ತ ಹಾಗೂ ಉಪ್ಪಿನಂಶ ಇರುವ ನೀರು ಮಾತ್ರ ಲಭ್ಯ ಇರುವ ಕಡೆ, ನೀರಿನಲ್ಲಿ ಅಪಾಯಕಾರಿ ರಾಸಾಯನಿಕಗಳು ಇರುವಲ್ಲಿ ಆರ್‌.ಒ. (ರಿವರ್ಸ್‌ ಒಸ್ಮೋಸಿಸ್‌) ತಂತ್ರಜ್ಞಾನದ, ನೀರು ಶುದ್ಧೀಕರಣ ಘಟಕ ಸ್ಥಾಪನೆ ಅನಿವಾರ್ಯ.ಆದರೆ, ರಾಜ್ಯದಲ್ಲಿ ಅನೇಕ ಕಡೆ ಅಗತ್ಯ ಇಲ್ಲದ ಕಡೆಯೂ ಇಂತಹ ಘಟಕಗಳನ್ನು ಸ್ಥಾಪಿಸಲಾಗಿದೆ. ಹಾಗಾಗಿ ಎಲ್ಲೂ ಹೊಸತಾಗಿ ಕುಡಿಯುವ ನೀರನ್ನು ಶುದ್ಧೀಕರಿ ಸುವ ಆರ್‌.ಒ. ಘಟಕಗಳನ್ನು ಸ್ಥಾಪಿಸುತ್ತಿಲ್ಲ ಎನ್ನುತ್ತಾರೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್‌.ಕೆ. ಅತೀಕ್‌.

‘ನೀರಿನ ಶುದ್ಧೀಕರಣಕ್ಕೆ ಹೊಸ ತಂತ್ರಜ್ಞಾನಗಳು ಬರುತ್ತಿವೆ. ಶುದ್ಧೀಕರಣದ ವೇಳೆ ನಷ್ಟವಾಗುವ ಮೆಗ್ನಿಷಿಯಂ, ಕ್ಯಾಲ್ಸಿಯಂನಂತಹ ಖನಿಜಗಳನ್ನು ನೀರಿಗೆ ಮರುಪೂರಣ ಮಾಡುವ ತಂತ್ರಜ್ಞಾನಗಳು ಲಭ್ಯ ಇದೆ. ಆದರೆ ಇವುಗಳು ದುಬಾರಿ. ಒಂದು ಲೀಟರ್‌ ನೀರಿಗೆ ₹2ರಿಂದ ₹3 ರೂಪಾಯಿ ಖರ್ಚಾಗುತ್ತದೆ. ನಾವು ಪ್ರಸ್ತುತ 20 ಲೀಟರ್‌ ನೀರನ್ನು ಕೇವಲ ₹5ಕ್ಕೆ ನೀಡುತ್ತಿದ್ದೇವೆ. ಈ ಮೊತ್ತವೇ ದುಬಾರಿ ಎಂಬ ದೂರುಗಳಿವೆ. ಹಾಗಾಗಿ ಪರ್ಯಾಯ ತಂತ್ರಜ್ಞಾನಗಳನ್ನು ಅಳವಡಿಸುವ ಚಿಂತನೆ ಇಲಾಖೆ ಮುಂದಿಲ್ಲ’ ಎಂದು ಅತೀಕ್‌ ತಿಳಿಸಿದರು.

ಶೇ 70ರಷ್ಟು ಘಟಕಗಳು ಸುಸ್ಥಿತಿಯಲ್ಲಿ: ‘ಇಲಾಖೆಯು ಇತ್ತೀಚೆಗೆ ಖಾಸಗಿ ಏಜೆನ್ಸಿ ಮೂಲಕ ಪ್ರತಿಯೊಂದು ಶುದ್ಧ ಕುಡಿಯುವ ನೀರಿನ ಘಟಕವನ್ನು ಸಮೀಕ್ಷೆಗೆ ಒಳಪಡಿಸಿದೆ. ಶೇ 70ರಷ್ಟು ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವುದು ದೃಢಪಟ್ಟಿದೆ. ಇನ್ನುಳಿದ ಶೇ 30ರಷ್ಟು ಘಟಕಗಳು ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ಕೆಟ್ಟುಹೋಗಿರುತ್ತವೆ ಎಂದು ಸಮೀಕ್ಷೆಯಲ್ಲಿ ಕಂಡುಬಂದಿದೆ. ಈ ವರದಿ ಆಧಾರದಲ್ಲಿ ಆಯಾ ಜಿಲ್ಲೆಗಳ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಗೆ ಟೆಂಡರ್‌ ಕರೆದು ಏಜೆನ್ಸಿ ಗೊತ್ತುಪಡಿಸುವಂತೆ ಎಲ್ಲ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇವೆ. ಒಂದು ವೇಳೆ ಯಾವುದೇ ಏಜೆನ್ಸಿ ಮುಂದೆ ಬರದಿದ್ದರೆ ಗ್ರಾಮ ಪಂಚಾಯಿತಿ ವತಿಯಿಂದಲೇ ನಿರ್ವಹಣೆ ಮಾಡಲು ಕ್ರಮ ಕೈಗೊಳ್ಳಲು ಸೂಚಿಸಿದ್ದೇವೆ’ ಎಂದು ಅವರು ತಿಳಿಸಿದರು.

‘ಖನಿಜಾಂಶ ಉಳಿಸಿಕೊಳ್ಳದಿದ್ದರೆ ಅಪಾಯ’

‘ಆರ್‌.ಒ ಪ್ರಕ್ರಿಯೆ ಮೂಲಕ ನೀರಿನಲ್ಲಿರುವ ಎಲ್ಲಾ ಖನಿಜಾಂಶಗಳನ್ನು ಹೊರತೆಗೆಯಲಾಗುತ್ತಿದೆ. ದೇಹದ ಚಯಾಪಚಯ ಕ್ರಿಯೆ ಸಾಂಗವಾಗಿ ನೆರವೇರಲು ಸತು, ಕ್ಯಾಲ್ಸಿಯಂ, ಮೆಗ್ನಿಷಿಯಂನಂತಹ ಖನಿಜಗಳು ಅತ್ಯಗತ್ಯ. ಇವುಗಳು, ಸೊಪ್ಪು ತರಕಾರಿ, ಹಣ್ಣು ಹಂಪಲುಗಳ ಮೂಲಕವೂ ದೇಹಕ್ಕೆ ಲಭಿಸುತ್ತವೆ ಎಂಬುದೇನೋ ನಿಜ. ಆದರೆ, ನಾವು ಕುಡಿಯುವ ನೀರಿನಲ್ಲೂ ಇವು ಅಲ್ಪ ಪ್ರಮಾಣದಲ್ಲಿ ಇರಲೇಬೇಕು. ಹಾಗಾಗಿ ಆರ್.ಒ ಘಟಕಗಳ ಮೂಲಕ ಶುದ್ಧೀಕರಿಸುವ ನೀರಿಗೆ ಮತ್ತೆ ಈ ಖನಿಜಾಂಶ ಸೇರಿಸಲು ಕ್ರಮಕೈಗೊಳ್ಳಬೇಕು’ ಎನ್ನುತ್ತಾರೆ ಕೇಂದ್ರ ಜಲಸಂಪನ್ಮೂಲ ಇಲಾಖೆಯ ನಿವೃತ್ತ ವಿಜ್ಞಾನಿ ಡಾ.ವಿ.ಎಸ್‌. ಪ್ರಕಾಶ್‌.

ಡಾ.ವಿ.ಎಸ್‌. ಪ್ರಕಾಶ್‌.

‘ಮನೆಯಲ್ಲೂ ಆರ್‌.ಒ ಯಂತ್ರಗಳನ್ನು ಅಳವಡಿಸಿಕೊಳ್ಳುವುದು ಈಗ ಶೋಕಿ ಆಗಿದೆ. ಇದು ಕೂಡಾ ದೀರ್ಘಕಾಲದಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಇವುಗಳನ್ನು ಅಗತ್ಯವಿದ್ದರೆ ಮಾತ್ರ ಬಳಕೆ ಮಾಡಬೇಕು’ ಎಂದು ಅವರು ಸಲಹೆ ನೀಡಿದರು.

‘ಬಹುತೇಕ ಕಡೆ ಬೋರ್‌ವೆಲ್‌ ನೀರಿನಲ್ಲಿ ಕ್ಯಾಡ್ಮಿಯಂ, ಸೀಸ, ಕ್ರೋಮಿಯಂ, ಅಲ್ಯುಮಿನಿಯಂ ಸತುವಿನಂತಹ ಲೋಹಗಳು ಅಪಾಯಕಾರಿ ಮಟ್ಟದಲ್ಲಿದ್ದು, ಅವುಗಳನ್ನು ಆರ್.ಒ ಪ್ರಕ್ರಿಯೆ ಮೂಲಕವೇ ಪ್ರತ್ಯೇಕಿಸುವುದು ಅನಿವಾರ್ಯ. ಇನ್ನೊಂದೆಡೆ ಕೆರೆ ಮತ್ತಿತರ ಜಲಕಾಯಗಳಿಗೆ ಕೈಗಾರಿಕೆಗಳ ತ್ಯಾಜ್ಯಗಳ ರೂಪದಲ್ಲಿ ಭಾರಲೋಹಗಳು ಸೇರಿಕೊಳ್ಳುತ್ತಿವೆ.


ಈ ನೀರನ್ನೂ ಶುದ್ಧೀಕರಿಸದೆ ಸೇವಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾಗಿ ಸರ್ಕಾರ ಜನರ ಆರೋಗ್ಯ ಕಾಪಾಡುವ ಸಲುವಾಗಿ ಕುಡಿಯುವ ನೀರಿನ ನಿರ್ವಹಣೆ ಬಗ್ಗೆ ಸಮಗ್ರ ನೀತಿ ರೂಪಿಸಬೇಕು. ನೀರಿನ ಗುಣಮಟ್ಟ ಪರೀಕ್ಷೆಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು’ ಎಂದು ಅವರು ಒತ್ತಾಯಿಸಿದರು.

ಇದನ್ನೂ ಓದಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT