ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್‌ಗೆ ಅವಮಾನಿಸಿದ್ದ ಕಾಂಗ್ರೆಸ್‌: ಬಿಜೆಪಿಯಿಂದ ಸರಣಿ ಟ್ವೀಟ್‌

Last Updated 27 ನವೆಂಬರ್ 2021, 10:13 IST
ಅಕ್ಷರ ಗಾತ್ರ

ಬೆಂಗಳೂರು:ಸಂವಿಧಾನ ದಿನಾಚರಣೆಯನ್ನು ವಿರೋಧಿಸುವ ಮೂಲಕ ಕಾಂಗ್ರೆಸ್ ಪಕ್ಷ ತನಗಿರುವ ಸಂವಿಧಾನ ವಿರೋಧಿ ಭಾವನೆಯನ್ನು ಜಗಜ್ಜಾಹೀರುಗೊಳಿಸಿದೆ ಎಂದುಎಂದು ಬಿಜೆಪಿ ಟೀಕಿಸಿದೆ.

ಈ ವಿಚಾರವಾಗಿ ಶನಿವಾರ ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ ರಾಜ್ಯ ಘಟಕವು, ‘ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವ ಕಾಂಗ್ರೆಸ್ ಪಕ್ಷಕ್ಕೆ ಈಗ ಸಂವಿಧಾನ ದಿನಾಚರಣೆಯನ್ನು ಪ್ರತಿ ವರ್ಷ ಆಚರಿಸುವುದನ್ನು ಸಹಿಸಿಕೊಳ್ಳಲಾಗುತ್ತಿಲ್ಲ. ಸಂವಿಧಾನ ದಿನಾಚರಣೆಯನ್ನು ವಿರೋಧಿಸುವ ಮೂಲಕ ಕಾಂಗ್ರೆಸ್ ಪಕ್ಷ ತಮಗಿರುವ ಸಂವಿಧಾನ ವಿರೋಧಿ ಭಾವನೆಯನ್ನು ಜಗಜ್ಜಾಹೀರುಗೊಳಿಸಿದೆ‘ ಎಂದು ವಾಗ್ದಾಳಿ ನಡೆಸಿದೆ.

‘ತಮ್ಮ ಅಧಿಕಾರಕ್ಕೆ ಸಂಚಕಾರ ಬರುತ್ತದೆ ಎಂಬ ಕಾರಣಕ್ಕೆ ಸಂಸತ್ತು, ನ್ಯಾಯಾಂಗ, ಕಾರ್ಯಾಂಗ ವ್ಯವಸ್ಥೆಯನ್ನು ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿಕೆ ಮೂಲಕ ತಮ್ಮ‌ ಕಪಿ ಮುಷ್ಠಿಯಲ್ಲಿ ಬಂಧಿಸಿದ್ದರು. ದೇಶದ ಸಂವಿಧಾನದ‌ ಮೇಲೆ ನಡೆದ ಅತಿ ದೊಡ್ಡ ಹಲ್ಲೆ ಎಂದರೆ ತುರ್ತು ಪರಿಸ್ಥಿತಿ ಹೇರಿಕೆ‘ ಎಂದು ಕಾಂಗ್ರೆಸ್‌ ವಿರುದ್ಧ ಬಿಜೆಪಿ ಹರಿಹಾಯ್ದಿದೆ.

‘ತುರ್ತು ಪರಿಸ್ಥಿತಿಯ ಮೂಲಕ ಸಂವಿಧಾನಕ್ಕೆ ನಕಲಿ ಗಾಂಧಿ ಕುಟುಂಬ ಅವಮಾನ ಮಾಡಿತ್ತು. ಹಾಗಾದರೆ ಯಾರು ಸಂವಿಧಾನ ವಿರೋಧಿ?ಯಾರು ಅಂಬೇಡ್ಕರ್‌ ವಿರೋಧಿ?ಅಂಬೇಡ್ಕರ್‌ ರಚಿತ ಸಂವಿಧಾನವನ್ನು ಕತ್ತಲ ಕೋಣೆಯಲ್ಲಿಟ್ಟಿದ್ದು ಯಾರು? ಉತ್ತರ ಒಂದೇ, ಅದು ಕಾಂಗ್ರೆಸ್‌‘ ಎಂದು ಬಿಜೆಪಿ ಆರೋಪಿಸಿದೆ.

‘ಇಂದಿರಾ ಎಂದರೆ ಇಂಡಿಯಾ, ಇಂಡಿಯಾ ಎಂದರೆ ಇಂದಿರಾ ಎಂದು ಕಾಂಗ್ರೆಸ್ ಭಜನಾ ಮಂಡಳಿ ಘೋಷಣೆ ಮೊಳಗಿಸಿದಾಗಲೇ ಸಂವಿಧಾನದ ಆಶಯ ಮುಕ್ಕಾಗಿ ಹೋಯಿತು. ಈಗ ಕಾಂಗ್ರೆಸ್ ಅಧಿಕಾರ, ಜನರ ವಿಶ್ವಾಸವನ್ನೂ ಕಳೆದುಕೊಂಡಿದೆ. ಆದರೂ, ತನ್ನ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳದ ಸಂವಿಧಾನ ವಿರೋಧಿ ಕಾಂಗ್ರೆಸ್‌ ಪಕ್ಷವು ಸಂವಿಧಾನ ದಿನಾಚರಣೆಯನ್ನು ವಿರೋಧಿಸಿದೆ‘ ಎಂದು ಟ್ವೀಟಿಸಿದೆ.

‘ಅಂಬೇಡ್ಕರ್ ಅವರು ಕಾಂಗ್ರೆಸ್ ತೊರೆದರು. ಇದಕ್ಕೆ ಕಾರಣ ಕಾಂಗ್ರೆಸ್ಸಿನ ಸಂವಿಧಾನ ವಿರೋಧಿ ನಿಲುವು. ಅಂಬೇಡ್ಕರ್ ಅವರು ಚುನಾವಣೆಯಲ್ಲಿ ಸೋತರು, ಇದಕ್ಕೂ ಕಾರಣ ಕಾಂಗ್ರೆಸ್. ಕಾಂಗ್ರೆಸ್‌ ಸೇರುವುದೆಂದರೆ, ಅದು ಆತ್ಮಹತ್ಯೆ ಮಾಡಿಕೊಂಡಂತೆ ಎಂಬುದಾಗಿ ಅಂಬೇಡ್ಕರ್‌ ಹೇಳಿದ್ದರು‘ ಎಂದು ಬಿಜೆಪಿ ತಿಳಿಸಿದೆ.

‘ಸ್ವಯಂ ಭಾರತರತ್ನ ಪ್ರಶಸ್ತಿ ಘೋಷಿಸಿಕೊಂಡ ನೆಹರು-ಇಂದಿರಾ ಗಾಂಧಿ ಅವರಿಗೆ ಸಂವಿಧಾನ ರತ್ನ ಅಂಬೇಡ್ಕರ್ ಅವರು ಪ್ರಶಸ್ತಿಗೆ ಅರ್ಹರು ಎಂದು ಅನ್ನಿಸಲಿಲ್ಲ. ಅಂಬೇಡ್ಕರ್ ಅವರು ಬದುಕಿದ್ದಾಗ ಅವಮಾನ ಮಾಡಿದ‌‌ ಕಾಂಗ್ರೆಸ್ ಪಕ್ಷ ಮರಣ ನಂತರವೂ, ಅಂತಿಮ ಸಂಸ್ಕಾರವನ್ನು ಗೌರವದಿಂದ ನಡೆಸಲು ಬಿಡದೆ ಅಪಮಾನವೆಸಗಿತ್ತು‘ ಎಂದು ಬಿಜೆಪಿ ಆರೋಪಿಸಿದೆ.

‘ಮೋದಿ‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಸಂಬಂಧಿಸಿದ,ಪ್ರಮುಖ 5 ಸ್ಥಳಗಳನ್ನು ಪಂಚತೀರ್ಥ ಎಂಬ ಹೆಸರಿನಲ್ಲಿ ಅಭಿವೃದ್ಧಿ ಮಾಡಿದೆ. ಅರ್ಥಪೂರ್ಣವಾದ ಸಂವಿಧಾನ ದಿನಾಚರಣೆ ಜಾರಿಗೆ ತಂದಿದೆ. ಸಂವಿಧಾನಕ್ಕೆ ತಿದ್ದುಪಡಿ ಮಾಡಿದ್ದು ಬಿಟ್ಟರೆ ಕಾಂಗ್ರೆಸ್‌ ಮಾಡಿದ್ದೇನು?‘ ಎಂದು ಬಿಜೆಪಿ ಪ್ರಶ್ನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT