ಬುಧವಾರ, ಮಾರ್ಚ್ 3, 2021
19 °C

ಕ್ಷಿಪ್ರ ಕಾರ್ಯಪಡೆ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಅಮಿತ್ ಶಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ರಾಷ್ಟ್ರೀಯ ವಿಧಿವಿಜ್ಞಾನ ಹಾಗೂ ರಕ್ಷಾ ವಿಶ್ವವಿದ್ಯಾಲಯಗಳಿಗೆ ಕರ್ನಾಟಕದ ಕಾಲೇಜುಗಳನ್ನೂ ಸಂಯೋಜನೆ ಮಾಡುವ ಮೂಲಕ ಅಗತ್ಯವಿರುವ ತಜ್ಞರು, ನುರಿತ ಯೋಧರ ಪಡೆ ಸಿದ್ಧಗೊಳಿಸಲು ಕೈಜೋಡಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲಹೆ ನೀಡಿದರು.

ಭದ್ರಾವತಿಯ 50 ಎಕರೆಯಲ್ಲಿ ಆರಂಭವಾಗಿರುವ ಕ್ಷಿಪ್ರ ಕಾರ್ಯಪಡೆಯ 97ನೇ ಬೆಟಾಲಿಯನ್ ಘಟಕಕ್ಕೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ವಿಧಿವಿಜ್ಞಾನ ವಿಶ್ವವಿದ್ಯಾಲಯ, ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಗಳ ಪರಿಕಲ್ಪನೆ ವಿಶ್ವದಲ್ಲೇ ಮೊದಲು. ಈ ಎರಡೂ ವಿಶ್ವವಿದ್ಯಾಲಯಗಳಲ್ಲಿ ಕಲಿತ ಯುವಕ–ಯುವತಿಯರು ಭವಿಷ್ಯದಲ್ಲಿ ದೇಶದ ಕಾನೂನು ಸುವ್ಯವಸ್ಥೆ ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಕರ್ನಾಟಕದ ಕಾಲೇಜುಗಳ ವಿದ್ಯಾರ್ಥಿಗಳೂ ವಿನೂತನ, ಆಧುನಿಕ ತರಬೇತಿ ಪಡೆಯಬೇಕು ಎಂದರು.

ದೇಶದಲ್ಲಿ ಪೊಲೀಸ್‌ ವಸತಿ ಗೃಹಗಳ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಅಗತ್ಯವಿರುವ ಗೃಹಗಳನ್ನು ನಿರ್ಮಿಸಲು ಅನುದಾನ ನೀಡಲಾಗುತ್ತಿದೆ. ಪೊಲೀಸ್‌ ಕ್ಯಾಂಟಿನ್‌ಗಳ ಸಂಖ್ಯೆಯಲ್ಲೂ ಹೆಚ್ಚಳ ಮಾಡಲಾಗುವುದು. ಅಲ್ಲಿ ಸ್ವದೇಶಿ ವಸ್ತುಗಳ ಮಾರಾಟಕ್ಕೆ ಒತ್ತು ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಪೊಲೀಸರನ್ನು ಸರ್ಕಾರ, ಸಾರ್ವಜನಿಕರು ನೋಡುವ ದೃಷ್ಟಿಕೋನ ಬದಲಾಗಬೇಕು. ಮೀಸಲು ಪಡೆ, ಕ್ಷಿಪ್ರ ಕಾರ್ಯಪಡೆಗಳ ಹೆಚ್ಚಳದಿಂದ ಅವರ ಮೇಲಿನ ಬಂದೋಬಸ್ತ್ ಹೊರೆ ತಗ್ಗಲಿದೆ. ಕರ್ತವ್ಯ ನಿರತ ಪೊಲೀಸರು ಹತಾತ್ಮರಾದರೆ ಅವರ ಕುಟುಂಬಗಳಿಗೆ ಸರ್ಕಾರದ ಸವಲತ್ತುಗಳ ಜತೆಗೆ ಅಕ್ಷಯ್‌ಕುಮಾರ್ ಫೌಂಡೇಷನ್ ಸಹಯೋಗದಲ್ಲಿ ₹ 50 ಲಕ್ಷ ಹೆಚ್ಚುವರಿ ಪರಿಹಾರ ಒದಗಿಸಲಾಗುವುದು ಎಂದರು.

ಚಿತ್ರಾವಳಿ: 

ಆರ್‌ಎಎಫ್‌ ಘಟಕ ಸುಮಾರು 39 ಜಿಲ್ಲೆಗಳ ವ್ಯಾಪ್ತಿ ಹೊಂದಿದೆ. ಕರ್ನಾಟಕದ ಎಲ್ಲಾ ಜಿಲ್ಲೆಗಳ ಜತೆಗೆ ಕೇರಳದ 4, ಗೋವಾದ 2, ಪುದುಚೇರಿ ಹಾಗೂ ಲಕ್ಷದ್ವೀಪದ ತಲಾ ಒಂದು ಜಿಲ್ಲೆಗಳಿಗೆ ನೆರವು ಸಿಗಲಿದೆ. ಭವಿಷ್ಯದಲ್ಲಿ 500 ಘಟಕ ಆರಂಭಿಸುವ ಗುರಿ ಹೊಂದಲಾಗಿದೆ ಎಂದು ವಿವರ ನೀಡಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಅಶ್ವತ್ಥ ನಾರಾಯಣ, ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಬಿ.ಕೆ.ಸಂಗಮೇಶ್ವರ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು