ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಆಸರೆ ಕಸಿದ ಕೊರೊನಾ: ಮೊಮ್ಮಗಳಿಗೆ ಅಜ್ಜಿಯೇ ಆಸರೆ

ಒಂದೇ ತಿಂಗಳಲ್ಲಿ ಐವರನ್ನು ಕಳೆದುಕೊಂಡು ಅನಾಥವಾದ ಕುಟುಂಬ
Last Updated 15 ಜೂನ್ 2021, 3:58 IST
ಅಕ್ಷರ ಗಾತ್ರ

ಬೆಂಗಳೂರು: ಕಣ್ಣೆದುರು ಬೆಳೆದು ದೊಡ್ಡವರಾದ ಮಕ್ಕಳು ಕೊನೆಗಾಲದಲ್ಲಿ ತನಗೆ ಆಸರೆಯಾಗಿ ನಿಲ್ಲಬಹುದೆಂಬ ಕನಸು ಕಂಡಿದ್ದ ಆ ಹಿರಿಯ ಜೀವ ಈಗ ಅನಾಥವಾಗಿದೆ. ಕೋವಿಡ್‌ನಿಂದಾಗಿ ಕುಟುಂಬದ ಐವರು ಸದಸ್ಯರನ್ನು ಕಳೆದುಕೊಂಡಿರುವ ಆ ತಾಯಿ ಅದೇ ಕೊರಗಿನಲ್ಲಿ ಹಾಸಿಗೆ ಹಿಡಿದಿದ್ದಾಳೆ. ಇಂತಹ ಸಂದಿಗ್ಧತೆಯಲ್ಲೇ ತಬ್ಬಲಿ ಮೊಮ್ಮಗಳನ್ನು ಸಲಹುವ ಹೊಣೆಯೂ ಹೆಗಲೇರಿದೆ.

ಇದು ಮಾಗಡಿ ರಸ್ತೆಯ ಬೆಟ್ಟಹಳ್ಳಿ ನಿವಾಸಿ 52 ವರ್ಷದ ಕಾಮಾಕ್ಷಮ್ಮ ಅವರ ಕಣ್ಣೀರ ಕಥೆ.

ಇವರ ಮಕ್ಕಳಾದ ವಿನಯ್‌ಕುಮಾರ್‌ (35 ವರ್ಷ), ಪ್ರತಾಪ್‌ ಕುಮಾರ್‌ (30) ಹಾಗೂ ಶಂಕರ್‌ (40) ಕ್ರಮವಾಗಿ ಏಪ್ರಿಲ್‌28, ಮೇ1 ಹಾಗೂ ಮೇ 3ರಂದು ಮೃತಪಟ್ಟಿದ್ದರು.

ಈ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ ಕಾಮಾಕ್ಷಮ್ಮನವರ ಪುತ್ರಿ ತೇಜಸ್ವಿನಿ (36) ಹಾಗೂ ಅಳಿಯ ಪ್ರಕಾಶ್‌ (42) ಕೂಡ ದೂರವಾಗಿದ್ದರು. ಇವರು ಕ್ರಮವಾಗಿ ಮೇ5 ಹಾಗೂ ಮೇ28ರಂದು ಕೊನೆಯುಸಿರೆಳೆದಿದ್ದರು. ಈ ದಂಪತಿ ಹೆಗ್ಗನಹಳ್ಳಿ ಕ್ರಾಸ್‌ ಬಳಿಯ ಸುಂಕದಕಟ್ಟೆಯಲ್ಲಿ ನೆಲೆಸಿತ್ತು. ಇವರಿಗೆ ಒಬ್ಬಳೇ ಹೆಣ್ಣು ಮಗಳು. ಆಕೆಯ ಹೆಸರು ರಶ್ಮಿ. 9ನೇ ತರಗತಿ ಓದುತ್ತಿರುವ ಈ ಹುಡುಗಿಗೆಈಗ ಅಜ್ಜಿಯೇ ಆಧಾರ!

‘ಅಪ್ಪ, ಅಮ್ಮ ಚೆನ್ನಾಗಿಯೇ ಇದ್ದರು. ತುಂಬಾ ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದರು. ನಾನು ಐಎಎಸ್‌ ಅಧಿಕಾರಿಯಾಗಬೇಕೆಂಬುದು ಅಮ್ಮನ ಆಸೆಯಾಗಿತ್ತು. ನೀನು ಡಾಕ್ಟರ್‌ ಆಗು ಮಗಳೇ ಎಂದು ಅಪ್ಪ ಹೇಳುತ್ತಿದ್ದರು. ಇಬ್ಬರಿಗೂ ಕೊರೊನಾ ಸೋಂಕು ಹೇಗೆ ತಗುಲಿತು ಎಂಬುದೇ ಗೊತ್ತಿಲ್ಲ. ಅಪ್ಪನನ್ನು ಮಡಿವಾಳ ಸಮೀಪದ ಕಾವೇರಿ ಆಸ್ಪತ್ರೆಗೆ ದಾಖಲಿಸಿದ್ದೆವು. ಸುಮಾರು ಒಂದು ತಿಂಗಳು ಅಲ್ಲೇ ಚಿಕಿತ್ಸೆ ಪಡೆದಿದ್ದರು. ಈ ನಡುವೆ ಅಮ್ಮ ತೀರಿಕೊಂಡರು. ಅಪ್ಪನಾದರೂ ಗುಣಮುಖರಾಗಿ ಮನೆಗೆ ಮರಳಬಹುದು ಅಂದುಕೊಂಡಿದ್ದೆ. ಅವರೂ ದೂರವಾಗಿಬಿಟ್ಟರು’ ಎನ್ನುತ್ತಾ ರಶ್ಮಿ ಗದ್ಗದಿತಳಾದಳು.

‘ಅಜ್ಜಿ ಬಿಟ್ಟರೆ ನನಗೆ ಬೇರೆ ಯಾರೂ ಇಲ್ಲ. ಅವರಿಗೂ ವಯಸ್ಸಾಗಿದೆ. ಮೊದಲು ಖಾಸಗಿ ಶಾಲೆಯಲ್ಲಿ ಓದುತ್ತಿದ್ದೆ. ಅಲ್ಲಿ ಶಿಕ್ಷಣ ಮುಂದುವರಿಸಬೇಕಾದರೆ ಸಾವಿರಾರು ರೂಪಾಯಿ ಶುಲ್ಕ ಕಟ್ಟಬೇಕು. ಅಷ್ಟು ಹಣ ನಮ್ಮ ಬಳಿ ಇಲ್ಲ. ಹೀಗಾಗಿ ವಿದ್ಯಾಭ್ಯಾಸ ಮುಂದುವರಿಸಬೇಕೊ ಬೇಡವೊ ಎಂಬ ಗೊಂದಲದಲ್ಲಿದ್ದೇನೆ’ ಎಂದಳು.

‘ನಿಶ್ಚಿತಾರ್ಥದ ದಿನವೇ ಮಗ ತೀರಿಕೊಂಡ’

‘ಕಿರಿಯ ಮಗ ಪ್ರತಾಪನಿಗೆ ಮದುವೆ ನಿಶ್ಚಯವಾಗಿತ್ತು. ಮೇ 1ರಂದು ನಿಶ್ಚಿತಾರ್ಥ ಇಟ್ಟುಕೊಂಡಿದ್ದೆವು. ಅದೇ ದಿನ ಆತ ತೀರಿಕೊಂಡ’ ಎನ್ನುತ್ತಾ ಕಾಮಾಕ್ಷಮ್ಮ ಕಣ್ಣೀರಿಟ್ಟರು.

‘ಮದುವೆಗಾಗಿ ಬ್ಯಾಂಕ್‌ನಲ್ಲಿ ಸಾಲ ತೆಗೆದುಕೊಂಡಿದ್ದ. ಮನೆಯವರು ಹಾಗೂ ನೆಂಟರಿಗೆ ಕೊಡಲು ಬಟ್ಟೆ ತೆಗೆಸಿ ಇಟ್ಟಿದ್ದ. ಕಲ್ಯಾಣ ಮಂಟಪಕ್ಕೂ ಮುಂಗಡ ಹಣ ನೀಡಿದ್ದ. ಆತ ಮದುವೆಯಾಗಿ ಸುಖವಾಗಿ ಬಾಳುವುದು ಆ ದೇವರಿಗೆ ಇಷ್ಟವಾಗಲಿಲ್ಲವೇನೊ. ಹೀಗಾಗಿ ಚಿಕ್ಕ ವಯಸ್ಸಿನಲ್ಲೇ ತನ್ನ ಬಳಿ ಕರೆದುಕೊಂಡ’ ಎಂದು ರೋದಿಸಿದರು.

‘ಒಬ್ಬರಾದ ಮೇಲೆ ಒಬ್ಬರು ಹೋಗಿಬಿಟ್ಟರು. ಆಸ್ಪತ್ರೆಯಲ್ಲಿ ಅವರೆಷ್ಟು ನರಳಿದರೋ ಕಾಣೆ. ಕೊನೆಯದಾಗಿ ಅವರ ಜೊತೆ ಒಂದೆರಡು ಮಾತುಗಳನ್ನೂ ಆಡಲು ಆಗಲಿಲ್ಲ. ಅದ್ಯಾವ ಜನ್ಮದ ಶಾಪವೊ. ಭಗವಂತ ನನ್ನನ್ನು ಈ ಸ್ಥಿತಿಗೆ ತಂದುಬಿಟ್ಟ. ನನಗೀಗ ಏನು ಮಾಡಬೇಕೆಂಬುದೇ ತೋಚುತ್ತಿಲ್ಲ’ ಎಂದು ಕಾಮಾಕ್ಷಮ್ಮ ಭಾವುಕರಾದರು.

‘ಚಿಕಿತ್ಸೆ ಕೊಡಿಸಿದರೂ ಉಳಿಯಲಿಲ್ಲ’

‘ಮೊದಲು ಶಂಕರ್‌ ಅವರಿಗೆ ಅನಾರೋಗ್ಯ ಬಾಧಿಸಿತು. ಕೆಮ್ಮು ಹಾಗೂ ಜ್ವರ ಕಾಣಿಸಿಕೊಂಡಿತು. ಕೋವಿಡ್‌ ಇರುವುದು ಪರೀಕ್ಷೆಯಿಂದ ದೃಢಪಟ್ಟಿತು. ಬಳಿಕ ಇಡೀ ಕುಟುಂಬದವರನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಆಗ ಎಲ್ಲರಿಗೂ ಸೋಂಕು ತಗುಲಿರುವುದು ಖಾತರಿಯಾಯಿತು. ಶ್ವಾಸಕೋಶಕ್ಕೆ ಹಾನಿಯಾಗಿರುವುದು ಗೊತ್ತಾದ ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಹೀಗಿದ್ದರೂ ಯಾರೂ ಉಳಿಯಲಿಲ್ಲ’ ಎಂದು ಕಾಮಾಕ್ಷಮ್ಮ ಅವರ ಸಂಬಂಧಿ ಸಂತೋಷ್‌ ತಿಳಿಸಿದರು.

‘ಚಿಕಿತ್ಸೆಗಾಗಿ ಸಾಕಷ್ಟು ಸಾಲ ಮಾಡಿದ್ದಾರೆ. ಇದನ್ನು ಹೇಗೆ ತೀರಿಸುತ್ತಾರೆ ಎನ್ನುವುದೇ ಗೊತ್ತಿಲ್ಲ. ಅವರ ಜೀವನಕ್ಕೆ ಯಾವ ಆಧಾರವೂ ಇಲ್ಲ. ಪ್ರಕಾಶ್‌ ಅವರ ಚಿಕಿತ್ಸೆಗೆ₹7 ಲಕ್ಷ ತಗುಲಿತ್ತು. ಈ ಮೊತ್ತ ಪಾವತಿಸುವವರೆಗೂ ಮೃತದೇಹ ನೀಡುವುದಿಲ್ಲ ಎಂದು ಆಸ್ಪತ್ರೆಯವರು ಪಟ್ಟು ಹಿಡಿದಿದ್ದರು. ಸಂಬಂಧಿಕರೆಲ್ಲಾ ಸೇರಿ₹2 ಲಕ್ಷ ಸಂಗ್ರಹಿಸಿಕೊಟ್ಟ ನಂತರ ಶವ ಹಸ್ತಾಂತರಿಸಿದರು. ಅವರಿನ್ನೂ ಮರಣ ಪ್ರಮಾಣ ಪತ್ರ ಕೊಟ್ಟಿಲ್ಲ. ಬಾಕಿ ಹಣ ಕಟ್ಟಿ ಎಂದು ಪೀಡಿಸುತ್ತಿದ್ದಾರೆ’ ಎಂದರು.

ಕಾಮಾಕ್ಷಮ್ಮ ಅವರ ಸಂಪರ್ಕಕ್ಕೆ : 7022956864.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT