ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾತೆ ಬದಲಿಸಿಕೊಳ್ಳಲು ದೆಹಲಿಗೆ ಹೋಗುವುದಿಲ್ಲ: ಆನಂದ್‌ ಸಿಂಗ್‌

Last Updated 13 ಆಗಸ್ಟ್ 2021, 11:04 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ನಾನು ದೆಹಲಿಗೆ ಹೋಗುತ್ತೇನೆ ಎಂದು ಎಲ್ಲೂ ಹೇಳಿಲ್ಲ. ದೆಹಲಿಗೆ ಹೋಗುವುದೂ ಇಲ್ಲ’ ಎಂದು ಸಚಿವ ಆನಂದ್‌ ಸಿಂಗ್‌ ತಿಳಿಸಿದರು.

ನಗರದ ವೇಣುಗೋಪಾಲ ದೇವಸ್ಥಾನದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಆರ್‌. ಅಶೋಕ್‌ ಬಳಿ ಮಾತನಾಡಿದಾಗಲೂ ದೆಹಲಿಗೆ ಹೋಗುತ್ತೇನೆ ಎಂದು ಹೇಳಿಲ್ಲ. ಬಿ.ಎಸ್‌. ಯಡಿಯೂರಪ್ಪನವರು ಹಿರಿಯರಾಗಿರುವುದರಿಂದ ಅವರ ಆಶೀರ್ವಾದ ಪಡೆಯಲು ಹೋಗಿದ್ದೆ. ಖಾತೆ ಸಂಬಂಧ ಅವರ ಬಳಿ ಏನು ಮಾತನಾಡಿಲ್ಲ. ಯಾವುದೇ ರೀತಿಯ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ. ಸಿ.ಎಂ. ಜತೆ ಚರ್ಚಿಸಿ ಬಗೆಹರಿಸಿಕೊಳ್ಳಿ ಎಂದು ಸಲಹೆ ಮಾಡಿದ್ದಾರೆ’ ಎಂದು ಹೇಳಿದರು.

‘ನಾನು ಪಕ್ಷದಲ್ಲಿಯೆ ಇರುತ್ತೇನೆ. ಹಿರಿಯರ ಮಾತಿಗೆ ಗೌರವ ಕೊಡುತ್ತೆನೆ. ಧ್ವಜಾರೋಹಣ ನಂತರ ಪುನಃ ನಾನು ಬೆಂಗಳೂರಿಗೆ ಹೋಗುತ್ತೇನೆ’ ಎಂದರು.

‘ಹೊಸದಾಗಿ ಅಸ್ತಿತ್ವಕ್ಕೆ ಬಂದ ವಿಜಯನಗರ ಜಿಲ್ಲೆಯಲ್ಲಿ ಧ್ವಜಾರೋಹಣ ಮಾಡುವ ಜವಾಬ್ದಾರಿ ನನಗೆ ವಹಿಸಿದ್ದಾರೆ. ಬಳ್ಳಾರಿಯಲ್ಲಿ ಜಿಲ್ಲಾಧಿಕಾರಿ ಧ್ವಜಾರೋಹಣ ಮಾಡುತ್ತಾರೆ. ಜಿಲ್ಲೆ ರಚನೆ ಬಳಿಕ ನಡೆಯುತ್ತಿರುವ ಮೊದಲ ಸ್ವಾತಂತ್ರ್ಯ ದಿನಾಚರಣೆ ಇದು. ಈ ಸುವರ್ಣ ಗಳಿಗೆಯಲ್ಲಿ ನನಗೆ ಧ್ವಜಾರೋಹಣಕ್ಕೆ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ. ವಿಜಯನಗರ ಕ್ಷೇತ್ರದ ಜನರ ಋಣ ತೀರಿಸಲು ನನಗೆ ಆಗುವುದಿಲ್ಲ’ ಎಂದರು.

ಕಚೇರಿ ಕಾರ್ಯಾರಂಭ

ನಗರದ ರಾಣಿಪೇಟೆಯಲ್ಲಿನ ಸಚಿವ ಆನಂದ್‌ ಸಿಂಗ್‌ ಅವರ ಕಚೇರಿ ಶುಕ್ರವಾರ ಪುನಃ ಆರಂಭಗೊಂಡಿದೆ. ಅವರ ಆಪ್ತ ಸಹಾಯಕರು, ಕಚೇರಿಯ ಎಲ್ಲ ಸಿಬ್ಬಂದಿ ಕೆಲಸಕ್ಕೆ ಹಾಜರಾಗಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುತ್ತಿರುವುದು ಕಂಡು ಬಂತು. ಆದರೆ, ನಾಮಫಲಕ ಅಳವಡಿಸಿಲ್ಲ.

ಖಾತೆ ಬದಲಿಸಬೇಕೆಂದು ಪಟ್ಟು ಹಿಡಿದಿರುವ ಆನಂದ್‌ ಸಿಂಗ್‌, ಆ. 10ರಂದು ಅವರ ಕಚೇರಿ ಬಂದ್‌ ಮಾಡಿ, ಅದರ ನಾಮಫಲಕ ತೆಗೆಸಿದ್ದರು. ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವುದನ್ನು ನಿಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT