ಮಂಗಳವಾರ, ಸೆಪ್ಟೆಂಬರ್ 21, 2021
29 °C
ಮೊಟ್ಟೆಯ ₹ 2 ಹೆಚ್ಚುವರಿ ಹಣ ಬಿಡುಗಡೆ: ಆದೇಶ ಪಾಲಿಸದ ಗ್ರಾ.ಪಂ.ಗಳು

ಅಂಗನವಾಡಿ ಕಾರ್ಯಕರ್ತೆಯರಿಗೆ ಹೆಚ್ಚುವರಿ ಹೊರೆ

ಎಚ್‌. ಅನಿತಾ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ನೀಡುವ ಮೊಟ್ಟೆಯ ₹ 2 ಹೆಚ್ಚುವರಿ ಹಣ ಬಿಡುಗಡೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಮಾಡಿರುವ ಆದೇಶವನ್ನು ಗ್ರಾಮ ಪಂಚಾಯಿತಿಗಳು ಪಾಲಿಸದಿರುವುದರಿಂದ ಅಂಗನವಾಡಿ ಕಾರ್ಯಕರ್ತೆಯರು ತೊಂದರೆಗೆ ಸಿಲುಕಿದ್ದಾರೆ.

ಸರ್ಕಾರವು ಒಂದು ಮೊಟ್ಟೆಗೆ ₹ 5 ದರ ನಿಗದಿಪಡಿಸಿದೆ. ಈಚೆಗೆ ಮಾರುಕಟ್ಟೆಯಲ್ಲಿ ದರ ಹೆಚ್ಚಾಗಿರುವುದರಿಂದ ₹ 7ಕ್ಕೆ ಹೆಚ್ಚಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಗೆ ಮನವಿ ಮಾಡಿತ್ತು.

ಅಂಗನವಾಡಿ ಕೇಂದ್ರಕ್ಕೆ ಖರೀದಿಸುವ ಮೊಟ್ಟೆಗಳ ಹೆಚ್ಚುವರಿ ಹಣವನ್ನುಸ್ವಂತ ಸಂಪನ್ಮೂಲದಿಂದ ಭರಿಸುವಂತೆ ಗ್ರಾಮ ಪಂಚಾಯಿತಿಗಳಿಗೆ ಇಲಾಖೆ ಆದೇಶಿಸಿತ್ತು. ಆದರೆ, ಗ್ರಾಮ ಪಂಚಾಯಿತಿಗಳು ಆದೇಶವನ್ನು ಪಾಲಿಸುತ್ತಿಲ್ಲ. ಹೆಚ್ಚುವರಿ ಹಣದ ಹೊರೆಯನ್ನು ಕಾರ್ಯಕರ್ತೆಯರೇ ಹೊರುವಂತಾಗಿದೆ.

‘ಫಲಾನುಭವಿಗಳಿಗೆ ಮೊಟ್ಟೆ ವಿತರಿಸಲು ಸರ್ಕಾರವು ಮುಂಗಡವಾಗಿ ಹಣ ಬಿಡುಗಡೆ ಮಾಡದ್ದರಿಂದ ಕೈಯಿಂದ ಹಣ ಹಾಕಿ ಮೊಟ್ಟೆಗಳನ್ನು ವಿತರಿಸಿ, ನಂತರ ಬಿಲ್‌ ಕಳುಹಿಸಿ ಹಣ ಪಡೆದುಕೊಳ್ಳುತ್ತಿದ್ದೇವೆ. ಮೊಟ್ಟೆಗೆ ತಗಲುವ ಹೆಚ್ಚುವರಿ ಹಣವನ್ನೂ ನಾವೇ ಭರಿಸಬೇಕು. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಮೊಟ್ಟೆ ವಿತರಣೆ ನಿಲ್ಲಿಸಬೇಡಿ ಎನ್ನುತ್ತಾರೆ. ಮೊಟ್ಟೆ ವಿತರಣೆಯಲ್ಲಿ ವ್ಯತ್ಯಾಸವಾದರೆ ಫಲಾನುಭವಿಗಳು ದೂರುತ್ತಾರೆ. ಅಡಕತ್ತರಿ ನಡುವೆ ಸಿಕ್ಕಿದ ಹಾಗಾಗಿದೆ ನಮ್ಮ ಸ್ಥಿತಿ’ ಎನ್ನುವುದು ಅಂಗನವಾಡಿ ಕಾರ್ಯಕರ್ತೆಯರ ಅಳಲು.

‘ಹೆಚ್ಚುವರಿ ಹಣ ಬಿಡುಗಡೆ ಮಾಡುವಂತೆ ಗ್ರಾಮ ಪಂಚಾಯಿತಿಗಳಿಗೆ ಕೇಳಿದರೆ, ಕೊರೊನಾದಿಂದಾಗಿ ತೆರಿಗೆ ಸಂಗ್ರಹಿಸಿಲ್ಲ. ಸಣ್ಣಪುಟ್ಟ ಉಸ್ತುವಾರಿಗೇ ಹಣವಿಲ್ಲ ಎನ್ನುತ್ತಾರೆ. ಮನೆ ಮನೆಗೆ ತೆರಳಿ ತೆರಿಗೆ ಸಂಗ್ರಹಿಸಿ, ಜಾಬ್‌ ಕಾರ್ಡ್‌ ಮಾಡಿಸಿಕೊಡಿ ಎಂದು ಪಂಚಾಯಿತಿ ಕೆಲಸಗಳನ್ನೂ ನಮಗೇ ಹೇಳುತ್ತಾರೆ’ ಎಂದೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕುಕ್ಕುಟ ಮಹಾಮಂಡಳದಿಂದ ವಿತರಿಸಲಿ: ನಗರವಿರಲಿ, ಹಳ್ಳಿ ಇರಲಿ ಒಂದು ಮೊಟ್ಟೆಗೆ ₹ 5 ನಿಗದಿಪಡಿಸಿರುವುದರಿಂದ ಹೆಚ್ಚುವರಿ ಹಣವನ್ನು ಕಾರ್ಯಕರ್ತೆಯರು ಕೈಯಿಂದ ಹಾಕುತ್ತಿದ್ದಾರೆ. ಹಾಗಾಗಿ ಮೊಟ್ಟೆ ಖರೀದಿಸಲು ಕಾರ್ಯಕರ್ತೆಯರಿಗೆ ಮುಂಗಡವಾಗಿ ಹಣ ಬಿಡುಗಡೆ ಮಾಡಬೇಕು. ಇಲ್ಲವೇ ಕುಕ್ಕುಟ ಮಹಾಮಂಡಳದಿಂದ ಮೊಟ್ಟೆಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು. ಫಲಾನುಭವಿಗಳಿಗೆ ಮೊಟ್ಟೆ ವಿತರಿಸಲು ತಿಂಗಳಿಗೆ ₹ 5 ಕೋಟಿ ವೆಚ್ಚವಾಗುತ್ತದೆ. ಅದರಲ್ಲಿ ಸಚಿವರಿಗೆ ₹ 1 ಕೋಟಿ, ಟೆಂಡರ್‌ ಕುದುರಿಸಿದ ಶಾಸಕರಿಗೆ ₹ 50 ಲಕ್ಷ , ಏಜೆನ್ಸಿ ಪಡೆದ ವ್ಯಕ್ತಿ ಮತ್ತು ಸರಬರಾಜು ವೆಚ್ಚ ಕಳೆದು ಮಿಕ್ಕುವ ಹಣದಲ್ಲಿ ಎಷ್ಟರಮಟ್ಟಿಗೆ ಮೊಟ್ಟೆಗಳನ್ನು ವಿತರಿಸಲು ಸಾಧ್ಯ? ಸಂಬಂಧಪಟ್ಟವರು ಕಾರ್ಯಕರ್ತೆಯರಿಗೆ ಎದುರಾಗಿರುವ ಸಮಸ್ಯೆ ಪರಿಹರಿಸಲು ಮುಂದಾಗಬೇಕು.

-ಎಸ್‌. ವರಲಕ್ಷ್ಮಿ, ಅಧ್ಯಕ್ಷೆ, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು)

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು