ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿದ್ಧಕಲೆ’ಗೆ ಕೊನೆ ಹಾಡಿ: ಎಚ್‌ಡಿಕೆ

‘ಅಕ್ಕಿ’ ರಾಜಕೀಯ : ಸಿದ್ದರಾಮಯ್ಯ ವಿರುದ್ಧ ಎಚ್‌.ಡಿ ಕುಮಾರಸ್ವಾಮಿ ಸರಣಿ ಟ್ವೀಟ್‌
Last Updated 26 ಸೆಪ್ಟೆಂಬರ್ 2021, 20:18 IST
ಅಕ್ಷರ ಗಾತ್ರ

ಬೆಂಗಳೂರು: ‘ಕೇವಲ ಚುನಾವಣೆಯಲ್ಲಿ ಮತ ಪಡೆಯುವ ದುರುದ್ದೇಶದಿಂದ ನೀವು ಜನರು ತಿನ್ನುವ ಅನ್ನದಲ್ಲೂ ರಾಜಕೀಯ ಮಾಡುತ್ತಿದ್ದೀರಿ. ಸುಳ್ಳಿನ ಶೂರ ಸಿದ್ದರಾಮಯ್ಯವರೇ, ಇನ್ನಾದರೂ ನಿಮ್ಮ ಸುಳ್ಳಿನ ‘ಸಿದ್ಧಕಲೆ’ಗೆ ಕೊನೆ ಹಾಡಿ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಸರಣಿ ಟ್ವೀಟ್‌ ಮಾಡಿರುವ ಅವರು, ‘ಅಕ್ಕಿಭಾಗ್ಯದ ಅಸಲಿಯತ್ತು ಏನು ಎಂಬುದನ್ನು ಈಗಾಗಲೇ ಸದನದಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದೇನೆ. ಅದಾದ ಮೇಲೂ ನಿಮ್ಮ ‘ಸುಳ್ಳಿನ ಜಪ’ ಮುಂದುವರಿದಿದೆ. ಸತ್ಯ ಹೇಳಲು ಹಿಂಜರಿಕೆ- ಅಧೈರ್ಯ ಏಕೆ. ಸುಳ್ಳಿನ ಮೇಲಿರುವಷ್ಟು ನಿಷ್ಠೆ ಸತ್ಯದ ಮೇಲೆ ಯಾಕಿಲ್ಲ. 5 ಕೆಜಿ ಅಕ್ಕಿ ಅಸಲಿಯತ್ತು ಬಗ್ಗೆ ಹೇಳಲು ಅಂಜಿಕೆ ಏಕೆ’ ಎಂದು ಪ್ರಶ್ನಿಸಿದ್ದಾರೆ.

‘ಸಮ್ಮಿಶ್ರ ಸರ್ಕಾರದಲ್ಲಿ ನಾನು ಮುಖ್ಯಮಂತ್ರಿ ಆಗಿದ್ದೆ. ಅದಕ್ಕೆ ಮುನ್ನ ಬಜೆಟ್ ಮಂಡಿಸಿ ಚುನಾವಣೆಗೆ ಹೋದ ತಾವು ಎಷ್ಟು ಕೆಜಿ ಅಕ್ಕಿಗೆ ಹಣ ಇಟ್ಟಿದ್ದಿರಿ. ಐದು ಕೆಜಿಗೋ ಅಥವಾ ಏಳು ಕೆಜಿಗೋ. ಸತ್ಯವನ್ನು ಕಕ್ಕಲು ಕಷ್ಟವೇಕೆ. ನಾಲಗೆ ತಡವರಿಸುತ್ತಿದೆಯೇ’ ಎಂದು ತಿರುಗೇಟು ನೀಡಿದ್ದಾರೆ.

‘ಸುಳ್ಳಿನ ಸರಮಾಲೆ ಪೋಣಿಸುವ ಎಚ್‌ಡಿಕೆ’

ದೇವನಹಳ್ಳಿ: ‘ನಾನು ಮುಖ್ಯಮಂತ್ರಿಯಾಗಿದ್ದಾಗ 7ಕೆ.ಜಿ ಆಕ್ಕಿ ಕೊಟ್ಟಿದ್ದೇನೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದು 2018ರಲ್ಲಿ ಜೆಡಿಎಸ್ ಸರ್ಕಾರದಿಂದ ಅಲ್ಲ. ಕಾಂಗ್ರೆಸ್‌ನ 80 ಶಾಸಕರ ಬೆಂಬಲದಿಂದ. ಅವರು ಸುಳ್ಳಿನ ಸರಮಾಲೆ ಪೋಣಿಸುತ್ತಿದ್ದಾರೆ. ಸುಳ್ಳು ಬಿಟ್ಟು ಬೇರೇನೂ ಹೇಳೋದಿಲ್ಲ’ ಎಂದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಭಾನುವಾರ ಕಾಂಗ್ರೆಸ್ ಆಯೋಜಿಸಿದ್ದ’ಗಾಂಧಿ ನಡಿಗೆ’ ಕಾರ್ಯಕ್ರಮ ನಂತರ, ಸಿದ್ದರಾಮಯ್ಯ ಬಡವರಿಗೆ ಅಕ್ಕಿ ಕೊಡಲಿಲ್ಲ ಎಂಬ ಕುಮಾರಸ್ವಾಮಿ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಅವರು, ’2013ರಿಂದ 2018ರವರೆಗೂ ಮೊದಲ ಒಂದು ವರ್ಷ ಕೆಜಿಗೆ ₹1ರಂತೆ ನಂತರ, ಎರಡು ವರ್ಷ ಉಚಿತವಾಗಿ ಅಕ್ಕಿ ಕೊಟ್ಟೆ. ಮತ್ತೆ ಎರಡು ವರ್ಷ ತಲಾ 7ಕೆ.ಜಿಯಂತೆ ಅಕ್ಕಿ ಕೊಟ್ಟಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT