ಶನಿವಾರ, ನವೆಂಬರ್ 26, 2022
23 °C
ಕಂದಾಯ ಸಚಿವ ಆರ್‌. ಅಶೋಕ ಸವಾಲು

ಭ್ರಷ್ಟಾಚಾರ ಮಾಡದ ಕಾಂಗ್ರೆಸಿಗರು ಇದ್ದಾರೆಯೆ? - ಆರ್‌. ಅಶೋಕ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಭ್ರಷ್ಟಾಚಾರ ಮಾಡದ ಕಾಂಗ್ರೆಸ್ ನಾಯಕರು ಯಾರಾದರೂ ಇದ್ದರೆ, ಅಂತಹವರು ‘ಪೇಸಿಎಂ’ ಪೋಸ್ಟರ್ ಅಂಟಿಸಿದರೆ ಸೆಲ್ಯೂಟ್ ಮಾಡುತ್ತೇನೆ ಎಂದು ಕಂದಾಯ ಸಚಿವ ಆರ್. ಅಶೋಕ ಸವಾಲು ಹಾಕಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕಾಂಗ್ರೆಸ್ ಕೃಪಾಪೋಷಿತ ನಾಟಕ ಮಂಡಳಿಯನ್ನು ಈ ನಾಡಿನ ಜನ ನಂಬಲ್ಲ. ಎಷ್ಟೇ ಸುಳ್ಳು ಹೇಳಿದರೂ ಯಾರನ್ನೂ ನಂಬಿಸಲು ಸಾಧ್ಯವಿಲ್ಲ’ ಎಂದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ 65 ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿದ್ದವು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈಗಷ್ಟೇ ಜೈಲಿನಿಂದ ಹೊರಗೆ ಬಂದಿದ್ದಾರೆ. ಇಂತಹವರು ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಲೆ ಲೋಕಾಯುಕ್ತ, ಎಸಿಬಿಯಲ್ಲಿ ಒಂದೇ ಒಂದು ದೂರು ದಾಖಲಾಗಿದ್ದರೂ ತೋರಿಸಲಿ ಎಂದು
ಹೇಳಿದರು.

‘ಭಾರತ್ ಜೋಡೊ’ ಯಾತ್ರೆ ಟೀಕಿಸಿದ ಅವರು, ‘ಅದು ಕಾಂಗ್ರೆಸ್ ಜೋಡೊ ಯಾತ್ರೆ’ಯಾಗಿದೆ. ರಾಜಸ್ಥಾನದಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿ ಇತ್ತು. ಈಗ ಅಲ್ಲೂ ಸರ್ಕಾರ ಬೀಳುತ್ತಿದೆ. ಇನ್ನು ಒಂದು ವಾರದಲ್ಲಿ ಕಾಂಗ್ರೆಸ್‌ನವರು ಭಿಕ್ಷಾಪಾತ್ರೆ ಹಿಡಿದು ದೇಶ ಸುತ್ತಬೇಕಾಗುತ್ತದೆ ಎಂದು ವ್ಯಂಗ್ಯವಾಡಿದರು.

ಅರವತ್ತೈದು ವರ್ಷಗಳ ಕಾಲ ಕಾಂಗ್ರೆಸಿಗರು ರಾಜ್ಯ ಲೂಟಿ ಮಾಡಿದ್ದು, ಈಗ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಅದ್ಯಾವ ಮುಖ ಇಟ್ಟುಕೊಂಡು ಪೋಸ್ಟರ್ ಅಂಟಿಸುತ್ತಾರೊ ಗೊತ್ತಿಲ್ಲ. ದೆಹಲಿಯಿಂದ ಹಿಡಿದು ರಾಜ್ಯದವರೆಗೆ ಕಾಂಗ್ರೆಸ್ ನಾಯಕರು ಜೈಲು–ಬೇಲಿನಲ್ಲಿ ಇದ್ದಾರೆ ಎಂದು ಟೀಕಿಸಿದರು.

‘ಭಾರತ ಮಾತೆ ಅಪವಿತ್ರ’ ಎಂದು ಹೇಳಿದ ಪಾದ್ರಿ ಜತೆ ರಾಹುಲ್ ಗಾಂಧಿ ಪಾದಯಾತ್ರೆ ಮಾಡುತ್ತಿದ್ದಾರೆ. ಅವರಿಗೆ ರಾಜ್ಯದ ನೆಲ ತುಳಿಯುವ ನೈತಿಕತೆ ಇಲ್ಲವಾಗಿದೆ. ಯಾತ್ರೆ ಬಿಟ್ಟು ವಾಪಸ್ ಹೋಗಲಿ. ರಾಜ್ಯಕ್ಕೆ ರಾಹುಲ್ ಕಾಲಿಡಬಾರದು ಎಂದು
ಆಗ್ರಹಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು