ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ– ಕಾಂಗ್ರೆಸ್‌ ಸದಸ್ಯರ ವಾಕ್ಸಮರ

ಎಸ್‌ಸಿಪಿ– ಟಿಎಸ್‌ಪಿ ಯೋಜನೆ ಅನುದಾನ ಬಳಕೆ
Last Updated 5 ಫೆಬ್ರುವರಿ 2021, 20:03 IST
ಅಕ್ಷರ ಗಾತ್ರ

ಬೆಂಗಳೂರು: ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಅಭಿವೃದ್ಧಿಗಾಗಿ ರೂಪಿಸಿರುವ ಎಸ್‌ಸಿಪಿ– ಟಿಎಸ್‌ಪಿ ಯೋಜನೆಯ ಅನುದಾನ ಬಳಕೆಗೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್‌ ಸದಸ್ಯರ ನಡುವೆ ವಿಧಾನಸಭೆಯಲ್ಲಿ ಶುಕ್ರವಾರ ವಾಕ್ಸಮರ ನಡೆಯಿತು.

ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಪ್ರಸ್ತಾಪಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಉತ್ತರ ನೀಡಿದ ಬಳಿಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಅಭಿವೃದ್ಧಿಗೆ ಅನುದಾನ ಖರ್ಚು ಮಾಡಿಲ್ಲ. ಇದರಿಂದಾಗಿ ಸಮುದಾಯಕ್ಕೆ ಅನ್ಯಾಯವಾಗಿದೆ’ ಎಂದು ಆಕ್ಷೇಪಿಸಿದರು.

ಯಡಿಯೂರಪ್ಪ, ‘ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ, ಒಬಿಸಿಯವರ ಬಗ್ಗೆ ಕಾಳಜಿ ವಹಿಸಿದ್ದ ಕಾರಣಕ್ಕೆ ಅವರು ನಮ್ಮ ಜತೆಗೆ ಇದ್ದಾರೆ. ಮಾರ್ಚ್‌ ಅಂತ್ಯದ ವೇಳೆ ಯೋಜನೆಯ ಗುರಿ ಸಾಧಿಸುತ್ತೇವೆ‘ ಎಂದರು.

ಆಗ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ‘ಕೋವಿಡ್‌ ಕಾರಣಕ್ಕೆ ವಸತಿ ಶಾಲೆಗಳೆಲ್ಲ ಮುಚ್ಚಿದ್ದವು. ಹೀಗಾಗಿ ಅನುದಾನ ಬಳಕೆಯಲ್ಲಿ ಸ್ವಲ್ಪ ಹಿಂದೆ ಉಳಿದಿದ್ದೇವೆ. ಆದರೆ, ಸಮುದಾಯದ ಅಭಿವೃದ್ಧಿಗಾಗಿ ಶಾಶ್ವತ ಕೆಲಸ ಮಾಡಿದ್ದೇವೆ. 4,853 ಎಕರೆ ಭೂಮಿ ಖರೀದಿಸಿದ್ದೇವೆ. 25 ವರ್ಷಗಳಲ್ಲಿ ಯಾವ ಸರ್ಕಾರವೂ ಈ ಕೆಲಸ ಮಾಡಿರಲಿಲ್ಲ‘ ಎಂದರು.

ಈ ಮಾತಿಗೆ ಕಾಂಗ್ರೆಸ್‌ನ ಪ್ರಿಯಾಂಕ್‌ ಖರ್ಗೆ, ತುಕಾರಾಮ್‌, ಭೀಮಾ ನಾಯ್ಕ್‌, ಅಜಯ್‌ ಸಿಂಗ್‌, ಪಿ.ಟಿ.ಪರಮೇಶ್ವರ ನಾಯ್ಕ್‌ ಮತ್ತಿತರರು ಆಕ್ಷೇಪಿಸಿದರು. ಎಸ್‌ಸಿಪಿ– ಟಿಎಸ್‌ಪಿ ಕಾಯ್ದೆಯನ್ನು ತಂದಿದ್ದೇ ಸಿದ್ದರಾಮಯ್ಯ ಸರ್ಕಾರ ಎಂದರು.

ಗೋವಿಂದ ಕಾರಜೋಳ, ‘ನಾವು ಏನು ಮಾಡಿದ್ದೇವೆ?, ನೀವೇನೂ ಮಾಡಿದ್ದೀರಿ? ಎಂಬ ಬಗ್ಗೆ ಬಹಿರಂಗ ಚರ್ಚೆಗೆ ನಾನು ಸಿದ್ಧನಿದ್ದೇನೆ’ ಎಂದು ಸವಾಲು ಎಸೆದರು. ’ಮುಂದಿನ ಅಧಿವೇಶನದಲ್ಲಿ ಈ ವಿಚಾರದ ಬಗ್ಗೆ ಅರ್ಧ ದಿನ ಚರ್ಚೆ ಮಾಡೋಣ‘ ಎಂದು ಮುಖ್ಯಮಂತ್ರಿ ಸಹಮತ ವ್ಯಕ್ತಪಡಿಸಿದರು. ಇದಕ್ಕೆ ನಾವು ಸಿದ್ಧರಿದ್ದೇವೆ ಎಂದು ಕಾಂಗ್ರೆಸ್‌ ಸದಸ್ಯರು ಹೇಳಿದರು.

‘ಈ ಯೋಜನೆಗೆ 17–18ರಲ್ಲಿ ನಾನು ₹30 ಸಾವಿರ ಕೋಟಿ ಕೊಟ್ಟಿದ್ದೆ. ಬಿಜೆಪಿ ಸರ್ಕಾರ ₹25 ಸಾವಿರ ಕೋಟಿಯಷ್ಟೇ ಕೊಟ್ಟಿದೆ’ ಎಂದು ಸಿದ್ದರಾಮಯ್ಯ ದೂರಿದರು.

ಯೋಜನೆಗೆ ಮೀಸಲಿಟ್ಟ ಮೊತ್ತ ಹಾಗೂ ಖರ್ಚು ಮಾಡಿರುವ ಬಗ್ಗೆ ಯಡಿಯೂರಪ್ಪ ವಿವರ ನೀಡಿದರು. ಅನುದಾನ ಹಂಚಿಕೆ ತಾರತಮ್ಯದ ಬಗ್ಗೆ ಸಿದ್ದರಾಮಯ್ಯ ಮಾತನಾಡಲು ಆರಂಭಿಸಿದರು.

ಆಗ ಮುಖ್ಯಮಂತ್ರಿ ಕುಳಿತಲ್ಲೇ ವಾಚ್‌ ತೋರಿಸಿ, ‘ಈಗ ಮಧ್ಯಾಹ್ನ 12.35 ಆಗಿದೆ. ರಾಷ್ಟ್ರಪತಿಯವರ ಜತೆಗೆ ಏರೊ ಇಂಡಿಯಾ ಪ್ರದರ್ಶನಕ್ಕೆ ಹೋಗಬೇಕಿದೆ. ಬೇಗ ಮುಗಿಸಿ’ ಎಂದು ನಗುತ್ತಲೇ ವಿನಂತಿಸಿದರು.

ಸಿದ್ದರಾಮಯ್ಯ ಕೂಡಲೇ, ‘ಮುಖ್ಯಮಂತ್ರಿಯವರ ಉತ್ತರ ನಮಗೆ ಸಮಾಧಾನ ತಂದಿಲ್ಲ. ನಾವು ಸಭಾತ್ಯಾಗ ಮಾಡುತ್ತೇವೆ’ ಎಂದು ಪ್ರಕಟಿಸಿದರು. ಕಾಂಗ್ರೆಸ್‌ ಸದಸ್ಯರು ಘೋಷಣೆ ಕೂಗುತ್ತಾ ಸದನದಿಂದ ನಿರ್ಗಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT