ಗುರುವಾರ , ಆಗಸ್ಟ್ 18, 2022
25 °C

ಡಿಕೆಶಿಗಾಗಿ ಆಪ್ತರಿಂದ ಹವಾಲಾ ವಹಿವಾಟು: ಇ.ಡಿ. ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ‘ಕಪ್ಪು ಹಣ’ವನ್ನು ಸಕ್ರಮಗೊಳಿಸಲು ಅವರ ಆಪ್ತರಾದ ಸುನೀಲ್‌ ಕುಮಾರ್‌ ಶರ್ಮ ಮತ್ತು ಇತರರು ‘ಹವಾಲಾ’ ವಹಿವಾಟು ನಡೆಸುತ್ತಿದ್ದರು ಎಂದು ಜಾರಿ ನಿರ್ದೇಶನಾಲಯ (ಇ.ಡಿ) ನವದೆಹಲಿಯ ಚುನಾಯಿತ ಪ್ರತಿನಿಧಿಗಳ ಪ್ರಕರಣಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಹೇಳಿದೆ.

2017ರಲ್ಲಿ ಶಿವಕುಮಾರ್‌ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿಮಾಡಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶೋಧ ನಡೆಸಿದ್ದರು. ಆಗ, ದೆಹಲಿಯ ವಿವಿಧ ಸ್ಥಳಗಳಲ್ಲಿ ₹ 8.59 ಕೋಟಿ ನಗದು ವಶಕ್ಕೆ ಪಡೆಯಲಾಗಿತ್ತು. ಈ ಕುರಿತು ಜಾರಿ ನಿರ್ದೇಶನಾಲಯ ತನಿಖೆ ನಡೆಸಿತ್ತು.

ಶಿವಕುಮಾರ್‌, ಅವರ ನಿಕಟವರ್ತಿಗಳಾದ ಉದ್ಯಮಿ ಸಚಿನ್‌ ನಾರಾಯಣ್‌, ಶರ್ಮಾ ಟ್ರಾನ್ಸ್‌ಪೋರ್ಟ್‌ ಮಾಲೀಕ ಸುನೀಲ್‌ ಕುಮಾರ್‌ ಶರ್ಮಾ, ದೆಹಲಿಯ ಆಂಜನೇಯ ಹನುಮಂತಯ್ಯ ಮತ್ತು ರಾಜೇಂದ್ರ ಎನ್‌. ವಿರುದ್ಧ ವಿಚಾರಣೆ ಆರಂಭಿಸುವಂತೆ ಕೋರಿ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ, ಹವಾಲಾ ವಹಿವಾಟಿನ ಆಪಾದನೆ ಮಾಡಿದೆ. ಈ ವರದಿಯನ್ನು ಮಾನ್ಯ ಮಾಡಿರುವ ನ್ಯಾಯಾಲಯ ಜುಲೈ 1ರಂದು ವಿಚಾರಣೆಗೆ ಹಾಜರಾಗುವಂತೆ ಎಲ್ಲ ಆರೋಪಿಗಳಿಗೂ ಸಮನ್ಸ್‌ ಜಾರಿಗೆ ಆದೇಶಿಸಿದೆ.

‘ಶಿವಕುಮಾರ್‌ ಅವರ ಅಕ್ರಮ ಗಳಿಕೆಯನ್ನು ಸಕ್ರಮಗೊಳಿಸಲು ಸುನೀಲ್‌ ಕುಮಾರ್‌ ಶರ್ಮ ಬೆಂಗಳೂರಿನಿಂದ ದೆಹಲಿಯವರೆಗೂ ಹವಾಲಾ ವಹಿವಾಟು ನಡೆಸುತ್ತಾರೆ. ಮದ್ಯ ಮಾರಾಟದಲ್ಲಿ ತೊಡಗಿರುವ ಸಚಿನ್‌ ನಾರಾಯಣ್‌, ಅದನ್ನೇ ಬಳಸಿಕೊಂಡು ಶಿವಕುಮಾರ್‌ ಅವರ ಅಕ್ರಮ ಸಂಪತ್ತನ್ನು ಸಕ್ರಮಗೊಳಿಸಲು ನೆರವಾಗುತ್ತಿದ್ದಾರೆ’ ಎಂಬ ಆರೋಪ ಇ.ಡಿ ವರದಿಯಲ್ಲಿದೆ.

‘ಆದಾಯ ತೆರಿಗೆ ಅಧಿಕಾರಿಗಳು 2017ರಲ್ಲಿ ದೆಹಲಿಯಲ್ಲಿ ₹ 8.59 ಕೋಟಿ ನಗದು ವಶಪಡಿಸಿಕೊಂಡಿದ್ದ ಸಂದರ್ಭದಲ್ಲಿ ಅದು ಶಿವಕುಮಾರ್‌ ಅವರಿಗೆ ಸೇರಿದ್ದು ಎಂದು ಆಂಜನೇಯ ಮತ್ತು ರಾಜೇಂದ್ರ ಹೇಳಿಕೆ ನೀಡಿದ್ದರು. ನಂತರ ತನಿಖೆ ವೇಳೆ ಹೇಳಿಕೆ ಬದಲಿಸಿದರು. ಸುನೀಲ್‌ ಕುಮಾರ್‌ ಶರ್ಮ ಮತ್ತು ಸಚಿನ್‌ ನಾರಾಯಣ್‌ ಆ ನಗದು ತಮ್ಮದೇ ಎಂದು ಹೊಣೆ ಹೊತ್ತುಕೊಳ್ಳಲು ಯತ್ನಿಸಿದ್ದರು’ ಎಂದು ತನಿಖಾ ಸಂಸ್ಥೆ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು