ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ‘ಮಾದಕ’ ಲೋಕದ ಮೋಹ‘ಕತೆ’

Last Updated 5 ಸೆಪ್ಟೆಂಬರ್ 2020, 5:28 IST
ಅಕ್ಷರ ಗಾತ್ರ

ಬೆಂಗಳೂರು: ಡ್ರಗ್‌ ಎಂಬ ಮತ್ತೇರಿಸುವ ಪದಾರ್ಥಗಳ ಮೋಹಕ್ಕೆ ಬಿದ್ದವರು ದೀಪಕ್ಕೆ ತಾಕುವ ಪತಂಗ ಪತರಗುಟ್ಟಿ ಹೋಗುವಂತೆ ಬದುಕನ್ನೇ ಸರ್ವನಾಶ ಮಾಡಿಕೊಳ್ಳುತ್ತಾರೆ. ಇಂತಹ ಮಾದಕ ವ್ಯಸನದ ಮಹಾಜಾಲ ಕರ್ನಾಟಕವನ್ನು ಬಹುಕಾಲದಿಂದ ಆವರಿಸಿಕೊಂಡಿದೆ. ಅಚಾನಕ್ ಆಗಿ ಎನ್‌ಸಿಬಿ ನಡೆಸಿದ ದಾಳಿಯೊಂದು ಅದರ ಅಕರಾಳ ವಿಕರಾಳ ಮುಖವನ್ನು ತೆರೆದಿಡುತ್ತಿದೆ.

ಅದರ ಬೆನ್ನಲ್ಲೇ, ಸಿಸಿಬಿ ಪೊಲೀಸರು ನಡೆಸುತ್ತಿರುವ ಸರಣಿ ದಾಳಿ, ಬಂಧನಗಳು ಡ್ರಗ್‌ ಜಾಲದ ಸೂತ್ರಧಾರಿಗಳು, ಪಾತ್ರಧಾರಿಗಳು ಯಾರೆಲ್ಲ ಇದ್ದಾರೆ ಎಂಬುದು ಜನರ ಮುಂದೆ ತಂದು ನಿಲ್ಲಿಸುತ್ತಿದ್ದುಜಾಲದ ವ್ಯಾಪಕತೆ ಬಟ್ಟ ಬಯಲಾಗುತ್ತಿದೆ. ಈ ಜಾಲ ಬೆಂಗಳೂರಿಗೆ ಸೀಮಿತವಲ್ಲ; ವ್ಯಸನಿಗಳ ಸಂಪರ್ಕ ಒಂದು ಗಲ್ಲಿಗೆ, ಪ್ರದೇಶಕ್ಕಷ್ಟೇ ಇರುವುದಿಲ್ಲ. ಬೆಂಗಳೂರಿನ ಕೋರಮಂಗಲದ ಹೋಟೆಲ್‌, ನೆಲಮಂಗಲದ ಫಾರಂ ಹೌಸ್, ಕಾಲೇಜು ಬಳಿಯ ಸಿಗರೇಟು ಅಂಗಡಿಗಳಲ್ಲಿ ನಡೆಯುವ ವ್ಯವಹಾರಕ್ಕೆ‌ ಅಂತರರಾಷ್ಟ್ರೀಯ ಮಟ್ಟದ ನಂಟು ಇರುತ್ತದೆ.

ಈಗಲೂ ದೇಶದಲ್ಲೇ ಅತಿ ಹೆಚ್ಚಿನ ಸಂಖ್ಯೆಯ ಏಡ್ಸ್‌ ರೋಗಿಗಳಿರುವ ಎರಡನೇ ರಾಜ್ಯವಾದ ಮಣಿಪುರಕ್ಕೆ ಎಚ್‌ಐವಿ ಸೋಂಕಿತರ ಸ್ಥಿತಿಗತಿ ಅಧ್ಯಯನ ಮಾಡಲು ಹತ್ತು ವರ್ಷಗಳ ಹಿಂದೆ ಹೋಗಿದ್ದೆ.

ಉಖ್ರುಲ್‌ ಜಿಲ್ಲೆಯ ಹಳ್ಳಿಯೊಂದಕ್ಕೆ ನಮ್ಮ ತಂಡವನ್ನು ಕರೆದೊಯ್ದ ಸ್ವಯಂ ಸೇವಕರು, ಏಡ್ಸ್‌ ಚಿಕಿತ್ಸಾ ಕೇಂದ್ರದಲ್ಲಿ ಬಿಟ್ಟರು. ಕರ್ನಾಟಕದಲ್ಲಿ ನೂರಾರು ಏಡ್ಸ್‌ ರೋಗಿಗಳನ್ನು ಹತ್ತಿರದಿಂದ ಕಂಡಿದ್ದ ನನಗೆ ಆ ಕೇಂದ್ರದಲ್ಲಿ ಗೋಣು ಕೆಳಗೆ ಹಾಕಿ, ಮಂಪರಿನಲ್ಲಿದ್ದ ಯುವಕ–ಯುವತಿಯರ ಗುಂಪನ್ನು ನೋಡಿ ಗಾಬರಿಯಾಯಿತು. ಒಂದು ಕಾಲದಲ್ಲಿ ಕಟ್ಟುಮಸ್ತಾಗಿದ್ದು, ಕಾಯಿಲೆಯ ಕಾರಣಕ್ಕೆ ತೀರಾ ಸಪೂರವಾಗಿ ಕುಸಿದುಹೋಗುವಂತಿದ್ದ ಯುವಕನೊಬ್ಬ ಜಗತ್ತೇ ತಲೆ ಮೇಲೆ ಬಿದ್ದಂತೆ ಕುಳಿತಿದ್ದ. ದುಭಾಷಿಯ ಮೂಲಕ ಆತನನ್ನು ಮಾತಿಗೆಳೆದಾಗ ಇನ್ನೂ 23ರ ಏರು ಹರೆಯದವ ಎಂಬುದು ಗೊತ್ತಾಯಿತು.

‘ನನ್ನಪ್ಪ ಪೊಲೀಸ್ ಇಲಾಖೆಯಲ್ಲಿ ಡಿವೈಎಸ್‌ಪಿ ಆಗಿದ್ದಾರೆ’ ಎಂದಾಗ ಕುಳಿತಿದ್ದ ನೆಲದಲ್ಲೇ ಮತ್ತಷ್ಟುಬಿಗಿಯಾಗಿ ಕುಳಿತುಕೊಂಡು ಕಿವಿಯಾದೆ.

‘ನಾನು ಪಿಯು ಓದುತ್ತಿದ್ದಾಗಲೇ ಸ್ನೇಹಿತರ ಸಹವಾಸಕ್ಕೆ ಬಿದ್ದು ಶೋಕಿಗೆ ಸಿಗರೇಟು ಸೇದಲು ಶುರುವಿಟ್ಟುಕೊಂಡೆ. ಧಮ್ಮಿನ ಕಿಕ್ಕು ಸಾಲದಾದಾಗ ಡ್ರಗ್‌ಗೆ ಹೊರಳಿಕೊಂಡೆವು. ಊಟ ಇಲ್ಲದಿದ್ದರೆ ದೇಹ ತಡೆದುಕೊಳ್ಳುತ್ತಿತ್ತು. ಡ್ರಗ್‌ ಇಲ್ಲದಿದ್ದರೆ ಮೈನಡುಕ ಶುರುವಾಗುತ್ತಿತ್ತು. ಪೊಲೀಸ್‌ ಆದ ನನ್ನಪ್ಪನಿಗೆ ನನ್ನ ಚಟದ ವಾಸನೆ ಗೊತ್ತಾಗಲು ಬಹಳ ದಿನ ಬೇಕಾಗಲಿಲ್ಲ. ಮನೆಯಲ್ಲಿ ಕೂಡಿಹಾಕಿ ಬುದ್ದಿ ಹೇಳಿದರು; ಕಾಲೇಜಿಗೆ ಹೋಗಲು ಬಿಡಲಿಲ್ಲ. ಸ್ವಲ್ಪದಿನ ಬಿಟ್ಟಂತೆ ಮಾಡಿದೆ. ಹೇಗಾದರೂ ಮಾಡಿ ನನ್ನನ್ನು ಸರಿದಾರಿಗೆ ತರಬೇಕೆಂಬ ಹಟ ಹೊತ್ತ ಅಪ್ಪ ಮಣಿಪುರದಸ್ವಲ್ಪ ಸ್ಥಿತಿವಂತರ ಮಕ್ಕಳು ಓದುತ್ತಿದ್ದ ಬೆಂಗಳೂರಿನಲ್ಲಿ ಓದಿಸಲು ಸಿದ್ಧತೆ ಮಾಡಿದರು. ಅವರೇ ಖುದ್ದು ಜತೆಗೆ ಬಂದು ಬೆಂಗಳೂರಿನ ಹೆಸರಾಂತ ಕಾಲೇಜಿಗೆ ಸೇರಿಸಿ ಹಾಸ್ಟೆಲ್ ವ್ಯವಸ್ಥೆ ಮಾಡಿ ಇಂಫಾಲ(ರಾಜಧಾನಿ)ಗೆ ಹೋದರು. ಅಷ್ಟರಲ್ಲೇ ಒಂದು ವರ್ಷ ಶಿಕ್ಷಣಕ್ಕೆ ಗೋತಾ ಹೊಡೆದಿದ್ದೆ. ಎರಡು–ಮೂರು ತಿಂಗಳು ಯಾವುದೇ ಚಟವಿಲ್ಲದೇ ತನ್ನ ಪಾಡಿಗೆ ತಾನಿದ್ದೆ. ಮತ್ತೆ ಸಿಗರೇಟಿನ ವಾಸನೆಯ ಸೆಳೆತ ಹೆಚ್ಚಾಗಿ ಶುರುವಿಟ್ಟುಕೊಂಡೆ. ಸಹಪಾಠಿಗಳು ಅಂತವರೇ ಇದ್ದರು. ಅಲ್ಪಕಾಲದಲ್ಲೇ ಮತ್ತೆ ಡ್ರಗ್ಸ್‌ ಸಿಗಲು ಆರಂಭವಾಯಿತು. ಬೆಂಗಳೂರಿನಲ್ಲಿ ನಾನಾರೂಪದ, ನಾನಾ ರುಚಿಯ ಡ್ರಗ್ಸ್‌ ಸಿಗುತ್ತಿತ್ತು. ಅದು ಡ್ರಗ್‌ ಕಡೆಗಿನ ನನ್ನ ವ್ಯಾಮೋಹವನ್ನು ಹೆಚ್ಚಿಸಿತು. ಖುಲ್ಲಂಖುಲ್ಲಾ ದಾಸನಾದೆ. ಓದು ಮರೆಯಿತು; ಕಾಲೇಜಿನ ದಾರಿ ಕಾಣದಾಯಿತು. ಅಷ್ಟೊತ್ತಿಗಾಗಲೇ ಸಿರಿಂಜ್‌ ಮೂಲ ಡ್ರಗ್ಸ್‌ ತೆಗೆದುಕೊಳ್ಳುವ ಮಟ್ಟಕ್ಕೆ ತಲುಪಿಬಿಟ್ಟಿದ್ದೆ. ಹಿಂದೆ ಬರಲಾಗುತ್ತಿರಲಿಲ್ಲ. ಇದನ್ನು ಪತ್ತೆ ಹಚ್ಚಿದ ಅಪ್ಪ ಮತ್ತೆ ವಾಪಸ್ ಕರೆದೊಯ್ದರು. ಕೋಣೆಯಲ್ಲಿ ಕೂಡಿಡುವ ವಯಸ್ಸು ನನ್ನದಾಗಿರಲಿಲ್ಲ. ಮನೆಬಿಟ್ಟು ಹಳ್ಳಿಯ ಕಡೆಗೆ ಮುಖಮಾಡಿದೆ. ಇಲ್ಲಿ ಬಂದ ಮೇಲೆ ಕಾಸು ಇರಲಿಲ್ಲ; ಹಗಲು ಏನೋ ದುಡಿಯುವುದು; ಸ್ವಲ್ಪ ಕಾಸು ಬಂದರೆ ಡ್ರಗ್ಸ್‌ಗೆ ಸುರಿಯುವುದು. ಇಂಜೆಕ್ಷನ್ ಮೂಲಕ ಡ್ರಗ್‌ ತೆಗೆದುಕೊಳ್ಳುವುದು ಕಾಯಂ ಆಯಿತು. ಇಂಟ್ರಾವೆನಸ್‌ ಡ್ರಗ್‌ ಯೂಸರ್ಸ್‌(ಐಡಿಯು) ಆಗಿಬಿಟ್ಟಿ. ಸಿರಿಂಜ್ ತೆಗೆದುಕೊಳ್ಳಲು ದುಡ್ಡು ಇರದೇ ಇಲ್ಲದೇ ಇರುವುದರಿಂದ ಒಂದೇ ಸಿರಿಂಜ್‌ ಅನ್ನು ಜತೆಗಿದ್ದವರೆಲ್ಲ ಬಳಸುತ್ತಿದ್ದೆವು. ಅದರಿಂದ ಎಚ್‌ಐವಿ ಕೂಡ ಅಂಟಿಕೊಂಡು ಬಿಟ್ಟಿತು. ಅದರಿಂದ ಸೋತು ಸೊರಗಿ ಹೀಗೆ ಕುಳಿತಿದ್ದೇನೆ‘ ಎಂದು ಹೇಳುತ್ತಾ ಸುಸ್ತಾದ ಆತ ಸ್ವಯಂ ಸೇವಕರ ಕಡೆ ಕೈಚಾಚಿದ. ಅವರೇನೋ ಪುಡಿ ತಂದು ಬಾಯಿಗೆ ಹಾಕಿದರು. ಒಂದೇ ಗುಕ್ಕಿನಲ್ಲಿ ಅಂದು ನುಂಗಿದ ಆತ ಮತ್ತೆ ತಲೆ ಕೆಳಗೆ ಹಾಕಿ ಕುಳಿತುಕೊಂಡ.

ಚಿಂದಿ ಆಯುವ ಮಕ್ಕಳ ಮತ್ತು

ಬೀದಿ ಮಕ್ಕಳ ಬೆನ್ನು ಬಿದ್ದು, ಬೆಂಗಳೂರಿನಲ್ಲಿ ಕಸದ ರಾಶಿಯಲ್ಲಿ ಹುಡುಕುತ್ತಿದ್ದ ಗುಂಪೊಂದನ್ನು ಮಾತನಾಡಲು ಮುಂದಾದಾಗ ಅವರು ಓಡಲು ಮುಂದಾದರು. ಕೊನೆಗೆ ಅಲ್ಲಿದ್ದವರೊಬ್ಬರು ಕರೆಸಿ ಕೂಡಿಸಿದರು. ಅವರಿಗೆಲ್ಲ ಬಿಸ್ಕಿಟ್‌, ಜ್ಯೂಸ್ ಪ್ಯಾಕೆಟ್ ಕೊಟ್ಟು ಮಾತಿಗೆಳೆದೆ. ಕಸದಲ್ಲೇ ಏನಾದರೂ ಸಿಕ್ಕಿದರೆ ಅದನ್ನು ಮಾರಿ ಹೊಟ್ಟೆ ತುಂಬಿಸಿಕೊಳ್ಳುವ ಅವರ ಪಡಿಪಾಟಲನ್ನು ಕೇಳಲು ಆಸಕ್ತಿ ಇದ್ದ ನನಗೆ, ಅವರ ಮುಷ್ಟಿಯಲ್ಲಿಬಟ್ಟೆ, ಹತ್ತಿಯ ತುಂಡು ಇದ್ದುದು, ಅದನ್ನು ಆಗಾಗ ಅವರು ಮೂಗಿನ ಹತ್ತಿರ ತಂದು ಹೊಳ್ಳೆಯನ್ನು ಅರಳಿಸಿ ಒಳಗೆ ಎಳೆದುಕೊಳ್ಳುತ್ತಿದ್ದರು. ಅದು ಏನು ಅದು ಎಂದೆ. ಅವರು ಕುಳಿತಲ್ಲಿಂದ ಎದ್ದು ಓಡಲು ಅಣಿಯಾದರು. ಜಾರುತ್ತಿದ್ದ ಹರಿದ ಚಡ್ಡಿಯವನೊಬ್ಬನನ್ನು ಹಿಡಿದುಕೊಂಡ ಮೇಲೆ ಗುಂಪು ನಿಂತಿತು. ದುಡ್ಡುಕೊಡುತ್ತೇನೆ ಎಂದು ಆಸೆ ತೋರಿಸಿದ್ದಲ್ಲದೇ, ಏನು ಅದು ಹೇಳಿ; ನನಗೂ ಕೊಡಿ ಎಂದು ಪುಸಲಾಯಿಸಿದೆ. ಫೆವಿಕಾಲ್‌ ‌, ಟಯರ್‌ಗಳಿಗೆ ಪಂಚರ್ ಹಾಕಲು ಬಳಸುವ ಸೊಲ್ಯೊಶನ್‌, ಪಿವಿಸಿ ಪೈಪ್‌ಗಳನ್ನು ಅಂಟಿಸಲು ಬಳಸುವ ಸಾಲ್ವೆಂಟ್‌ಗಳು ಖಾಲಿಯಾದ ಮೇಲೆ ಎಸೆದ ಬಾಟಲ್‌, ಟ್ಯೂಬ್‌, ಡಬ್ಬಗಳಲ್ಲಿ ಉಳಿದಿರುವುದನ್ನು ಬಟ್ಟೆಗೆ ತಿಕ್ಕಿಕೊಂಡು ಮೂಸುತ್ತಿದ್ದರು. ಹಾಗೆ ಮೂಸಿದಾಗ ಅದರ ಅದರಿದ ಹೊರಸೂಸುತ್ತಿದ್ದ,ಹೊಟ್ಟೆ ಕಿವುಚುವ ವಾಸನೆ ಮತ್ತೇರಿಸಿದ ಅನುಭವ ಕೊಡುತ್ತದೆ; ಅದಕ್ಕಾಗಿ ಹಾಗೆ ಮಾಡುತ್ತೇವೆ. ಬೀಡಿ–ಸಿಗರೇಟು ತೆಗೆದುಕೊಳ್ಳಲು ದುಡ್ಡಿಲ್ಲ, ಅದಕ್ಕೆಇದನ್ನು ಬಳಸುತ್ತೇವೆ ಎಂದು ತಮ್ಮ ‘ಗಮ್ಮತ್ತಿ’ನ ಗುಟ್ಟು ಬಿಟ್ಟುಕೊಟ್ಟರು.

ಇವರೆಡು ಹಳೆಪುರಾಣ ಹಿಂದಿಟ್ಟುಕೊಂಡು ಈಗಿನ ಕತೆಯನ್ನು ನೋಡಬೇಕಿದೆ.

ಈಗ್ಗೆ ನಾಲ್ಕೈದು ದಿನಗಳಿಂದ ಕರ್ನಾಟಕದಲ್ಲಿ ಡ್ರಗ್‌ ದೊಡ್ಡ ಸದ್ದು ಮಾಡುತ್ತಿದೆ. ನಟಿ ರಾಗಿಣಿ ದ್ವಿವೇದಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅದಕ್ಕೆ ಮುನ್ನವೇ ಮೂರು ಜನರನ್ನು ಬಲೆಗೆ ಕೆಡವಿದ ಸಿಸಿಬಿ ಪೊಲೀಸರು ತನಿಖೆ ಮುಂದುವರಿಸಿದ್ದು, ಮತ್ತೊಬ್ಬ ನಟಿ ಸಂಜನಾ ಗಲ್ರಾನಿ ಆಪ್ತ ರಾಹುಲ್‌ನನ್ನು ಬಲೆಗೆ ಕೆಡವಿದ್ದಾರೆ. ಇನ್ನೂ ಯಾರ ಬುಡಕ್ಕೆ ಡ್ರಗ್‌ ‘ಕಿಚ್ಚು’ ಇಡಲಿದೆಯೋ ಗೊತ್ತಿಲ್ಲ.

ಚಿಂದಿ ಆಯುವ ಹುಡುಗರು ತಮ್ಮ ಕಷ್ಟ, ದಾರಿದ್ರ್ಯ, ಮನೆಯಲ್ಲಿ ಅಪ್ಪ–ಅಮ್ಮನ ಜಗಳ ನೋಡಲಾಗದೇ, ಬಾಲ್ಯದ ಬದುಕೇ ಸಿಗದೇ ಚಿಂದಿರಾಶಿಯಲ್ಲೇ ಸಿಕ್ಕಿದ ‘ಮತ್ತಿನ‘ ಮೂಲದಲ್ಲಿ ಮುಳುಗಿರುವವರು. ಆದರೆ, ಕರ್ನಾಟಕದ ಡ್ರಗ್‌ ಜಾಲದಲ್ಲಿ ಇರುವವರ ಪೈಕಿ ಬಹುತೇಕರು ಶೋಕಿಗಾಗಿ ಕಲಿತವರು; ಸದಾ ತುಂಬಿತುಳುಕುವ ಯೌವ್ವನದ ಮೈಕಟ್ಟಿನ ಚೆಲುವು ಅನವರತ ನಳನಳಿಸಬೇಕು ಎಂಬ ಕಾರಣಕ್ಕೆ ಆಗಾಗ ಮಾತ್ರೆ ರೂಪದ ಡ್ರಗ್‌ ಗುಳಿಗೆಗಳನ್ನು ಚೀಪುವ ಚಾಳಿ ಇಟ್ಟುಕೊಂಡವರು. ತಮಗೆ ಅಂಟಿದ ಚಟವನ್ನು ಗುಂಪಿಗೆ ಅಂಟಿಸಿ, ಅದರಲ್ಲೇ ಲಕ್ಷಗಟ್ಟಲೇ ವಹಿವಾಟು ನಡೆಸುತ್ತಿರುವವರು ಮತ್ತೆ ಹಲವರು.

ಇದರಲ್ಲಿ ನಟ–ನಟಿಯರು, ರಾಜಕಾರಣಿಗಳು, ಉದ್ಯಮಿಗಳ ಮಕ್ಕಳು ಸೇರಿದ್ದಾರೆ. ಆದರೆ, ಇದು ಚಟವಾಗಿ ಮಾತ್ರ ಇಲ್ಲ; ಕರ್ನಾಟಕದ ಒಡಲೊಳಗೆ ಇದ್ದುಕೊಂಡು ಒಳಗಿಂದಲೇ ನಾಡನ್ನು, ಯುವಜನರನ್ನು, ಸಂಸ್ಕೃತಿಯನ್ನು, ಸಮಾಜೋ–ಆರ್ಥಿಕ ವ್ಯವಸ್ಥೆಯನ್ನು, ಶಾಂತಿ–ಸೌಹಾರ್ದತೆಯನ್ನು ಮಣ್ಣು ಪಾಲು ಮಾಡುತ್ತಿರುವ ಹೀನದಂಧೆಯೂ ಹೌದು; ಹಾಗಂತ ಇದು ಈಗಿಂದೀಗ ದೊಪ್ಪೆಂದು ಮೇಲಿಂದ ಉದುರಿದ್ದಲ್ಲ. ನಿನ್ನೆ ಮೊನ್ನೆ ವಿಮಾನದಿಂದ ಹಾರಿಬಂದಿದ್ದಲ್ಲ; ಇದಕ್ಕೊಂದು ಇತಿಹಾಸವೇ ಇದೆ.

ಕೋಮುಗಲಭೆಯ ಹಿಂದಿದೆ ನಂಟು

ಕಾಂಗ್ರೆಸ್ ಸರ್ಕಾರ ಇದ್ದಾಗ ಮಂಗಳೂರಿನಲ್ಲಿ ಪದೇಪದೇ ಕೋಮುಗಲಭೆಗಳು ಸಮುದ್ರದ ಅಲೆಗಳಂತೆ ನಗರವನ್ನು, ನಗರದ ಹೊರವಲಯವನ್ನು ಅಪ್ಪಳಿಸುತ್ತಿದ್ದವು.

ಇದರ ಬಗ್ಗೆ ಹಿಂದಿನ ಕಾರಣಗಳನ್ನು ಕೆಣಕಿದಾಗ ಅಂದು ಅಲ್ಲಿದ್ದ, ಆಗಷ್ಟೇ ಪ್ರೊಬೇಷನರಿ ಮುಗಿಸಿ, ಪ್ರಧಾನ ಹುದ್ದೆ ವಹಿಸಿಕೊಂಡಿದ್ದ‌ ಪೊಲೀಸ್‌ ಅಧಿಕಾರಿ ಹೇಳಿದ್ದು ಹೀಗೆ: ‘ಇಲ್ಲಿನ ಕೋಮುಗಲಭೆಗಳ ಹಿಂದೆ ಡ್ರಗ್‌ ಹಾಗೂ ಮರಳು ಮಾಫಿಯಾದ ದೊಡ್ಡ ಕೈವಾಡ ಇದೆ. ದಕ್ಷ ಅಧಿಕಾರಿಗಳ ತಂಡ ಈ ಎರಡು ಮಾಫಿಯಾವನ್ನು ತುಳಿದು, ಆರೋಗ್ಯಕರ ಸಮಾಜವನ್ನು ನಿರ್ಮಾಣ ಮಾಡಲು ಮುಂದಾದಾಗ ಕೋಮುಗಲಭೆಯ ರೂಪದಲ್ಲಿ ಸಮಾಜವನ್ನು ಅಸ್ತವ್ಯಸ್ತಗೊಳಿಸುವ ಕೆಲಸಗಳು ನಡೆಯುತ್ತವೆ. ಗಲಭೆ ತಡೆಯಲು, ಮಾಡಿದವರ ಮೇಲೆ ಕೇಸು ಹಾಕಿ, ಕ್ರಮ ಕೈಗೊಳ್ಳಲು ಪೊಲೀಸರು ಸಕ್ರಿಯರಾಗುತ್ತಾರೆ. ರಾಜಕಾರಣಿಗಳು ಪರಸ್ಪರ ಆಪಾದನೆ ಮಾಡಿಕೊಳ್ಳುವುದರಲ್ಲಿ ತಲ್ಲೀನರಾಗುತ್ತಾರೆ. ಹೀಗೆ ಪೊಲೀಸರ ಗಮನವನ್ನು ಒಂದೆರೆಡು ತಿಂಗಳು ಬೇರೆ ಕಡೆಗೆ ಸೆಳೆದು ಮತ್ತೆ ಡ್ರಗ್‌ ದಂದೆಯ ದಾರಿಯನ್ನು ಸಲೀಸಾಗಿಸುವುದು ಇದರ ಹಿಂದಿನ ತಂತ್ರ. ಹಿಂದು–ಮುಸ್ಲಿಂ ಜಗಳ ಎಂಬುದು ಮೇಲ್ನೋಟಕ್ಕೆ ಇದು ಕಾಣಿಸುತ್ತದೆಯಷ್ಟೆ. ಧರ್ಮದಿಂದ ಬೇರೆಯಾದರೂ ಡ್ರಗ್ ದಂಧೆ ನಡೆಸುವಲ್ಲಿ ಕೆಲವೊಮ್ಮೆ ಒಟ್ಟಾಗಿರುತ್ತಾರೆ; ಮತ್ತೊಂದು ಕಾಲದಲ್ಲಿ ಬಡಿದಾಡುತ್ತಾರೆ. ಎರಡು ಗುಂಪು ಪೈಪೋಟಿಗೆ ಬಿದ್ದಾಗ ಅದು ಕಿಡಿಯಂತೆ ಎದ್ದು, ಧರ್ಮದ ತಿರುವು ಪಡೆದುಕೊಂಡು ಬಿಡುತ್ತದೆ. ಡ್ರಗ್‌, ಮರಳು ಮಾಫಿಯಾ ಮಟ್ಟಹಾಕಲು ನಾನು ಕೈಹಾಕಿದ್ದೇನೆ; ಎಷ್ಟು ದಿನ ಇಲ್ಲಿರುತ್ತೇನೋ ಗೊತ್ತಿಲ್ಲ’ ಎಂದವರು ಮಾತು ಮುಗಿಸಿದರು.

ಈ ಮಾತುಗಳಾಡಿ ಒಂದೆರಡು ತಿಂಗಳು ಕಳೆಯುವಷ್ಟರಲ್ಲಿ ಅವರನ್ನು ಕಾಂಗ್ರೆಸ್ ಸರ್ಕಾರ ಎತ್ತಂಗಡಿ ಮಾಡಿತ್ತು.

ಮಂಗಳೂರಿನಲ್ಲಿ ಅನ್ಯಧರ್ಮಕ್ಕೆ ಸೇರಿದ ಹುಡುಗ–ಹುಡುಗಿಯರು ಒಟ್ಟಾಗಿ ಓಡಾಡಿದರೆ ಬಜರಂಗದಳ, ಶ್ರೀರಾಮಸೇನೆಯವರು ಆ ವಿಷಯದಲ್ಲಿ ’ಧರ್ಮಯುದ್ಧ’ ಘೋಷಿಸುವುದುಂಟು. ಬಿಜೆಪಿ ಸರ್ಕಾರ ಬಂದ ಮೇಲೆ ಇಂತಹ ಘಟನೆಗಳು ಕಡಿಮೆಯಾದಂತಿವೆ. ಡ್ರಗ್ ಹಾವಳಿ ವಿಪರೀತ ಇದೆ ಎಂದು ಹೇಳಲಾಗುವ ಮಣಿಪಾಲದಲ್ಲಿ ಹುಡುಗ–ಹುಡುಗಿಯರು ಕೈಹಿಡಿದು ಓಡಾಡುವುದು ಸಾಮಾನ್ಯ. ಮಂಗಳೂರಿನಲ್ಲಿ ದಾಳಿ ನಡೆಸುವವರು ಅಲ್ಲಿ ಏಕೆ ‘ದಾಳಿ’ ನಡೆಸುವುದಿಲ್ಲ ಎಂದು ಕೇಳಿದಾಗ, ‘ಅಲ್ಲಿನ ಡ್ರಗ್‌ ವ್ಯವಹಾರದಲ್ಲಿ ದೊಡ್ಡ ಲಾಭ ಇದೆಯಲ್ಲ!’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹುಬ್ಬೇರಿಸಿದ್ದುಂಟು.

ಮಂಗಳೂರಿನ ಪ್ರಸಿದ್ಧ ಮಸೀದಿಯ ಎದುರಿದ್ದ ಎಲ್ಲ ಟ್ಯೂಬ್‌ಲೈಟ್‌ಗಳನ್ನು ಪದೇ ಪದೇ ಒಡೆದು ಹಾಕಲಾಗುತ್ತಿತ್ತು. ಈ ವಿಷಯ ಹಿಂದು–ಮುಸ್ಲಿಂ ಸಂಘರ್ಷಕ್ಕೂ ಕಾರಣವಾಗಿತ್ತು. ದಶಕಗಳ ಹಿಂದೆ ಹಿಂದು–ಮುಸ್ಲಿಂ ನಾಯಕರ ಮಧ್ಯೆ ಈಗಿರುವಷ್ಟು ಭೇದ ಇರಲಿಲ್ಲ. ಇದರ ಬಗ್ಗೆ ಪೊಲೀಸರಿಗೆ ದೂರು ಕೊಟ್ಟು, ಎರಡೂ ಸಮುದಾಯದ ಕೆಲ ನಾಯಕರು ಒಟ್ಟಾಗಿ ರಹಸ್ಯ ಕಾರ್ಯಾಚರಣೆಯನ್ನೂ ಕೈಗೊಂಡರು. ಟ್ಯೂಬ್‌ಲೈಟ್‌ಗೆ ಕಲ್ಲುಹೊಡೆದು ಒಡೆಯುತ್ತಿದ್ದವರನ್ನು ಹಿಡಿದು ಪೊಲೀಸರಿಗೆ ಕೊಟ್ಟು ವಿಚಾರಣೆ ನಡೆಸಿದಾಗ ತಿಳಿದು ಬಂದ ಸತ್ಯ ಎಂದರೆ;‘ ಆಸುಪಾಸು ಕುಳಿತುಕೊಂಡು ಡ್ರಗ್‌ ತೆಗೆದುಕೊಳ್ಳುತ್ತಿದ್ದ ಬೇರೆ ಬೇರೆ ಧರ್ಮಕ್ಕೆ ಸೇರಿದ ಹುಡುಗರ ಗುಂಪು, ಅಲ್ಲಿ ಬೆಳಕಿದ್ದರೆ ಪೊಲೀಸರು ಹುಡುಕಿ ಹೊಡೆಯುತ್ತಾರೆ ಎಂಬ ಕಾರಣಕ್ಕೆ ಲೈಟ್ ಇಲ್ಲದಂತೆ ಮಾಡುತ್ತಿತ್ತು. ಗುಂಪನ್ನು ಹಿಡಿದು ಪೊಲೀಸರಿಗೆ ಕೊಟ್ಟ ಬಳಿಕ ಎರಡೂ ಧರ್ಮದವರು ಒಟ್ಟಿಗೆಕೂಡಿ ಟೀ ಕುಡಿದು, ಕಷ್ಟ ಸುಖ ಮಾತನಾಡಿಕೊಂಡು ಹೋಗಿದ್ದನ್ನು ದಶಕದ ಹಿಂದೆ ಬಿಜೆಪಿಯ ಶಾಸಕರಾಗಿದ್ದ ಸಜ್ಜನರೊಬ್ಬರು ನೆನಪಿಸಿಕೊಂಡಿದ್ದುಂಟು.

ವರದಿಗಳಿಗೆ ಧೂಳು

ಡ್ರಗ್‌ ಜಾಲದ ಬಗ್ಗೆ 2008–2013ರ ಬಿಜೆಪಿ ಸರ್ಕಾರ ಇದ್ದಾಗಲೇ ದೊಡ್ಡ ಮಟ್ಟದ ಚರ್ಚೆ ನಡೆದಿತ್ತು. ಅಂದು ವಿಧಾನಸಭೆಯ ಉಪಾಧ್ಯಕ್ಷರಾಗಿದ್ದ ಮಂಗಳೂರಿನ ಯೋಗೀಶ್ ಭಟ್‌ ಅವರು ಸುದೀರ್ಘ ವರದಿಯೊಂದನ್ನು ನೀಡಿದ್ದಲ್ಲದೇ, ಏನೇನು ಕ್ರಮ ಕೈಗೊಳ್ಳಬೇಕು ಎಂದು ಶಿಫಾರಸು ಮಾಡಿದ್ದರು. ಆದರೆ, ವರದಿ ಮೇಲೇಳಲಿಲ್ಲ.

ಅದಕ್ಕಿಂತ ಮುಂಚಿನ ಜೆಡಿಎಸ್‌–ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ ಬಿಜೆಪಿಯ ಡಿ.ಎಚ್. ಶಂಕರಮೂರ್ತಿ ಅವರು ಬೆಂಗಳೂರಿನ ಕಾಲೇಜುಗಳಲ್ಲಿ ಡ್ರಗ್‌ ಯಾವ ಪ್ರಮಾಣದಲ್ಲಿ ಬಳಕೆಯಾಗುತ್ತಿದೆ ಎಂಬ ಬಗ್ಗೆ ವರದಿಯೊಂದನ್ನು ತರಿಸಿಕೊಂಡಿದ್ದರು. ಅದರ ತಡೆಗೆ ಕ್ರಮ ಕೈಗೊಳ್ಳಲು ಮುಂದಾಗಿದ್ದರು. ಆದರೆ, ಅಷ್ಟರಲ್ಲಿ ಮೈತ್ರಿ ಸರ್ಕಾರ ಬಿದ್ದುಹೋಯಿತು.

ರಾಜಕೀಯದ ನಂಟು

ಯಾವುದೇ ಒಂದು ಅಕ್ರಮ ಚಟುವಟಿಕೆಗೆ ರಾಜಕೀಯ ನಂಟಿದ್ದರೆ ಅದನ್ನು ಮುಲೋತ್ಪಾಟನೆ ಮಾಡುವುದು ಅಷ್ಟು ಸುಲಭವಲ್ಲ. ರಾಜಕೀಯ ಇಚ್ಛಾಶಕ್ತಿ ಇದ್ದರೂ ಅದನ್ನು ಮಟ್ಟಹಾಕಲು ಆಡಳಿತದಲ್ಲಿರುವ ಪಕ್ಷದವರೇ ಬಿಡುವುದಿಲ್ಲ.

ಪಂಚತಾರಾ ಹೋಟೆಲ್ ನಡೆಸುವವರು, ರೇವ್ ಪಾರ್ಟಿ ನಡೆಸುವವರು, ಪಂಚತಾರಾ ಹೋಟೆಗಳಲ್ಲಿ ಉದ್ಯಮಿಗಳು, ಸಿನಿಮಾ ತಾರೆಯರು ನಡೆಸುವ ಪಾರ್ಟಿಗಳಲ್ಲಿ ಪಾಲ್ಗೊಳ್ಳುವುದುಸಾಮಾನ್ಯರೇನಲ್ಲ. ರಾಜಕೀಯ ಹಾಗೂ ಉದ್ಯಮದ ನಂಟಿದ್ದರೆ ಸಾಧ್ಯ. ಇತ್ತೀಚಿನ ವರ್ಷಗಳಲ್ಲಿ ರಾಜಕಾರಣಿಗಳು–ಉದ್ಯಮಿಗಳಿಗೆ ಭಿನ್ನಭೇದ ಎಂಬುದು ತೀರಾ ತೆಳುವಾಗಿದೆ. ಶಾಸಕರು–ಸಚಿವರಾಗಿದ್ದವರು ಮಕ್ಕಳು ಇಂತಹ ಡ್ರಗ್‌ ದಾಸರಾಗಿದ್ದು ರಹಸ್ಯವಾಗಿ ಉಳಿದಿಲ್ಲ.

ಫಾರಂ ಹೌಸ್‌ಗಳಲ್ಲಿ ನಡೆಯುವ ನೃತ್ಯ–ಪಾರ್ಟಿಗಳಿಗೆ, ಪಂಚತಾರಾ ಹೋಟೆಲ್‌ನ ಪಾರ್ಟಿಗಳಿಗೆ ಡ್ರಗ್‌ ಪೂರೈಸುವ ಜಾಲವೇ ದೊಡ್ಡದಿದೆ ಎಂದು ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರೇ ಹೇಳಿದ್ದಾರೆ.

ಹಿಂದಿನ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ. ಕುಮಾರಸ್ವಾಮಿ, ತಮ್ಮ ಸರ್ಕಾರ ಬೀಳಿಸಲು ಡ್ರಗ್ ಮಾಫಿಯಾ, ಕ್ರಿಕೆಟ್ ಬೆಟ್ಟಿಂಗ್ ಕಾರಣ ಎಂದು ಇತ್ತೀಚೆಗೆ ಹೇಳಿಕೆಯನ್ನೂ ನೀಡಿದ್ದರು.

ಈಗ ಸಿಸಿಬಿ ಹೊರಟಿರುವ ವೇಗ ನೋಡಿದರೆ ದೊಡ್ಡ ದೊಡ್ಡ ’ಹುಲಿ–ಸಿಂಹ–ಕರಡಿ‘ಗಳೇ ಖೆಡ್ಡಾಕ್ಕೆ ಬೀಳಬಹುದು ಎಂಬ ಸೂಚನೆ ಇದೆ. ಆದರೆ, ಎನ್‌ಸಿಬಿ ಪೂರ್ಣ ಪ್ರಮಾಣದಲ್ಲಿ ರಾಜ್ಯಕ್ಕೆ ಕಾಲಿಡುವ ಮುನ್ನ, ಮುಂಚೂಣಿಯಲ್ಲಿರುವ ಸಣ್ಣ ಪುಟ್ಟ ತೋಳ, ಕತ್ತೆ ಕಿರುಬಗಳ್ನು ಹಿಡಿದು ತೋರಿಸಿ ಅವೇ ಹುಲಿಗಳೆಂದು ಬಿಂಬಿಸುವ ಯತ್ನವೂ ನಡೆದಿದೆಯೇ ಎಂಬ ಸಂಶಯವೂ ಇದೆ.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ರಾಜ್ಯವನ್ನು ಶುದ್ಧಿ ಮಾಡುವ ಒಂದು ಅಮೂಲ್ಯ ಅವಕಾಶ ಈಗ ಸಿಕ್ಕಿದೆ. ಅದನ್ನು ಸಮರ್ಥವಾಗಿ ಬಳಸಿ, ಡ್ರಗ್‌ ಜಾಲವನ್ನು ಭೇದಿಸಿ ಅದನ್ನು ಧೂಳೀಪಟ ಮಾಡುವ ಇಚ್ಛಾಶಕ್ತಿ ಹಾಗೂ ಕ್ರಿಯಾಶಕ್ತಿಯನ್ನು ಅವರು ತೋರಬೇಕಿದೆ. ಭವಿಷ್ಯದ ಕರ್ನಾಟಕ ಹಾಗೂ ತಲೆಮಾರನ್ನು ಕಾಪಾಡುವಹೊಣೆಗಾರಿಕೆಯೂ ಅವರ ಮೇಲೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT