ಸೋಮವಾರ, ಜುಲೈ 4, 2022
22 °C
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ (ತಿದ್ದುಪಡಿ) ಮಸೂದೆಗೆ ಅನುಮೋದನೆ

ಕೆಐಎಡಿಬಿ ಜಮೀನಿನ ಲೆಕ್ಕ ಪರಿಶೋಧನೆ: ಮುರುಗೇಶ ನಿರಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಇದುವರೆಗೆ ಸ್ವಾಧೀನಪಡಿಸಿಕೊಂಡಿರುವ ಜಮೀನಿನ ಲೆಕ್ಕ ಪರಿಶೋಧನೆ ನಡೆಸಲಾಗುವುದು’ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಬುಧವಾರ ವಿಧಾನಸಭೆ ಅಂಗೀಕರಿಸಿದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ (ತಿದ್ದುಪಡಿ) ಮಸೂದೆ ಕುರಿತ ಚರ್ಚೆಗೆ ಉತ್ತರ ನೀಡಿದ ಅವರು, ‘ಲೆಕ್ಕ ಪರಿಶೋಧನೆಯಿಂದ ಜಮೀನು ಪಡೆದುಕೊಂಡ ಉದ್ಯಮಿಗಳು ಪಾವತಿಸಬೇಕಾದ ಸುಮಾರು ₹5 ಸಾವಿರ ಕೋಟಿ ಮೊತ್ತ ಕೆಐಎಡಿಬಿಗೆ ದೊರೆಯುವ ನಿರೀಕ್ಷೆ ಇದೆ’ ಎಂದು ವಿವರಿಸಿದರು.

‘ಇಲ್ಲಿಯವರೆಗೆ ಕೆಐಎಡಿಬಿ 1.66 ಲಕ್ಷ ಎಕರೆ ಜಮೀನು ಸ್ವಾಧೀನಪಡಿಸಿಕೊಂಡಿದೆ. ಇದು ಒಟ್ಟು ಜಮೀನಿನಲ್ಲಿ ಶೇ 0.52ರಷ್ಟು ಮಾತ್ರ. ಇದರಲ್ಲಿ 15 ಸಾವಿರ ಎಕರೆ ಹಂಚಿಕೆಗೆ ಹಾಗೂ 20 ಸಾವಿರದಿಂದ 25 ಸಾವಿರ ಎಕರೆ ಅಂತಿಮ ಅಧಿಸೂಚನೆಗೆ ಸಿದ್ಧವಾಗಿದೆ. ಲೆಕ್ಕ ಪರಿಶೋಧನೆಯಿಂದ ಎಷ್ಟು ಭೂಮಿ ಹಂಚಿಕೆಯಾಗಿದೆ ಮತ್ತು ಉಪಯೋಗಿಸಿರುವುದು ಎಷ್ಟು ಎನ್ನುವ ಸಮಗ್ರವಾದ ಮತ್ತು ಖಚಿತ ವಿವರಗಳು ದೊರೆಯಲಿವೆ. ಮೊದಲ ಹಂತದಲ್ಲಿ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ನಡೆಯಲಿದೆ. ಈ ನಗರ ಪ್ರದೇಶಗಳಿಂದ ಸುಮಾರು ₹3 ಸಾವಿರ ಕೋಟಿ ದೊರೆಯಬಹುದು. ನಂತರ ಎರಡನೇ ಹಂತದ ಪರಿಶೋಧನೆ ಕೈಗೊಳ್ಳಲಾಗುವುದು’ ಎಂದು ವಿವರಿಸಿದರು.

‘ಮಾಗಡಿ ರಸ್ತೆಯಲ್ಲಿ 125 ಎಕರೆ ಜಮೀನನ್ನು 25 ವರ್ಷಗಳ ಹಿಂದೆ ಖೋಡೆ ಕಂಪನಿಗೆ ನೀಡಲಾಗಿತ್ತು. ಆದರೆ, ಈ ಜಮೀನು ಇನ್ನೂ ಕೆಐಎಡಿಬಿ ಸ್ವಾಧೀನದಲ್ಲಿತ್ತು. ಇಲ್ಲಿನ ಐದು ಎಕರೆ ಪ್ರದೇಶದಲ್ಲಿ ಶಾಲಾ ಮೈದಾನಕ್ಕೆ ಬಳಸಿಕೊಳ್ಳಲಾಗಿದೆ. ಉಳಿದ 120 ಎಕರೆ ಹಾಗೆಯೇ ಇದೆ. ಆದರೆ, ಜಮೀನು ನೀಡಿದ ರೈತರ ಬಗ್ಗೆ ಸಮರ್ಪಕ ದಾಖಲೆಗಳು ಇಲ್ಲ. ದುಡ್ಡು ಸಹ ಇಲಾಖೆಗೆ ಪಾವತಿಸಿಲ್ಲ. ಇಂತಹ ಪ್ರಕರಣಗಳನ್ನು ಪತ್ತೆ ಮಾಡಿದರೆ ಇಲಾಖೆಗೆ ಹಣ ಬರುತ್ತದೆ’ ಎಂದು ಉದಾಹರಣೆ ಸಮೇತ ವಿವರಿಸಿದರು.

‘ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬಳಿಯ ಜಮೀನುವೊಂದಕ್ಕೆ ನಿಜವಾದ ರೈತರ ಬದಲು ಇನ್ನೊಬ್ಬರಿಗೆ ಪರಿಹಾರ ನೀಡಲಾಗಿದೆ. ಇಂತಹ ಪ್ರಕರಣಗಳನ್ನು ಸಹ ಪತ್ತೆ ಮಾಡಲಾಗಿದೆ’ ಎಂದರು.

ಕೈಗಾರಿಕೆಗಳ ಬಳಿಯೇ ಟೌನ್‌ಶಿಪ್‌: ‘ಕೈಗಾರಿಕೆಗಳ ಬಳಿ ಉದ್ಯಮಿಗಳು ನೆಲೆಸುವಂತೆ (ವಾಕ್‌ ಟು ಇಂಡಸ್ಟ್ರಿ) ಟೌನ್‌ಶಿಪ್‌ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ’ ಎಂದು ಸಚಿವ ಮುರುಗೇಶ್‌ ನಿರಾಣಿ ತಿಳಿಸಿದರು.

‘ಕೈಗಾರಿಕೆ ಭೂಮಿಯಲ್ಲಿನ ಶೇ 15ರಷ್ಟು ಪ್ರದೇಶದಲ್ಲಿ ಸಮಗ್ರ ವಸತಿ ಟೌನ್‌ಶಿಪ್‌ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಪ್ರದೇಶದಲ್ಲಿ ಮನೆ, ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು ಸೇರಿದಂತೆ ಮಾದರಿ ಗ್ರಾಮಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಉಳಿದ ಶೇ85ರಷ್ಟು ಜಮೀನಿನಲ್ಲಿ ಯಾವುದೇ ಕಾರಣಕ್ಕೂ ರಿಯಲ್‌ ಎಸ್ಟೇಟ್‌ಗೆ ಅವಕಾಶ ನೀಡುವುದಿಲ್ಲ’ ಎಂದರು.

ಸಚಿವರ ಉತ್ತರ ನೀಡಿದ ಬಳಿಕ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ (ತಿದ್ದುಪಡಿ) ಮಸೂದೆಗೆ ವಿಧಾನಪರಿಷತ್‌ ಅನುಮೋದನೆ ನೀಡಿತು.

*
ಯಾವುದೇ ಯೋಜನೆಗಳು ಅನುಷ್ಠಾನಗೊಳದಿದ್ದರೆ ರೈತರಿ ಗೆ ವಾಪಸ್‌ ನೀಡಲು ಸಾಧ್ಯವಿಲ್ಲ. ಇಡೀ ಜಮೀನನ್ನು ಕೆಐಎಡಿಬಿ ಹೊಸ ದರ ದಲ್ಲಿ ಬೇರೆ ಉದ್ಯಮಿಗಳಿಗೆ ನೀಡಲಿದೆ.
-ಮುರುಗೇಶ್‌ ನಿರಾಣಿ, ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು