ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ ಹಿಂದುಳಿದ ಜಾತಿಗಳ ವಿರೋಧಿ: ಸಿದ್ದರಾಮಯ್ಯ ವಾಗ್ದಾಳಿ

Last Updated 17 ಮಾರ್ಚ್ 2021, 21:18 IST
ಅಕ್ಷರ ಗಾತ್ರ

ಬೆಂಗಳೂರು: ಪ್ರವರ್ಗ 2ಎ ಅಡಿ ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಸೇರ್ಪಡೆಗೊಳಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿರುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟವು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿತು.

‌ನಗರದ ಮೌರ್ಯ ವೃತ್ತದಲ್ಲಿ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷಗಳ ನಾಯಕ ಸಿದ್ದರಾಮಯ್ಯ 'ವಿವಿಧ ಜಾತಿಗಳಿಗೆ ಸಂಬಂಧಿಸಿದ 16 ಅಭಿವೃದ್ಧಿ ನಿಗಮಗಳು ಇವೆ. ಈ ಪೈಕಿ ವೀರಶೈವ ಲಿಂಗಾಯತ ಮತ್ತು ಒಕ್ಕಲಿಗ ಅಭಿವೃದ್ಧಿ ನಿಗಮಗಳಿಗೆ ತಲಾ ₹500 ಕೋಟಿ ಘೋಷಿಸಿ, ನೂರಾರು ಹಿಂದುಳಿದ ಜಾತಿಗಳು ಇರುವ 14 ನಿಗಮಗಳಿಗೆ ಕೇವಲ ₹500 ಕೋಟಿ ನೀಡಿದ್ದಾರೆ. ಇದು ಹಿಂದುಳಿದ ಜಾತಿಗಳಿಗೆ ಮಾಡಿದ ದ್ರೋಹ’ ಎಂದು ದೂರಿದರು.

‘ವೀರಶೈವ ಮತ್ತು ಒಕ್ಕಲಿಗ ಅಭಿವೃದ್ಧಿ ನಿಗಮ ಮಾಡಿರುವುದಕ್ಕೆ ನನ್ನ ವಿರೋಧವಿಲ್ಲ. ಆದರೆ, ಎಲ್ಲ ವರ್ಗಗಳನ್ನು ಸಮಾನವಾಗಿ ಕಾಣಬೇಕಿತ್ತು. ಬಿಜೆಪಿ ಸರ್ಕಾರದಲ್ಲಿ ಸಮಬಾಳು, ಸಮಪಾಲು ಎನ್ನುವುದಕ್ಕೆ ಭಾಷಣಕ್ಕೆ ಸೀಮಿತವಾಗಿದೆ’ ಎಂದರು.

‘ಹಿಂದುಳಿದ ಜಾತಿಗಳ ಒಕ್ಕೂಟವು ರಾಜ್ಯದಾದ್ಯಂತ ಈ ಹೋರಾಟವನ್ನು ತೀವ್ರಗೊಳಿಸಬೇಕು. ಈ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ’ ಎಂದೂ ಹೇಳಿದರು.

ಒಕ್ಕೂಟದ ಅಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ, ‘ಎಚ್‌. ಕಾಂತರಾಜು ನೇತೃತ್ವದಲ್ಲಿ ನಡೆದ ಜಾತಿವಾರು ಸಮೀಕ್ಷೆ ವರದಿಯನ್ನು ಕೂಡಲೇ ಬಿಡುಗಡೆ ಮಾಡಬೇಕು. ಡಿ. ದೇವರಾಜು ಅರಸು ನಿಗಮಕ್ಕೆ ₹2,000 ಕೋಟಿ ಅನುದಾನ ಬಿಡುಗಡೆ ಮಾಡಬೇಕು’ ಎಂದು ಅವರು ಒತ್ತಾಯಿಸಿದರು.

‘ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕಾಗಿ ₹100 ಕೋಟಿ ಮಾತ್ರ ಒದಗಿಸಲಾಗಿದೆ. 2020–21ನೇ ಸಾಲಿನಲ್ಲಿ ₹395 ಕೋಟಿ ಒದಗಿಸಲಾಗಿತ್ತು. ಕಡಿಮೆ ಮಾಡಿರುವ ಅನುದಾನವನ್ನೂ ಕೂಡಲೇ ಘೋಷಿಸಬೇಕು’ ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ ಮುಖಂಡ ಎಚ್.ಎಂ. ರೇವಣ್ಣ, ‘ಅಧಿಕಾರಕ್ಕೆ ಬರುವುದಕ್ಕಾಗಿ ಮತ್ತು ಬಂದ ನಂತರವೂ ನಿಮಗೆ ಮೀಸಲಾತಿ ಒದಗಿಸುತ್ತೇವೆ ಎಂದು ಹಲವು ಸಮುದಾಯಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರು. ಅದಕ್ಕೆಂದೇ ಹಿಂದುಳಿದ ವರ್ಗಗಳ ಆಯೋಗ ಇದೆ. ಅದು ಪರಿಶೀಲಿಸಲಿದೆ ಎಂದೂ ಹೇಳಲಿಲ್ಲ. ಹೀಗಾಗಿ ಗೊಂದಲಗಳು ನಿರ್ಮಾಣವಾಗುತ್ತಿವೆ. ಭರವಸೆ ಈಡೇರಿಸಬೇಕು ಎಂದು ಎಲ್ಲ ಸಮುದಾಯದವರು ಹೋರಾಟ ಮಾಡುತ್ತಿದ್ದಾರೆ’ ಎಂದರು.

ಒಕ್ಕೂಟದ ಸದಸ್ಯ ’ಮುಖ್ಯಮಂತ್ರಿ‘ ಚಂದ್ರು, ‘ಪ್ರಬಲ ಸಮುದಾಯಗಳಿಗೆ 2ಎ ಮೀಸಲಾತಿ ಒದಗಿಸುವುದು ಸರಿಯಲ್ಲ. ಸರ್ಕಾರ ಈ ನಿಟ್ಟಿನಲ್ಲಿ ಮುಂದುವರಿದರೆ ನ್ಯಾಯಾಲಯದ ಮೊರೆ ಹೋಗುವ ಚಿಂತನೆಯೂ ಇದೆ’ ಎಂದು ಹೇಳಿದರು.

ಒಕ್ಕೂಟದ ಉಪಾಧ್ಯಕ್ಷರಾದ ಆರ್. ವೇಣುಗೋಪಾಲ, ಕೆ. ವೆಂಕಟಸುಬ್ಬರಾಜು ಹಾಗೂ ಸೈದಪ್ಪ ಕೆ. ಗುತ್ತೇದಾರ್‌ ಇತರರು ಇದ್ದರು.

‘ರಾಜಕೀಯದಲ್ಲಿಯೂ ಮೀಸಲಾತಿ ಇರಲಿ’

‘ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ಮೀಸಲಾತಿ ಬೇಕು ಎಂಬುದರ ಜೊತೆಗೆ ರಾಜಕೀಯ ಮೀಸಲಾತಿಗೂ ಹೋರಾಟ ನಡೆಯಬೇಕು. ಲೋಕಸಭೆ, ವಿಧಾನಸಭೆಯಲ್ಲಿಯೂ ಅರ್ಹರಿಗೆ ಮೀಸಲಾತಿ ನೀಡುವ ವ್ಯವಸ್ಥೆ ಬರಬೇಕು’ ಎಂದು ಸಿದ್ದರಾಮಯ್ಯ ಹೇಳಿದರು.

‘ಮೀಸಲಾತಿ ಕುರಿತು ಗೊಂದಲಗಳಿಗೆ ಆರ್‌ಎಸ್‌ಎಸ್‌ನವರೇ ಕಾರಣ. ಅವರು ಯಾವತ್ತೂ ಮೀಸಲಾತಿ ಪರ ಇದ್ದವರಲ್ಲ. ಈಗ ಜಾತಿ–ಜಾತಿಗಳ ನಡುವೆ ಗೊಂದಲ ನಿರ್ಮಾಣ ಮಾಡುತ್ತಿದ್ದಾರೆ’ ಎಂದೂ ದೂರಿದರು.

ಅಸಮಾನತೆ ನಿರ್ಮೂಲನೆಗೆ ಜಾತಿ ಹೆಸರಿನ ನಿಗಮ: ಸರ್ಕಾರ ಸಮರ್ಥನೆ

ಬೆಂಗಳೂರು: ಜಾತಿಗೊಂದು ನಿಗಮ ಸ್ಥಾಪನೆಯ ಹಿಂದೆ ಅಸಮಾನತೆ ನಿರ್ಮೂಲನೆಯ ಉದ್ದೇಶ ಇದೆ ಎಂಬ ಸಮರ್ಥನೆಯನ್ನು ಹೈಕೋರ್ಟ್‌ಗೆ ಸರ್ಕಾರ ಸಲ್ಲಿಸಿದೆ.

ಜಾತಿಗೊಂದು ನಿಗಮ ಮತ್ತು ಮಂಡಳಿ ಸ್ಥಾಪಿಸುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸುತ್ತಿದೆ.

‘ಲಿಂಗಾಯತ, ಮರಾಠಾ, ಬ್ರಾಹ್ಮಣ, ಆರ್ಯವೈಶ್ಯ ಅಭಿವೃದ್ಧಿ ‌ನಿಗಮಗಳ ಸ್ಥಾಪನೆ ಪ್ರಶ್ನಿಸಿರುವ ಅರ್ಜಿಗಳಿಗೆ ಆಕ್ಷೇಪಣೆ ಸಲ್ಲಿಸಿರುವ ಸರ್ಕಾರ, ಸಂವಿಧಾನದ 162ನೇ ಪರಿಚ್ಛೇದದ ಅಡಿಯಲ್ಲಿ ಸಾಂವಿಧಾನಿಕ ಅಧಿಕಾರ ಚಲಾಯಿಸಲಾಗಿದೆ’ ಎಂದು ಆಕ್ಷೇಪಣೆಯಲ್ಲಿ ತಿಳಿಸಿದೆ.

ದುರ್ಬಲ ವರ್ಗದವರ ಸಾಮಾಜಿಕ ಸ್ಥಾನಮಾನ, ಶಿಕ್ಷಣ ಮಟ್ಟ, ಸಾಂಸ್ಕೃತಿಕ ಮತ್ತು ಆರ್ಥಿಕ ಹಿಂದುಳಿದಿರುವಿಕೆ ಗಮನದಲ್ಲಿ ಇಟ್ಟುಕೊಂಡು ನಿಗಮಗಳನ್ನು ಸ್ಥಾಪಿಸಲಾಗಿದೆ ಎಂದು ವಿವರಿಸಿದೆ.

‘ಬರಲಿರುವ ಉಪಚುನಾವಣೆ ಗಮನದಲ್ಲಿ ಇಟ್ಟುಕೊಂಡು ಈ ನಿಗಮಗಳನ್ನು ಸ್ಥಾಪಿಸಲಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಆದರೆ, ಚುನಾವಣೆ ಘೋಷಣೆಗೂ ಮೊದಲೇ ನಿಗಮ ಮಂಡಳಿಗಳು ಅಸ್ತಿತ್ವದಲ್ಲಿವೆ. ಕರ್ನಾಟಕ ಕ್ರಿಶ್ಚಿಯನ್ ಅಭಿವೃದ್ಧಿ ಮಂಡಳಿ, ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ, ವಿಶ್ವಕರ್ಮ ಅಭಿವೃದ್ಧಿ ನಿಗಮಗಳನ್ನು ಕಳೆದ 15 ವರ್ಷಗಳಲ್ಲಿ ಸ್ಥಾಪಿಸಲಾಗಿದೆ’ ಎಂದು ಆಕ್ಷೇಪಣೆಯಲ್ಲಿ ಎಂದು ಸರ್ಕಾರ ತಿಳಿಸಿದೆ.

‘ಬ್ರಾಹ್ಮಣ, ಮಾರಾಠಾ, ವೀರಶೈವ ಲಿಂಗಾಯತ, ಆರ್ಯವೈಶ್ಯ, ವಿಶ್ವಕರ್ಮ ಸಮುದಾಯದ ಪ್ರತಿಯೊಬ್ಬ ವ್ಯಕ್ತಿಯೂ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಮುಂದಿದ್ದಾರೆ ಎಂದು ಹೇಳಲು ಆಗುವುದಿಲ್ಲ. ಅಂತವರಿಗೆ ಸಹಾಯ ಹಸ್ತ ಚಾಚುವುದು ಸರ್ಕಾರ ಕರ್ತವ್ಯ’ ಎಂದು ಆಕ್ಷೇಪಣೆಯಲ್ಲಿ ವಿವರಿಸಿದೆ. ವಿಚಾರಣೆಯನ್ನು ಪೀಠ ಮಾ.31ಕ್ಕೆ ಮುಂದೂಡಿತು.

ಮೀಸಲಾತಿ ಒತ್ತಾಯಿಸುತ್ತಿರುವ ಸ್ವಾಮೀಜಿಗಳನ್ನು ಬಂಧಿಸಬೇಕು

ಮೈಸೂರು: ಬಲಾಢ್ಯ ಜಾತಿಗಳಿಗೆ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸುತ್ತಿರುವ ಸ್ವಾಮೀಜಿಗಳನ್ನು ಬಂಧಿಸಬೇಕು ಎಂದು ನಿವೃತ್ತ ಪ್ರಾಧ್ಯಾಪಕ ಮಹೇಶ್‌ಚಂದ್ರಗುರು ಆಗ್ರಹಿಸಿದರು.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಬುಧವಾರ ಇಲ್ಲಿ ನಡೆದ ‘ಕವಲುದಾರಿಯಲ್ಲಿ ಮೀಸಲಾತಿ’ ಕುರಿತ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

‘ಸದ್ಯ, ರಾಜ್ಯದಲ್ಲಿ ನಡೆಯುತ್ತಿರುವ ಮೀಸಲಾತಿ ಚಳವಳಿಯು ಸರ್ಕಾರಿ ಪ್ರಾಯೋಜಿತ ಚಳವಳಿ ಆಗಿದೆ. ಇಲ್ಲಿಯವರೆಗೆ ಭೂಮಿ, ಬಂಡವಾಳದ ಸಿಂಹಪಾಲನ್ನು ಅನುಭವಿಸಿದ ಲಿಂಗಾಯತರು, ಒಕ್ಕಲಿಗರು ಮೀಸಲಾತಿ ಕೇಳುತ್ತಿರುವುದು ಸರಿಯಲ್ಲ’ ಎಂದು ಖಂಡಿಸಿದರು.

ಪ್ರೊ.ಕಾಳೇಗೌಡ ನಾಗವಾರ ಮಾತನಾಡಿ, ‘ಎಲ್ಲ ರಾಜಕೀಯ ಪಕ್ಷಗಳು ಕಾರ್ಪೊರೇಟ್ ಧಣಿಗಳ ಕಾವಲುನಾಯಿಗಳಾಗಿದ್ದು, ಬಡವರ ಕೂಗನ್ನು ಯಾರೂ ಆಲಿಸುತ್ತಿಲ್ಲ’ ಎಂದು ಕಿಡಿಕಾರಿದರು.

ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು, ‘ಒಂದು ವೇಳೆ ಬಲಾಢ್ಯ ಜಾತಿಗಳಿಗೆ ಮೀಸಲಾತಿ ನೀಡಿದರೆ, ಸಂಸತ್ತಿಗೆ ಮುತ್ತಿಗೆ ಹಾಕಲಾಗುವುದು. ಪೇಜಾವರ ಶ್ರೀ ಅವರು ಅಂತರ್ಜಾತಿ ವಿವಾಹವನ್ನು ವಿರೋಧಿಸುವ ಮೂಲಕ ಹಿಂದೂ ಧರ್ಮದ ನಾಶಕ್ಕೆ ಮುನ್ನುಡಿ ಬರೆಯುತ್ತಿದ್ದಾರೆ. ಇವರ ಹೇಳಿಕೆ ಸರಿಯಲ್ಲ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT