ಶುಕ್ರವಾರ, ಅಕ್ಟೋಬರ್ 30, 2020
27 °C

ಅನಧಿಕೃತ ಮನೆಗಳ ಸಕ್ರಮ ಮಸೂದೆಗೆ ಒಪ್ಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸ್ವಾಧೀನಪಡಿಸಿಕೊಂಡ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಮನೆಗಳನ್ನು ಸಕ್ರಮಗೊಳಿಸುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಮಸೂದೆ 2020ಕ್ಕೆ ವಿಧಾನಸಭೆ ಒಪ್ಪಿಗೆ ನೀಡಿತು.

ಮುಖ್ಯಮಂತ್ರಿಯವರ ಪರವಾಗಿ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಮಸೂದೆಯನ್ನು ಮಂಡಿಸಿದರು. ರಾಜ್ಯದ ಇತರ ನಗರಗಳಲ್ಲೂ ಇಂತಹದ್ದೇ ಸಮಸ್ಯೆ ಇರುವುದರಿಂದ ಇದೇ ಮಾದರಿಯ ಕಾನೂನು ಅಲ್ಲಿಗೂ ಅನ್ವಯವಾಗುವಂತೆ ಜಾರಿ ಮಾಡಬೇಕು ಎಂದು ಬೇರೆ ಜಿಲ್ಲೆಗಳ ಶಾಸಕರು ಆಗ್ರಹಿಸಿದರು.

ಜೆಡಿಎಸ್‌ನ ಎ.ಟಿ. ರಾಮಸ್ವಾಮಿ ಮಾತನಾಡಿ, ಈ ತಿದ್ದುಪಡಿ ಬಡವರ ಹಿತದ ಉದ್ದೇಶ ಹೊಂದಿಲ್ಲ. ಬಲಾಢ್ಯರು, ಅಕ್ರಮ ಮಾಡುವವರಿಗೆ ಮನೆ ಕಟ್ಟಿಕೊಳ್ಳಲು ಅನುಕೂಲ ಮಾಡಿಕೊಡಲಾಗಿದೆ. ಬಿಬಿಎಂಪಿ ಚುನಾವಣೆ ಬರುತ್ತಿರುವುದರಿಂದ, ಈ ಕಾನೂನು ಮಾಡಲು ಹೊರಟಿದ್ದಾರೆ ಎಂದು ದೂರಿದರು.

ಹಲವು ಸರ್ಕಾರಗಳು ಬಂದು ಹೋದರೂ ಈ ಸಮಸ್ಯೆಗೆ ನಿಶ್ಚಿತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿರಲಿಲ್ಲ. ಸರ್ಕಾರಕ್ಕೆ ತೆರಿಗೆಯೂ ಪಾವತಿ ಆಗುತ್ತಿರಲಿಲ್ಲ. ಈ ಸಮಸ್ಯೆ ಮುಂದುವರೆಸಿಕೊಂಡು ಹೋಗಬಾರದು ಎಂಬ ಕಾರಣಕ್ಕೆ ಸಕ್ರಮಗೊಳಿಸಲು ತೀರ್ಮಾನಿಸಲಾಗಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ ಹೇಳಿದರು.

ಘನತ್ಯಾಜ್ಯ ದಂಡ ₹2 ಲಕ್ಷ

ನಗರಪಾಲಿಕೆಗಳು ಅದರಲ್ಲೂ ಬಿಬಿಎಂಪಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ಸಂದರ್ಭದಲ್ಲಿ ನಿರ್ವಹಣೆಯನ್ನು ಸರಿಯಾಗಿ ಮಾಡದಿದ್ದರೆ, ₹2 ಲಕ್ಷದವರೆಗೆ ದಂಡ ವಿಧಿಸುವ ಉದ್ದೇಶದ ಕರ್ನಾಟಕ ನಗರಪಾಲಿಕೆಗಳ (ಎರಡನೇ ತಿದ್ದುಪಡಿ) ಮಸೂದೆ 2020 ಕ್ಕೆ ಒಪ್ಪಿಗೆ ನೀಡಲಾಯಿತು. ಈ ಹಿಂದೆ ದಂಡದ ಮೊತ್ತ ₹1,000 ಇತ್ತು ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

* ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ(ತಿದ್ದುಪಡಿ) ಮಸೂದೆಗೆ ಒಪ್ಪಿಗೆ ನೀಡಲಾಯಿತು. ಜಮ್ಮ–ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವಾಗಿಸಿರುವ ಹಿನ್ನೆಲೆಯಲ್ಲಿ ಅದನ್ನು ಮಸೂದೆಯಲ್ಲಿ ಸೇರಿಸಲು ತಿದ್ದುಪಡಿ ತರಲಾಗಿತ್ತು.

* ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ(3 ನೇ ತಿದ್ದುಪಡಿ) ಮಸೂದೆಗೆ ಅಂಗೀಕಾರ ನೀಡಲಾಗಿದೆ. ಇದರ ಅನ್ವಯ ಬಡಾವಣೆ ಅಭಿವೃದ್ಧಿದಾರರು ಒಂದೇ ಸಲಕ್ಕೆ ಶೇ 100 ರಷ್ಟು ಅಭಿವೃದ್ಧಿ ಮಾಡಿ ಬಳಿಕ ನಿವೇಶನ ಹಂಚಿಕೆ ಮಾಡಬೇಕಾಗಿಲ್ಲ. ಮೊದಲಿಗೆ ಶೇ 40 ರಷ್ಟು ತದ ನಂತರ ಶೇ 30 ರಂತೆ ಅಭಿವೃದ್ಧಿಗೊಳಿಸಿ ನಿವೇಶನ ಹಂಚಿಕೆ ಮಾಡಬಹುದು.

ಎರಡು ಮಸೂದೆಗಳ ಮಂಡನೆ

*2020 ಸಾಲಿನ ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ(ತಿದ್ದುಪಡಿ) ಮಸೂದೆ ಮತ್ತು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ(ಮೂರನೇ ತಿದ್ದುಪಡಿ) ಮಸೂದೆಯನ್ನು ಮಂಡಿಸಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು